ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ನೀತಿ ಜಾರಿ

ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ
Last Updated 2 ಏಪ್ರಿಲ್ 2013, 8:16 IST
ಅಕ್ಷರ ಗಾತ್ರ

ದಾವಣಗೆರೆ: ಗ್ರಾಮೀಣ ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ರಾಜ್ಯ ಸರ್ಕಾರ ಹೊಸ ನೀತಿ ರೂಪಿಸಿದ್ದು, ಏ. 1ರಿಂದ ಜಾರಿಯಾಗಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಸಂಬಂಧ ರಾಜ್ಯ, ಕೇಂದ್ರ ಸರ್ಕಾರ ಹಾಗೂ ವಿದೇಶದ ನೆರವಿನಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ವೈಜ್ಞಾನಿಕ ತಳಹದಿಯಲ್ಲಿ    ಕಾಮಗಾರಿ ಅನುಷ್ಠಾನಗೊಂಡಲ್ಲಿ, ಯೋಜನೆಗಳಿಂದ ಅನುಕೂಲ ಆಗುತ್ತದೆ.

ಈ ಹಿನ್ನೆಲೆಯಲ್ಲಿ, 1-2ಕ್ಕಿಂತ ಹೆಚ್ಚಿನ ಗ್ರಾಮಗಳು, ಗ್ರಾಮ ಪಂಚಾಯ್ತಿಗಳು ಒಳಗೊಂಡ ಯೋಜನೆಯಡಿ ನಿರ್ವಹಣೆ ಕಾರ್ಯತಂತ್ರ, ಕಾಲಕಾಲಕ್ಕೆ ದುರಸ್ತಿ, ನೀರಿನ ಗುಣಮಟ್ಟ ಪರಿಶೀಲನೆ, ಕಾರ್ಯಾಚರಣೆ ಮತ್ತು ನಿರ್ವಹಣೆ, ವಿದ್ಯುತ್ ಬಿಲ್ ಪಾವತಿ, ನೀರು ಪೋಲಾಗದಂತೆ ತಡೆಯುವುದು ಹಾಗೂ ನೀರಿನ ಕರ ಸಂಗ್ರಹಣೆ ಮೊದಲಾದ ವಿಧಿವಿಧಾನವನ್ನು ಸಮರ್ಪಕವಾಗಿ ಅನುಸರಿಸಲು ಹೊಸ ನೀತಿ ರೂಪಿಸಲಾಗಿದೆ.

ಈ ನೀತಿ ರೂಪಿಸಲು 2010ರಫೆ. 8ರಂದು ಸಂಪುಟ ಸಭೆಯಲ್ಲಿ ವಿಷಯ ಮಂಡಿಸಲಾಗಿತ್ತು. ಅಂದಿನ ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ನೆರೆ ರಾಜ್ಯದ ವಸ್ತುಸ್ಥಿತಿ, ತಜ್ಞರ ವರದಿ ಆಧರಿಸಿ ಉಪಸಮಿತಿ ನೀಡಿದ ನಿರ್ಣಯವನ್ನು 2012ರ ಜ. 3ರಂದು ಸಭೆಯಲ್ಲಿ ಮಂಡಿಸಲಾಗಿತ್ತು. 2012ರ ಏ. 10 ರಂದು ನಡೆದ ಸಭೆಯಲ್ಲಿ, ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ- ನಿರ್ವಹಣೆ ಜವಾಬ್ದಾರಿಯನ್ನು ಆಯಾ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗಗಳ ಮೂಲಕ ಟೆಂಡರ್ ಕರೆದು ಹೊರಗುತ್ತಿಗೆ ಮೂಲಕ ನಿರ್ವಹಿಸುವುದು ಎಂಬ ಅಂಶ ಒಳಗೊಂಡ ನೀತಿ ರೂಪಿಸಲಾಗಿದೆ. 2013ರ ಮಾರ್ಚ್ 12ರಂದು ಈ ಆದೇಶ ಹೊರಡಿಸಲಾಗಿದೆ. ನೀತಿಯು 2013ರ ಏಪ್ರಿಲ್ 1ರಿಂದ ಜಾರಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ (ಗ್ರಾನೀಸ) ರಾಮಕೃಷ್ಣ ಈಚೆಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ನೀತಿಯಲ್ಲೇನಿದೆ?
* ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕುಡಿಯುವ ನೀರು ಪೂರೈಕೆ ಯೋಜನೆಗಳ ಸಂಪೂರ್ಣ ಕಾರ್ಯಾಚರಣೆ, ನಿರ್ವಹಣೆ ಆಯಾ ಗ್ರಾಮ ಪಂಚಾಯ್ತಿಗಳ ಜವಾಬ್ದಾರಿ ಆಗಿರುತ್ತದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾರ್ಯಾಚರಣೆ ನಿರ್ವಹಣೆಯನ್ನು ಆಯಾ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಗಳ ಮೂಲಕ ಟೆಂಡರ್ ಕರೆದು ಹೊರಗುತ್ತಿಗೆ ಮೇಲೆ ನಿರ್ವಹಿಸಬೇಕು.

* ನೀರು ಸರಬರಾಜು ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಜಲಮೂಲದ ಹಂತದಿಂದ ಸಂಬಂಧಿಸಿದ ಗ್ರಾಮದಲ್ಲಿನ ನೀರು ಸ್ವೀಕರಿಸುವ ಮಾರ್ಗಬಿಂದುವಿನ ತನಕ ನಿಗದಿಪಡಿಸಬೇಕು. ಸಂಬಂಧಪಟ್ಟ ಗ್ರಾಮ ಪಂಚಾಯ್ತಿ, ಪಂಚಾಯತ್‌ರಾಜ್ ವಿಭಾಗವು ಬಹುಗ್ರಾಮ ಯೋಜನೆಯಿಂದ ನೀರು ಸ್ವೀಕರಿಸುವ ಮಾರ್ಗಬಿಂದುವಿನ ಸ್ಥಳದಲ್ಲಿ `ಬಲ್ಕ್ ವಾಟರ್ ಮೀಟರ್' ಅಳವಡಿಸಬೇಕು. ಆರಂಭದಲ್ಲಿ, ಗ್ರಾಮದ ಕನಿಷ್ಠ ಶೇ 30ರಷ್ಟು ಕುಟುಂಬಗಳು ನೀರು ಸಂಪರ್ಕ ಹೊಂದಿರಬೇಕು. ಈ ಸಂಖ್ಯಾಬಲ ಮುಂದಿನ 8 ವರ್ಷಗಳೊಳಗೆ ಶೇ 100ರಷ್ಟು ತಲುಪಬೇಕು. ಇದಕ್ಕೆ ಸಂಬಂಧಿಸಿದಂತೆ ಆಯಾ ಗ್ರಾಮ ಪಂಚಾಯ್ತಿ ಮುಚ್ಚಳಿಕೆ ಬರೆದುಕೊಡಬೇಕು.

* ಸಂಬಂಧಿಸಿದ ಗ್ರಾಮ ಪಂಚಾಯ್ತಿ ವಿದ್ಯುತ್ ವೆಚ್ಚ ಸೇರಿದಂತೆ, ಒಟ್ಟಾರೆ ಕಾರ್ಯಾಚರಣೆ ಹಾಗೂ ನಿರ್ವಹಣೆ ವೆಚ್ಚದ ಕನಿಷ್ಠ ಶೇ 25ರಷ್ಟನ್ನು ಮೊದಲ ವರ್ಷದಲ್ಲಿ ಕಡ್ಡಾಯವಾಗಿ ಭರಿಸಬೇಕು. ಮುಂದಿನ 8 ವರ್ಷದೊಳಗೆ ಶೇ 100ರಷ್ಟು ವೆಚ್ಚವನ್ನು ಗ್ರಾಮ ಪಂಚಾಯ್ತಿಯೇ ಭರಿಸಬೇಕು.

* ಚಾಲ್ತಿಯಲ್ಲಿರುವ ನಳ ನೀರು ಸರಬರಾಜು, ಕಿರು ನೀರು ಸರಬರಾಜು ಹಾಗೂ ಕೈಪಂಪು ಕೊಳವೆ ಬಾವಿಗಳಿಗೆ ಘಟಕವಾರು ವಾರ್ಷಿಕವಾಗಿ ಒದಗಿಸುತ್ತಿರುವ ಕಾರ್ಯಾಚರಣೆ, ನಿರ್ವಹಣೆ ಅನುದಾನವನ್ನು ಕ್ರಮವಾಗಿ ತಲಾ ರೂ 10 ಸಾವಿರ, ರೂ 5 ಸಾವಿರ ಹಾಗೂ ರೂ 1ಸಾವಿರಕ್ಕೆ ಪರಿಷ್ಕರಿಸಲಾಗಿದೆ. ಈ ದರವನ್ನು ಪ್ರತಿ 3 ವರ್ಷಕ್ಕೊಮ್ಮೆ ಪರಿಷ್ಕರಿಸಬೇಕು.

* ಸಾರ್ವಜನಿಕ ಗ್ರಾಮೀಣ ನೀರು ಸರಬರಾಜು ಯೋಜನೆಗಳಿಗೆ ಹಾಲಿ ವಿಧಿಸುತ್ತಿರುವ ವಿದ್ಯುತ್ ಶುಲ್ಕದಲ್ಲಿ ಶೇ 25 ರಿಯಾಯಿತಿಯನ್ನು ಆಯಾ `ಎಸ್ಕಾಂ'ಗಳು ಗ್ರಾಮ ಪಂಚಾಯ್ತಿಗಳಿಗೆ ನೀಡಬೇಕು. ಈ ಹಣವನ್ನು ಸರ್ಕಾರ ಮರುಪಾವತಿಸಬೇಕು.

* ಎಲ್ಲಾ ಸ್ಥಗಿತ ಹಾಗೂ ನಿರುಪಯುಕ್ತ ನೀರಿನ ಯೋಜನೆಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT