ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೂ ಸ್ಟಾರ್ ಆಗಿ!

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಅತ್ಯಂತ ಮಹತ್ವದ ಘಟ್ಟ. ಇದೊಂದು ಕಲೆಯಿದ್ದಂತೆ. ಇಡೀ ವರ್ಷದ ಸಾಧನೆಯನ್ನು, ಪ್ರತಿಭೆಯನ್ನು ಕೆಲವೇ ಗಂಟೆಗಳಲ್ಲಿ ಪ್ರದರ್ಶಿಸಬೇಕಾದ ಅನಿವಾರ್ಯತೆ ಇರುತ್ತದೆ. ಕಲಿಸಿದ ಗುರುಗಳ ಹಾಗೂ ಪೋಷಕರ ಜವಾಬ್ದಾರಿಯನ್ನು ಪೂರೈಸಬೇಕಾಗಿರುತ್ತದೆ. ನಿಮ್ಮ ಒಳಗಿನ ಅಂತಃಶಕ್ತಿ ಅತ್ಯುತ್ತಮವಾಗಿದ್ದು, ಅದನ್ನು ನೀವು ಎಷ್ಟು ಮತ್ತು ಹೇಗೆ ಸದುಪಯೋಗ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ಇದು ಅವಲಂಬಿಸಿರುತ್ತದೆ.

ಸೋಲುತ್ತೇನೆಂದು ಯಾವ ಆಟಗಾರನೂ ಮೈದಾನಕ್ಕೆ ಇಳಿಯುವುದಿಲ್ಲ. ಗೆದ್ದೇ ಗೆಲ್ಲುವೆನೆಂಬ ಆತ್ಮವಿಶ್ವಾಸದಿಂದಲೇ ಆಟ ಆರಂಭಿಸುತ್ತಾನೆ. ನೀವು ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ನಿಮ್ಮ ಮನಸ್ಥಿತಿಯೂ ಹಾಗೆಯೇ ಇರಬೇಕು. ನೀವೂ ಒಬ್ಬ ಉತ್ತಮ ಆಟಗಾರ ಎಂದುಕೊಂಡು ಪರೀಕ್ಷೆ ಎಂಬ ಆಟದಲ್ಲಿ ಗೆಲ್ಲುವೆನೆಂಬ ಖಚಿತ ವಿಶ್ವಾಸದೊಂದಿಗೆ ಮುನ್ನುಗ್ಗಿ. ಆಗ ಮಾತ್ರ ನೀವು ಸ್ಟಾರ್ ಆಗಲು ಸಾಧ್ಯ.

ಪರೀಕ್ಷೆಯಲ್ಲಿ STAR ಆಗಲು ಕೆಳಗಿನ ಅಂಶಗಳನ್ನು ಗಮನದಲ್ಲಿಡಿ:
*S- Starting (ಪ್ರಾರಂಭಿಸುವಿಕೆ)
*T- Timing  (ಸಮಯ ಪಾಲನೆ)
*A- Answering (ಉತ್ತರಿಸುವಿಕೆ)
*R- Reviewing (ಪುನರಾವಲೋಕನ)


ಈಗ ಇವುಗಳನ್ನು ಒಂದೊಂದಾಗಿ ಮನನ ಮಾಡಿಕೊಳ್ಳಿ.
ಪ್ರಾರಂಭಿಸುವಿಕೆ(Starting)

ಪರೀಕ್ಷೆ ಎಂದರೆ ಭಯ, ಆತಂಕ, ಒತ್ತಡಗಳು ಇರುವುದು ಸಹಜ. ಇವುಗಳನ್ನು ಹೆಚ್ಚಿಸಿಕೊಂಡರೆ ಜ್ಞಾಪಕ ಶಕ್ತಿಯ ಮೇಲೆ ಪರಿಣಾಮ ಉಂಟಾಗಬಹುದು. ಇವುಗಳಿಂದ ದೂರವಿರಲು ದೀರ್ಘವಾದ ಉಸಿರಾಟ ನೆಡೆಸಿ, ಮನಸ್ಸನ್ನು ಪ್ರಶಾಂತಗೊಳಿಸಿಕೊಳ್ಳಿ. ಮೊಬೈಲ್ ಫೋನನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಬೇಡಿ. ಇದರಿಂದ ತೊಂದರೆ ತಪ್ಪಿದ್ದಲ್ಲ. ಬರಹಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳು ನಿಮ್ಮ ಬಳಿ ಇರುವುದನ್ನು ಖಾತ್ರಿಪಡಿಸಿಕೊಳ್ಳಿ. ಅಗತ್ಯವಿರುವಷ್ಟು ಪೆನ್ನು, ಪೆನ್ಸಿಲ್ ಇತ್ಯಾದಿಗಳನ್ನು ಕೊಂಡೊಯ್ಯಿರಿ. ಅಕ್ಕಪಕ್ಕದಲ್ಲಿ ಇರುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮಗೆ ಪರೀಕ್ಷೆ ಮುಖ್ಯವೇ ಹೊರತು ಅಕ್ಕಪಕ್ಕದಲ್ಲಿ ಇರುವವರು ಅಲ್ಲ.

ಪರೀಕ್ಷೆ ಬರೆಯುವ ಮುನ್ನ ನಿಮಗೆ ನೀಡಿದ ಪ್ರಶ್ನೆಪತ್ರಿಕೆಯನ್ನೊಮ್ಮೆ ಸ್ಪಷ್ಟವಾಗಿ ಓದಿ. ನೀಡಿದ ಎಲ್ಲಾ ಸೂಚನೆಗಳನ್ನು ಪಾಲಿಸಿ. ಪ್ರತೀ ಪ್ರಶ್ನೆಯ ಪ್ರಮುಖಾಂಶಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ. ಉತ್ತರ ಗೊತ್ತಿರುವ ಪ್ರಶ್ನೆಗಳನ್ನು ಮೊದಲು ಗುರುತಿಸಿಕೊಳ್ಳಿ.

ಸಮಯ ಪಾಲನೆ(Timing)
ಸಮಯದ ಬಗ್ಗೆ ಯೋಜಿಸುವುದು ಪರೀಕ್ಷೆಯನ್ನು ಪಾಸಾದಷ್ಟೇ ಮಹತ್ವದ್ದು. ಸಾಧ್ಯವಾದಷ್ಟೂ ಕಿರು ಉತ್ತರದ ಪ್ರಶ್ನೆಗಳಿಗೆ ಕಡಿಮೆ ಸಮಯ ಬಳಸಿ, ದೀರ್ಘ ಉತ್ತರದ ಪ್ರಶ್ನೆಗಳಿಗೆ ಹೆಚ್ಚು ಸಮಯ ಇಟ್ಟುಕೊಳ್ಳಿ. ಸಮಯದ ಕಡೆಗೆ ಗಮನ ಹರಿಸುತ್ತಾ ಉತ್ತರಿಸಿ.
ಒಂದು ವೇಳೆ ಕಡಿಮೆ ಸಮಯ ಇದ್ದು ಹೆಚ್ಚು ಪ್ರಶ್ನೆಗಳಿಗೆಉತ್ತರಿಸಬೇಕಾಗಿ ಬಂದರೆ, ಉತ್ತರಗಳನ್ನು ಸಂಕ್ಷಿಪ್ತವಾಗಿ ಬರೆದು ಸ್ವಲ್ಪ ಜಾಗ ಬಿಟ್ಟು ಮುಂದಿನ ಪ್ರಶ್ನೆಗೆ ಉತ್ತರಿಸಿ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಸಮಯ ಉಳಿದರೆ ಅಪೂರ್ಣ ಉತ್ತರಗಳನ್ನು ಪೂರ್ಣಗೊಳಿಸಬಹುದು. ಮತ್ತೂ ಸಮಯ ಉಳಿದರೆ ನೀವು ಬರೆದ ಉತ್ತರಗಳ ಮೇಲೆ ಕಣ್ಣು ಹಾಕಿ.

ಉತ್ತರಿಸುವಿಕೆ (Answering)
ಇದು ಪ್ರಮುಖ ಹಂತ. ನಿಮ್ಮ ಉತ್ತರ ಉತ್ತಮ ಗುಣಮಟ್ಟದಲ್ಲಿರಲಿ. ಪ್ರಮಾಣಕ್ಕಿಂತ (Quantity) ಗುಣಮಟ್ಟದ (Quality) ಮೇಲೆ ಗಮನ ಹರಿಸಿ. ನಿಮ್ಮ ಉತ್ತರ ಮೌಲ್ಯಮಾಪಕರನ್ನು ಆಕರ್ಷಿಸುವಂತೆ ಇರಲಿ. ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ ಆಧಾರದ ಮೇಲೆ ಉತ್ತರ ಬರೆಯಿರಿ. ಉದಾಹರಣೆಗೆ ಒಂದು ಪ್ರಶ್ನೆಗೆ ಎರಡು ಅಂಕಗಳು ನಿಗದಿಯಾಗಿದ್ದರೆ, ನಿಮ್ಮ ಉತ್ತರವನ್ನು ಕನಿಷ್ಠ ಎರಡು ಉತ್ತಮ ವಾಕ್ಯಗಳಲ್ಲಿ ಬರೆಯಿರಿ. ಜೊತೆಗೆ ಅದರಲ್ಲಿ ಎರಡು ಉತ್ತಮ ಅಂಶಗಳು ಇರಲಿ. ಪ್ರಶ್ನೆಯನ್ನು ಸರಿಯಾಗಿ ಅರ್ಥೈಸಿಕೊಂಡು ಉತ್ತರಿಸಿರಿ. ಊಹಿಸಿದ ಅಥವಾ ಕಲ್ಪಿತ ಉತ್ತರಗಳು ಬೇಡ. ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ ಚಿಂತಿಸುತ್ತಾ ಕೂರಬೇಡಿ. ಮುಂದಿನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿ. ಏಕೆಂದರೆ ಸಮಯ ಯಾರನ್ನೂ ಕಾಯುವುದಿಲ್ಲ.

ಪರೀಕ್ಷೆಯಲ್ಲಿ ಶುದ್ಧ ಬರಹ, ಲೇಖನ ಚಿಹ್ನೆಗಳು, ವ್ಯಾಕರಣಾಂಶ, ಸಮಸ್ಯೆ ಬಿಡಿಸುವ ಹಂತಗಳು, ಸೂತ್ರ ಮತ್ತು ಸಮೀಕರಣಗಳ ವಿಶ್ಲೇಷಣೆ, ಅಂದವಾದ ಚಿತ್ರಗಳು ಇತ್ಯಾದಿಗಳಿಗೆ ಹೆಚ್ಚು ಮಹತ್ವ ಇರುವುದರಿಂದ ಇವುಗಳ ಕಡೆ ಗಮನ ಹರಿಸಿ ಬರೆಯಿರಿ.
ಇದು ಮೌಲ್ಯಮಾಪಕರನ್ನು ಆಕರ್ಷಿಸಲು ಸಹಕಾರಿ. ಪರೀಕ್ಷೆಯಲ್ಲಿ ಕಷ್ಟಪಟ್ಟು ಉತ್ತರಿಸಿದರೆ ಸಾಲದು. ಜಾಣತನದಿಂದ ಉತ್ತರಿಸಬೇಕು. ಹೆಚ್ಚು ಅಂಕಗಳಿಸುವ ಪ್ರತಿಯೊಬ್ಬರೂ ಜಾಣತನದಿಂದ ಉತ್ತರಿಸುವ ಕಲೆ ಸಿದ್ಧಿಸಿಕೊಂಡಿರುತ್ತಾರೆ.

ಪುನರಾವಲೋಕನ (Reviewing)
ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಹಿಂದಿನ ಉತ್ತರಗಳತ್ತ ಕಣ್ಣಾಡಿಸಿ. ಪ್ರಶ್ನೆ ಸಂಖ್ಯೆ, ಲೇಖನ, ಚಿಹ್ನೆ, ಸೂತ್ರ, ಸಮೀಕರಣ ಮತ್ತು ಚಿತ್ರಗಳ ಬಳಕೆ ಸಮಂಜಸವಾಗಿದೆಯೋ ಪರಿಶೀಲಿಸಿ. ಉತ್ತರ ಸಮಂಜಸವಾಗಿಲ್ಲದಿದ್ದರೆ ಹೊಡೆದು ಹಾಕಿ ಸರಿಯಾದ ಉತ್ತರ ಬರೆಯಿರಿ. ಹೊಡೆದು ಹಾಕುವಾಗ ಉತ್ತರ ತಪ್ಪಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಅಪೂರ್ಣ ಉತ್ತರಗಳಿದ್ದರೆ ಪೂರ್ಣಗೊಳಿಸಿ.

ಹೀಗೆ ಮೇಲಿನ ಎಲ್ಲಾ ಅಂಶ­ಗಳನ್ನು ಗಮನದಲ್ಲಿಟ್ಟು­ಕೊಂಡು ಪರೀಕ್ಷೆಯನ್ನು ಎದುರಿಸಿ. ಕುರುಡು ನಂಬಿಕೆ(Blind spot)ಗಳನ್ನು ಬಿಟ್ಟುಹಾಕಿ. ನಿಸರ್ಗ ನಮಗೆ ನೀಡಿದ ಕಣ್ಣು, ಕಿವಿ ಮತ್ತು ಜ್ಞಾಪಕ ಶಕ್ತಿಯ ಮೇಲೆ ನಂಬಿಕೆ ವಿಶ್ವಾಸ ಇರಲಿ. ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ. ಯಶಸ್ಸು ನಿಮ್ಮದೇ ಆಗುತ್ತದೆ. ನಿಶ್ಚಿತ­ವಾಗಿ ನೀವು ‘ಸ್ಟಾರ್’ ಆಗುತ್ತೀರಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT