ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರೊಂದು ಶಿಕ್ಷಕರ ವರ್ಗಾವಣೆ ರದ್ದು

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ವರ್ಷದಿಂದ ಜಾರಿಗೆ ತಂದ `ಪಾರದರ್ಶಕ ವರ್ಗಾವಣೆ ನೀತಿ~ಯಡಿ ರಾಜ್ಯದ ವಿವಿಧ ಭಾಗಗಳಿಗೆ ವರ್ಗಾವಣೆಯಾದ ಪ್ರಾಥಮಿಕ ಶಾಲೆಗಳ 101 ಶಿಕ್ಷಕರು, ಇಲಾಖೆಯ ಅಧಿಕಾರಿಗಳ ತಪ್ಪಿನಿಂದಾಗಿ ತಮ್ಮ ಸ್ವಸ್ಥಾನಕ್ಕೆ ಮರಳುವ ಸ್ಥಿತಿ ಎದುರಾಗಿದೆ.

ಜೂನ್ ತಿಂಗಳಲ್ಲಿ ರಾಜ್ಯದ ಬೆಂಗಳೂರು, ಮೈಸೂರು, ಧಾರವಾಡ ಮತ್ತು ಗುಲ್ಬರ್ಗ ಶೈಕ್ಷಣಿಕ ವಲಯಗಳ ಸಾವಿರಾರು ಶಿಕ್ಷಕರು ತಮ್ಮ ಸ್ವಂತ ಊರುಗಳಿಗೆ ಅಥವಾ ಸ್ವಂತ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವ ಉದ್ದೇಶದಿಂದ ಅರ್ಜಿ ಸಲ್ಲಿಸಿದ್ದರು.

ಆದರೆ, ಇಲಾಖೆಯು ಒಟ್ಟು ಶಿಕ್ಷಕರಲ್ಲಿ ಶೇ 1ರಷ್ಟು ಶಿಕ್ಷಕರಿಗೆ ಮಾತ್ರ ವರ್ಗಾವಣೆಗೆ ಅನುಮೋದನೆ ನೀಡಿತ್ತು. ಈ ಆಧಾರದಲ್ಲಿಯೇ ವರ್ಗಾವಣೆ ಮಾಡಿಸಿಕೊಂಡು ಇದೀಗ ನೂತನ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 101 ಶಿಕ್ಷಕರು ಮರಳಿ ತಮ್ಮ ಮೂಲಸ್ಥಾನಗಳಿಗೆ ತೆರಳುವಂತೆ ಗುಲ್ಬರ್ಗ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತ ಸೈಯದ್ ಅಬ್ದುಲ್ ರಬ್ ಅವರು ಆ. 16ರಂದು ಆದೇಶ (ಸಿ3 (01) ಪ್ರಾಶಾಸಿ/ವರ್ಗ/31/2011-12/3143) ಹೊರಡಿಸಿದ್ದಾರೆ.

ವರ್ಗಾವಣೆಯಾಗಿ ನೂತನ ಶಾಲೆಗಳಿಗೆ ತೆರಳಿದ ಈ ಶಿಕ್ಷಕರು, ಎರಡೇ ತಿಂಗಳಲ್ಲಿ ಮತ್ತೆ ತಮ್ಮ ಮೂಲ ಶಾಲೆಗಳಿಗೆ ತೆರಳಬೇಕಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ. ಈಗ ಕೆಲಸ ಮಾಡುತ್ತಿರುವ ಶಾಲೆಗಳಿಗೆ ಹೋದರೆ ಬಿಡುಗಡೆ ಆದೇಶ ಪಡೆಯಬೇಕಾಗುತ್ತದೆ ಎಂದು ಹೆದರಿದ ಶಿಕ್ಷಕರು ಹಲವಾರು ದಿನಗಳಿಂದ ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದು, ಆದೇಶ ರದ್ದುಪಡಿಸುವಂತೆ ಕೋರಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳನ್ನು ಭೇಟಿಯಾಗುವ ಯತ್ನ ಆರಂಭಿಸಿದ್ದಾರೆ.

ಏನಿದು ಸಮಸ್ಯೆ?: ಇಲಾಖೆಯು ಈ ಬಾರಿ ಜಾರಿಗೆ ತಂದ ವರ್ಗಾವಣೆ ನೀತಿಯ ಪ್ರಕಾರ, ಮೂರು ವರ್ಷಕ್ಕಿಂತ ಅಧಿಕ ಅವಧಿಯವರೆಗೆ ಒಂದೆಡೆ ಸೇವೆ ಸಲ್ಲಿಸಿದ ಶಿಕ್ಷಕರ ವರ್ಗಾವಣೆಗೆ ಅರ್ಜಿ ಆಹ್ವಾನಿಸಲಾಗಿತ್ತು.

ಅದರಂತೆ ರಾಯಚೂರು ಜಿಲ್ಲೆಯ ವಿವಿಧ ಶಾಲೆಗಳ 127 ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅದರಲ್ಲಿ 26 ಮಂದಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಇಲಾಖೆಯು ಅವರನ್ನು ಕರ್ತವ್ಯದಿಂದ ಇತ್ತೀಚೆಗೆ ವಜಾ ಮಾಡಿತ್ತು. ಆದರೆ ಉಳಿದ 101 ಶಿಕ್ಷಕರ ವರ್ಗಾವಣೆಯು ಶೇ 1ರಷ್ಟು ಮೀರಿ ಆಗಿದೆ ಎಂಬುದು ನಂತರ ಇಲಾಖೆಯ ಅಧಿಕಾರಿಗಳಿಗೆ ಮನವರಿಕೆಯಾಯಿತು.

ಆದ್ದರಿಂದ ಮತ್ತೆ ಅವರನ್ನು ವಾಪಸ್ ತಮ್ಮ ತಮ್ಮ ಶಾಲೆಗಳಿಗೆ ತೆರಳುವಂತೆ ಸೂಚಿಸಿ ಆದೇಶ ಹೊರಡಿಸಲಾಯಿತು.ಈ ಬಗ್ಗೆ ಮೈಸೂರು, ಮಂಡ್ಯ, ಕೋಲಾರ, ಹಾಸನ ಮತ್ತಿತರ ಜಿಲ್ಲೆಗಳಿಗೆ ವರ್ಗಾವಣೆಯಾಗಿ ಬಂದಿರುವ ಶಿಕ್ಷಕರು, `ನಮ್ಮದಲ್ಲದ ತಪ್ಪಿಗೆ ಈ ಸಮಸ್ಯೆ ಅನುಭವಿಸಬೇಕಾಗಿದೆ. ಒಟ್ಟು ವರ್ಗಾವಣೆ ಪ್ರಮಾಣ ಶೇ 1ರಷ್ಟನ್ನು ಮೀರಿದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲವೇ~ ಎಂದು ಪ್ರಶ್ನಿಸುತ್ತಿದ್ದಾರೆ.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ತಮ್ಮ ಅಸಮಾಧಾನ ತೋಡಿಕೊಂಡ ಶಿಕ್ಷಕರೊಬ್ಬರು, `ಈಗಾಗಲೇ ನಮ್ಮನ್ನು ವರ್ಗಾವಣೆ ಮಾಡಿದ್ದರಿಂದ, ಆಯಾ ಶಾಲೆಗಳಿಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಮಕ್ಕಳನ್ನು ಇಲ್ಲಿಯ ಶಾಲೆಗಳಿಗೆ ದಾಖಲಿಸಲಾಗಿದೆ.
 
ಸಾವಿರಾರು ರೂಪಾಯಿ ಮುಂಗಡ ನೀಡಿ ಮನೆ ಬಾಡಿಗೆ ಪಡೆಯಲಾಗಿದೆ. ಈಗ ಮತ್ತೆ ಮೊದಲಿನ ಶಾಲೆಗಳಿಗೆ ಹೋಗಿ ಎಂದರೆ ಹೇಗೆ? ಕನಿಷ್ಠ ಈ ವರ್ಷವಾದರೂ ಇಲಾಖೆ ನಮ್ಮನ್ನು ಇಲ್ಲಿಯೇ ಮುಂದುವರೆಸಬೇಕು~ ಎಂದು ಒತ್ತಾಯಿಸಿದರು.

ಇನ್ನೊಬ್ಬ ಶಿಕ್ಷಕ ಮಾತನಾಡಿ, `ನಾನು ಪೊಲೀಸ್, ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ರಾಜೀನಾಮೆ ನೀಡಿ ಶಿಕ್ಷಕ ವೃತ್ತಿಗೆ ಬಂದಿದ್ದೇನೆ. ನಮ್ಮ ಊರಿಗೆ ಸಮೀಪದ ಶಾಲೆಗೆ ವರ್ಗಾವಣೆಯಾದ್ದರಿಂದ ನಮ್ಮ ಪೋಷಕರಿಗೆ ಸಂತಸವಾಗಿತ್ತು. ಈಗ ಮತ್ತೆ ವಾಪಸ್ ಹೋಗುವ ಬದಲು ರಾಜೀನಾಮೆ ನೀಡುವುದೇ ಸರಿ ಎನಿಸುತ್ತಿದೆ~ ಎಂದು ನುಡಿದರು.

ಇಲಾಖೆಯ ರಾಯಚೂರು ಜಿಲ್ಲಾ ಉಪನಿರ್ದೇಶಕ ಅಮೃತ್ ಬೆಟ್ಟದ ಈ ಬಗ್ಗೆ ಪ್ರತಿಕ್ರಿಯೆ ನೀಡಿ, `ತಪ್ಪು ವರ್ಗಾವಣೆಯಿಂದಾಗಿ ಈ ಗೊಂದಲ ಉಂಟಾಗಿದೆ. ಇದನ್ನು ಸರಿಪಡಿಸುವ ಉದ್ದೇಶದಿಂದ ಮತ್ತೆ ತಮ್ಮ  ಸ್ವಸ್ಥಾನಕ್ಕೆ ಮರಳುವಂತೆ ಸಂಬಂಧಪಟ್ಟ ಶಿಕ್ಷಕರಿಗೆ ಆದೇಶ ನೀಡಲಾಗಿದೆ.

ನೌಕರಿ ಬೇಕಾದರೆ ಅವರು ವಾಪಸ್ ಬರಬೇಕು~ ಎಂದರು. ಆದರೆ, `ಇಲಾಖೆಯಿಂದಾದ ಸಮಸ್ಯೆಗೆ ನಾವೇಕೆ ಬಲಿಯಾಗಬೇಕು~ ಎಂದು ಈ ಆದೇಶವನ್ನು ಧಿಕ್ಕರಿಸಿರುವ ಶಿಕ್ಷಕರು ಪ್ರತಿಭಟನೆ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಮುಖ್ಯಾಂಶಗಳು
ಅತಂತ್ರ ಸ್ಥಿತಿಯಲ್ಲಿ ಶಿಕ್ಷಕರು
ಸ್ವಸ್ಥಾನಕ್ಕೆ ಮರಳುವ ಅನಿವಾರ್ಯತೆ
ಶೇ 1ರ ವರ್ಗಾವಣೆ ಪ್ರಮಾಣ ಮೀರಿದ ಹಿನ್ನೆಲೆ

ಸರ್ಕಾರ ನಿರ್ಧರಿಸಬೇಕು: ರಬ್
ಗುಲ್ಬರ್ಗ ಶೈಕ್ಷಣಿಕ ವಲಯದ ರಾಯಚೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರ ಕೋರಿಕೆಯಂತೆ ಅಂತರ ವಲಯಗಳಿಗೆ ಕಳೆದ ಜೂನ್‌ನಲ್ಲಿ ವರ್ಗಾವಣೆ ಮಾಡಲಾಗಿತ್ತು.

ಆದರೆ ಈ ರೀತಿ ವರ್ಗಾವಣೆ ಆದ ಶಿಕ್ಷಕರ ಮಿತಿ ಶೇ 1ರಷ್ಟನ್ನು ದಾಟಿದ್ದನ್ನು ಆಯಾ ವಲಯಗಳ ಅಧಿಕಾರಿಗಳು ವರ್ಗಾವಣೆ ನಂತರ ಗುರುತಿಸಿದ್ದಾರೆ. ವರ್ಗಾವಣೆಯಾದ ಒಟ್ಟು ಶಿಕ್ಷಕರ ನಿರ್ದಿಷ್ಟ ಮಾಹಿತಿಯು ದೊರೆತಿರಲಿಲ್ಲ.

ಮಾಹಿತಿ ದೊರೆತ ನಂತರ ಇಲಾಖೆಯ ನಿಯಮದಂತೆ ಶೇ 1ರಷ್ಟು ಮೀರಿದ ವರ್ಗಾವಣೆಗಳನ್ನು ರದ್ದುಪಡಿಸಲಾಗಿದೆ. ಅವರ ವರ್ಗಾವಣೆಯ ನಿರ್ಧಾರವನ್ನು ಎತ್ತಿ ಹಿಡಿಯುವ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು.                              
 ಸೈಯದ್ ಅಬ್ದುಲ್ ರಬ್,ಹೆಚ್ಚುವರಿ ಆಯುಕ್ ಗುಲ್ಬರ್ಗ ಶೈಕ್ಷಣಿಕ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT