ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೆಲ್ಲಾ ಮನುಸ್ರಾ...

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ತಂಗಿಗೆ ಹೆರಿಗೆ ನೋವು ಶುರುವಾಯಿತು. ಟ್ಯಾಕ್ಸಿಗೆ ಕೊಡುವಷ್ಟು ಹಣ ನನ್ನಲ್ಲಿ ಇರಲಿಲ್ಲ. ಆಗಿನ್ನೂ ಕೆಲಸಕ್ಕೆ ಸೇರಿದ್ದೆ. ಅಮ್ಮ ಸಾಸಿವೆ ಡಬ್ಬದಲ್ಲಿ ಒಂದಿಷ್ಟು ಹಣ ಕೂಡಿಟ್ಟಿದ್ದಳು. ಮಗಳ ಹೆರಿಗೆ, ಬಾಣಂತನಕ್ಕೆ ಅದು ಸಾಲುತ್ತಿರಲಿಲ್ಲ. ನೋವು ಶುರುವಾದದ್ದೇ ನಾನು ಅನಿವಾರ್ಯವಾಗಿ ಮನೆಹೊರಗೆ ಬಂದು ಆಟೊ ಹಿಡಿದೆ.

ತುಂಬು ಗರ್ಭಿಣಿಯ ಕರೆತರುತ್ತಿರುವುದನ್ನು ಕಂಡು ಆ ಆಟೊ ಡ್ರೈವರ್ ತಾನಾಗಿಯೇ ಕೆಳಗಿಳಿದು ಬಂದ. ಆಟೊದೊಳಗೆ ತಂಗಿಯನ್ನು ಕೂರಿಸಲು ಸಹಕರಿಸಿದ. ಅಷ್ಟೇ ಅಲ್ಲ, ನನ್ನ ಅಮ್ಮನ ತೊಡೆ ಮೇಲೆಯೇ ಅವಳನ್ನು ಮಲಗಿಸುವಂತೆ ಸೂಚಿಸಿದ.

`ಕಾಲುಗಳನ್ನು ಹೀಗೆ ಇಟ್ಟುಕೊಳ್ಳಮ್ಮಾ~ ಎಂದು ಅವನೇ ಆಟೊ ಹಿಂಬದಿಯ ಇಕ್ಕಟ್ಟು ಜಾಗದಲ್ಲೇ ತಂಗಿಗೆ ಎಷ್ಟು ಸಾಧ್ಯವೋ ಅಷ್ಟೂ ಅನುಕೂಲ ಮಾಡಿಕೊಟ್ಟ. ನನ್ನನ್ನು ಮುಂದೆ, ಅವನ ಪಕ್ಕದಲ್ಲೇ ಕೂರಿಸಿಕೊಂಡ. ಪೊಲೀಸರು ಪ್ರಶ್ನಿಸಿದರೆ ಏನು ಗತಿ ಎಂಬುದು ನನ್ನ ಆತಂಕ. `ಏನಾಗಲ್ಲಾ ಕುಂತ್ಕಳ್ಳಿ~ ಎಂದವನೇ ಹೊರಟ.

ಆಸ್ಪತ್ರೆ ಮನೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಇತ್ತು. ಅಲ್ಲಿ ನಾವು ಇಳಿದು ತಂಗಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾಯಿತು. ಅವನೂ ನನ್ನೊಡನೆ ಆಸ್ಪತ್ರೆಯ ಒಳಗೆ ಬಂದ. ಹೊರಗೆ ಬಂದು ಆತನಿಗೆ ಹಣ ಕೊಡಲು ಮುಂದಾದೆ. `ಮೊದಲು ಅಲ್ಲಿ ಏನೇನು ಮಾಡಬೇಕೋ ಮಾಡಿಕೊಂಡು ಬನ್ನಿ. ಆಮೇಲೆ ನನ್ನ ಕತೆ. ಅಲ್ಲಿ ಗಂಟ ನಾನು ಆಚೆಕಡೆ ಇರ‌್ತೀನಿ~ ಎಂದ.

ತಂಗಿಯ ಸ್ಥಿತಿ ಸ್ವಲ್ಪ ಗಂಭೀರವಾಗಿತ್ತು. ಅದು ಸಣ್ಣ ಆಸ್ಪತ್ರೆ. ಅವರು ಅಲ್ಲಿ ಸಾಧ್ಯವಿಲ್ಲ ಎಂದು ದೊಡ್ಡಾಸ್ಪತ್ರೆಗೆ ಹೋಗುವಂತೆ ಸೂಚಿಸಿದರು. ಆ್ಯಂಬ್ಯುಲೆನ್ಸ್ ಕೂಡ ಇಲ್ಲದ ಆಸ್ಪತ್ರೆ ಅದು. ಈಗಿನಂತೆ ಆಗ ಫೋನ್ ಮಾಡಿದ ತಕ್ಷಣ ಆ್ಯಂಬ್ಯುಲೆನ್ಸ್ ಬರುವ ವ್ಯವಸ್ಥೆಯೂ ಇರಲಿಲ್ಲ. ನಾನು ಚಿಂತಾಕ್ರಾಂತನಾದೆ. ಕಿಟಕಿಯಿಂದಲೇ ನನ್ನನ್ನು ನೋಡಿದ ಆ ಆಟೊ ಡ್ರೈವರ್ ತಾನಾಗಿಯೇ ಬಂದ.

ನನ್ನ ಆತಂಕ ಕೇಳಿದ ಅವನು ಆಟೊದಲ್ಲೇ ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗಬಹುದು ಎಂದ. ಹಿಂದೆ ಆ ರೀತಿ ಕೆಲವರನ್ನು ಕರೆದುಕೊಂಡು ಹೋಗಿರುವ ಅನುಭವ ತನಗಿದೆ ಎಂದು ಅವನು ಹೇಳಿದಾಗ ಸಮಾಧಾನ.

ತಂಗಿ ನೋವಿನಿಂದ ಒದ್ದಾಡುತ್ತಲೇ ಇದ್ದಳು. ಅವಳನ್ನು ಮತ್ತೆ ಮೊದಲಿನಂತೆಯೇ ಆಟೊದಲ್ಲಿ ಕೂರಿಸಿದೆವು. ಅಮ್ಮನ ಮುಖ ಅದಾಗಲೇ ಬಾಡಿತ್ತು. ಕಣ್ಣಲ್ಲಿ ನೀರು ಜಿನುಗುತ್ತಿತ್ತು. ನಾನು ಪದೇಪದೇ ಜೇಬನ್ನು ನೋಡಿಕೊಳ್ಳುತ್ತಿದ್ದೆ. ಆಟೊ ಡ್ರೈವರ್ ಅದೆಲ್ಲಾ ತುಂಬಾ ಸಹಜ ಎಂಬಂತೆ ಇದ್ದ.

ನಗರದ ಕೆ.ಆರ್ ಸರ್ಕಲ್ ಬಳಿ ಸಣ್ಣ ಅಪಘಾತವಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಯಾರೋ ಇಬ್ಬರು ಜಗಳಕ್ಕೆ ಬಿದ್ದಿದ್ದರು. ಅದ್ಯಾವ ಕಾರಣಕ್ಕೋ ಯಾವುದೇ ವಾಹನ ಮುಂದಕ್ಕೆ ಹೋಗುತ್ತಿರಲಿಲ್ಲ. ಆಟೊ ಡ್ರೈವರ್ ಕೆಳಗಿಳಿದು, `ಒನ್ ನಿಮಿಷ ಬಂದೆ~ ಎಂದು ಹೋದ. ಮತ್ತೆ ಬಂದವನ ಮುಖದಲ್ಲಿ ಸಿಟ್ಟಿತ್ತು.

ನನ್ನ ತಂಗಿಯನ್ನು ತಾನೇ ಎತ್ತಿಕೊಂಡ. ಅವಳ ಹೊಟ್ಟೆಗೆ ತುಸುವೂ ನೋವಾಗದಂತೆ ಎಚ್ಚರ ವಹಿಸಿದ ಅವನು ನಿಧಾನಕ್ಕೆ ಹೆಜ್ಜೆ ಇಡುತ್ತಾ ಹೋದ. ಆತಂಕದಿಂದ ನಾನೂ ಅವನನ್ನು ಹಿಂಬಾಲಿಸಿದೆ. ನನಗೆ ಏನು ನಡೆಯುತ್ತಿದೆ ಎಂಬುದೇ ಸ್ಪಷ್ಟವಾಗಿ ಗೊತ್ತಾಗಲಿಲ್ಲ. ನಡುರಸ್ತೆಯಲ್ಲಿ ಉದ್ದನೆಯ ಟವೆಲ್ಲನ್ನು ಹಾಸಿ ಬಂದಿದ್ದ ಅವನು ನನ್ನ ತಂಗಿಯನ್ನು ಅದರ ಮೇಲೆ ಮಲಗಿಸಿದ.

ಜಗಳವಾಡುತ್ತಿದ್ದವರೆಲ್ಲಾ ಅದನ್ನು ನೋಡಿ ಚದುರಿಹೋದರು. ಒಂದೇ ಉಸಿರಲ್ಲಿ ಅವನು ಎಲ್ಲರಿಗೂ ಬಾಯಿಗೆ ಬಂದಂತೆ ಬೈದ. ಅವನಾಡಿದ ವಿಚಿತ್ರ ಶೈಲಿಯ ಮಾತುಗಳಲ್ಲಿ `ಮನುಸ್ರಾ ನೀವು~ ಎಂಬ ನುಡಿಯಂತೂ ನನಗೆ ನೆನಪಿದೆ. ನರಳಾಡುವ ಗರ್ಭಿಣಿಯನ್ನು ಕಂಡು ಬೇರೆ ಆಟೊ ಡ್ರೈವರ್‌ಗಳೇ ನಿಂತು ಟ್ರಾಫಿಕ್ ಪರಿಸ್ಥಿತಿ ಸುಧಾರಿಸುವಂತೆ ಮಾಡಿದರು. ಇನ್ನೊಬ್ಬ ಯಾರೋ ನಾವು ಕೂತಿದ್ದ ಆಟೊ ಓಡಿಸಿಕೊಂಡು ಬಂದು ತಂಗಿಯನ್ನು ಮಲಗಿಸಿದ ಜಾಗ ತಲುಪಿದ. ಮತ್ತೆ ಆಟೋಗೆ ತಂಗಿಯನ್ನು ಕೂರಿಸಿದೆವು. ಅಮ್ಮ ಏನೂ ತೋಚದೆ ಆ ಆಟೊದಲ್ಲೇ ಗಳಗಳನೆ ಅಳುತ್ತಿದ್ದಳು.

ಆಸ್ಪತ್ರೆ ಬಂತು. ಆ ಡ್ರೈವರ್ ಅಲ್ಲೂ ಹಣ ಆಮೇಲೆ ಕೊಡುವಿರಂತೆ ಎಂದ. ಒಳಗೆ ಹೋದ ನಾನು ಆ ಎಲ್ಲಾ ಟೆನ್ಷನ್‌ನಲ್ಲಿ ಆಟೊ ಡ್ರೈವರ್‌ನನ್ನು ಮರೆತೇಬಿಟ್ಟೆ. ತಂಗಿಗೆ ಹೆರಿಗೆ ಆಯಿತು. ಎಲ್ಲಾ ಒಂದು ಹಂತಕ್ಕೆ ಬಂದಮೇಲೆ ನನಗೆ ಮತ್ತೆ ಡ್ರೈವರ್ ನೆನಪಾಗಿ ಹೊರಬಂದೆ. ಅವನು ಇರಲಿಲ್ಲ.

ಮರುದಿನ ಮನೆಯಿಂದ ಆಸ್ಪತ್ರೆಗೆ ಕಾಫಿ ತೆಗೆದುಕೊಂಡು ಹೊರಟೆ. ಅದೇ ಆಟೊದವನು ಅಲ್ಲಿದ್ದ. ನನಗೆ ಸಮಾಧಾನವಾಯಿತು. `ಆಸ್ಪತ್ರೆಗಾ~ ಎಂದು ಅವನೇ ಕೇಳಿದ. ಏನೊಂದೂ ಮಾತನಾಡದೆ ಕರೆದುಕೊಂಡು ಹೊರಟ. `ನೆನ್ನೆ ಎಲ್ಲಿ ಹೋಗಿಬಿಟ್ಟೆ~ ಎಂದೆ. `ಬೇರೆ ಗಿರಾಕಿ ಸಿಕ್ಕಿದ್ರು~ ಎಂದಷ್ಟೇ ಹೇಳಿದ. ಆಸ್ಪತ್ರೆ ಸಮೀಪಿಸಿದ್ದೇ `ಹೆರಿಗೆ ಆಯಿತಾ~ ಎಂದಷ್ಟೇ ಕೇಳಿದ್ದು. ನಾನು ಸಮಸ್ಯೆ ಬಗೆಹರಿದಿದ್ದನ್ನು ಹೇಳಿ ಅವನಿಗೆ ಧನ್ಯವಾದ ಸಲ್ಲಿಸಿದೆ.

ಆಸ್ಪತ್ರೆ ಹತ್ತಿರ ಇಳಿದೆ. ಪ್ಯಾಂಟ್ ಜೇಬಿನಿಂದ ಹಣ ತೆಗೆಯುವಷ್ಟರಲ್ಲಿ ಅವನು ಹೊರಟೇಬಿಟ್ಟ. ಅಲ್ಲಿಂದ ಅಂಗಡಿಯಲ್ಲಿ ಏನೋ ತೆಗೆದುಕೊಳ್ಳುವುದಿತ್ತು. ಆಗ ಅಲ್ಲಿ ಗೊತ್ತಾದ ಸತ್ಯ- ಆ ವ್ಯಕ್ತಿ ಆಸ್ಪತ್ರೆಗೆ ಯಾರನ್ನು ಸಾಗಿಸಿದರೂ ಹಣ ಪಡೆಯುವುದಿಲ್ಲ.

ಆಟೊದವರ ಬಗ್ಗೆ ಅದುವರೆಗೆ ನಾನು ಅನೇಕ ಸಲ ಬಯ್ದುಕೊಂಡಿದ್ದೆ. ಅಲ್ಲಿಂದಾಚೆಗೆ ಆಟೊ ಡ್ರೈವರ್‌ಗಳೆಂದರೆ ನನಗೆ ವಿಪರೀತ ಗೌರವ. ಈಗಲೂ ನಾನು ಆಟೊ ಹತ್ತಿದರೆ ಅದನ್ನು ಓಡಿಸುವವರ ಜೊತೆ ತುಂಬಾ ಆತ್ಮೀಯತೆಯಿಂದ ಮಾತನಾಡುತ್ತೇನೆ. 

ಆಟೊ ಕುರಿತ ನಿಮ್ಮದೂ ಇಂಥ ಅನುಭವ ಇದ್ದರೆ ಕಳುಹಿಸಬಹುದು. ಪೂರಕ ಛಾಯಾಚಿತ್ರಗಳಿದ್ದರೆ ಬರಹದ ಜೊತೆಗಿರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT