ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ'

ಯಾದಗಿರಿಯಲ್ಲಿ `ಅನ್ನಭಾಗ್ಯ' ಯೋಜನೆಗೆ ಚಿಂಚನಸೂರ ಚಾಲನೆ
Last Updated 11 ಜುಲೈ 2013, 10:37 IST
ಅಕ್ಷರ ಗಾತ್ರ

ಯಾದಗಿರಿ: ಸರ್ಕಾರದ ಮಹತ್ವಾಕಾಂಕ್ಷಿ `ಅನ್ನಭಾಗ್ಯ' ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ, ಬುಧವಾರ ಇಲ್ಲಿಯ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವ ಚಿಂಚನಸೂರ, ಸರ್ಕಾರವು ಈ ಯೋಜನೆಯಡಿ ರೂ.1ರ ದರದಲ್ಲಿ 30 ಕಿ.ಗ್ರಾಂ. ಅಕ್ಕಿ ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಕಡು ಬಡವರಿಗಾಗಿ ಜಾರಿಗೊಳಿಸಿದ್ದು, ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಅಕ್ಕಿ ವಿತರಿಸಲಾಗುತ್ತಿದೆ. ಬಡ ಜನರ ಅನುಕೂಲಕ್ಕಾಗಿ ಮಹತ್ವವಾದ ಈ ಯೋಜನೆಯನ್ನು ರಾಜ್ಯದಾದ್ಯಂತ ಜಾರಿಗೊಳಿಸಿದ್ದು, ಅರ್ಹ ಬಿಪಿಎಲ್ ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ. ಮುಖ್ಯಮಂತ್ರಿ ಸಿದ್ರಾಮಯ್ಯನವರು ಏಕಕಾಲಕ್ಕೆ ಈ ಯೋಜನೆ ಜಾರಿಗೊಳಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದರು.

ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಬಡಜನರಿದ್ದಾರೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಹೈದರಾಬಾದ್, ಪುಣಾ, ರಾಜಸ್ತಾನ ಮತ್ತು ಬೆಂಗಳೂರುಗಳಿಗೆ ಗುಳೆ ಹೋಗುತ್ತಿದ್ದಾರೆ. ರಾಜ್ಯ ಸರ್ಕಾರ ಕಡು ಬಡವರ ಅನುಕೂಲಕ್ಕಾಗಿ ಇಂತಹ ವಿನೂತನ ಮತ್ತು ಐತಿಹಾಸಿಕ ಯೋಜನೆ ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈವರೆಗೆ ಬಿಪಿಎಲ್ ಕಾರ್ಡ್ ದೊರೆಯದೇ ಇರುವ ಫಲಾನುಭವಿಗಳಿಗೆ ಆಯಾ ಊರುಗಳಲ್ಲಿಯೇ ಬಿಪಿಎಲ್ ಕಾರ್ಡ್ ದೊರೆಯುವಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಚಿವರು ಸಲಹೆ ನೀಡಿದರು.

ರಾಜ್ಯದಲ್ಲಿ ಸುಮಾರು 98 ಲಕ್ಷ ಜನ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಪ್ರತಿ ತಿಂಗಳು 2.84 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ. ಈ ಯೋಜನೆ ಜಾರಿಯಿಂದ ಸರ್ಕಾರದ ಮೇಲೆ ರೂ. 4800 ಕೋಟಿ ಹೊರೆಯಾಗಲಿದೆ. ಆದಾಗ್ಯೂ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಗಣ್ಯ ನಾಯಕರ ಆಸಕ್ತಿಯ ಫಲವಾಗಿ ಮಹತ್ವದ ಅನ್ನಭಾಗ್ಯ ಯೋಜನೆ ರಾಜ್ಯದಾದ್ಯಂತ ಜಾರಿಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಮಾತನಾಡಿ, ಬಿಪಿಎಲ್ ಕಾರ್ಡ್ ಕೋರಿ ಜಿಲ್ಲೆಯಲ್ಲಿ 17 ಸಾವಿರ ಅನ್‌ಲೈನ್ ಅರ್ಜಿಗಳು ಬಂದಿದ್ದು, ಅರ್ಹರಿಗೆ ನಾಗರಿಕ ಸರಬರಾಜು ಇಲಾಖೆಯಿಂದ ಬಿಪಿಎಲ್ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಯೋಜಯಡಿ ಜಿಕ್ಕೆಯ 1,53,551 ಕುಟುಂಬಗಳು ಬರುತ್ತವೆ. ಪ್ರತಿ ತಿಂಗಳು ಸುಮಾರು 5347 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಶಾಸಕ ಗುರು ಪಾಟೀಲ ಶಿರವಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ಶಾಣ್ಯಾನೋರ್, ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಚಂಡ್ರಕಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಡಿವೈಎಸ್ಪಿ  ಕಟ್ಟಿಮನಿ ಇದ್ದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶ ಟಿ. ಮಹ್ಮದ್ ಸ್ವಾಗತಿಸಿ, ವಂದಿಸಿದರು. ಸಾಂಕೇತಿಕವಾಗಿ ಐವರು ಫಲಾನುವಭವಿಗಳಿಗೆ ಸಚಿವರು 30 ಕಿ.ಗ್ರಾಂ. ಅಕ್ಕಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT