ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಹಬ್ಬ ಮೂಡಿಸಿದ ಹೊಸ ಹುರುಪು

Last Updated 1 ಫೆಬ್ರುವರಿ 2011, 17:55 IST
ಅಕ್ಷರ ಗಾತ್ರ

ಬೆಂಗಳೂರು:  77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಎರಡು ದಿನಗಳು ಬಾಕಿ ಉಳಿದಿರುವಂತೆ ನಗರದಲ್ಲಿ ನುಡಿ ಹಬ್ಬದ ಕಾವೇರಿದೆ. ಯಾಂತ್ರಿಕ ಎನಿಸುವ ಬದುಕು, ಒತ್ತಡ ಜೀವನದೊಂದಿಗೇ ದಿನ ಕಳೆಯುವ ರಾಜಧಾನಿಯ ಬಹುತೇಕ ಮಂದಿಗೆ 40 ವರ್ಷಗಳ ನಂತರ ನಡೆಯುತ್ತಿರುವ ಸಮ್ಮೇಳನ ಹೊಸ ಹುರುಪು ತಂದಿದೆ. ಇತ್ತ ಸಮ್ಮೇಳನ ಸಂಘಟಕರು ಹಬ್ಬಕ್ಕಾಗಿ ಇನ್ನಿಲ್ಲದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಸಮ್ಮೇಳನ ನಡೆಯುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಪ್ರಮಾಣದ ಮಹಾಮಂಟಪದ ತಯಾರಿ ಕಾರ್ಯಗಳು ಅಂತಿಮ ಹಂತದಲ್ಲಿವೆ. ದೂಳು ಏಳದಂತೆ ಸಭಾಂಗಣದಲ್ಲಿ ನೆಲಹಾಸನ್ನು ಹಾಸುವ ಕಾರ್ಯ ಚುರುಕು ಪಡೆದಿದೆ. ಸುಮಾರು 25 ಸಾವಿರ ಮಂದಿ ಕೂರಬಹುದಾದ ಸ್ಥಳದಲ್ಲಿ ಆಸನ ವ್ಯವಸ್ಥೆಗಳನ್ನು ಅಳವಡಿಸುವ ಕಾರ್ಯ ಹೊರತುಪಡಿಸಿದರೆ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಸಮಾನಾಂತರ ಗೋಷ್ಠಿಗಳು ನಡೆಯಲಿರುವ ಉನ್ನತಿ ಸಭಾಂಗಣ ಹಾಗೂ ಕುವೆಂಪು ಕಲಾಕ್ಷೇತ್ರದಲ್ಲಿ ಅಲಂಕಾರ ತಯಾರಿ ಬುಧವಾರದಿಂದ ಆರಂಭವಾಗಲಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರ, ಸುವರ್ಣ ಮಹೋತ್ಸವ ಭವನ ಹಾಗೂ ವಜ್ರ ಮಹೋತ್ಸವ ಭವನಗಳಿಗೆ ಮಂಗಳವಾರ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ದಿನ ಈ ಕಟ್ಟಡಗಳಿಗೆ ತಳಿರು ತೋರಣದ ಸಿಂಗಾರ ನಡೆಯಲಿದೆ. ನ್ಯಾಷನಲ್ ಕಾಲೇಜು, ಮಕ್ಕಳಕೂಟ, ಲಾಲ್‌ಬಾಗ್ ಪಶ್ಚಿಮ ದ್ವಾರ, ಕಿಮ್ಸ್ ಸಂಸ್ಥೆ, ಕೋಟೆ ಪ್ರೌಢಶಾಲೆ, ಸಿಟಿ ಇನ್‌ಸ್ಟಿಟ್ಯೂಟ್ ವೃತ್ತಗಳಲ್ಲಿ ನಾಡಿನ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಬೃಹತ್ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ.

‘ಬುಧವಾರದ ವೇಳೆಗೆ ಶೇ 70ರಷ್ಟು ಕಾರ್ಯಗಳು ಪೂರ್ಣಗೊಳ್ಳಲಿದ್ದು ಮೂರನೇ ತಾರೀಕು ನಗರಾಲಂಕಾರ ಪೂರ್ಣಗೊಳ್ಳಲಿದೆ. ನಗರ ಪ್ರದೇಶದಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಹೊಸದಾಗಿ ಡಾಂಬರೀಕರಣ ಸುಣ್ಣಬಣ್ಣ ಬಳಿಯುವ ಅಗತ್ಯವಿಲ್ಲ. ಪೌರ ಕಾರ್ಮಿಕರ ಮೂಲಕ ನಗರ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ’ ಎಂದು ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ, ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮ್ಮೇಳನದ ವೇಳೆ ಅಪಾರ ಜನಸ್ತೋಮ ಆಗಮಿಸುವುದರಿಂದ ದೂಳು ನಿಯಂತ್ರಿಸುವ ನಿಟ್ಟಿನಲ್ಲಿ ಸಮ್ಮೇಳನ ಸಭಾಂಗಣ, ಪುಸ್ತಕ ಪ್ರದರ್ಶನ ವಿಭಾಗ ಸೇರಿದಂತೆ ನ್ಯಾಷನಲ್ ಕಾಲೇಜು ಮೈದಾನದ ಬಹುತೇಕ ಭಾಗವನ್ನು ನೆಲಹಾಸಿನಿಂದ ಸಜ್ಜಗೊಳಿಸಲಾಗಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿರುವ ಬಿಬಿಎಂಪಿ ಕಚೇರಿಯಿಂದ ಸಮ್ಮೇಳನ ಸಭಾಂಗಣ ಇರುವ ನ್ಯಾಷನಲ್ ಕಾಲೇಜು ಮೈದಾನದವರೆಗಿನ ಸುಮಾರು ಆರೇಳು ಕಿ.ಮೀ ಉದ್ದದ ಮೆರವಣಿಗೆ ಪಥದಲ್ಲಿ ಸುಮಾರು 3 ಸಾವಿರ ಕೆಂಪು ಹಳದಿ ಬಟ್ಟೆಯಿಂದ ಅಲಂಕೃತವಾದ ಬೊಂಬಿನ ಸ್ಥಂಭಗಳ ಮೇಲೆ ಮೂರು ಸಾವಿರ ಬಾವುಟಗಳನ್ನು ಹಾರಿಸುವ ತಯಾರಿ ನಡೆದಿದೆ. ತಲಾ ಒಂದು ಸಾವಿರ ಫ್ಲೆಕ್ಸ್‌ಗಳು ಹಾಗೂ ಬ್ಯಾನರ್‌ಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಸಮೀಪವೇ ಇರುವ ಮಕ್ಕಳ ಕೂಟ ವೃತ್ತದಲ್ಲಿ ಕೋಟೆ ಮಾದರಿಯ ಕಲಾಕೃತಿಯನ್ನು ನಿರ್ಮಿಸಲಾಗುತ್ತಿದೆ. 16 ಅಡಿ ಅಗಲ 14 ಅಡಿ ಎತ್ತರವಿರುವ ಈ ಕಲಾಕೃತಿ ಸಾಹಿತ್ಯ ಸಮ್ಮೇಳನದ ಲಾಂಛನ, ರಾಜಪರಂಪರೆಯನ್ನು ಹೋಲುವ ಲಾಂಛನಗಳನ್ನು ಒಳಗೊಂಡಿದೆ. ಲಾಲ್‌ಬಾಗ್ ಪಶ್ಚಿಮ ದ್ವಾರ ಹಾಗೂ ಕಿಮ್ಸ್ ಸಂಸ್ಥೆ ವೃತ್ತದಲ್ಲಿ ಕೆಂಪು ಬಟ್ಟೆಯಿಂದ ಮಾಡಿದ ಬೃಹತ್ ಸ್ಥಂಭಗಳನ್ನು ನಿರ್ಮಿಸಲಾಗುತ್ತಿದ್ದು ಇದರಲ್ಲಿ ಸಮ್ಮೇಳನದ ಲಾಂಛನ ಹಾಗೂ ಪರಿಷತ್ತಿನ ಲಾಂಛನವಿರುವ ಧ್ವಜಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಇದೇ ವೇಳೆ ಕಿಮ್ಸ್ ಸಂಸ್ಥೆ ವೃತ್ತದಲ್ಲಿ ನಿರ್ಮಿಸಿರುವ ಬೃಹತ್ ಸ್ಥಂಭದಿಂದ ಸಿಗ್ನಲ್ ಸರಿಯಾಗಿ ಕಾಣದೆ ವಾಹನ ಚಾಲಕರಿಗೆ ಅಡಚಣೆಯಾಗುತ್ತಿರುವ ಬಗ್ಗೆ ಸಂಚಾರ ಪೊಲೀಸರು ಪರಿಷತ್ತಿನ ಗಮನಕ್ಕೆ ತಂದಿದ್ದಾರೆ.

‘ದಿನಕಳೆದಂತೆ ಹಬ್ಬದ ವಾತಾವರಣ ಮೂಡಿದೆ. ಸಾಹಿತ್ಯ ಪರಿಷತ್ತಿನ ಸುತ್ತಮುತ್ತ ಈ ಉತ್ಸಾಹ ಹೆಚ್ಚಾಗಿ ಕಾಣ್ತಾ ಇದೆ. ಹೆಚ್ಚು ಫ್ಲೆಕ್ಸ್‌ಗಳನ್ನು ಅಳವಡಿಸಿದ ನಂತರ ಸಮ್ಮೇಳನದ ವಾತಾವರಣ ಮೂಡಬಹುದು’ ಎಂದು ಕಾಲೇಜು ವಿದ್ಯಾರ್ಥಿ ಹರೀಶ್ ನುಡಿಹಬ್ಬದ ಸಂಭ್ರಮ ಹಂಚಿಕೊಂಡರು.

ಆಟೊ ಪ್ರಚಾರಕ್ಕೆ ಚಾಲನೆ: ಇದೇ ವೇಳೆ ಆಟೊ ಮೂಲಕ ಪ್ರಚಾರ ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ಪರಿಷತ್ತಿನ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಚಾಲನೆ ನೀಡಿದರು. ‘ನುಡಿಹಬ್ಬದಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಳ್ಳಬೇಕು ಎಂಬ ಆಶಯದೊಂದಿಗೆ ಆಟೊಗಳ ಮೂಲಕ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ. ನಗರ ಜೀವನದ ಭಾಗವಾಗಿರವ ಆಟೊಗಳ ಮೂಲಕ ಪ್ರಚಾರ ನಡೆಸಿದರೆ ಹೆಚ್ಚಿನ ಜನರಿಗೆ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಲಿದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವುದು ಕನ್ನಡಿಗರ ಆದ್ಯ ಕರ್ತವ್ಯವಾಗಿದ್ದು ಮೂರು ದಿನಗಳ ಕಾಲ ಕನ್ನಡಮ್ಮನನ್ನು ಮೆರೆಸಬೇಕು’ ಎಂದು ಹೇಳಿದರು. ಸಮ್ಮೇಳನದ ಸ್ಟಿಕ್ಕರ್‌ಗಳನ್ನು ಈ ಸಂದರ್ಭದಲ್ಲಿ ಆಟೊ ಚಾಲಕರಿಗೆ ವಿತರಿಸಲಾಯಿತು. ಸಮ್ಮೇಳನ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಕೆ.ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT