ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂಡಲ್ಸ್ ತಯಾರಿಕೆ ಘಟಕಕ್ಕೆ ಸಿಎಂ ಚಾಲನೆ

Last Updated 23 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದ ನೆಸ್ಲೆ ಕಂಪೆನಿಯು ಕೇವಲ 8 ತಿಂಗಳು 20 ದಿನಗಳಲ್ಲಿ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ನೂಡಲ್ಸ್ ತಯಾರಿಕೆ ನೂತನ ಘಟಕವನ್ನು ಕಾರ್ಯಾರಂಭ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.
 

ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೀಪ ಬೆಳಗುವ ಮೂಲಕ ಘಟಕವನ್ನು ಉದ್ಘಾಟಿಸಿದರು. ಇವರು 2010, ಜೂನ್ ತಿಂಗಳಲ್ಲಿ ಈ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಘಟಕವು ಸುಮಾರು 630 ಮಂದಿಗೆ ಉದ್ಯೋಗ ಸೃಷ್ಟಿಸುವುದರೊಂದಿಗೆ ನೆಸ್ಲೆ ಇಂಡಿಯಾದ ಕರ್ನಾಟಕದಲ್ಲಿನ ಉತ್ಪಾದನೆಯ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸುತ್ತದೆ. ತನ್ನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಸುಮಾರು ` 360 ಕೋಟಿ  ಬಂಡವಾಳದೊಂದಿಗೆ ದಾಖಲೆ ಸಮಯದಲ್ಲಿ ಘಟಕದ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದೆ.
 

 ‘ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ಎಂಟೂವರೆ ತಿಂಗಳಲ್ಲಿ ಘಟಕ ಕಾರ್ಯಾರಂಭ ಮಾಡಿರುವುದು ಸಂತೋಷವನ್ನುಂಟು ಮಾಡಿದೆ. ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಒಪ್ಪಂದ ಮಾಡಿಕೊಂಡ ಎಲ್ಲ ಯೋಜನೆಗಳ ಕೆಲಸ ವೇಗವಾಗಿ ನಡೆಯುತ್ತಿದೆ. ಈಗಾಗಲೇ 50 ಯೋಜನೆಗಳು ಮುಕ್ತಾಯ ಹಂತದಲ್ಲಿದ್ದು, 200 ಯೋಜನೆಗಳ ಕಾಮಗಾರಿಗಳು ವಿವಿಧ ಹಂತದಲ್ಲಿವೆ’ ಎಂದು ಯಡಿಯೂರಪ್ಪ ತಿಳಿಸಿದರು.
 

‘ನೆಸ್ಲೆ ಕಂಪೆನಿ ಪೌಷ್ಟಿಕ ಆಹಾರ ಉತ್ಪಾದನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇಂತಹ ಕಂಪೆನಿ ಉತ್ತರ ಕರ್ನಾಟಕದಲ್ಲಿ ಆಗ್ರೊ ಆಧಾರಿತ ಕೈಗಾರಿಕೆಗಳನ್ನು ಆರಂಭಿಸಲು ಮುಂದಾಗಬೇಕು. ಇದಕ್ಕೆ ಅಗತ್ಯವಾದ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡುತ್ತದೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT