ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಗಿಡಗಳ ನಡುವೆ ನಡೆದಿದೆ ಕಲಿಕೆ

Last Updated 23 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ಕೋಲಾರ: ಒಂದರಿಂದ ಐದನೇ ತರಗತಿವರೆಗಿನ ಮಕ್ಕಳಿರುವ ಈ ಪುಟ್ಟ ಶಾಲೆಯ ಆವರಣದಲ್ಲಿ ನೂರಾರು ಗಿಡಗಳಿವೆ. ಬೃಹತ್ ಆಲದ ಮರ, ಹುಣಿಸೆ ಮರಗಳಿವೆ. ಹಕ್ಕಿ ಚಿಲಿಪಿಲಿ ಇದೆ. ಇಲ್ಲಿ ಬಿಸಿಲು ಕಡಿಮೆ, ನೆರಳು ಹೆಚ್ಚು. ಸ್ವಚ್ಛತೆಯಲ್ಲೂ ಮೇಲುಗೈ ಸಾಧಿಸಿ, ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಲಾಗಿದೆ. ಈ ಶಾಲೆಗೆ ಬರುವುದು ಮಕ್ಕಳಿಗೆ ಖುಷಿಯ ವಿಷಯ. ಹಳ್ಳಿಯ ಮಂದಿಗೂ ಇದು ಅಭಿಮಾನದ ಶಾಲೆ.

ಇದು ತಾಲ್ಲೂಕಿನ ಬೆಳಗಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಹಳ್ಳಿಯ ಮುಂಭಾಗದಲ್ಲೆ ಇರುವ, ಹುತ್ತೂರು ಕ್ಲಸ್ಟರ್‌ಗೆ ಸೇರಿರುವ ಈ ಶಾಲೆಯೊಳಗೆ ಹೋದರೆ ಉದ್ಯಾನ ಪ್ರವೇಶಿಸಿದ ಅನುಭವವಾಗುತ್ತದೆ.

ನೀರಿನ ಉಳಿತಾಯದ ಕುರಿತು ಅಳವಡಿಸಿದ ಫಲಕದ ಸಂದೇಶಗಳನ್ನು ಮಕ್ಕಳು ದಿನವೂ ಓದುತ್ತಾರೆ. ಮೂರು ಕೊಠಡಿಗಳಲ್ಲಿ ತರಗತಿ ನಡೆಯುತ್ತವೆ. ಇನ್ನೊಂದರಲ್ಲಿ ಅಡುಗೆ ಸಿದ್ಧ ಪಡಿಸಲಾಗುತ್ತದೆ. ಪ್ರತ್ಯೇಕ ಶೌಚಾಲವಿದೆ. ಎಲ್ಲ ಕೊಠಡಿಗಳು ಸ್ವಚ್ಛತೆಯಿಂದ ಗಮನ ಸೆಳೆಯುವುದು ವಿಶೇಷ.

ಕಾಂಪೌಂಡಿನ ಒಳಗೆ ಪುಟ್ಟದಾದ ಜಾಗದಲ್ಲೆ ಇತ್ತೀಚೆಗೆ ಹೂವಿನ ಗಿಡಗಳನ್ನು ನೆಡಲಾಗಿದೆ. ಅದರಾಚೆಗೆ ಸಿಲ್ವರ್ ಓಕ್ ಮರಗಳು ಆಕಾಶ ದೆತ್ತರ ಬೆಳೆದಿವೆ. ಅವುಗಳ ಬುಡದಲ್ಲೆ ಅಲ್ಲಲ್ಲಿ ಈಗ ಅಲಂಕಾರಿಕ ಗಿಡಗಳಿಗೂ ಮಕ್ಕಳು ನೀರೆರೆಯುತ್ತಿದ್ದಾರೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮೌಲ್ಯಮಾಪನಕ್ಕೆ ಒಳಪಟ್ಟು `ಪರಿಸರ ಮಿತ್ರಶಾಲೆ~ ಪ್ರಶಸ್ತಿ ಪಡೆದಿರುವುದು ಶಾಲೆ ಹೆಗ್ಗಳಿಕೆ.

ಶಾಲೆಯಲ್ಲಿ 18 ವರ್ಷದಿಂದ ಮುಖ್ಯಶಿಕ್ಷಕ ರಾಗಿರುವ ಎಚ್.ಆರ್.ಕೃಷ್ಣಮೂರ್ತಿ ಅವರ ವರ್ಗಾವಣೆಯನ್ನು ಈ ಹಳ್ಳಿಯ ಜನ ಎರಡು ಬಾರಿ ವಿರೋಧಿಸಿ, ಇಲ್ಲೇ ಉಳಿಸಿಕೊಂಡಿದ್ದಾರೆ. ಅವರ ಶೈಕ್ಷಣಿಕ ಬದ್ಧತೆ ಹಳ್ಳಿಯವರನ್ನು ಮೆಚ್ಚಿ ಸಿದೆ. 2001- 02ರಲ್ಲಿ ಅವರಿಗೆ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ದೊರೆತಿತ್ತು. ಶೈಕ್ಷಣಿಕ ಸಂದರ್ಭದಲ್ಲಿ ಶಾಲೆ ಮತ್ತು ಕೃಷ್ಣಮೂರ್ತಿ ಅವರನ್ನು ಬೇರ್ಪಡಿಸಿ ನೋಡುವುದೂ ಕಷ್ಟ.

ಕೆರೆಯ ಅಂಗಳದಲ್ಲಿ ನಿರ್ಮಾಣವಾಗಿದ್ದ ಈ ಶಾಲೆಗೆ 18 ವರ್ಷದ ಹಿಂದೆ ಕಾಂಪೌಂಡ್ ಇರಲಿಲ್ಲ. ಸುತ್ತಮುತ್ತ ದೊಡ್ಡ ಹಳ್ಳಗಳಿದ್ದವು. ಆಲ ಮತ್ತು ಹುಣಿಸೆ ಮರಗಳಿದ್ದವಷ್ಟೆ. ಕ್ರಮೇಣ ಗಿಡಗಳನ್ನು ಖಾಸಗಿ ನರ್ಸರಿಯಿಂದ, ಅರಣ್ಯ ಇಲಾಖೆಯಿಂದ ತಂದು ನೆಡತೊಡಗಿದರು. ಮಕ್ಕಳು- ಸಹಶಿಕ್ಷಕರ ನೆರವಿನಿಂದ ನೀರೆರೆದ ಪರಿಣಾಮ ಈಗ ಶಾಲೆಯ ಅಂಗಳದಲ್ಲಿ ನೆರಳು ದಟ್ಟವಾಗಿದೆ.
 
ಯಾವುದೇ ಕಾರ್ಯಕ್ರಮ ಮಾಡಿದರೂ ಪೆಂಡಾಲ್‌ಬೇಕಾಗಿಲ್ಲ. ತಂಪಾದ ಗಾಳಿ ಹಿತಾನುಭವದ ವಾತಾವರಣ ಅಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಆವರಿಸಿರತ್ತದೆ. ಶಾಲೆಗೆಂದೇ ಹಳ್ಳಿಯ ಮಂದಿ ಪ್ರತ್ಯೇಕ ನಲ್ಲಿ  ಅಳವಡಿಸಿದ್ದಾರೆ.

ಮುಖ್ಯಶಿಕ್ಷಕರಲ್ಲಿ ಈ ಪರಿಯ ಪರಿಸರ ಪ್ರೇಮ ಮೂಡಲು ಕನ್ನಡದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಪುಸ್ತಕಗಳೇ ಪ್ರಮುಖ ಪ್ರೇರಣೆ. ಸಹಪಠ್ಯ ಚಟುವಟಿಕೆಗಳಾದ ಗಾಯನ ಮತ್ತು ಕಲಿಕೋಪಕರಣಗಳ ತಯಾರಿಕೆಯಲ್ಲೂ ಅವರು ಜಿಲ್ಲಾ ಮಟ್ಟದಲ್ಲೂ ಗಮನ ಸೆಳೆದಿದ್ದಾರೆ. ಅವರ ಪ್ರಯತ್ನದ ಫಲವಾಗಿ ಶಾಲೆಗೂ ಉತ್ತಮ ಹೆಸರು ದೊರೆತಿದೆ. ಗ್ರಂಥಾಲಯವೂ ವಿಶೇಷ ಗಮನ ಸೆಳೆಯುತ್ತದೆ.

ಒಂದೂವರೆ ದಶಕದ ಅವಧಿಯಲ್ಲಿ ಗುಣ ಮಟ್ಟದ ಕಾರಣಕ್ಕೆ ಇಡೀ ಜಿಲ್ಲೆಯಲ್ಲಿ ಗಮನ ಸೆಳೆಯುತ್ತಲೇ ಇದೆ. 1997- 98ನೇ ಸಾಲಿನಲ್ಲೆ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ ಅಡಿಯಲ್ಲಿ `ಉತ್ತಮ ಶಾಲೆ~ ಬಹುಮಾನ ಪಡೆದಿತ್ತು.

ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಸಂಸ್ಥೆ 2005- 06ರಲ್ಲಿ ನಡೆಸಿದ ಮೌಲ್ಯಮಾಪನದಲ್ಲಿ ಈ ಶಾಲೆ ತಾಲ್ಲೂಕು ಮಟ್ಟದ ಪ್ರಥಮ ಬಹುಮಾನ ಗಳಿಸಿತ್ತು, ಕಲಿಕೋಪಕರಣಗಳ ತಾಲ್ಲೂಕು ಮಟ್ಟದ ಮೇಳದಲ್ಲೂ 2009- 10ರಲ್ಲಿ ಪ್ರಥಮ ಸ್ಥಾನ ದೊರೆತಿದೆ. ಕ್ಲಸ್ಟರ್ ಮಟ್ಟದಲ್ಲೂ ಪ್ರಥಮ ಸ್ಥಾನ ದೊರೆತಿತ್ತು. ಅದೇ ಅವಧಿಯಲ್ಲಿ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯೂ ದೊರೆತಿದೆ.

ಈ ಶಾಲೆಯ 1ನೇ ತರಗತಿಯಲ್ಲಿ 6, 2ನೇ ತರಗತಿಯಲ್ಲಿ 11, 3ನೇ ತರಗತಿಯಲ್ಲಿ 7, 4ನೇ ತರಗತಿಯಲ್ಲಿ 5 ಮತ್ತು 5ನೇ ತರಗತಿಯಲ್ಲಿ 8 ಸೇರಿ ಒಟ್ಟು 37 ಮಕ್ಕಳಿದ್ದಾರೆ. `ಮಕ್ಕಳು ಮತ್ತು ಪರಿಸರವೇ ದೇವರು. ಇಲಾಖೆ, ಹಳ್ಳಿಗರ ನೆರವು- ಸಹಶಿಕ್ಷಕರ ಸಹಕಾರವಿಲ್ಲದಿದ್ದರೆ ಇಷ್ಟು ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ~ ಎಂಬುದು ಕೃಷ್ಣಮೂರ್ತಿ ನುಡಿ. ತಮಗೆ ದೊರೆಯು ಬಹುಮಾನದ ಹಣವನ್ನು ಅವರು ಅಂಗವಿಕಲ ಮಕ್ಕಳಿಗೆ ವಿನಿಯೋಗಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT