ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ಹಾಸಿಗೆ ಆಸ್ಪತ್ರೆ: ಸಿಗುತ್ತಿಲ್ಲ ಚಿಕಿತ್ಸೆ

Last Updated 8 ಫೆಬ್ರುವರಿ 2013, 6:01 IST
ಅಕ್ಷರ ಗಾತ್ರ

ದೇವದುರ್ಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯಗೆ ತಕ್ಕಂತೆ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಬಡ ರೋಗಿಗಳಿಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳು ಸಿಗದೆ ಬೆಳಗಾದರೆ ರೋಗಿಗಳು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಆಸ್ಪತ್ರೆಯನ್ನು ಜರ್ಮನ್ ನೆರವಿನೊಂದಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಮೇಲ್ದರ್ಜೆಗೆ ಏರಿಸಿ 100 ಹಾಸಿಗೆಯ ಆಸ್ಪತ್ರೆಯನ್ನಾಗಿ ಮಾಡಿದರೂ ಅದಕ್ಕೆ ತಕ್ಕಂತೆ ವೈದ್ಯರು ಮತ್ತು ಸಿಬ್ಬಂದಿ ಇಲ್ಲ. ಈ ಸಮಸ್ಯೆ ಹಲವು ದಶಕಗಳಿಂದ ಇದ್ದರೂ ಬಡಜನರಿಗೆ ಸಿಗಬೇಕಾದ ಸೌಲಭ್ಯಗಳು ಮರೀಚಿಕೆಯಾಗಿವೆ.

ಆಸ್ಪತ್ರೆಯ ಇತಿಹಾಸವನ್ನು ನೋಡಿದರೆ ಇದುವರಿಗೂ ಅಗತ್ಯವಾಗಿರುವ 8 ಹಿರಿಯ ತಜ್ಞರ ಪೈಕಿ 6 ಹುದ್ದೆಗಳು ಖಾಲಿ ಇವೆ. ದಂತ ವೈದ್ಯರು 01, ಸ್ಟಾಫ್ ನರ್ಸ್‌ಗಳು 04, ಮಾತ್ರೆ ವಿತರಕರು 02, ಸೇರಿದಂತೆ ಒಟ್ಟು 91ವಿವಿಧ ಹುದ್ದೆಗಳ ಪೈಕಿ ಕೇವಲ 64 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಮುಖ್ಯವಾಗಿ ವೈದ್ಯರು ಇಲ್ಲದೆ ಆಸ್ಪತ್ರೆ ನಡೆಯುತ್ತಿರುವುದು ರೋಗಿಗಳ ಪಾಡಿಗೆ ನರಕವಾಗಿದೆ.

ಇದೇ ಆಸ್ಪತ್ರೆಯನ್ನು ನಂಬಿ ಹೆರಿಗೆ ಮತ್ತು ಇತರ ಮಹಿಳಾ ಆರೋಗ್ಯ ಸಮಸ್ಯೆಗಳನ್ನು ಹೊತ್ತುಕೊಂಡು ರಾತ್ರೋ ರಾತ್ರಿ ಆಸ್ಪತ್ರೆಗೆ ಬರುವ ಎಷ್ಟೂ ಜನ ಮಹಿಳೆಯರು ಮಹಿಳಾ ವೈದ್ಯರು ಇಲ್ಲದ ಕಾರಣ ದೂರದ ರಾಯಚೂರಿಗೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ತುರ್ತ ಸಮಯದಲ್ಲಿ ಎಷ್ಟೂ ಮಹಿಳೆಯರು ದಾರಿ ಮಧ್ಯದಲ್ಲಿಯೇ ತಮ್ಮ ಪ್ರಾಣ ಕಳೆದುಕೊಂಡ ಉದಾಹರಣೆ ಇವೆ.

ಅಗತ್ಯ ಇರುವ ವೈದ್ಯರು ಮತ್ತು ಸಿಬ್ಬಂದಿ ಇಲ್ಲದ ಕಾರಣ ಸಂಜೆಯಾದರೆ ಸಾಕು ಆಸ್ಪತ್ರೆಯಲ್ಲಿ ಕೇಳವವರು ಇಲ್ಲ. ಈ ಎಲ್ಲ ಕೊರತೆಯಿಂದ ಆಸ್ಪತ್ರೆಗೆ ಬರುವ ರೋಗಿಗಳು ಇನ್ನಿಲ್ಲದ ತೊಂದರೆ ಎದುರಿಸಬೇಕಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನು ನಂಬಿ ಕುಳಿತಿರುವ ಸಾವಿರಾರು ಬಡ ಜನರಿಗೆ ಪ್ರಾಣ ಉಳಿಸಬೇಕಾದರು ಕ್ರಮಕ್ಕೆ ಮುಂದಾಗಿಲ್ಲ.

ವೈದ್ಯರು ಮತ್ತು ಸಿಬ್ಬಂದಿ ಇಲ್ಲದ ಕಾರಣ ನೆಲ ಮಹಡಿಯ ಕೆಲವು ಕೋಣೆಗಳು ಈ ಮೊದಲೇ ಬಿಕೋ ಎನ್ನುತ್ತಿರುವಾಗ ಇನ್ನೂ ಮೊದಲ ಮಹಡಿ ಕೋಣೆಗಳನ್ನು ಕೇಳವರು ಇಲ್ಲ. ಈ ಹಿಂದೆ ಇದ್ದ 50 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯನ್ನು ಜರ್ಮನ್ ನೆರವಿನೊಂದಿಗೆ 100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿ ಕೋಟಿಗಟ್ಟಲೇ ರೂಪಾಯಿ ಖರ್ಚು ಮಾಡಿ ಮೊದಲ ಮಹಡಿಯಲ್ಲಿನ ಹತ್ತಾರೂ ಸಂಖ್ಯೆಯಲ್ಲಿ ಇರುವ ಗುಣಮಟ್ಟದ ಕೋಣೆಗಳನ್ನು ನಿರ್ಮಿಸಲಾಗಿದ್ದರೂ ಈಗ ಬಳಕೆ ಇಲ್ಲದೆ ಅನಾಥವಾಗಿ ಬಿದ್ದಿವೆ.

ಕೆಲವು ವೈದ್ಯರು ಇಲ್ಲಿಗೆ ಬಂದ ದಿನವೇ ಪ್ರಭಾವಿ ವ್ಯಕ್ತಿಗಳ ಕೃಪೆಯಿಂದ ವರ್ಗಾವಣೆಯಾಗಿ ಹೋದರೂ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಜನರ ಅನುಮಾನಕ್ಕೆ ಕಾರಣವಾಗಿದೆ.
ಇಷ್ಟೇಲ್ಲ ಅವ್ಯವಸ್ಥೆಗಳ ಅಗರವಾಗಿರುವ ಸಾರ್ವಜನಿಕ ಅಸ್ಪತ್ರೆಗೆ ಮುಕ್ತಿ ಎಂದು ಎಂಬು ಸಾರ್ವಜನಿಕರ ಪ್ರಶ್ನೆಯಾಗಿದೆ.

ಬೀಗ: ತಾಲ್ಲೂಕಿನ 28 ಗ್ರಾಮಗಳ ವ್ಯಾಪ್ತಿಯಲ್ಲಿನ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಒಂದರಂಥೆ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಸುಮಾರು 35 ಗ್ರಾಮಗಳಲ್ಲಿ ಕಿರಿಯ ಆರೋಗ್ಯ ಸಹಾಯಕಿರಿಗಾಗಿ ಉಪಕೇಂದ್ರಗಳನ್ನು ನಿರ್ಮಿಸಲಾಗಿದ್ದರೂ ಬಹುತೇಕ ಉಪಕೇಂದ್ರಗಳು ವರ್ಷಗಳೇ ಕಳೆದರೂ ಬೀಗ ತೆಗೆಯವರು ಇಲ್ಲದಂಥ ಪರಿಸ್ಥಿತಿ ಬಂದಿದೆ. ಆರೋಗ್ಯ ಇಲಾಖೆ ರೂಪಿಸುವ ಅನೇಕ ಯೋಜನೆಗಳು ಸಂಬಂಧಿಸಿದವರ ನಿರ್ಲಕ್ಷ್ಯದಿಂದಾಗಿ ಸರಿಯಾಗಿ ಅನುಷ್ಠಾನ ಇಲ್ಲದಿರುವುದು ಎದ್ದುಕಾಣುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT