ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಯುವನೀತಿಗೆ ಜೆಡಿಎಸ್ ವಿರೋಧ

Last Updated 22 ಡಿಸೆಂಬರ್ 2012, 9:53 IST
ಅಕ್ಷರ ಗಾತ್ರ

ತುಮಕೂರು: ಗ್ರಾಮೀಣ ಯುವ ಜನರನ್ನು ಕಡೆಗಣಿಸಿ ಬೆಂಗಳೂರು ಐಟಿ-ಬಿಟಿ ಯುವಕರಿಗೆ ಸಹಕಾರಿ ಆಗುವಂತಹ ಯುವನೀತಿ ಕರಡು ಮಸೂದೆಯನ್ನು ಬಿಜೆಪಿ ಸರ್ಕಾರ ಸಿದ್ಧಪಡಿಸಿದೆ. ಇದು ಗ್ರಾಮೀಣ ಯುವ ಜನರಿಗೆ ದ್ರೋಹ ಬಗೆದಂತಾಗಿದೆ ಎಂದು ರಾಜ್ಯ ಯುವ ಜೆಡಿಎಸ್ ಕಾರ್ಯಾಧ್ಯಕ್ಷ ಬಿ.ಎಚ್.ಚಂದ್ರಶೇಖರ್ ಶುಕ್ರವಾರ ಆರೋಪಿಸಿದರು.

ಯುವನೀತಿ ಕರಡು ಮಸೂದೆಯನ್ನು ಕೇವಲ ಎರಡು ತಿಂಗಳ ಸಮಯದಲ್ಲಿ ರೂ. 3 ಕೋಟಿ ವೆಚ್ಚಮಾಡಿ ತರಾತುರಿಯಲ್ಲಿ ತಯಾರಿಸಿ ಅಂಗೀಕರಿಸಲು ಸರ್ಕಾರ ಮುಂದಾಗಿದೆ. ಈ ಧೋರಣೆಯ ಹಿಂದೆ ಲಾಭ- ಲೆಕ್ಕಚಾರ ಅಡಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಆರ್‌ಎಸ್‌ಎಸ್, ಸಂಘ ಪರಿವಾರದ ಮುಖವಾಣಿ ಹೊಲುವ ಯುವನೀತಿ ಕರಡು ಮಸೂದೆಯು ಗ್ರಾಮೀಣ ಯುವಕರನ್ನು ನಿರ್ಲಕ್ಷಿಸಿದೆ. ಕರಡು ಮಸೂದೆ ಸಿದ್ಧಪಡಿಸುವಾಗ ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟಗಳಲ್ಲಿ ಯುವ ಜನತೆಯನ್ನು ಖುದ್ದು ಭೇಟಿ ಮಾಡಿ, ಸಂವಾದ ನಡೆಸದೆ, ಅಭಿಪ್ರಾಯ ಸಂಗ್ರಹಿಸದೆ ಸಿದ್ಧಪಡಿಸಲಾಗಿದೆ. ಹಾಗಾಗಿ ಮಸೂದೆ ಅಂಗೀಕಾರಕ್ಕೆ ರಾಜ್ಯಪಾಲರು ಸಮ್ಮತಿಸಬಾರದು ಎಂದು ಒತ್ತಾಯಿಸಿದರು.

ಸಂಘ ಪರಿವಾರದ ನಾಯಕರನ್ನೂ ಒಳಗೊಂಡಂತೆ ಭ್ರಷ್ಟಚಾರದಲ್ಲಿ ಸಿಲುಕಿರುವ ಸಚಿವರು ಯುವನೀತಿ ಕರಡು ಮಸೂದೆ ಸಿದ್ಧಪಡಿಸಲು ಮುಂದಾಗಿದ್ದಾರೆ. ಅಲ್ಪಮತಕ್ಕೆ ಕುಸಿದಿರುವ ಈ ಸರ್ಕಾರದ ಅವಧಿಯಲ್ಲಿ ಮಸೂದೆ ಮಂಡಿಸಲು ಅವಕಾಶ ಮಾಡಿಕೊಡುವುದಿಲ್ಲ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಪ್ರತಿ ಜಿಲ್ಲೆ, ತಾಲ್ಲೂಕಿಗೆ ಭೇಟಿ ನೀಡಲಾಗುತ್ತದೆ.

ಯುವಕರನ್ನು ಒಗ್ಗೂಡಿಸಿ, ಸಂವಾದ ನಡೆಸಿ, ಅಭಿಪ್ರಾಯಗಳನ್ನು ಕ್ರೋಡೀಕರಿಸಲಾಗುವುದು ಎಂದು ವಿವರಿಸಿದರು.
ಬಿಜೆಪಿ ಸರ್ಕಾರ ಅಧಿಕಾರ ಹಿಡಿದ ದಿನಗಳಿಂದಲೂ ಗ್ರಾಮೀಣ ಯುವಕರನ್ನು ಎಲ್ಲ ಬಗೆಯಲ್ಲೂ ಕಡೆಗಣಿಸುತ್ತಾ ಬಂದಿದೆ. ರಾಜ್ಯದಲ್ಲಿ 32 ಸಾವಿರ ಯುವಕ ಸಂಘಗಳಿದ್ದು, ಸಂಘಗಳ ಪುನಶ್ಚೇತನಕ್ಕೆ ಯಾವುದೇ ನೂತನ ಕಾರ್ಯಕ್ರಮ ಕೈಗೊಂಡಿಲ್ಲ. ಯುವಕ ಸಂಘ ನೋಂದಾಯಿಸಲು ರೂ. 50 ಇದ್ದ ಶುಲ್ಕವನ್ನು ರೂ. 2,500ಕ್ಕೆ ಏರಿಕೆ ಮಾಡಲಾಗಿದೆ. ಇದು ಗ್ರಾಮೀಣ ಭಾಗದ ಯುವಕರಿಗೆ ಹೊರೆಯಾಗಿದೆ ಎಂದು ದೂರಿದರು.

ಜನವರಿ ಕೊನೆ ವಾರದಲ್ಲಿ ದಾವಣಗೆರೆಯಲ್ಲಿ 7ರಿಂದ 8 ಲಕ್ಷ ಯುವಕರನ್ನು ಸೇರಿಸಿ ಬೃಹತ್ ಯುವ ಚೇತನ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಕಳೆದ 5 ವರ್ಷದಿಂದ ಉದ್ಯೋಗ ಅವಕಾಶಗಳು ಸಿಗದೆ ನಿರ್ಲಕ್ಷ್ಯಕ್ಕೆ ಒಳಗಾದವರ ಬೇಡಿಕೆ ಕುರಿತು ಸಮಾವೇಶದಲ್ಲಿ ನಿರ್ಧರಿಸಲಾಗುತ್ತದೆ. ರಾಜಕೀಯ ಪ್ರವೇಶಿಸಿ 57 ವರ್ಷಗಳಿಗೆ ಕಾಲಿಟ್ಟಿರುವ ಸಮಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಗುವುದು ಎಂದರು.

ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್, ಮುಖಂಡರಾದ ಟಿ.ಎಚ್.ಕೃಷ್ಣಪ್ಪ, ಚಂದ್ರು, ರೇವಣ್ಣ, ಹನುಮಂತಪ್ಪ, ರಾಥೋಡ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT