ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು `ಜನ್ಮ'ಕೂ...

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಡೆಗೂ ತಮ್ಮ ಚೊಚ್ಚಿಲ ಸಿನಿಮಾ ಕೂಸಿಗೆ `ಜನ್ಮ' ನೀಡಲು ಸಿದ್ಧವಾಗಿದ್ದಾರೆ ನಿರ್ದೇಶಕ ಚಕ್ರವರ್ತಿ. ಸಿನಿಮಾ ಗರ್ಭಕಟ್ಟಲು ಬರೋಬ್ಬರಿ ಐದು ವರ್ಷ ತೆಗೆದುಕೊಂಡಿತ್ತು. ಚಿತ್ರ ಬಿಡುಗಡೆಯಾಗುವುದೆ ಎಂಬ ಅನುಮಾನಗಳನ್ನೂ ಹರಿಬಿಟ್ಟಿತ್ತು. ಆದರೆ ಈಗ ಆ ಅಡೆತಡೆಗಳಿಲ್ಲ. ಇದೇ ವಾರ `ಜನ್ಮ' ಬಿಡುಗಡೆಗೆ ಸಿದ್ಧವಾಗಿದೆ.

ಇದನ್ನು ಹೇಳಿಕೊಳ್ಳಲೆಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹುರುಪಿನಿಂದ ಮಾತಿಗಿಳಿದರು ಚಕ್ರವರ್ತಿ. ವಿಳಂಬಕ್ಕೆ ಕಾರಣ ನೀಡಲು ಅವರಿಗೆ ಉತ್ಸಾಹ. ಮೂಲತಃ ಚಿತ್ರದ ಕತೆ ತಮಿಳುನಾಡು ಹಾಗೂ ನಮ್ಮ ನಾಡಿನ ಸುತ್ತ ಸುತ್ತುತ್ತದೆ. ಚೆನ್ನೈನ ಭೂಗತ ಜಗತ್ತನ್ನು ಇಟ್ಟುಕೊಂಡು ಹೆಣೆದ ಪ್ರೇಮಕತೆ ಇದು.

ತಮಿಳುನಾಡಿನಲ್ಲಿ ಚಿತ್ರೀಕರಣಕ್ಕೆ ಬೇಗನೆ ದೊರೆಯದ ಅನುಮತಿ, ತಾಯಿ ಪಾತ್ರಕ್ಕೆ ನಡೆದ ದೀರ್ಘಕಾಲದ ಹುಡುಕಾಟ, ಗಾಜನೂರು ತಮಿಳು ಗಡಿಯಾದ್ದರಿಂದ ಎದುರಾದ ಆತಂಕಗಳು, ರಾಜಕೀಯ ವ್ಯಕ್ತಿಗಳನ್ನು ಚಿತ್ರಿಸಿದ್ದರಿಂದ ಸೆನ್ಸಾರ್ ಎತ್ತಿದ ಆಕ್ಷೇಪ, ಹಟ ಹಿಡಿದು ಮಾಡಿದ ಕ್ಲೈಮ್ಯಾಕ್ಸ್ ಚಿತ್ರೀಕರಣ, ರಜನೀಕಾಂತ್ ಮನೆ ಚಿತ್ರೀಕರಣಕ್ಕೆ ನಡೆದ ಯತ್ನ ಇತ್ಯಾದಿ ಸಂಗತಿಗಳು ಅವರ ಮಾತಿನಲ್ಲಿ ಬಂದು ಹೋದವು. ವೈಯಕ್ತಿಕ ಬದುಕಿನ ಏರುಪೇರುಗಳೂ ವಿಳಂಬಕ್ಕೆ ಮುನ್ನುಡಿ ಬರೆದವಂತೆ. 

`ಕೆಂಪ' ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಬಾಲರಾಜ್‌ರ ಪುತ್ರ ಸಂತೋಷ್ `ಜನ್ಮ'ದ ಪ್ರಧಾನ ಪಾತ್ರ ಪೋಷಿಸುತ್ತಿದ್ದಾರೆ. ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗುವ ಕನಸಿನಲ್ಲಿರುವ ಮೀನಾಕ್ಷಿ ನಾಯಕಿ. ತಾಯಿಯ ಪಾತ್ರದಲ್ಲಿ ಹಾಲುಂಡ ತವರು ಖ್ಯಾತಿಯ ಸಿತಾರಾ ಇದ್ದಾರೆ. ಬುಲೆಟ್ ಪ್ರಕಾಶ್, ಕಲೈವಾಣಿ ವಿಜಯನ್ ಮತ್ತಿತರರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಇಬ್ಬರು ಛಾಯಾಗ್ರಾಹಕರು ಇರುವುದರಿಂದ ನೆರಳು ಬೆಳಕಿನಾಟದಲ್ಲಿ ಕೊಂಚ ಏರುಪೇರಾಗಿತ್ತು. ತಂತ್ರಜ್ಞಾನ ಬಳಸಿ ಅಂಥ ದೃಶ್ಯಗಳನ್ನು ಹದಕ್ಕೆ ತರಲಾಗಿದೆ.

ಚಿತ್ರಕ್ಕೆ ಸಂಗೀತ ನೀಡಿರುವುದು ಅನೂಪ್ ಸೀಳಿನ್. ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ನಟ ಸಂತೋಷ್ ಅವರಿಗೆ ಹೊಸ ಭರವಸೆ ಮೂಡಿಸಿದೆ. ನಿರ್ದೇಶಕರ ಕಥೆಗಾರಿಕೆಯನ್ನು ಶ್ಲಾಘಿಸಿದ ಅವರು ಎರಡನೇ ಚಿತ್ರಕ್ಕೂ ಪ್ರೇಕ್ಷಕರ ಆಶೀರ್ವಾದ ಬೇಕೆಂದರು. ತುಂಬಾ ಕಷ್ಟಪಟ್ಟು ಚಿತ್ರ ನಿರ್ದೇಶಿಸಿದ ಚಕ್ರವರ್ತಿ ಅವರನ್ನು ನಿರ್ಮಾಪಕ ಆನೇಕಲ್ ಬಾಲರಾಜ್ ಅಭಿನಂದಿಸಿದರು.

ಶೇ. 90ರಷ್ಟು ಚಿತ್ರೀಕರಣ ಚೆನ್ನೈನಲ್ಲಿ ನಡೆದಿದ್ದು ಚಿತ್ರದಲ್ಲಿ ಕೊಡಚಾದ್ರಿ, ಆಗುಂಬೆ ಮತ್ತಿತರ ತಾಣಗಳ ತಂಪೂ ಇದೆ. ಚಿತ್ರವನ್ನು ತಮಿಳಿಗೂ `ತರ್ಜುಮೆ' ಮಾಡುವ ಉತ್ಸಾಹದಲ್ಲಿ ನಿರ್ದೇಶಕರು ಇದ್ದಾರೆ.

ರಾಜ್ ಹುಟ್ಟು ಹಬ್ಬದಂದು `ಜನ್ಮ' ಪಡೆದ ಚಿತ್ರ ಅವರ ಹುಟ್ಟುಹಬ್ಬದ ಆಸುಪಾಸಿನಲ್ಲೇ ಬಿಡುಗಡೆಯಾಗುತ್ತಿರುವುದು ವಿಶೇಷ. ಅವರ ಹುಟ್ಟಿದ ದಿನ ಹಾಗೂ ಅಸ್ತಮಿಸಿದ ದಿನವನ್ನು ಚಿತ್ರದಲ್ಲಿ ಸೃಜನಶೀಲವಾಗಿ ತರಲಾಗಿದೆ. ಅದೇನೆಂದು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT