ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ನಗುವಾಗ ದೈವಿಕತೆ ಉಕ್ಕುತ್ತದೆ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಸಾವಿತ್ರಿ ಎಂಬ ಯಾತ್ರಿಯೊಬ್ಬಳು ಹಿಮಾಲಯದ ತಪ್ಪಲಿನಲ್ಲಿ ನಡೆದು ಹೋಗುತ್ತಿರುವಾಗ ಸ್ಫಟಿಕ ಶುದ್ಧ ತೊರೆಯ ಬಳಿ ಅಪರೂಪದ ಕಲ್ಲೊಂದು ಸಿಕ್ಕಿತು. ಅದೊಂದು ಅಮೂಲ್ಯ ರತ್ನ.
ಹಾಗೆ ಹೋಗುತ್ತಿರುವಾಗ ಮತ್ತೊಬ್ಬ ಯಾತ್ರಿ ಆಕೆಗೆ ಜತೆಯಾದ. ಆತ ಹಸಿದಿದ್ದ. ಸಾವಿತ್ರಿ ತನ್ನ ಚೀಲ ತೆರೆದು ಊಟ ಹಂಚಿಕೊಂಡಳು. ಆಕೆಯ ಚೀಲದಲ್ಲಿದ್ದ ರತ್ನವನ್ನು ನೋಡಿದ ಯಾತ್ರಿ ಅದನ್ನು ತನಗೆ ನೀಡುವಂತೆ ಕೇಳಿದ. ಯಾವುದೇ ಹಿಂಜರಿಕೆ ಇಲ್ಲದೇ ಆಕೆ ಅದನ್ನು ಆತನಿಗೆ ನೀಡಿದಳು.ಯಾತ್ರಿಗೆ ಬಲು ಆಶ್ಚರ್ಯವಾಯಿತು. ಆ ಹರಳಿನಿಂದ ಆತ ಜೀವಮಾನ ಇಡೀ ಆರಾಮಾಗಿ ಜೀವನ ಸಾಗಿಸಬಹುದಿತ್ತು.

ಎರಡು ದಿನ ನಂತರ ಆತ ವಾಪಸು ಬಂದು ಆ ಹರಳನ್ನು ಸಾವಿತ್ರಿಗೆ ಹಿಂದಿರುಗಿಸಿದ. ಈ ಹರಳು ಅಮೂಲ್ಯವಾದುದ್ದು. ಇದನ್ನು ಮಾರಿದಲ್ಲಿ ಭಾರಿ ಸಂಪತ್ತು ಬರಲಿದೆ. ಆದರೆ, ನೀನು ಇದಕ್ಕಿಂತ ಅಮೂಲ್ಯವಾದುದ್ದು ನೀಡುತ್ತೀಯ ಎಂಬ ಭರವಸೆಯಿಂದ ಇದನ್ನು ನಿನಗೆ ಹಿಂದಿರುಗಿಸುತ್ತಿದ್ದೇನೆ. ಈ ಹರಳು ನನಗೆ ದಾನ ಮಾಡುವಂತಹ ಗುಣ ಹೇಗೆ ಹುಟ್ಟಿತು ಎಂದು ಆ ಯಾತ್ರಿ ಪ್ರಶ್ನಿಸಿದ.

***

ಸಾವಿತ್ರಿಯ ಬಳಿ ಇರುವುದು ದೈವಿಕ ಗುಣ. ಪ್ರತಿಯೊಬ್ಬರಲ್ಲೂ ಇಂತಹ ದೈವಿಕ ಗುಣ ಇರುತ್ತದೆ. ತಾವು ನೀಡುತ್ತಿದ್ದೇವೆ ಎಂಬುದು ಅರಿವಾಗದಂತಹ ಈ ಗುಣ ಒಮ್ಮಮ್ಮೆ ಪ್ರಕಟಗೊಳ್ಳುತ್ತದೆ. ನಾವು ನಮ್ಮ ಮಕ್ಕಳಿಗೆ ಊಟ ನೀಡುವಾಗ ಬೇರೊಬ್ಬರಿಗೆ ಊಟ ಕೊಡುತ್ತಿದ್ದೇವೆ ಎಂಬ ಭಾವವೇ ನಮ್ಮ ಬಳಿ ಸುಳಿಯುವುದಿಲ್ಲ. ಸ್ವತಃ ನಮಗೆ ನಾವೇ ಏನನ್ನೋ ಮಾಡಿಕೊಂಡಂತೆ ಅನಿಸುತ್ತದೆ. ನಾವು ಚಿನ್ನದ ಬಳೆ ಹಾಕಿಕೊಂಡಾಗ ನನ್ನ ದೇಹಕ್ಕೆ ಏನೋ ಉಪಕಾರ ಮಾಡಿಕೊಂಡಿದ್ದೇನೆ ಎಂದು ಅನ್ನಿಸುವುದಿಲ್ಲ. ಹಾಗೆಯೇ ಬೇರೆಯವರಿಗೆ ಏನನ್ನೋ ಕೊಡುವಾಗ ಅವರನ್ನೂ ನಮ್ಮಂತೆ ಪರಿಗಣಿಸಿದಾಗ ಅದು ದಾನ ಕೊಟ್ಟಿದ್ದು, ಅನ್ಯರಿಗೆ ಮಾಡಿದ್ದು ಎಂಬ ಭಾವ ಬರುವುದಿಲ್ಲ.

ಇಂತಹ ಮನೋಭಾವ ಬೆಳೆಸಿಕೊಳ್ಳಲು ನಾವು ಸಣ್ಣದೊಂದು ಪ್ರಯತ್ನ ಮಾಡಬಹುದು. ಜಗತ್ತನ್ನೇ ಒಂದು ದೈವಿಕ ಕಾಲೋನಿ ಎಂದು ಪರಿಗಣಿಸಿ ಎಲ್ಲರೂ ಉತ್ತಮವಾಗಿ ಜೀವನ ಸಾಗಿಸಲು ಯತ್ನಿಸುತ್ತಿದ್ದಾರೆ ಎಂದುಕೊಳ್ಳಬಹುದು. ರಸ್ತೆಯ ಆ ಪಕ್ಕ ನಡೆದು ಹೋಗುತ್ತಿರುವ ಹೆಂಗಸು ನಿಮ್ಮಂತೆಯೇ ಉಸಿರಾಡುತ್ತಿದ್ದಾಳೆ ಎಂಬುದನ್ನು ನೀವು ಗಮನಿಸಬಹುದು. ಬಸ್ಸಿನಲ್ಲಿ ಪಕ್ಕದಲ್ಲಿ ಕುಳಿತ ವ್ಯಕ್ತಿ ನೀವು ಯೋಚಿಸಿದಂತೆಯೇ ಯೋಚಿಸುತ್ತಿದ್ದಾನೆ. ಜಗತ್ತಿನೆಲ್ಲೆಡೆ ನಮ್ಮ ಹೃದಯ ಒಂದೇ ಸಮಯಕ್ಕೆ ಬಡಿಯುತ್ತದೆ ಎಂಬುದನ್ನು ಅರಿತುಕೊಳ್ಳಬಹುದು.

ದಲಾಯ್ ಲಾಮ ಹೇಳುವಂತೆ ಯಾರೂ ಸಹ ಅಪರಿಚಿತರಲ್ಲ. ಹೌದು, ಒಂದೇ ಪಯಣದಲ್ಲಿ ಜತೆಯಾಗಿರುವ ಪ್ರವಾಸಿಗರು ನಾವು. ಕೆಲವೊಮ್ಮೆ ನಾವು ಕಣ್ಣೊಳಗೆ ಕಣ್ಣಿಟ್ಟು ನೋಡಿ ನಗು ವಿನಿಮಯ ಮಾಡಿಕೊಳ್ಳುತ್ತೇವೆ. ಕುಹಕವಿಲ್ಲದ ಶುಭ್ರ ನಗು ನಮ್ಮಳಗಿನ ದೈವಿಕತೆಯ ಲಕ್ಷಣ. ಅದಕ್ಕಾಗಿ ಅದು ಅಷ್ಟು ಸುಂದರವಾಗಿರುತ್ತದೆ. ನಮ್ಮ ಆತ್ಮದಿಂದ ಅದು ಹುಟ್ಟುತ್ತದೆ. ಇದು ಒಂದು ದೇಹ ಮತ್ತೊಂದು ದೇಹದೊಂದಿಗೆ ನಗುವ ಪ್ರಕ್ರಿಯೆಯಲ್ಲ. ಒಂದು ಆತ್ಮ ಮತ್ತೊಂದು ಆತ್ಮದೊಂದಿಗೆ ಸಂತಸ ಹಂಚಿಕೊಳ್ಳುವ ಸಂಭ್ರಮ.

ಇದು ಅರಿವಿನ ನಗು. ಇದು ನಮ್ಮನ್ನು ವಿಚಿತ್ರ ರೀತಿಯಲ್ಲಿ ರಹಸ್ಯವಾಗಿ ಬಂಧಿಸುತ್ತದೆ. ಹಲೋ..! ಒಟ್ಟಿಗೆ ಬದುಕಿರುವುದು ಎಷ್ಟು ಅರ್ಥಪೂರ್ಣ, ಎಷ್ಟು ಸಂತಸಕರ ಎಂದು ಒಂದು ಆತ್ಮ ಮತ್ತೊಂದು ಆತ್ಮಕ್ಕೆ ಹೇಳುತ್ತದೆ.

ಇಂತಹ ನಗು ನಮಗೆ ಬಲ ತಂದುಕೊಡುತ್ತದೆ ಎಂದು ತಿಳಿದವರು ಹೇಳುತ್ತಾರೆ. ನೀವು ಯಾರನ್ನಾದರೂ ನೋಡಿ ನಕ್ಕಾಗ ಉತ್ತಮ ಗುಣಮಟ್ಟದ ಶಕ್ತಿಯ ಧಾರೆಯನ್ನು ಆಕೆಯೆಡೆ ಕಳುಹಿಸುತ್ತೀರಿ. ನೀವು ನಗುವುದಕ್ಕಿಂತ ಮುನ್ನ ಆ ವ್ಯಕ್ತಿ ಯಾವುದೋ ಯೋಚನೆಯಲ್ಲಿ, ಚಿಂತೆಯಲ್ಲಿ ಮುಳುಗಿರಬಹುದು. ಆದರೆ, ನಿಮ್ಮ ನಿಷ್ಕಳಂಕ ನಗು ಆ ವ್ಯಕ್ತಿಯ ಹೃದಯದಲ್ಲಿ ಅಡಗಿರುವ ಕತ್ತಲನ್ನು ಓಡಿಸುತ್ತದೆ. ಹೊಸ ಬಲ, ಉತ್ಸಾಹದೊಂದಿಗೆ ಆ ವ್ಯಕ್ತಿ ನಿಮ್ಮೆಡೆ ತಿರುಗಿ ನಗುತ್ತಾರೆ.

ನೀವು ನಕ್ಕಾಗ ನಿಮ್ಮಲ್ಲಿನ ಗೊಂದಲ, ನೋವು ಮರೆಯಾಗುತ್ತದೆ. ನಿಮಗೆ ಸ್ಪಂದಿಸಿ ನಗುವ ವ್ಯಕ್ತಿಯ ನೋವೂ ಗುಣವಾಗುತ್ತದೆ. ಒಬ್ಬರನ್ನೊಬ್ಬರು ಪರಿವರ್ತನೆ ಮಾಡಲು ನೀವು ಸಹಕರಿಸಿರುತ್ತೀರಿ. ನಗು ಎಂಬುದು ನಿಮ್ಮಳಗೆ ಹರಿಯುತ್ತಿರುವ ಪರಿಶುಭ್ರ ದೈವಿಕ ತೊರೆಯೊಳಗಿನ ಅಮೂಲ್ಯ ರತ್ನವಿದ್ದಂತೆ.

ನಿಶ್ಶಬ್ದದ ಮಾಂತ್ರಿಕತೆ

ಹಾಗೆಯೇ ನಿಶ್ಶಬ್ದ ಸಹ. ನಿಶ್ಶಬ್ದ ಎಂಬುದು ಶಬ್ದದ ನಗುವಾಗಿರುತ್ತದೆ. ಅದಕ್ಕಾಗಿಯೇ ನಿಶ್ಶಬ್ದದಲ್ಲಿ ಒಂದು ಮಾಂತ್ರಿಕತೆ ಇದೆ. ಹತ್ತಾರು ಆಲೋಚನೆ, ನಿರಾಸೆ, ಚಿಂತೆಗಳಿಂದ ದಣಿದ ಮನಸ್ಸಿಗೆ ನಿಶ್ಶಬ್ದ ತಂಪಾದ ಓಯಸಿಸ್. ಈ ನಿಶ್ಶಬ್ದ ನಮ್ಮನ್ನು ನಾವು ಅರಿತುಕೊಳ್ಳಲು ಸಹಕಾರಿಯಾಗಿರುತ್ತದೆ. ನಾವು ಒಬ್ಬರಿಂದ ಒಬ್ಬರು ಬೇರೆಯಾದಾಗ ನಿಶ್ಶಬ್ದವನ್ನು ಜೊತೆಗೆ ತೆಗೆದುಕೊಂಡು ಹೋಗುತ್ತೇವೆ.

ನೀವು ಈ ಜಗತ್ತಿನ ಮೇಲೆ ಮಾಡುವ ಪರಿಣಾಮ ಕಡಿಮೆಯದಲ್ಲ. ನೀವು ನಕ್ಕಾಗ ಇಡೀ ವಿಶ್ವ ಆ ನಗುವನ್ನು ಹೀರಿಕೊಳ್ಳುತ್ತದೆ. ನೀವು ಮಾಡುವ ಆಲೋಚನೆಗಳೂ ಅಲ್ಲಿ ದಾಖಲಾಗುತ್ತವೆ. ನೀವು ನಡೆಯುವ ಪ್ರತಿ ಹೆಜ್ಜೆಯ ಕಂಪನವನ್ನೂ ಭೂಮಿ ಹೀರಿಕೊಳ್ಳುತ್ತದೆ. ಹಾಗಾಗಿ ನೀವು ನಡೆಯುವಾಗ ಗೌರವದಿಂದ, ಅರಿವಿನಿಂದ ನಡೆಯಿರಿ. ಆ ಭೂಮಿಗೆ ಕೃತಜ್ಞತೆ ಸಲ್ಲಿಸಿ. ಎಲ್ಲೋ ತುರ್ತಾಗಿ ಹೋಗುವ ಸಂದರ್ಭ ಹೊರತುಪಡಿಸಿ ನಿಧಾನವಾಗಿ ನಡೆಯಿರಿ.

ದೊಡ್ಡದಾಗಿ ನಕ್ಕು ನಿಮ್ಮ ನಗು ಹಂಚಿಕೊಳ್ಳಿ. ಮೌನದಿಂದ ಇದ್ದು ಆ ಮೌನ ಹಂಚಿಕೊಳ್ಳಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಎಲ್ಲವನ್ನೂ ಹಂಚಿಕೊಳ್ಳಿ. ಕೋಟ್ಯಂತರ ವರ್ಷಗಳಿಂದ ಯಾವುದೇ ಅಪೇಕ್ಷೆ ಇಲ್ಲದೇ ಸೂರ್ಯ ಭೂಮಿಯತ್ತ ನೋಡಿ ಮುಗುಳ್ನಗುತ್ತಾನೆ. ಅದರ ಫಲಿತಾಂಶ ನೋಡಿ, ಆ ನಗುವಿನಿಂದ ಇಡೀ ಜಗತ್ತು ಬೆಳಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT