ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಹಾರಿಕಾ ಲೋಕ: ಮಹಾವ್ಯಾಧನಿಗೊಂದು ಬಳ್ಳಿ

Last Updated 1 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

‘ಒರೈಯನ್’ ಅಥವಾ ಮಹಾವ್ಯಾಧ ಅತ್ಯಂತ ಆಕರ್ಷಕ ನಕ್ಷತ್ರಪುಂಜ. ಅದರ ಮಧ್ಯಭಾಗದ ಮೂರು ನಕ್ಷತ್ರಗಳಂತೂ ನೆಬ್ಯುಲಾಗಳ ಆಕರವೇ ಆಗಿದೆ. ಈ ಮೂರೂ ನಕ್ಷತ್ರಗಳನ್ನು ಆವರಿಸುವಂತೆ ಕ್ಷೀಣವಾದ ಬಳ್ಳಿಯಂತಹ ರಚನೆಯೊಂದನ್ನು ವಿಲಿಯಂ ಹರ್ಷೆಲ್ 1786ರಲಿಯ್ಲಿ ಗಮನಿಸಿದ್ದರೂ ಅದನ್ನು ಸ್ಪಷ್ಟವಾಗಿ ಗುರುತಿಸಿದ್ದು ಎಡ್ವರ್ಡ್ ಬರ್ನಾರ್ಡ್ ಸುಮಾರು 120 ವರ್ಷಗಳ ಹಿಂದೆ. ಇದಕ್ಕೆ ‘ಬರ್ನಾರ್ಡ್ ಲೂಪ್’ ಎಂಬ ಹೆಸರಿರುವುದು ಇದೇ ಕಾರಣಕ್ಕೆ. (ಆದರೆ ಸ್ವತಃ ಬರ್ನಾರ್ಡ್ ಅದನ್ನು ಒರೈಯನ್ ಲೂಪ್ ಎಂದು ಕರೆದಿದ್ದಾನೆ) ಬರಿಗಣ್ಣಿಗೆ ಕಾಣುವುದು ಕಷ್ಟ. ಆದರೆ ಛಾಯಾಚಿತ್ರಗಳಲ್ಲಿ ವಿಶೇಷ ಪ್ರಯತ್ನವಿಲ್ಲದೆಯೂ ಮೂಡುತ್ತದೆ. ಅನೇಕ ವೀಕ್ಷಕರು ಇದರ ಚಿತ್ರ ತೆಗೆದು ಅಧ್ಯಯನ ನಡೆಸಿದ್ದಾರೆ. ಹೈಡ್ರೋಜನ್ ಅನ್ನು ಪತ್ತೆ ಮಾಡುವ ವಿಶೇಷ ಸೋಸುಕಗಳನ್ನು ಬಳಸಿ ಚಿತ್ರ ತೆಗೆದರೆ ವಿನ್ಯಾಸದ ವಿವರಗಳು ಸ್ಫುಟವಾಗಿ ಕಾಣುತ್ತವೆ. ಇತ್ತೀಚಿನ ಚಿತ್ರಗಳಲ್ಲಿ ಈ ಬಳ್ಳಿ ಇಡಿ ನಕ್ಷತ್ರ ಪುಂಜವನ್ನೇ ಆವರಿಸಿರುವುದು ಕಂಡು ಬರುತ್ತದೆ. ದೂಳು ಮತ್ತು ಅನಿಲಗಳ ವಿನ್ಯಾಸ ಬಹಳ ಸ್ಪಷ್ಟವಾಗಿ ಕಂಡು ಬರುತ್ತದೆ. ಇದಕ್ಕೆ ಹೀಗೆ ವಂಕಿಯ ಆಕಾರವೇಕೆ? ಇದು ಅನೇಕರನ್ನು ಕಾಡಿದ ಪ್ರಶ್ನೆ. ಬಹುಶಃ ಸೂಪರ್ ನೋವಾ ಸ್ಫೋಟವೊಂದರ ಕಾರಣ ಹೊರಗೆ ತಳ್ಳಲ್ಪಟ್ಟ ವಸ್ತು ಇರಬಹುದೇ? ಸುಮಾರು 50 ವರ್ಷಗಳ ಹಿಂದೆ ಎತ್ತಿದ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಇಲ್ಲ. ಮೂರು ಮಿಲಿಯನ್ ವರ್ಷಗಳ ಹಿಂದೆ ಹಲವಾರು ಸೂಪರ್ ನೋವಾಗಳಸರಣಿ ಸ್ಫೋಟಗಳಾಗಿದ್ದವೇ? ಇದು ಇನ್ನೊಂದು ಸಾಧ್ಯತೆ. ಅದರಿಂದ ಗುಳ್ಳೆಯಂತಹ ರಚನೆ ಸೃಷ್ಟಿಯಾಗಿ ಬೇರೊಂದು ಕಾರಣದಿಂದ ಗುಳ್ಳೆ ಒಂದು ಭಾಗದಲ್ಲಿ ಮಾತ್ರ ಒಡೆದಿರಬಹುದೇ? ಹಾಗಿದ್ದರೆ ಸ್ಫೋಟಗೊಂಡ ಆ ನಕ್ಷತ್ರಗಳು ಎಲ್ಲಿ? ಹೀಗೆ ಅನೇಕ ಪ್ರಶ್ನೆಗಳು ಎದ್ದಿವೆ.

ಬಾಹ್ಯಾಕಾಶದಿಂದ ಅತಿನೇರಿಳೆ ಕಿರಣಗಳ ದೂರದರ್ಶಕ ಈ ಬಳ್ಳಿಯ ಕೆಲವು ವಿಶಿಷ್ಟ ಗುಣಗಳನ್ನು ತೋರಿಸಿ ಕೊಟ್ಟಿದೆ. ಸುತ್ತಲಿನ ಐದಾರು ಪ್ರಖರ ನೀಲಿ ನಕ್ಷತ್ರಗಳ ಬೆಳಕನ್ನು ಇದು ಪ್ರತಿಫಲಿಸುತ್ತಿದೆ. ಅನಿಲ ಮಾತ್ರವಲ್ಲದೆ ಸಣ್ಣ ಧೂಳಿನ ಕಣಗಳೂ ಹೇರಳವಾಗಿವೆ.
ಈ ಬಳ್ಳಿಯ ವ್ಯಾಪ್ತಿ ಸುಮಾರು 5 ಡಿಗ್ರಿಗಳು. ಅನೇಕ ಮೆಸಿಯೆ ವಸ್ತುಗಳು - ಎಂ 78, ಕುದುರೆ ತಲೆಯ ಹಾಗೆ ಕಾಣುವ ಹಾರ್ಸ್ ಹೆಡ್ ನೆಬ್ಯುಲಾ, ಮುಂತಾದವುಗಳನ್ನೂ ಇದು ಆವರಿಸಿದೆ. ಒರೈಯನ್‌ನ ಪ್ರಖರ ನೀಲಿ ನಕ್ಷತ್ರ ‘ಬಿಟಲ್ ಜೂಸ್’  ಕೆಂಪು ಬಣ್ಣದ್ದು; ಎರಡನೆಯ ಪ್ರಖರ ನಕ್ಷತ್ರ ‘ರೀಜೆಲ್’ ನೀಲಿ ಬಣ್ಣದ್ದು. ಈ ಎರಡೂ ಮೂಲೆಗಳ ನಡುವೆ ಹರಡಿರುವ ಧೂಳಿನ ಬಳ್ಳಿಯೇ ಬರ್ನಾರ್ಡ್ ಲೂಪ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT