ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿಯೊಳಗಾಗಿ: ಮಹಾ ಸ್ಫೋಟ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕಾಸಾ ಅನ್ನುವ ಪದ ನಿಮ್ಮ ಕಿವಿಗೆ ಬಿದ್ದರೆ ಏನು ಮಾಡುತ್ತೀರಿ? ಹಾಗಂದರೇನು ಎಂದು ಕೇಳುತ್ತೀರಿ. ಗೊತ್ತಿರುವವರು `ಸ್ಪಾನಿಶ್ ಭಾಷೆಯಲ್ಲಿ ಮನೆ ಅನ್ನುವ ಅರ್ಥ~ ಅನ್ನುತ್ತಾರೆ. ಇನ್ನೂ ಮಾತು ಬಾರದ ಮಗುವಾಗಿದ್ದರೆ? ಸುಮ್ಮನೆ ಕೇಳಿಸಿಕೊಳ್ಳುತ್ತೀರಿ. ಕಾ-ಸಾ ಅನ್ನುವ ಶಬ್ದ ಹೇಗೆ ಹೇಳುತ್ತಾರೆ ಕೇಳಿಸಿಕೊಳ್ಳುತ್ತೀರಿ.

ನಾವು ನಮ್ಮ ಬದುಕಿನ ಮೊದಲ ವರ್ಷದಲ್ಲಿ ಗಮನವಿಟ್ಟು ಕೇಳಿಸಿಕೊಂಡಷ್ಟನ್ನು ಮುಂದೆ ಇಡೀ ಬದುಕಿನಲ್ಲೇ ಕೇಳಿಸಿಕೊಳ್ಳುವುದಿಲ್ಲ. ಮಗುವಾಗಿದ್ದಾಗ ಕೇಳಿಸಿಕೊಳ್ಳುವುದಕ್ಕೆ ಎಷ್ಟೊಂದಿರುತ್ತದಲ್ಲಾ! ಕೂಸು ನಿದ್ದೆ ಹೋಗಿರುವ ಹೊತ್ತು ಬಿಟ್ಟು ಮಿಕ್ಕಂತೆ ಕೇಳಿಸಿಕೊಳ್ಳುವುದಲ್ಲದೆ ಬೇರೇನು ಮಾಡಲು ಸಾಧ್ಯ? ಅಂಗಾತ ಮಲಗಿ ಜಗತ್ತನ್ನು ಸುಮ್ಮನೆ ನೋಡುತ್ತಾ, ಸದ್ದುಗಳನ್ನು ಕೇಳಿಸಿಕೊಳ್ಳುತ್ತಾ, ಲೋಕದ ಗಂಧ, ಸ್ಪರ್ಶಗಳನ್ನು ಅನುಭವಿಸುವುದು ಅಷ್ಟೆ. ಅದರಲ್ಲೂ ಮನುಷ್ಯರು ಮಾಡುವ ಸದ್ದು ಕಿವಿ ತುಂಬುತ್ತಲೇ ಇರುತ್ತದೆ. ತಾಯ ಬಸಿರಲ್ಲೇ ಇರುವಾಗ ಕೇಳಿಸಿಕೊಳ್ಳುತಿದ್ದ ಮನುಷ್ಯರ ಮಾತು ಈಗ ಲಯಬದ್ಧವಾಗಿ ಕಿವಿ ತುಂಬುತ್ತ, ಕೂಸು ಮಾತಿನ ಸದ್ದು ಬಂದತ್ತ ಕಣ್ಣು ಹೊರಳಿಸುತ್ತದೆ, ಕತ್ತು ತಿರುಗಿಸುತ್ತದೆ.

ಕೂಸಿಗೆ ಕೇಳಿಸಿಕೊಳ್ಳುವ `ಆಸೆ~ ಇರುತ್ತದೆ. ನಮಗೆ ದೋಸೆ ತಿನ್ನುವ ಆಸೆ, ಸಿನಿಮಾ ನೋಡುವ ಆಸೆ ಇರುತ್ತದಲ್ಲ, ಹಾಗಲ್ಲ. ಕೂಸಿನ ಮಿದುಳು ಭಾಷೆಗಳಿಗಾಗೇ ಸಿದ್ಧವಾಗಿ ತಯಾರಾಗಿರುತ್ತದೆ. ಭಾಷೆಯನ್ನು ಬಳಸಲು ಪ್ರಚೋದನೆಗೆ ಕಾಯುತ್ತಿರುತ್ತದೆ, ಮಾತಾಡಲು ತವಕಪಡುತ್ತಿರುತ್ತದೆ. ಕೆಲವು ಮನಶ್ಶಾಸ್ತ್ರಜ್ಞರು `ಭಾಷಾ ಸಂಪಾದನೆಯ ಉಪಕರಣ~ ಇದ್ದೀತು ಮನುಷ್ಯ ಕೂಸಿನ ಮಿದುಳಲ್ಲಿ ಅಂತಲೂ ಅನ್ನುತ್ತಾರೆ. ಭಾಷಾ ಸಂಪಾದನೆಯ ಈ ಉಪಕರಣವೆನ್ನುವುದು ಜೀವಕೋಶಗಳ ಜಾಲ; ಸಾಧ್ಯವಾದಷ್ಟು ಬೇಗ ಮಾತು ಕಲಿಯುವುದಕ್ಕೆ ಸಾಧ್ಯವಾಗಲೆಂದೇ ಸಾವಿರ ಸಾವಿರ ವರ್ಷಗಳಿಂದ ಅದು ವಿಕಾಸಗೊಂಡಿದೆ ಅನ್ನುತ್ತಾರೆ.

ಜಗತ್ತಿನ ಮುಕ್ಕಾಲು ಪಾಲು ಮಕ್ಕಳು ಒಂದಕ್ಕಿಂತ ಹೆಚ್ಚು ಭಾಷೆ ಕಲಿಯುತ್ತಾರೆ. ಕೆಲವು ಮಕ್ಕಳಂತೂ ಒಮ್ಮೆಗೇ ಐದು-ಆರು ಭಾಷೆ ಕಲಿಯುತ್ತಾರೆ. ಸುತ್ತಲಿನ ಜನ ಆಡುವ ಮಾತಿನ ದನಿಗಳು ಕೇಳುತ್ತವೆಯೇ ಹೊರತು ಅವು ಬೇರೆ ಬೇರೆ ಭಾಷೆಗಳು ಅನ್ನುವುದು ಮಗುವಿಗೆ ಗೊತ್ತಿರುವುದಿಲ್ಲ. ಅಮ್ಮ, ಅಪ್ಪ, ಆಟಕ್ಕೆಂದು ಬರುವ ಪಕ್ಕದ ಮನೆಯ ದೊಡ್ಡ ಮಗು, ಕೆಲಸದಾಕೆ ಎಲ್ಲರೂ ಬೇರೆ ಬೇರೆ ಭಾಷೆ ಆಡುತಿದ್ದರೆ ಮಗುವಿನ ಪಾಲಿಗೆ ಅವೆಲ್ಲ ಸದ್ದುಗಳು ಅಷ್ಟೇ. ಅವೆಲ್ಲವನ್ನೂ ಕೂಸು ಸಹಜವಾಗಿ ಒಳಗುಮಾಡಿಕೊಳ್ಳುತ್ತದೆ. ಕೂಸಿನ ಪಾಲಿಗೆ ಭಾಷೆಯೆಂದರೆ ಲಯ, ಛಂದ ಅಷ್ಟೇ ಆದ್ದರಿಂದ ಭಾಷೆಗಳನ್ನು ಒಳಗೊಳ್ಳುವುದು ಕೂಸಿಗೆ ಉಸಿರಾಟದಷ್ಟೇ ಸಹಜವಾಗಿರುತ್ತದೆ.

ಮನುಷ್ಯರ ಮಿದುಳು ಹತ್ತಾರು, ಅಕ್ಷರಶಃ ಹತ್ತಾರು ಭಾಷೆಗಳೊಡನೆ ಸಲೀಸಾಗಿ ವ್ಯವಹಾರ ಮಾಡಬಲ್ಲದು. ಹೆರಾಲ್ಡ್ ವಿಲಿಯಮ್ಸ ಅನ್ನುವ (1876-1928) ನ್ಯೂಜಿಲೆಂಡಿನ ಪತ್ರಕರ್ತ, ಟೈಮ್ಸ ಪತ್ರಿಕೆಯ ವಿದೇಶೀ ಪತ್ರಿಕೆಗಳ ಸಂಪಾದಕನಾಗಿದ್ದವನು 58 ಭಾಷೆಗಳನ್ನು ಸಲೀಸಾಗಿ ಮಾತಾಡುತ್ತಿದ್ದ. ಈಗ ತಿಳಿದಿರುವಂತೆ ಇಷ್ಟೊಂದು ಸಹಜವಾಗಿ ಇಷ್ಟೊಂದು ಭಾಷೆಗಳನ್ನು ಬಳಸಿದ ಆಧುನಿಕ ಮನುಷ್ಯನ ದಾಖಲೆ ಇವನದೇ. ಎರಡು ಭಾಷೆ ಮೂರು ಭಾಷೆ ಕಲಿಯುವುದು ಇನ್ನೇನು ಮಹಾ! ಭಾಷೆಗಳನ್ನು ಕಲಿಯುವುದು ಮಕ್ಕಳಿಗೆ ಕಷ್ಟ ಅನ್ನುವುದೆಂಥ ತಪ್ಪು ಕಲ್ಪನೆ!

ಕೂಸು ಮೊದಲು ಲಯವನ್ನು, ದನಿಯ ಏರಿಳಿತವನ್ನು ಹಿಡಿಯುತ್ತದೆ. ಆಮೇಲೆ? ಮೊದಲ ಪದ. ನಾವು ಮಕ್ಕಳೊಡನೆ ಮಾತಾಡುವಾಗ ಕೆಲವು ಪದಗಳನ್ನು, ಪದಗಳ ಕೆಲವು ದನಿಗಳನ್ನು ಸ್ವಲ್ಪ ಜೋರಾಗಿ ಉಚ್ಚಾರಮಾಡುತ್ತೇವೆ, ಕೆಲವು ಪದಗಳನ್ನು ಮತ್ತೆ ಮತ್ತೆ ಹೇಳುತ್ತೇವೆ `ನೋಡು, ನಾಯಿ ನಾಆಆಯಿ, ನಾಯೀ ಬಾ ಇಲ್ಲೆ~ ಸುಮಾರಾಗಿ ಈ ಥರ. ನಮಗೇ ಗೊತ್ತಿಲ್ಲದೆ ಮಗುವಿಗೆ ನಾಯಿ ಅನ್ನುವ ಪದ ಕಲಿಸಿರುತ್ತೇವೆ.

ನಾವು ಆಡುವ ಮಾತು ಮಕ್ಕಳಿಗೆ ತಿಳಿಯುತ್ತದೆಯೇ? ಗೊತ್ತಿಲ್ಲ. ಆದರೆ ಮಕ್ಕಳು ತೋರುವ ಪ್ರತಿಕ್ರಿಯೆಯಿಂದ ಈ ಪದ ಇಂಥದನ್ನು ಸೂಚಿಸುತ್ತದೆ ಅನ್ನುವುದು ಗೊತ್ತಾಗಿದೆಯೋ ಇಲ್ಲವೋ ಊಹೆ ಮಾಡಬಹುದು. ನಮ್ಮ ಸಮರ್ಥ `ನಾಯಿ~, `ಬೆಕ್ಕು~, `ಹಸು~, `ಕಾರು~ ಪದಗಳಿಗೆ ರಿಯಾಕ್ಟ್ ಮಾಡಿದ ಹಾಗೆ ಕುರ್ಚಿ, ಗಡಿಯಾರ ಇತ್ಯಾದಿಗಳಿಗೆ ರಿಯಾಕ್ಟ್ ಮಾಡುತ್ತಿರಲಿಲ್ಲ.

ಹನ್ನೆರಡು ತಿಂಗಳಾಗುವ ಹೊತ್ತಿಗೆ ಸುಮಾರಾಗಿ ಹದಿನೈದು ಪದಗಳು ಮಗುವಿಗೆ ಗೊತ್ತಿರುತ್ತದೆ ಅನಿಸುತ್ತದೆ. ಪಪ್ಪ, ಮಮ್ಮಿ, ಬಾಲ್, ಹಾಲು- ಇತ್ಯಾದಿ ಹೆಸರುಗಳು; ಬಿತ್ತು, ಆಗೋಯ್ತು- ಇಂಥ ಕೆಲಸದ ಪದಗಳು ಆರು ತಿಂಗಳ ಮಗುವಿಗೂ ಗೊತ್ತಾಗುತ್ತವಂತೆ.

ಹನ್ನೆರಡು ತಿಂಗಳಾಗುವ ವೇಳೆಗೆ ಹಲವು ಪದಗಳು ಅರ್ಥವಾದರೂ ಮಗು ಬಳಸಬಹುದಾದ ಪದ ಯಾವುದೂ ಇರಲಾರದು. ಮಗು ಆಡುವ ಮೊದಲ ಪದ ಇಂಥದೇ ಅನ್ನುವುದನ್ನು ಊಹಿಸುವುದು ಕಷ್ಟ. ಮಗುವಿಗೆ ಯಾವುದು ಮುಖ್ಯ ಅನಿಸಿರುತ್ತದೆಯೋ ಅದು.

ಮಗು ಮೊದಲ ಪದವನ್ನು ಆಡುವಷ್ಟು ನಾಲಗೆ ಹೊರಳಿಸುವುದಕ್ಕೆ ಆದ ತಕ್ಷಣ ಅದರ ಕ್ರಿಯಾಶೀಲ ಪದಸಂಪತ್ತು ಬೆಳೆಯುತ್ತದೆ. ಮೊದಲ ಪದ ಆಡಿದ ಒಂದು ತಿಂಗಳಲ್ಲೇ ಹತ್ತು ಹದಿನೈದು ಪದ ಹೇಳುವುದನ್ನು ಕಲಿತಿರುತ್ತದೆ. ನುಡಿಯಲು ಆಗದಿದ್ದರೂ ಅರ್ಥವಾಗುವ ಪದಗಳ ಸಂಖ್ಯೆ ಸುಮಾರು ಇನ್ನೂರು ಮುಟ್ಟಿರುತ್ತದೆ.

ಭಾಷೆಯ ಲೋಕದ ಪ್ರಯಾಣ ತೊಡಗಿರುತ್ತದೆ. ಪ್ರತಿ ಎರಡು ಗಂಟೆಗೆ ಒಂದು ಹೊಸ ಪದ ಮಗುವಿನ ಶಬ್ದಕೋಶಕ್ಕೆ ಸೇರ್ಪಡೆಯಾಗುತ್ತದೆ ಅನ್ನುತ್ತಾರೆ. ಈ ವೇಗ ಕ್ರಮೇಣ ತಗ್ಗುತ್ತದೆ, ಹದಿಹರೆಯದ ಹೊತ್ತಿಗೆ ತೀರ ಕುಗ್ಗುತ್ತದೆ. ಯಾಕೆ? ಅದು ಮತ್ತೊಂದೇ ವಿಷಯ.

ಪ್ರತಿಯೊಬ್ಬ ವ್ಯಕ್ತಿಯ ಶರೀರದ, ಮನಸ್ಸಿನ ಬೆಳವಣಿಗೆಯಲ್ಲೂ ಮನುಷ್ಯನ ವಿಕಾಸದಲ್ಲಿ ನಡೆದ ಪ್ರಮುಖ ಬದಲಾವಣೆಗಳೆಲ್ಲ ಕಾಣುತ್ತವೆ ಅನ್ನುವುದೊಂದು ನಂಬಿಕೆ. ಹಾಗೆ ಅಂದವನು ಅರ್ನ್ಸ್ಟ ಹಾಕೆಲ್. ಮನುಷ್ಯ ಶರೀರದ ವಿಕಾಸಕ್ಕೂ ಮಾತಿಗೂ ಇರುವ ಸಂಬಂಧ, ಆಡುವ ಮಾತಿಗೂ ಲೋಕದ ವಸ್ತುಗಳಿಗೂ ಕಲ್ಪಿಸಿಕೊಂಡ ಸಂಬಂಧ ಎರಡೂ ದೊಡ್ಡ ವಿಸ್ಮಯಗಳು.

ಕಾಣುವ ಎಲ್ಲಕ್ಕೂ ಒಂದೊಂದು ಹೆಸರು; ಅನ್ನಿಸುವ ಪ್ರತಿಯೊಂದು ಭಾವಕ್ಕೂ ಒಂದೊಂದು ಹೆಸರು; ಹೊಳೆಯುವ ಒಂದೊಂದು ಆಲೋಚನೆಗೂ ಹೆಸರು. ಹೆಸರಿಲ್ಲದ ಏನನ್ನೂ ಕಲ್ಪಿಸಿಕೊಳ್ಳುವುದಕ್ಕೂ ಆಗುವುದಿಲ್ಲ. ಪ್ರತಿ ಮಗುವೂ ಮಾತು ಕಲಿಯಬೇಕು, ಆದಿ ಮನುಷ್ಯರ ಹಾಗೇ.
 
ದೊಡ್ಡವರ ದನಿಯ ಲಯ, ವಿನ್ಯಾಸ, ರಚನೆಗಳನ್ನು ಒಳಗು ಮಾಡಿಕೊಳ್ಳುತ್ತಾ ತನ್ನ `ಮಾತು~ ಲೋಕಕ್ಕೆ ಲಗತ್ತಾಗುವ ಹಾಗೆ ಮಾಡಿಕೊಳ್ಳಬೇಕು. ಹತ್ತು ತಿಂಗಳ ಮಕ್ಕಳು ವಸ್ತುವಿನತ್ತ ಬೆರಳು ತೋರುತ್ತಿರುವಾಗಲೇ ಸದ್ದುಮಾಡುತ್ತವೆ, ಹಾಗೆ ಮಾಡುತ್ತ ಮಿದುಳ ನಿರ್ದಿಷ್ಟ ಭಾಗಕ್ಕೆ ಪ್ರಚೋದನೆ ಒದಗಿಸುತ್ತವೆ. ಆದಿಮನುಷ್ಯರು ಕೂಡ ಹೀಗೇ ಆದಿಮ ಪದಗಳ ಮೂಲಕ ಸಣ್ಣ ಶಬ್ದಕೋಶ ನಿರ್ಮಿಸಿಕೊಂಡಿರಬಹುದು, ಆ ಸದ್ದುಗಳು ನಿಜಭಾಷೆಯ ಪೂರ್ವಜ ಆಗಿರಬಹುದು ಅನ್ನುವುದು ಒಂದು ಊಹೆ.

ಹನ್ನೆರಡು ತಿಂಗಳ ಹೊತ್ತಿಗೆ ಮಕ್ಕಳಾಡುವ ಪದಗಳನ್ನು ಗುರುತು ಹಿಡಿಯಬಹುದು. ಅವು ಇಡೀ ಸಂದರ್ಭಕ್ಕೆ ಹೊಂದುವ ಹಾಗೆ ಇರುತ್ತವೆ. ನಮ್ಮ ಸಮರ್ಥ ಓಡಾಡುವ ವಾಹನಗಳು ಕಂಡಾಗೆಲ್ಲ ಕಾರು ಅನ್ನುತಿದ್ದ. ಬಸ್ಸು, ಬೈಕು ಎಲ್ಲ ಕಲಿತದ್ದು ಆಮೇಲೆ.

ಒಂದು ಪದವನ್ನು ಒಂದೇ ವಸ್ತುವಿಗೋ, ಕೆಲಸಕ್ಕೋ ಲಗತ್ತಿಸುವ ಕೆಲಸ ತಕ್ಕ ಮಟ್ಟಿಗೆ ಪೂರೈಸುವುದು ಒಂದೂವರೆ ವರ್ಷದ ಆಸುಪಾಸಿನಲ್ಲಿ. ಇದು ಎಷ್ಟು ಸಹಜವಾಗಿ ಆಗಿಬಿಡುತ್ತದೆಂದರೆ ಅಪ್ಪ ಅಮ್ಮಂದಿರು ಗಮನಿಸದೆಯೇ ಇರಬಹುದು.

ವಿಶ್ವವು ಮಹಾಸ್ಫೋಟದಿಂದ ಹುಟ್ಟಿತು ಅನ್ನುವ ಮಾತಿದೆಯಲ್ಲ ಹಾಗೆಯೇ ಮನುಷ್ಯ ವ್ಯಕ್ತಿಯ ಲೋಕದ ಉದ್ಘಾಟನೆ ಹೆಸರುಗಳ ಮಹಾಸ್ಫೋಟದಿಂದಲೇ ತೊಡಗುತ್ತದೆ. ಕೇಳಲಾಗದ, ಕಾಣಲಾಗದ ಮಕ್ಕಳನ್ನು ಗಮನಿಸಿದರೆ ಇದರ ಮಹತ್ವ ತಿಳಿಯುತ್ತದೆ.

ಹೆಲನ್ ಕೆಲರ್ (ಲೇಖಕಿ, ರಾಜಕೀಯದ ಆಕ್ಟಿವಿಸ್ಟ್, ಅಮೆರಿಕದಲ್ಲಿ ಮೊದಲ ಬಾರಿಗೆ ಪದವಿ ಪಡೆದ ಹುಟ್ಟುಗಿವುಡು, ಹುಟ್ಟುಕುರುಡು ಹೆಂಗಸು 1880-1968) ಆರುವರ್ಷದವಳಾಗಿದ್ದಾಗ ಪದಗಳಿಗೆ ಅರ್ಥವಿದೆ ಅನ್ನುವುದು ಇದ್ದಕ್ಕಿದ್ದಂತೆ ಹೊಳೆಯಿತಂತೆ- ಅಧ್ಯಾಪಕಿ ಆನ್ ಸುಲಿವಾನ್ ಹರಿವ ನೀರಿನ ಅಡಿಯಲ್ಲಿ ಅವಳ ಕೈ ಇರಿಸಿ ನೀರು, ನೀರು ಅಂದಾಗ. `ನೀರು ಅನ್ನುವ ಪದ ನಿಧಾನವಾಗಿ ಹೇಳುತ್ತ ಅದು ತಣ್ಣಗೆ ಹರಿಯುವ ಏನೋ ಒಂದು ಅನ್ನುವುದು ಗೊತ್ತಾಗಿ ಅದು ಹೇಗೋ ಭಾಷೆಯ ರಹಸ್ಯ ತಿಳಿಯಿತು. ಆ ಪದ ಜೀವಂತವಾಗಿ ನನ್ನ ಆತ್ಮವನ್ನು ಎಬ್ಬಿಸಿತು. ಬೆಳಕು ಕೊಟ್ಟಿತು. ಭರವಸೆ ಕೊಟ್ಟಿತು. ಸಂತೋಷಕೊಟ್ಟಿತು. ಬಿಡುಗಡೆ ಕೊಟ್ಟಿತು.

ಪ್ರತಿಯೊಂದಕ್ಕೂ ಹೆಸರಿದೆ! ಒಂದೊಂದು ಹೆಸರೂ ಒಂದು ಹೊಸ ಆಲೋಚನೆ! ನಾನು ಮುಟ್ಟಿದ ಪ್ರತಿಯೊಂದು ವಸ್ತುವೂ ಜೀವಂತವಾಗಿ ಮಿಡಿಯುತಿತ್ತು. ನನಗೆ ದೊರೆತ ಹೊಸ ದೃಷ್ಟಿಯಿಂದ ಎಲ್ಲವನ್ನೂ ಕಾಣುತಿದ್ದೆ~ ಅನ್ನುತ್ತಾಳೆ ಕೆಲರ್.

ಹೆಸರಿಡುವ ಒಳನೋಟ ದಕ್ಕಿದೊಡನೆ ಎಲ್ಲಕ್ಕೂ ಹೆಸರಿಡುವ ಬಯಕೆ, ಹೆಸರಿಡುವುದೇ ಒಂದು ಖುಷಿ. ಈ ವಿಚಾರದಲ್ಲಿ ಮನುಷ್ಯರು ವಾ-ನರಗಳಿಗಿಂತ ಭಿನ್ನ. ಪ್ರೈಮೇಟ್‌ಗಳಿಗೆ ಹೆಸರಿಡುವ ಉತ್ಸಾಹವಿಲ್ಲ. ಆಫ್ರಿಕದ ಕೆಲವು ಮಂಗ ಜಾತಿಗಳು ಹಾವು ಕಂಡಾಗ, ಹದ್ದು ಕಂಡಾಗ, ಸಿಂಹವೋ ಚಿರತೆಯೋ ಕಂಡಾಗ ಬೇರೆ ಬೇರೆ ದನಿಗಳನ್ನು ಹೊರಡಿಸುತ್ತವೆ; ಮಂಗಗಳು ಸ್ತಬ್ಧ ನಿಂತುಬಿಡುತ್ತವೆ ಕೆಲವು ಬಗೆಯ ಸದ್ದು ಕೇಳಿ; ಇನ್ನು ಕೆಲವು ಸದ್ದು ಕೇಳಿ ಮರ ಏರುತ್ತವೆ. ಈ ದನಿಗಳು ಭಯ, ಎಚ್ಚರಿಕೆ, ಅಪಾಯಕಾರಿ ಪ್ರಾಣಿಗಳ ಸೂಚನೆ ಕೊಟ್ಟರೂ ಅವು ನಾಮಕರಣಗಳಲ್ಲ.
 
ಬೊನೊಬೊ ಚಿಂಪ್ ಜಾಮಿಟ್ರಿಯ ಆಕಾರ ಗುರುತಿಸುತಿತ್ತು, ಗುರುತಿಸಿದರೆ ಬಾಳೆಯಹಣ್ಣು ಸಿಗುತ್ತದೆ ಅನ್ನುವ ಕಾರಣಕ್ಕೆ. ಅಂಥ ಕಾರಣ ಇಲ್ಲದೆಯೂ ಬಾಳೆಯ ಹಣ್ಣು ಅನ್ನುವ ಪದ ಸೃಷ್ಟಿಸಲು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಹೆಸರಿಡುವುದು ಚಿಂಪ್‌ಗಳಿಗೆ ಪ್ರಿಯವಾದ ಕೆಲಸವಲ್ಲ- ಮರದ ಕೊಂಬೆ ಹಿಡಿದು ಜೋತಾಡಿಕೊಂಡು ಸಾಗುವುದು ಮನುಷ್ಯರಿಗೆ ಹೇಗೆ ಇಷ್ಟವಿಲ್ಲವೋ ಹಾಗೆ. ವಸ್ತುವಿಗೆ ಹೆಸರಿಡುವುದನ್ನು ಚಿಂಪ್‌ಗೆ ಕಲಿಸಬಹುದು ಆದರೆ ಹೆಸರಿಡುವುದರ ಮಹತ್ವವನ್ನು ಕಲಿಸಲು ಆಗುವುದಿಲ್ಲ. ಹಾಗಾಗಿಯೇ ಚಿಂಪ್‌ಗಳು ಭಾಷೆ ಕಲಿಯಲು ಆಗಲಿಲ್ಲ. ಇದು ಪರಿಷ್ಕೃತ ದನಿ ಅಂಗಗಳು ಇಲ್ಲದಿರುವುದಕ್ಕಿಂತ ದೊಡ್ಡ ಕಾರಣ.

ಹೆಸರಿಡುವ ಒಳನೋಟ ಹೇಗೆ ದೊರೆಯಿತು? ಭಾಷೆ ಅನ್ನುವುದು ಪ್ರಾಣಿಗಳ ಧ್ವನಿಯ ಅನುಕರಣೆಯಾಗಿ, ಭಾವಗಳ ಅಭಿವ್ಯಕ್ತಿಯಾಗಿ, ಭಾವಸೂಚಕ ಸದ್ದುಗಳಿಂದ, ಸಂಗೀತದಿಂದ ಬೆಳೆದಿರಬಹುದು ಇತ್ಯಾದಿ ವಿವರಣೆಗಳು ಆಕರ್ಷಕ, ಪೂರಾ ಸತ್ಯವಲ್ಲ. ಅಂಥ ಪದಗಳು ಹೆಚ್ಚಿಲ್ಲ ಯಾವ ಭಾಷೆಯಲ್ಲೂ.

ಯಾವುದೇ ಒಂದು ದಾರಿ ಹಿಡಿದು ಭಾಷೆಯಲ್ಲಿ ಪದಗಳು ಸೃಷ್ಟಿಯಾಗಲಿಲ್ಲ. ಮನುಷ್ಯ ಭಾಷೆ ಕಲಿತ ಬಗೆಯ ಬಗ್ಗೆ ಸುಮ್ಮನೆ ಒಂದು ತೋರುಗಂಬ ಇದ್ದ ಹಾಗೆ ಮಕ್ಕಳ ಮಾತು.

ಮನುಷ್ಯರಿಗೆ ಹೆಸರಿಡುವ ಒಳನೋಟ ದಕ್ಕಿದ ತಕ್ಷಣ ಶಬ್ದಕೋಶದ ಸ್ಫೋಟ ಸಂಭವಿಸಿರಬೇಕು. ಮಾತು ತೊಡಗಿದ ಕ್ಷಣದಿಂದ ಕೆಲವು ತಿಂಗಳ ಕಾಲ ಮಕ್ಕಳು ಹೇಗೆ ಅವರ ಮಾತು ನಿಲ್ಲಿಸುವುದೇ ಕಷ್ಟ ಅನ್ನುವ ಹಾಗೆ ಮಾತಾಡುತ್ತಲೇ ಇರುತ್ತಾರೆ ನೋಡಿದ್ದೀರಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT