ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿಯೆಂಬ ಸೇತುವೆ ಮೇಲೆ...

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಮಾತ್‌ಮಾತಲ್ಲಿ

ಆಗ ಎಂಟನೇ ತರಗತಿಯಲ್ಲಿದ್ದೆ. ಶಾಲೆಯಲ್ಲಿ `ಅಭಿಜ್ಞಾನ ಶಾಕುಂತಲೆ' ನಾಟಕ ಪ್ರದರ್ಶನ ಏರ್ಪಡಿಸಿದ್ದರು. ನಾಟಕ ಆರಂಭಕ್ಕೂ ಮುನ್ನ ಅದರ ಪರಿಚಯ ನೀಡುವ ಜವಾಬ್ದಾರಿ ನನಗೆ ವಹಿಸಿದ್ದರು. ಅದು ಕಾನ್ವೆಂಟ್ ಶಾಲೆ. ಹೀಗಾಗಿ ಹೆಚ್ಚಿನ ಮಾಹಿತಿಯನ್ನು ನಾನು ತಂದೆಯಿಂದಲೇ ಪಡೆದುಕೊಂಡು ನಾಟಕಕ್ಕೊಂದು ಪ್ರಸ್ತಾವನೆ ನೀಡಿದೆ. ಅಲ್ಲಿಂದ ನನ್ನ ನಿರೂಪಣೆಯ ಬದುಕು ಆರಂಭವಾಯಿತು. ಬಳಿಕ ಶಾಲೆಯ ಎಲ್ಲಾ ಕಾರ್ಯಕ್ರಮ, ವಿಚಾರ ಸಂಕಿರಣ, ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಸಭಾಂಗಣದಲ್ಲಿ ನಡೆಯುತ್ತಿದ್ದ ನಾಟಕ, ಸಂಗೀತ ಕಾರ್ಯಕ್ರಮ ಎಲ್ಲದರಲ್ಲೂ ನಿರೂಪಣೆ ಮಾಡುವ ಜವಾಬ್ದಾರಿ ನನ್ನ ಹೆಗಲೇರಿತು.

ಯಾವುದೇ ಒಂದು ಕಾರ್ಯಕ್ರಮ ನಿರೂಪಿಸುವುದು ಸುಲಭದ ಕೆಲಸವಲ್ಲ. ಚಾರಿತ್ರಿಕ, ಪೌರಾಣಿಕ ಆಧಾರಗಳನ್ನು ಕೊಡಬೇಕು, ಅದನ್ನು ಪ್ರಸ್ತುತಕ್ಕೆ ಹೊಂದಿಸಿಕೊಳ್ಳಬೇಕು, ಪಾಲ್ಗೊಳ್ಳುವ ಅತಿಥಿಗಳೊಂದಿಗೆ, ಕೇಳುಗರೊಂದಿಗೆ ಉತ್ತಮ ಬಾಂಧವ್ಯ ಕಲ್ಪಿಸಿಕೊಳ್ಳಬೇಕು. ಅದಕ್ಕಾಗಿ ಪೂರ್ವತಯಾರಿ ಮಾಡಿಕೊಳ್ಳುವುದು ನನಗಿಷ್ಟದ ಕೆಲಸ. ನೇರಪ್ರಸಾರದ ಒಂದು ಕಾರ್ಯಕ್ರಮಕ್ಕೆ ನಾಲ್ಕರಿಂದ ಐದು ಗಂಟೆಯ ತಯಾರಿ ಅನಿವಾರ್ಯ. ನಾನು ಟೀವಿ ನೋಡುವುದು ಕಡಿಮೆ. ಸಮಯ ಸಿಕ್ಕಾಗ ಕೈಯಲ್ಲಿ ಪುಸ್ತಕ ಹಿಡಿದು ಕೂರುತ್ತೇನೆ. ಸಾಹಿತ್ಯ, ಕವನ, ಕಾದಂಬರಿ ಯಾವುದೇ ಇರಲಿ, ಮಾರುಕಟ್ಟೆಗೆ ಹೊಸದಾಗಿ ಬಂದ ಪುಸ್ತಕಗಳನ್ನು ಕೊಂಡು ಓದುತ್ತೇನೆ. ಕಾರ್ಯಕ್ರಮದ ಮಧ್ಯೆ ಕವನದ ಸಾಲನ್ನೋ, ಸಾಹಿತಿಗಳ ಉಕ್ತಿಗಳನ್ನೋ ಸೇರಿಸಿಕೊಂಡರೆ ಮಾತಿಗೆ ಒದಗುವ ಮೌಲ್ಯವೇ ಬೇರೆ.


ಕಾರ್ಯಕ್ರಮ ನಡೆಸುವುದು ಎಂದರೆ ಅತಿಥಿಗಳು ಮತ್ತು ಕೇಳುಗರ ನಡುವೆ ಸಂಪರ್ಕಸೇತು ಬೆಸೆಯುವುದು. ನಿರೂಪಣೆ ಸ್ಪಷ್ಟವಾಗಿರಬೇಕು. ತೊದಲುವುದು, ತೇಲಿಸಿಕೊಂಡು ಮಾತನಾಡುವುದು ಉತ್ತಮ ನಿರೂಪಕನ ಲಕ್ಷಣವಲ್ಲ. ಅನಿವಾರ್ಯವಾದಾಗ ಮಾತ್ರ ಅನ್ಯ ಭಾಷೆ ಪದಗಳನ್ನು ಬಳಸಬೇಕು. ಆಂಗ್ಲ ಭಾಷೆಯಲ್ಲಿ ನಿರೂಪಣೆ ಮಾಡುವುದಾದರೂ ವಾಕ್ಯರಚನೆ ಸರಳವಾಗಿರಬೇಕು, ಎಲ್ಲರಿಗೂ ಅರ್ಥವಾಗುವಂತಿರಬೇಕು. ನಾನು ರಾಜ್‌ಕುಮಾರ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ ಮೊದಲಾದ ಗಾಯಕ-ಗಾಯಕಿಯರ ಕಾರ್ಯಕ್ರಮಗಳನ್ನು ನಿರೂಪಿಸಿದ್ದೇನೆ, ಕೆಲವೊಮ್ಮೆ ಅವರೊಂದಿಗೆ ದನಿಗೂಡಿಸಿ ಹಾಡಿದ್ದೇನೆ. ಆಗೆಲ್ಲಾ ಅವರ ಮನೋಭಾವ ಅರ್ಥಮಾಡಿಕೊಂಡು, ನವಿರಾಗಿ ಮಾತನಾಡಿ ಆತ್ಮೀಯವಾಗಿ ನಡೆಸಿಕೊಳ್ಳಬೇಕು. ಆಗಲೇ ಕಾರ್ಯಕ್ರಮ ಯಶಸ್ಸು ಕಾಣಲು ಸಾಧ್ಯ.

ಸಿನಿಮಾ, ಧಾರಾವಾಹಿಗಳಲ್ಲಿ ಇಲ್ಲದ ಕ್ರೀಯಾಶೀಲತೆ ನಿರೂಪಣೆಯಲ್ಲಿದೆ. ಪ್ರತಿ ಬಾರಿಯೂ ಹೊಸ ವಿಚಾರಗಳು. ಇತ್ತೀಚಿನ ಧಾರಾವಾಹಿಗಳ ಬಗ್ಗೆ ನನಗೂ ಅಸಮಾಧಾನವಿದೆ. ಈ ಬಗ್ಗೆ ಪ್ರಸಿದ್ಧ ನಿರ್ದೇಶಕರಲ್ಲಿ ಒಮ್ಮೆ ಪ್ರಸ್ತಾಪಿಸಿದ್ದೂ ಇದೆ. ಅದಕ್ಕವರು, `ನೋಡಿ, ದಿನನಿತ್ಯ ನಾವು ಅನ್ನ-ಸಾರು-ಚಪಾತಿ' ತಿನ್ನುವುದಿಲ್ಲವೇ. ಅದಕ್ಕೆ ಎಂದಾದರೂ ಬೇಸರಪಟ್ಟಿದ್ದೇವೆಯೇ? ಧಾರಾವಾಹಿಗಳೂ ಹೀಗೆಯೇ, ಹಿಂದಿನ ದಿನದ ಸಾರು ಇಂದು ಹೇಗೆ ಮರೆತು ಹೋಗುವುದೋ ಕತೆಯೂ ಹಾಗೆಯೇ, ಮರೆತು ಹೋಗುತ್ತದೆ. ಅಲ್ಲೋ ಇಲ್ಲೋ ಒಂದಷ್ಟು ಬದಲಾವಣೆ ಮಾಡಿಕೊಳ್ಳಬಹುದೇ ಹೊರತು ಸಂಪೂರ್ಣ ರೆಸಿಪಿ ಬದಲಾಯಿಸಲು ಸಾಧ್ಯವಿಲ್ಲ' ಎಂದಿದ್ದರು!

ಮಾತು ಎಂದರೆ ಮುತ್ತು. ಅದು ಸ್ಫಟಿಕದ ಶಲಾಕೆಯಂತಿರಬೇಕು, ಮಾತು ಮಥಿಸಿ ನಾದದ ನವನೀತವಾಗಬೇಕು. ಒಮ್ಮೆ ಬಾಯಿಂದ ಹೊರಬಿದ್ದ ಮಾತನ್ನು ಮತ್ತೆ ಹೆಕ್ಕುವುದು ಅಸಾಧ್ಯ. ಒಡೆದುಹೋದ ಒಂದಷ್ಟು ಕುಟುಂಬಗಳಿಗೆ ಸಮಾಲೋಚನೆ ಮಾಡಿಸಿ ಒಂದುಗೂಡಿಸಿದ್ದೇನೆ. ಅಲ್ಲೂ ನಾನು ಕಂಡಿದ್ದು ಇದೇ ಸಮಸ್ಯೆಯನ್ನು. ಹಿಂದುಮುಂದು ಯೋಚಿಸದೆ ಒಬ್ಬರಿಗೊಬ್ಬರು ನೋವಾಗುವಂತೆ ಮಾತನಾಡಿರುತ್ತಾರೆ. ಅಷ್ಟಕ್ಕೇ ಸಂಸಾರ ನೌಕೆ ಒಡೆದಿರುತ್ತದೆ. ಅದೇ ಮಾತುಗಳನ್ನು ಯೋಚಿಸಿ ಆಡಿದ್ದರೆ ಶೇ 50ರಷ್ಟು ಕಲಹಗಳನ್ನು ತಡೆಯಬಹುದು. ಬದುಕಿನಲ್ಲಿ ಮಾತು ಅಮೂಲ್ಯ.

ಸುವರ್ಣದ `ನನ್ನ ಹಾಡು ನನ್ನದು' ನಲ್ವತ್ತೈದು ಕಂತುಗಳ ಕಾರ್ಯಕ್ರಮ. ಅಲ್ಲಿ ಮಾತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ಸಂಗೀತವಿದೆ. ಜುಳುಜುಳು ಹರಿಯುವ ನೀರಿನ ಹಿನ್ನೆಲೆಗೆ ಮಂದ ಬೆಳಕು ಸಾಥ್ ನೀಡುತ್ತದೆ. ಕಾರ್ಯಕ್ರಮ ವೀಕ್ಷಿಸಿದ ತೆಲುಗು ಚಿತ್ರರಂಗದ ಪರಿಚಿತರು ಕರೆ ಮಾಡಿ `ಬಾಗುನ್ನಾರು' (ಬಹಳ ಚೆನ್ನಾಗಿದೆ) ಎಂದಿದ್ದು ಸಖತ್ ಖುಷಿ ನೀಡಿತ್ತು, ಚಂದನದಲ್ಲಿ ನಡೆಸಿಕೊಟ್ಟ, ಜನಸಾಮಾನ್ಯರಿಗೆ ವೇದಗಳನ್ನು ಪರಿಚಯಿಸುವ `ಹೊಸ ಬೆಳಕು' ಕಾರ್ಯಕ್ರಮವೂ ವಿಭಿನ್ನ ಅನುಭವವನ್ನು ನೀಡಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT