ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಗಿರಿಗೆ ಪರ್ಯಾಯ ಮುರುಗಲ

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

ಪ್ರಯೋಗಶೀಲ ಮನಸ್ಸಿನ ರೈತರು ಯಾವ ಬೆಳೆ ಬೆಳೆದರೂ ಯಶಸ್ಸು ಪಡೆಯುತ್ತಾರೆ ಎಂಬುದಕ್ಕೆ ಸಾಗರದ ರೈತ ಎಸ್.ಕೆ.ಮಂಜುನಾಥ್ ಹೊಸ ಉದಾಹರಣೆ.

ಸಾಗರದಿಂದ ಏಳು ಕಿ.ಮೀ.ದೂರದ ಅಮಟೆಕೊಪ್ಪದ ಬಳಿ ಅವರ ಹದಿಮೂರು ಎಕರೆ ಭೂಮಿಯಲ್ಲಿ ಮಳೆ ಆಶ್ರಯದಲ್ಲಿ ಸಪೋಟಾ, ನೆಲ್ಲಿ, ಮುರುಗಲ, ಅನಾನಸ್ ಇತ್ಯಾದಿ ಬೆಳೆಗಳನ್ನು ಬೆಳೆದಿದ್ದಾರೆ.

ಮಂಜುನಾಥ್ ಚಿನ್ನಾಭರಣಗಳ ವ್ಯಾಪಾರಿ. ಆದರೆ ಬೇಸಾಯದಲ್ಲಿ ಅವರಿಗೆ ಅಪಾರ ಆಸಕ್ತಿಇದೆ. ಹದಿಮೂರು ವರ್ಷಗಳ ಹಿಂದೆ ಅವರು ಅಮಟೆಕೊಪ್ಪದಲ್ಲಿ ಒಣ ಭೂಮಿ ಖರೀದಿಸಿ ಬೇಸಾಯ ಆರಂಭಿಸಿದರು. ಮೊದಲು ಸಪೋಟಾ ಸಸಿಗಳನ್ನು ನಾಟಿ ಮಾಡಿದರು. ನಂತರ ಕೇರಳದಿಂದ ನೆಲ್ಲಿ ಗಿಡಗಳನ್ನು ತರಿಸಿ ನಾಟಿ ಮಾಡಿದರು.
 
ನಾಲ್ಕು ವರ್ಷಗಳ ಹಿಂದೆ ಸುಮಾರು 4 ಸಾವಿರ ಅನಾನಸ್ ಸಸಿ ನಾಡಿ ಮಾಡಿದರು. ಹಾಗೇ 150 ಮುರುಗಲ (ಕೋಕಂ) ಗಿಡಗಳನ್ನು ತಂದು ಸಪೋಟ ಗಿಡಗಳ ನಡುವೆ ನೆಟ್ಟು ಆರೈಕೆ ಮಾಡಿದರು.

ಎರಡು ಚಿಕ್ಕು ಗಿಡಗಳ ನಡುವೆ 16 ಅಡಿ ಅಂತರದಲ್ಲಿ ಕೋಕಂ ಗಿಡಗಳನ್ನು ನಾಟಿ ಮಾಡಿದ್ದಾರೆ. ತೋಟದ ಮರ ಗಿಡಗಳಿಗೆ ಅವರು ಸಾವಯವ ಗೊಬ್ಬರ ಮಾತ್ರ ಬಳಸುತ್ತಾರೆ. ತೋಟಕ್ಕೆ ಮಳೆಯ ನೀರೇ ಆಧಾರ. ಮುರುಗಲ ಮರಗಳನ್ನು ಬೇಲಿಗಳಲ್ಲಿ ಅಕೇಷಿಯಾ, ನೀಲಗಿರಿ ಮರಗಳಿಗೆ ಬದಲಿಗೆ ಬೆಳೆಸಿದರೆ ಹೆಚ್ಚಿನ ಆದಾಯ  ಸಿಗುತ್ತದೆ ಎನ್ನುತ್ತಾರೆ ಮಂಜುನಾಥ್.

ಮಂಜುನಾಥ್ ಅವರ ತೋಟದ ಮುರುಗಲ ಮರಗಳಲ್ಲಿ ಒಂದೊಂದರಲ್ಲಿ 30ರಿಂದ 60 ಕೆ.ಜಿ. ಹಣ್ಣು ಸಿಗುತ್ತಿದೆ. ಹಣ್ಣಿನ ಒಣಗಿದ ಸಿಪ್ಪೆಗೆ ಕೆ.ಜಿ.ಗೆ 120 ರೂ ಬೆಲೆ ಇದೆ.

ಮುರುಗಲ ಹಣ್ಣಿಗೆ ಸ್ಥಳೀಯ ಮಾರುಕಟ್ಟೆ ಇಲ್ಲ. ಕರಾವಳಿ ಜಿಲ್ಲೆಯ ಜನರಂತೆ ಮಲೆನಾಡಿನ ಜನರು ಮುರುಗಲ ಹಣ್ಣು ಮತ್ತು ಸಿಪ್ಪೆ ಬಳಸಿದರೆ  ಭಾರೀ ಬೇಡಿಕೆ ಬರುವ ಸಾಧ್ಯತೆ ಇದೆ.

 ಮುರುಗಲ ಹಣ್ಣಿನಿಂದ ಜ್ಯೂಸ್ ತಯಾರಿಸುತ್ತಾರೆ. ಸಿಪ್ಪೆಯನ್ನು ಹುಳಿಗಾಗಿ ಹಾಗೂ ಬೀಜಗಳಿಂದ ಎಣ್ಣೆ ತೆಗೆಯುತ್ತಾರೆ. ಅದನ್ನು ಆಯುರ್ವೇದ ಔಷಧಗಳಲ್ಲಿ ಬಳಸುತ್ತಾರೆ.ಜ್ಯೂಸ್ ಕರಾವಳಿಯ ಉದ್ದಗಲದಲ್ಲಿ ಬಹು ಜನಪ್ರಿಯ ಪೇಯ.ಮುರುಗಲ ಸಿಪ್ಪೆ ಒಣಗಿಸಿ ಹುಣಸೆಹಣ್ಣಿನ ಹುಳಿಗೆ ಪರ್ಯಾಯವಾಗಿ ಬಳಸುತ್ತಾರೆ.

ಮಳೆ ಆಶ್ರಯದಲ್ಲಿ ನೆಲ್ಲಿ, ಮುರಗಲು ಇತ್ಯಾದಿ ಮರಗಳನ್ನು ಬೆಳೆಯುವುದು ಲಾಭದಾಯಕ ಎನ್ನುವುದಕ್ಕೆ ಮಂಜುನಾಥ್ ಅವರ ತೋಟ ಒಂದು ನಿದರ್ಶನ.

ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚುವರಿ ಭೂಮಿ ಇರುವ ರೈತರು ಅರಣ್ಯದ ಮರಗಳನ್ನು ಬೆಳೆಸುವ ಬದಲು ಮಂಜುನಾಥ್ ಅವರ ಬೇಸಾಯ ಕ್ರಮ ಅನುಸರಿಸಬಹುದು. ಆಸಕ್ತರು ಅವರೊಂದಿಗೆ ಚರ್ಚಿಸಬಹುದು. ಅವರ ಮೊಬೈಲ್ ನಂಬರ್- 9945332163.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT