ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ತಿನ್ನುವ ತುಪ್ಪ ಅದೆಷ್ಟು ಶುದ್ಧ?

Last Updated 18 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನ ಮ್ಮ ದೈನಂದಿನ ಆಹಾರದಲ್ಲಿ ‘ತುಪ್ಪ’ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಹೃದ್ರೋಗಿಗಳಿಗೆ ಇದರ ಅಧಿಕ ಸೇವನೆ ಎಚ್ಚರಿಕೆ ಕರೆಗಂಟೆಯಾಗಿದ್ದರೂ, ಸಾಮಾನ್ಯರಿಗೆ ಇದರ ನಿಯಮಿತ ಸೇವನೆ ಉತ್ತಮವೇ.

ಮಾರುಕಟ್ಟೆಯಲ್ಲಿ ಶುದ್ಧಹಾಲಿನ ಉತ್ಪಾದನೆ ಕಡಿಮೆಯಿದ್ದರೂ, ಮಾರುಕಟ್ಟೆಯಲ್ಲಿ ಮಾತ್ರ ಪ್ರತಿ ವರ್ಷ ತುಪ್ಪದ ಉತ್ಪಾದನೆ ಹೆಚ್ಚಾಗುತ್ತಲೇ ಇದೆ! ಇದಕ್ಕೆ ಕಾರಣ ಹೆಚ್ಚುತ್ತಲೇ ಇರುವ ತುಪ್ಪದ ಕಲಬೆರಕೆ! ಈ ಕಲಬೆರಕೆ ವಸ್ತುಗಳು ದೇಹಕ್ಕೆ ಹಾನಿಕರ. ಇಂತಹ ಕಲಬೆರಕೆ ವಸ್ತುಗಳಿಗೆ ಗ್ರಾಹಕರು ಹೆಚ್ಚಿನ ಬೆಲೆ ನೀಡಿ ಖರೀದಿಸುತ್ತಿದ್ದಾರೆ. ‘ಶುದ್ಧ ತುಪ್ಪ’ ಹಾಗೂ ಅದರ ಹಿಂದಿರುವ ವೈಜ್ಞಾನಿಕತೆ ಅರಿಯುವ ಕುತೂಹಲ ನಿಮ್ಮಲ್ಲಿ ಇದ್ದಿರಬಹುದು.

ಬೆಣ್ಣೆಯನ್ನು ಕಾಯಿಸಿದಾಗ ಅದರಲ್ಲಿನ ನೀರಿನಂಶ ಆವಿಯಾಗಿ ಉಳಿದುಕೊಳ್ಳುವ ಕೊಬ್ಬಿನ ಪದಾರ್ಥವೇ ತುಪ್ಪ ಅಥವಾ ‘ಘೀ’. ಇದರ ಮೂಲ ಶಬ್ದ ‘ಘ್ರತ್’ ಎಂಬುದಾಗಿದ್ದು, ಭಾರತವಲ್ಲದೇ ಬಹುತೇಕ ದಕ್ಷಿಣ ಏಷ್ಯಾ ದೇಶಗಳಲ್ಲಿ ಇದರ ಬಳಕೆ ಇದೆ. ಆಂಗ್ಲ ಭಾಷೆಯಲ್ಲಿ ‘ಕ್ಲೆರಿಪೈಡ್ ಬಟರ್’ ಎಂಬ ಹೆಸರಿನಲ್ಲಿ ಇದು ಅಮೆರಿಕ, ಇಂಗ್ಲೆಂಡ್ ಹಾಗೂ ಯುರೋಪ್‌ನ ಹಲವಾರು ದೇಶಗಳಲ್ಲಿ ಬಳಕೆಯಲ್ಲಿದೆ.

ವೈಜ್ಞಾನಿಕತೆ: ಇದುವರೆಗಿನ ಸಂಶೋಧನೆಗಳ ಪ್ರಕಾರ, ಬೆಣ್ಣೆ ಹಾಗೂ ತುಪ್ಪವನ್ನು ಹೋಲಿಸಿದಾಗ, ತುಪ್ಪದಲ್ಲಿ ಹೆಚ್ಚಿರುವ ಚಿಕ್ಕ ಸರಪಳಿಯ ಕೊಬ್ಬಿನಾಮ್ಲ ಇರುವುದರಿಂದ ತುಪ್ಪವೇ ಬೆಣ್ಣೆಗಿಂತ ಉತ್ತಮ. ಬೆಣ್ಣೆಯಲ್ಲಿ ಈ ಕೊಬ್ಬಿನಾಮ್ಲ ಸುಮಾರು ಶೇ 12-15 ರಷ್ಟು ಇದ್ದರೆ, ತುಪ್ಪದಲ್ಲಿ ಇದರ ಪ್ರಮಾಣ ಶೇ 25ರಷ್ಟಿದೆ. ನಮ್ಮ ದೇಹದಲ್ಲಿ ದೊಡ್ಡ ಹಾಗೂ ಚಿಕ್ಕ ಸರಪಳಿಯ ಕೊಬ್ಬಿನ ಆಮ್ಲಗಳನ್ನು ವಿಭಜಿಸಲು ಪ್ರತ್ಯೇಕ ವ್ಯವಸ್ಥೆಯೇ ಇದ್ದು, ಈ ಚಿಕ್ಕ ಸರಪಳಿಯ ಕೊಬ್ಬಿನ ಆಮ್ಲಗಳಿಂದ ಹೃದಯದ ತೊಂದರೆಗಳಿಗೆ ಅಪಾಯವಿಲ್ಲ, ಆದರೆ ತುಪ್ಪವನ್ನು ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಪ್ರತಿ ನಿತ್ಯ ಸುಮಾರು 2 ಟೇಬಲ್ ಸ್ಪೂನ್‌ಗಳಷ್ಟು ಪ್ರಮಾಣದಲ್ಲಿ ಸೇವಿಸುವುದು ಹೃದ್ರೋಗಗಳಿಗೆ ಆಹ್ವಾನವಿದ್ದಂತೆ.  

 ಬೆಣ್ಣೆ ಹಾಗೂ ತುಪ್ಪವನ್ನು ಹೋಲಿಸಿದಾಗ, ಇನ್ನೊಂದು ಪ್ರಮುಖ ಅಂಶವೆಂದರೆ ಇವುಗಳ ‘ಹೊಗೆ ಬಿಂದು’  (ಸ್ಮೋಕ್ ಪಾಯಿಂಟ್). ತುಪ್ಪದ ‘ಹೊಗೆ ಬಿಂದು’ ಸುಮಾರು 204-260 ಡಿಗ್ರಿ ಸೆಲ್ಸಿಯಸ್‌ನಷ್ಟು. ಆದರೆ ಬೆಣ್ಣೆಯಲ್ಲಿ ಇದು 163-191 ಡಿಗ್ರಿ ಸೆಲ್ಸಿಯಸ್‌ನಷ್ಟು. ನಾವು ನಿತ್ಯ ಬಳಸುವ ಅಡುಗೆ ಎಣ್ಣೆಯಲ್ಲಿ ಇದು ತುಪ್ಪದ ‘ಹೊಗೆ ಬಿಂದು’ವಿಗಿಂತ ಕಡಿಮೆಯಿದೆ. ಈ ಕಾರಣದಿಂದ ಹೆಚ್ಚಿನ ಹೊತ್ತು ಕರಿಯುವ (ಫ್ರೈ) ವಸ್ತುಗಳನ್ನು ತುಪ್ಪದಲ್ಲಿ ಮಾಡಿದಲ್ಲಿ ಅನುಕೂಲತೆಗಳಿವೆ. ಸಾಮಾನ್ಯವಾಗಿ ವಸ್ತುಗಳನ್ನು ಕರಿಯುವಾಗ, ಆ ಎಣ್ಣೆಯ ಉಷ್ಣತೆ ಅದರ ‘ಹೊಗೆ ಬಿಂದು’ ತಲುಪಿದ ಬಳಿಕ, ಆ ಎಣ್ಣೆ ಅಥವಾ ಕೊಬ್ಬು ನಾಶವಾಗುತ್ತವೆ. ಇಂತಹ ‘ಹೊಗೆ ಬಿಂದು’ ತಲುಪಿದ ಎಣ್ಣೆಗಳು ಅಥವಾ ಕೊಬ್ಬು ದೇಹಕ್ಕೆ ಅತೀ ಅಪಾಯಕಾರಿ!

ಅತೀ ಹೆಚ್ಚು ಹೊತ್ತು ಕರಿದಿರುವ ಎಣ್ಣೆ/ಕೊಬ್ಬಿನಿಂದ ದಪ್ಪ ಹೊಗೆ ಹೊರಸೂಸುವುದು ಗಮನಿಸಿರಬಹುದು. ‘ಹೊಗೆ ಬಿಂದು’ ದಾಟಿರುವ ಎಣ್ಣೆ/ಕೊಬ್ಬು ಸೇವನೆ ದೇಹಕ್ಕೆ ಅಪಾಯಕಾರಿ.

ಒಂದು ಅಧ್ಯಯನದ ಪ್ರಕಾರ ಪ್ರತಿನಿತ್ಯ 3 ಟೇಬಲ್ ಸ್ಪೂನ್‌ಗಳಷ್ಟು ಬೆಣ್ಣೆಯನ್ನು ಸುಮಾರು 4 ವಾರ ಸೇವಿಸಿದಲ್ಲಿ, ದೇಹದಲ್ಲಿ ಎಲ್.ಡಿ.ಎಲ್. ಕೊಲೆಸ್ಟರಾಲ್‌ನ (ಇದು ದೇಹಕ್ಕೆ ಹಾನಿಕರ) ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತದೆ. ಬೆಣ್ಣೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುವುದರಿಂದ, ಇದರಲ್ಲಿನ ವಿಟಮಿನ್ ‘ಡಿ’ ಹಾಗೂ ‘ಕೆ’ ಯಿಂದಾಗಿ ದೇಹಕ್ಕೆ ಉತ್ತಮ. (ತುಪ್ಪದಲ್ಲಿ ಇವು ಬಹುತೇಕ ನಾಶವಾಗಿರುತ್ತವೆ).

ಕಲಬೆರಕೆ: ಇದೀಗ ಮಾರುಕಟ್ಟೆಯಲ್ಲಿ ದೊರಕುವ ನೂರಾರು ಬ್ರಾಂಡ್‌ಗಳ ತುಪ್ಪ ಹಾಗೂ ಅವು ನೀಡುವ ಭಾರೀ ಡಿಸ್ಕೌಂಟ್ ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಸಫಲವಾಗಿವೆ, ದೇಶದಲ್ಲಿ ಶುದ್ಧವಾದ ಹಾಲಿನ ಉತ್ಪಾದನೆಯೇ ಕಡಿಮೆಯಿದ್ದಾಗ ಇಷ್ಟೊಂದು ಅಗಾಧ ಪ್ರಮಾಣದಲ್ಲಿ ತುಪ್ಪ ಹೇಗೆ ಉತ್ಪಾದನೆಯಾಗಬಲ್ಲದು ಎಂಬುದರ ಕುರಿತು ಗ್ರಾಹಕರು ಯೋಚಿಸುವ ಅಗತ್ಯವಿದೆ. ಬಹುತೇಕ ಬ್ರಾಂಡ್‌ನ ತುಪ್ಪಗಳು ವನಸ್ಪತಿಯಿಂದ ಕಲಬೆರಕೆಯಾಗಿರುತ್ತವೆ ಎಂಬುದು ಕಟು ಸತ್ಯ. ಈ ವನಸ್ಪತಿಗಳ ದರವೂ ತುಪ್ಪಕ್ಕಿಂತ ಬಲು ಕಡಿಮೆಯಿದ್ದು, ತುಪ್ಪದಲ್ಲಿ ಬೆರೆಸಿದಾಗ ನೋಡಿದಾಕ್ಷಣ ಕಲಬೆರಕೆ ಎಂದು ಗುರುತಿಸುವುದು ಸಾಧ್ಯವಿಲ್ಲ. ಈ ವನಸ್ಪತಿಗಳಲ್ಲಿರುವ ಟ್ರಾನ್ಸ್ ಕೊಬ್ಬಿನ ಆಮ್ಲ ನಮ್ಮ ದೇಹಕ್ಕೆ ಅಪಾಯಕಾರಿಯಾಗಿದೆ.

ಕೆಲವೊಮ್ಮೆ ಪಾಮೆಣ್ಣೆಯಂತಹ ಎಣ್ಣೆಗಳನ್ನು ವನಸ್ಪತಿಗಳಲ್ಲಿ ಬೆರೆಸಿ ತುಪ್ಪದಂತಹ ಸುಗಂಧಕಾರಕವನ್ನು (ಎಸೆನ್ಸ್) ಬಳಸುತ್ತಾರೆ. ಇಂತಹ ಕಲಬೆರಕೆ ತುಪ್ಪ, ಶುದ್ಧ ತುಪ್ಪಕ್ಕಿಂತಲೂ ಆಕರ್ಷವಾಗಿದ್ದು, ಗ್ರಾಹಕರು ಮತ್ತೆ ಮತ್ತೆ ಅವುಗಳನ್ನೇ ಬಳಸುತ್ತಾರೆ.  ಈಗ ಓದುವ ವಿಷಯ ಸಸ್ಯಾಹಾರಿಗಳಿಗೆ ‘ಶಾಕ್’ ನೀಡಬಹುದು! ದನ, ಎಮ್ಮೆ, ಹಂದಿ ಮುಂತಾದ ಪ್ರಾಣಿಗಳ ದೇಹದ ಕೊಬ್ಬನ್ನು ತುಪ್ಪದ ತಯಾರಿಕೆಗೆ ಯಥೇಚ್ಛವಾಗಿ ಬಳಸುತ್ತಾರೆ!

ಅಮೆರಿಕದಲ್ಲಿ ಇತ್ತೀಚೆಗೆ ‘ಗೀಸೆನ್ಸ್’ ಎಂಬ ಒಂದು ವಸ್ತು ದೊರೆಯುತ್ತಿದ್ದು ಇದು ಯಾವುದೇ ಕೊಬ್ಬು ಹೊಂದಿರದೇ ತುಪ್ಪದ ಪರಿಮಳವನ್ನೇ ಹೊಂದಿದೆ. ಹೃದ್ರೋಗಿಗಳಿಗೆ ಹಾಗೂ ದೇಹದ ಆಕೃತಿ ಕುರಿತು ಯೋಚಿಸುವವರಿಗೆ ಇದು ಹೇಳಿ ಮಾಡಿಸಿದ ಅಪಾಯಕಾರಿಯಲ್ಲದ ವಸ್ತು.

ಕಲಬೆರಕೆ ಪತ್ತೆ ಹೀಗೆ: ಸರಿಯಾದ ರಾಸಾಯನಿಕ ವಿಧಾನಗಳನ್ನು ಅನುಸರಿಸದೇ, ತುಪ್ಪದಲ್ಲಿನ ಕಲಬೆರಕೆ ಕಂಡು ಹಿಡಿಯುವುದು ತುಸು ಕಷ್ಟದ ಕೆಲಸವೇ. ಮೊದಲನೆಯದಾಗಿ ಬಾಟಲಿಗಳಲ್ಲಿ ದೊರೆಯುವ ತುಪ್ಪ, ಘನರೂಪದಲ್ಲಿ ಗಟ್ಟಿಯಾಗಿ ಕೆಳಗಡೆ ಸೇರಿಕೊಂಡು, ದ್ರವರೂಪದ ಭಾಗ ಮೇಲ್ಭಾಗದಲ್ಲಿದ್ದು ಪ್ರತ್ಯೇಕಿಸಲ್ಪಟ್ಟಿದ್ದರೆ, ಅದು ಕಲಬೆರಕೆ ಎಂದು ಪ್ರಾಥಮಿಕವಾಗಿ ನುಡಿಯಬಹುದು. ಸ್ವಲ್ಪ ತುಪ್ಪವನ್ನು ಅಂಗೈಯಲ್ಲಿಟ್ಟು ಚೆನ್ನಾಗಿ ಉಜ್ಜಿ ಸುಮಾರು 15 ನಿಮಿಷಗಳ ಕಾಲ ಹಾಗೆಯೇ ಇಡಿ. ಆ ಬಳಿಕ ಕೈಯ್ಯನ್ನು ಮೂಗಿನ ಸಮೀಪ ಒಯ್ದು ಮೂಸಿ ನೋಡಬೇಕು, ಅಂಗೈಯಲ್ಲಿ ತುಪ್ಪದ ವಾಸನೆಯಿರದಿದ್ದರೆ ಅದು ಕಲಬೆರಕೆಯಾಗಿದ್ದು ತುಪ್ಪದ ಸುಗಂಧಕಾರಕ ಹೊಂದಿದೆ. ಸುವಾಸನೆಗಾಗಿ ಬಳಸುವ ಸುಗಂಧಕಾರಕಗಳು ತೀಕ್ಷ್ಣವಾಗಿ ಆವಿಯಾಗುವ (ವೊಲಾಟೈಲ್) ಗುಣ ಹೊಂದಿದೆ. ಈ ಕಾರಣದಿಂದಲೇ ಕೆಲವೊಂದು ತುಪ್ಪಗಳನ್ನು ಪಾತ್ರೆಯಲ್ಲಿ ಬಿಸಿ ಮಾಡಿದ ಕೆಲಕ್ಷಣಗಳಲ್ಲಿ ಅದರಲ್ಲಿನ ಸುಗಂಧಕಾರಕಗಳು ಹಾರಿ ಹೋಗಿ ಯಾವುದೇ ವಾಸನೆ ಇರುವುದಿಲ್ಲ! ಕಲಬೆರಕೆ ತಡೆಗಟ್ಟುವ ಕಾನೂನಿನ ಪ್ರಕಾರ, ವನಸ್ಪತಿಗಳಲ್ಲಿ ಶೇಕಡಾ 5 ರಷ್ಟು ಸಾಸಿವೆ ಎಣ್ಣೆ ಹಾಕಿರಬೇಕು ಎಂದು ಕಾನೂನಿದೆ. ಹೀಗಾಗಿ ವನಸ್ಪತಿಗಳಿಂದ ಕಲಬೆರಕೆಯಾದ ತುಪ್ಪವನ್ನು ಸುಲಭ ವಿಧಾನದಲ್ಲಿ ಪರೀಕ್ಷಿಸಬಹುದು. ಸಂಶಯಿತ ತುಪ್ಪವನ್ನು ಸ್ವಲ್ಪ ಪ್ರಮಾಣದ ‘ಫರ್‌ಫುರಲ್’ ( Furfural) ಎಂಬ ರಾಸಾಯನಿಕದಲ್ಲಿ ಹಾಕಿ, ಅದರಲ್ಲಿ ಒಂದೆರಡು ಹನಿಗಳಷ್ಟು ತೀಕ್ಷ್ಣ ಹೈಡ್ರೊಕ್ಲೊರಿಕ್ ಆಮ್ಲವನ್ನು ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಇಡಬೇಕು. 10 ನಿಮಿಷಗಳಲ್ಲಿ ರಕ್ತ ಕೆಂಪು ಬಣ್ಣ ಉಂಟಾದಲ್ಲಿ ಅದು ವನಸ್ಪತಿಯಿಂದ ಕಲಬೆರಕೆಯಾಗಿದೆ ಎಂದರ್ಥ. ಸುಮಾರು 2 ಗ್ರಾಂನಷ್ಟು ತುಪ್ಪವನ್ನು ‘ಸಪೊನಿಫಿಕೇಶನ್’ ಎಂಬ ಪ್ರಕ್ರಿಯೆಗೆ ಒಳಪಡಿಸಿ ಅದನ್ನು ನೀರಿನಲ್ಲಿ ಹಾಕಿದಾಗ, ಅದು ಕರಗದ ದ್ರಾವಣದ ರೂಪ  (turbidity) ಪಡೆದಲ್ಲಿ, ಆ ತುಪ್ಪವನ್ನು ಎಂಜಿನ್ ಆಯಿಲ್‌ನಿಂದ ಕಲಬೆರಕೆ ಮಾಡಿದ್ದಾರೆ ಎಂದರ್ಥ. ಜತೆಗೆ ‘ಬ್ಯುಟೆರೊರಿಪ್ರಿಕ್ಟೊಮೀಟರ್’ ಎಂಬ ಉಪಕರಣವೂ ಲಭ್ಯವಿದ್ದು, ಅಲ್ಟ್ರಾವೈಯ್‌ಲೆಟ್ ಸ್ಟೆಕ್ಟ್ರೊಮೀಟರ್ ಎಂಬ ಉಪಕರಣವಿದ್ದು, ತುಪ್ಪವನ್ನು ಇದರಲ್ಲಿ ಇಟ್ಟು ಅಲ್ಟ್ರಾವೈಯ್‌ಲೆಟ್ ಕಿರಣಗಳನ್ನು ಹಾಯಿಸಿದಾಗ ನೀಲಿ-ಹಸಿರು ಬಣ್ಣ ತೋರಿಸುತ್ತದೆ. ಆದರೆ ಹತ್ತಿಯ ಎಣ್ಣೆಯೂ ಇದೇ ತೆರನಾದ ಬಣ್ಣ ಹೊಂದಿರುವುದರಿಂದ ಇದು ತುಸು ಕಷ್ಟದಾಯಕವೇ. ಈ ಬಣ್ಣಗಳ ಪರೀಕ್ಷೆ, ಕಲಬೆರಕೆ ಪ್ರಮಾಣ ಶೇ15 ಕ್ಕಿಂತಲೂ ಕಡಿಮೆ. ಪ್ರಾಣಿಗಳ ಕೊಬ್ಬು ಹೊಂದಿರುವಾಗ, ಇದೂ ಉಪಯೋಗವಿಲ್ಲ. ಒಂದು ಕೆ.ಜಿ. ತುಪ್ಪದ ಕಲಬೆರಕೆಯಿಂದ, ಆ ಬ್ರಾಂಡ್‌ನವರು ಕನಿಷ್ಠವೆಂದರೂ ರೂ 80-100 ತನಕ ಲಾಭ ಪಡೆಯುತ್ತಾರೆ.

ಹೇಗೆ ಸಂಗ್ರಹಿಸಬೇಕು? ತುಪ್ಪವನ್ನು ಸಡಿಲವಾದ ಜಾಡಿಗಳಲ್ಲಿ ಸಂಗ್ರಹಿಸುವುದರಿಂದ ಅವು ಕೆಲ ದಿನಗಳಲ್ಲಿ ಆಕ್ಸಿಡೆಶನ್ ಪ್ರಕ್ರಿಯೆಗೆ ಒಳಗಾಗಿ, ಕೆಟ್ಟ ವಾಸನೆ ಉಂಟಾಗಬಹುದು. ಹೀಗಾಗಿ ಸಾಧ್ಯವಾದಷ್ಟು ಗಾಳಿಯಾಡದ ಜಾಡಿಗಳಲ್ಲಿ ಇಡುವುದು ಉತ್ತಮ. ಆದರೆ ಇದೀಗ ಕೆಲವೊಂದು ಆ್ಯಂಟಿಆಕ್ಸಿಡೆಂಟ್‌ಗಳನ್ನು ಬೆರೆಸುವುದರಿಂದ ತುಪ್ಪವನ್ನು ದೀರ್ಘಕಾಲ ಸಂಗ್ರಹಿಸಿ ಇಡಬಹುದು. ಸತತವಾಗಿ ಈ ಕೃತಕ ಆ್ಯಂಟಿಆಕ್ಸಿಡೆಂಟ್ ಸೇವನೆ ಉತ್ತಮವಲ್ಲ. ಬೆಣ್ಣೆ ಕರಗಿಸಿ ತುಪ್ಪ ಮಾಡುವಾಗ ಕರಿಬೇವಿನ ಎಲೆ ಅಥವಾ ಅರಿಶಿಣ ಎಲೆ ಚೂರುಗಳನ್ನು ಹಾಕುವ ಪರಿಪಾಠವೂ ಇದೆ. ಇದೀಗ ವಿಜ್ಞಾನಿಗಳ ಸಂಶೋಧನೆಗಳ ಪ್ರಕಾರ, ಕರಿಬೇವಿನ ಹಾಗೂ ಅರಶಿಣಎಲೆಗಳಲ್ಲಿರುವ ಕೆಲವೊಂದು ನೈಸರ್ಗಿಕ ಆ್ಯಂಟಿಆಕ್ಸಿಡೆಂಟ್‌ಗಳು ತುಪ್ಪವನ್ನು ಬಹುಕಾಲ ಸಂಗ್ರಹಣ ಯೋಗ್ಯ ಮಾಡುತ್ತವೆ! ಗ್ರಾಹಕರ ಜಾಗೃತಿಯಿಂದಲೇ ಇಂತಹ ಕಲಬೆರಕೆ ವ್ಯಾಪಾರವನ್ನು  ಮಟ್ಟ ಹಾಕಬಹುದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಶಿಕ್ಷಕರ ಸಹಾಯದಿಂದ ಸುಲಭದ ರಾಸಾಯನಿಕ ಪರೀಕ್ಷೆಗಳನ್ನು ತಮ್ಮ ಪ್ರಯೋಗಾಲಯಗಳಲ್ಲಿ ಮಾಡಿದಲ್ಲಿ, ಉತ್ತಮ ‘ಪ್ರಾಜೆಕ್ಟ್ ವರ್ಕ್’ ಆಗುವುದಲ್ಲದೇ, ಜನಸಾಮಾನ್ಯರಲ್ಲೂ ಕಲಬೆರಕೆ ಆಹಾರ ವಸ್ತುಗಳ ಕುರಿತಾಗಿ ಜಾಗೃತಿ ಮೂಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT