ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಂಕಪ್ಪ ಜಾತ್ರೆಗೆ ವೈಭವದ ಚಾಲನೆ

Last Updated 6 ಫೆಬ್ರುವರಿ 2012, 10:35 IST
ಅಕ್ಷರ ಗಾತ್ರ

ಮೊಳಕಾಲ್ಮುರು:  ತಾಲ್ಲೂಕು ಹಾಗೂ ಪಟ್ಟಣದ ಜನತೆಯ ಆರಾಧ್ಯ ದೈವವಾದ ನುಂಕಪ್ಪ ಜಾತ್ರೆಗೆ ಭಾನುವಾರ ಸಂಜೆ ಇಲ್ಲಿ ವೈಭವದ ಚಾಲನೆ ನೀಡಲಾಯಿತು.

ಪ್ರತಿ ಮೂರು ವರ್ಷಕ್ಕೆ ಒಂದು ಸಾರಿ ಈ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ಖರನಾಮ ಸಂವತ್ಸರ ಮಾಘ ಬಹುಳ ತ್ರಯೋದಶಿದಂದು ಜಾತ್ರೆಗೆ ಚಾಲನೆ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಭಾನುವಾರ ಬೆಳಿಗ್ಗೆ ಪಟ್ಟಣದ ಪ್ರಮುಖರ ನೇತೃತ್ವದಲ್ಲಿ ಸುಮಾರು ಐದು ಕಿಮೀ ದೂರದಲ್ಲಿನ ಬೆಟ್ಟದಲ್ಲಿರುವ ನುಂಕಪ್ಪ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಯಲ್ಲಿ ಸ್ವಾಮಿಯನ್ನು ಪಟ್ಟಣಕ್ಕೆ ಕರೆತಂದು ಹಾಗನಲ್ ರಸ್ತೆಯಲ್ಲಿರುವ ನುಂಕಪ್ಪನ ಕಟ್ಟೆ ಮೇಲೆ ಪ್ರತಿಷ್ಠಾಪಿಸಲಾಯಿತು.

ಸಂಜೆ 5ಕ್ಕೆ ಆರಂಭವಾದ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕಳಸ ಹೊತ್ತು ಭಾಗವಹಿಸಿದ್ದರು. ನಂದಿಕೋಲು ಕುಣಿತ, ಡೊಳ್ಳು ಕುಣಿತ, ವಿವಿಧ ವೇಷಧಾರಿಗಳು, ಕೋಲಾಟ ಮೆರವಣಿಗೆಗೆ ಮೆರಗು ತಂದವು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಅಂತಿಮವಾಗಿ ಕೋಟೆ ಬಡಾವಣೆಯಲ್ಲಿರುವ ನುಂಕಪ್ಪ ಕಟ್ಟೆ ಮೇಲೆ ಪ್ರತಿಷ್ಠಾಪಿಸಲಾಯಿತು.

ಭಾನುವಾರ ರಾತ್ರಿ 8ಕ್ಕೆ ಕಂಪಳರಂಗ ಸ್ವಾಮಿ ಹೊಂಡಕ್ಕೆ ಸ್ವಾಮಿಯನ್ನು ಕರೆದೊಯ್ದು ಗಂಗಾಪೂಜೆ ಸಲ್ಲಿಸಿದ ನಂತರ ಸ್ವಾಮಿಯನ್ನು ಬೆಳಿಗ್ಗೆ  ಪಟ್ಟಣಕ್ಕೆ ವಾಪಸ್ ಕರೆ ತರಲಾಗುವುದು.

ಸೋಮವಾರ, ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಬುಧವಾರ ಭವ್ಯ ಮೆರವಣಿಗೆಯಲ್ಲಿ ಸ್ವಾಮಿಯನ್ನು ಮರು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಗುಡಿತುಂಬಿಸಲಾಗುವುದು ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.

ಮುಖಂಡರಾದ ಚಂದ್ರಶೇಖರ ಗೌಡ, ಪ.ಪಂ. ಮಾಜಿ ಅಧ್ಯಕ್ಷರಾದ ಎಂ.ಎಸ್. ಮಾರ್ಕಂಡೇಯ, ಎಂ.ಪಿ. ಗುರುರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಮಾರನಾಯಕ್, ರೈತ ಮುಖಂಡ ಮೂಕಣ್ಣ, ಹೋಟೆಲ್ ಮಲ್ಲಿಕಾರ್ಜುನ್ ಮತ್ತು ಎಲ್ಲಾ ಹಟ್ಟಿಗಳ ಮುಖಂಡರು ಭಾಗವಹಿಸಿದ್ದರು.

ಗಮನಸೆಳೆದ ಮೆರವಣಿಗೆ

ಮ್ಯಾಸನಾಯಕ ಜನಾಂಗದ ಕುಲದೇವರುಗಳ ಪ್ರಮುಖ ಜಾತ್ರೆಯಾದ ತಾಲ್ಲೂಕಿನ ಚಿಕ್ಕುಂತಿಯ ಕಂಪಳರಂಗ ಸ್ವಾಮಿ ಜಾತ್ರೆಗೆ ಭಾನುವಾರ ವೈಭವದ ತೆರೆಬಿದ್ದಿತು.

ಕಳೆದ 27ರಂದು ಆರಂಭವಾಗಿದ್ದ ಈ ಜಾತ್ರೆ ಅಂಗವಾಗಿ ಶನಿವಾರ ಸಂಜೆ 5.30ರಿಂದ ಮರುದೀಪ ಕಾರ್ಯಕ್ರಮ ಜರುಗಿತು. ಭಕ್ತರು ತಂದಿದ್ದ ಮೀಸಲು ಬೆಣ್ಣೆಯನ್ನು ಎತ್ತಿನ ಕೊಂಬಿನಿಂದ ವಿಶೇಷವಾಗಿ ತಯಾರಿಸಿದ ದೀವಿಕೆಗಳಿಗೆ ಅರ್ಪಿಸಲಾಯಿತು.

ನಂತರ ಮಹಾಪೂಜೆ ಹಮ್ಮಿಕೊಳ್ಳಲಾಗಿತ್ತು. ಕೊನೆಯದಾಗಿ ಸ್ವಾಮಿಯ ಬೆಳ್ಳಿಬೆತ್ತ, ಜೋಳಿಗೆ ಕಾರ್ಯಕ್ರಮಗಳು ನಡೆದ ನಂತರ ಪಕ್ಕದ ಬಳ್ಳಾರಿ ಜಿಲ್ಲೆ ಹೂಡೇಂನ ಬೋಸೇದೇವ ನಾಯಕ, ವಲಸೆಯ ಮೀಸಲು ನಾಯಕ ಮತ್ತು ಮೊಳಕಾಲ್ಮುರು ತಾಲ್ಲೂಕಿನ ಸೂರಮ್ಮನ ಹಳ್ಳಿಯ ಗಟ್ಟಿಮುತ್ತಿನಾಯಕ ಹಾಗೂ ಕುಮುತಿ ಗ್ರಾಮದ ದಾದನೂರು ನಾಯಕರ ಸಂತೋಷದ ಕುಣಿತ ಕಾರ್ಯಕ್ರಮ ಬಳಿಕ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಸ್ವಗ್ರಾಮಗಳಿಗೆ ಬೀಳ್ಕೊಡುವ ಕಾರ್ಯಕ್ರಮ ನಡೆದವು.

ಭಾನುವಾರ ಸಂಜೆ ವೈಭವದ ಮೆರವಣಿಗೆಗಳಲ್ಲಿ ದೇವರಹಟ್ಟಿಯ ತಾತ್ಕಾಲಿಕ ಪದಿಯಲ್ಲಿ ಕಳೆದ ಸ್ಥಾಪಿಸಿ ವಿಶೇಷ ಪೂಜೆಗಳನ್ನು ಸ್ವೀಕರಿಸಿದ್ದ ಜಗಳೂರು ಪಾಪನಾಯಕ, ಕಂಪಳರಂಗ ಸ್ವಾಮಿ ಮತ್ತು ಜೋಗೇಶ್ವರ ದೇವರುಗಳನ್ನು ವಿವಿಧ ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ಭವ್ಯ ಮೆರವಣಿಯಲ್ಲಿ ಕರೆದೊಯ್ದು ಗುಡಿಗಳಲ್ಲಿ ಸ್ಥಾಪಿಸಲಾಯಿತು. ಭಕ್ತರಿಂದ ಬಾಳೆಹಣ್ಣು, ಸೂರು ಬೆಲ್ಲ, ಬೆಲ್ಲ ಮಣೇವು ಅರ್ಪಣೆ, ಮಂಡಕ್ಕಿ, ಹೂವು ಅರ್ಪಣೆ ನಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT