ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿತೇರು ಜಾಗೃತಿ ಜಾಥಾ ಸಮಾರೋಪ

Last Updated 13 ಫೆಬ್ರುವರಿ 2012, 5:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಂಘಟಿಸಿದ್ದ ಕನ್ನಡ ನುಡಿತೇರು ಜಾಗೃತಿ ಜಾಥಾ ಭಾನುವಾರ ಇಲ್ಲಿಯ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು.

ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, `ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗರಲ್ಲೇ ತಮ್ಮ ಭಾಷೆಯ ಬಗ್ಗೆ ಒಲವಿಲ್ಲ. ಒಗ್ಗಟ್ಟೂ ಇಲ್ಲ. ಆದರೆ ಅಮೆರಿಕ, ಯೂರೋಪ್ ಹಾಗೂ ದುಬೈಯಲ್ಲಿ ವಾಸಿಸುವ ಕನ್ನಡಿಗರು ಕನ್ನಡ ಸಂಘಗಳನ್ನು ಕಟ್ಟಿಕೊಂಡು ತಮ್ಮ ಮಾತೃಭಾಷೆಯ ಬೆಳವಣಿಗೆಗೆ ಕಾರ್ಯಕ್ರಮ ಹಾಕಿಕೊಳ್ಳುತ್ತಾರೆ. ಕನ್ನಡ ಚಾನೆಲ್‌ಗಳನ್ನೇ ನೋಡುವಂತೆ ತಮ್ಮ ಮಕ್ಕಳಿಗೆ ಹೇಳುತ್ತಾರೆ~ ಎಂದರು.

ಮುಂಬೈ ಕರ್ನಾಟಕದಲ್ಲಿ ಮರಾಠಿ, ಹೈದರಾಬಾದ್-ಕರ್ನಾಟಕದಲ್ಲಿ ಉರ್ದು ಪ್ರಭಾವ ಜಾಸ್ತಿ ಇದೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ತೆಲುಗು, ತಮಿಳು ಭಾಷೆಗಳ ಪ್ರಭಾವದಿಂದಾಗಿ ಕನ್ನಡವನ್ನು ಹುಡುಕುವ ಪರಿಸ್ಥಿತಿ ಎದುರಾಗಿದೆ. ಕನ್ನಡವನ್ನು ಪ್ರಚಾರಗೊಳಿಸುವ ಉದ್ದೇಶದಿಂದಲೇ ನನ್ನ ಇಲಾಖೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ಹಾರ ಹಾಕುವ ಬದಲು ಅದೇ ಹಣದಲ್ಲಿ ಕನ್ನಡ ಪುಸ್ತಕಗಳನ್ನು ನೀಡಬೇಕು ಎಂದು ಸುತ್ತೋಲೇ ಹೊರಡಿಸಿದ್ದೆ ಎಂದರು.

ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಮಾತನಾಡಿ, `ವ್ಯಾಪಾರಕ್ಕಾಗಿ ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷೀಯರು ತಮ್ಮ ಭಾಷೆಯ ಬಗ್ಗೆ ವ್ಯಾಮೋಹ ಬೆಳೆಸಿಕೊಂಡರೆ ತಪ್ಪೇನಿಲ್ಲ. ಕನ್ನಡ ನಾಡಿನಲ್ಲಿ ವಾಸಿಸುತ್ತಿರುವುದರಿಂದ ಅವರು ಕನ್ನಡವನ್ನೂ ಕಲಿಯಬೇಕು. ಈ ಉದ್ದೇಶಕ್ಕಾಗಿಯೇ ಪ್ರಾಧಿಕಾರವು ಗಡಿ ಭಾಗಗಳೂ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕನ್ನಡ ನುಡಿತೇರು ಜಾಗೃತಿ ಜಾಥಾ ಏರ್ಪಡಿಸಿದೆ. ಕನ್ನಡದಲ್ಲೇ ತೀರ್ಪು ನೀಡಿದ ನ್ಯಾಯಾಧೀಶರನ್ನು ಪುರಸ್ಕರಿಸುವ ಯೋಜನೆ ತರಲಾಗಿದ್ದು, ಈಗಾಗಲೇ 170 ನ್ಯಾಯಾಧೀಶರನ್ನು ಗೌರವಿಸಲಾಗಿದೆ~ ಎಂದು ಹೇಳಿದರು.

ಜನರಲ್ಲಿ ಕನ್ನಡ ಪ್ರಜ್ಞೆಯನ್ನು ಮೂಡಿಸಲು ಸರ್ಕಾರವೇ ಜವಾಬ್ದಾರಿ ಹೊರಬೇಕು. ಅಂದಾಗ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದರು.

ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಶಾಸಕ ವೀರಭದ್ರಪ್ಪ ಹಾಲಹರವಿ, ಜಿಲ್ಲಾ ಸತ್ರ ನ್ಯಾಯಾಧೀಶ ನಟರಾಜನ್ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮೇಯರ್ ಪೂರ್ಣಾ ಪಾಟೀಲ, ಸಾಹಿತಿ ಡಾ. ವಿಷ್ಣು ನಾಯ್ಕ, ಪದ್ಮಾ ಚಂದ್ರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್, ಸಿದ್ಧಾರೂಢ ಸ್ವಾಮೀಜಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಹೇಂದ್ರ ಸಿಂಘಿ ಹಾಜರಿದ್ದರು.

ಇದಕ್ಕೂ ಮುನ್ನ ಮಠದ ಮುಖ್ಯರಸ್ತೆಯಲ್ಲಿ ವಿವಿಧ ಜನಪದ ಕಲಾತಂಡಗಳೊಂದಿಗೆ ಕನ್ನಡ ನುಡಿತೇರಿನ ಮೆರವಣಿಗೆ ನಡೆಯಿತು.

ಸಭಾ ಕಾರ್ಯಕ್ರಮದ ನಂತರ 150 ಕಲಾವಿದರು ವಿವಿಧ ಬಗೆಯ ನೃತ್ಯ ಹಾಗೂ ಕಸರತ್ತುಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT