ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ, ನಟನೆಯ ಹಾದಿಯಲ್ಲಿ

ನನ್ನ ಕಥೆ : ಮಾನಸ ಜೋಶಿ
Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಥಕ್ ನೃತ್ಯದಲ್ಲಿ ಹೆಸರು ಮಾಡಬೇಕೆಂಬ ತುಡಿತ ನನಗೆ ಮೊದಲಿನಿಂದಲೂ ಇತ್ತು. ಚಿಕ್ಕವಳಿರುವಾಗ ಸುಮಾರು ಐದು ವರ್ಷ ಕಾಲ ಭರತನಾಟ್ಯ ಕಲಿತೆ. ವಿದುಷಿ ರೂಪಾ ನೃತ್ಯದ ‘ಬೇಸಿಕ್ಸ್’ ಅನ್ನು ಚೆನ್ನಾಗಿ ಕಲಿಸಿದರು. ಅದಾಗಿ ಹೀಗೇ ಒಮ್ಮೆ ಬೆಂಗಳೂರಿನ ‘ಯವನಿಕಾ’ದಲ್ಲಿ ಒಂದು ಕಥಕ್ ನೃತ್ಯ ಪ್ರದರ್ಶನವಿತ್ತು.

ನನ್ನ ಅಮ್ಮ ಮಾಲತಿ ಜೋಶಿ ಇದನ್ನು ನೋಡಲು ಹೋಗಿದ್ದರು. ಆ ಕಥಕ್ ನೃತ್ಯ ನಮ್ಮಮ್ಮಂಗೆ ತುಂಬ ಇಷ್ಟ ಆಗಿ ನನ್ನನ್ನೂ ಕಥಕ್‌ಗೇ ಸೇರಿಸಬೇಕು ಎಂಬ ಪಣ ತೊಟ್ಟರು. ನನ್ನ ಅಣ್ಣ ವಿಕ್ರಂ ಜೋಶಿ ತಬಲಾ ಕಲಿಯುತ್ತಿದ್ದ. ಅಣ್ಣ ಅಮ್ಮ ಇಬ್ಬರೂ ಸೇರಿ ಖ್ಯಾತ ಕಥಕ್ ನೃತ್ಯ ಜೋಡಿ ನಿರುಪಮಾ -ರಾಜೇಂದ್ರ ಅವರ ಬಳಿ ಕಳಿಸುವ ಯೋಜನೆ ಹಾಕಿಕೊಂಡ್ರು. ಹೀಗೆ ನಾನು ಒಂಬತ್ತನೇ ಕ್ಲಾಸ್ ಇರುವಾಗ ಕಥಕ್ ಅಭ್ಯಾಸ ಮಾಡಲು ಆರಂಭಿಸಿದೆ. ಆಚಾರ್ಯ ಪಾಠಶಾಲಾದಲ್ಲಿ ಒಂಬತ್ತನೆ ತರಗತಿ ಕಲಿಯುತ್ತಿರುವಾಗ ನಿರುಪಮಾ- ರಾಜೇಂದ್ರ ಅವರ ಬಳಿ ಕಥಕ್‌ಗೆ ಸೇರಿಕೊಂಡೆ. ಸುಮಾರು 12 ವರ್ಷ ಕಾಲ ಅವರ ಬಳಿ ಕಥಕ್ ಅಭ್ಯಾಸ ಮಾಡಿದ್ದೇನೆ.

2009ರಲ್ಲಿ ಕಥಕ್ ರಂಗಪ್ರವೇಶ ಆಯ್ತು. ನಾನು ಚಿಕ್ಕವಳಿರುವಾಗಲೇ ಎನ್‌ಸಿಸಿ, ಕ್ರೀಡೆ ಎಲ್ಲದರಲ್ಲೂ ಭಾಗವಹಿಸುತ್ತಿದ್ದೆ. ಎನ್‌ಸಿಸಿ ಪೆರೇಡ್‌ಗೆ ಹೋಗುವ ಮಕ್ಕಳಿಗೆ ಕಥಕ್ ಕೊರಿಯೊಗ್ರಫಿ ಮಾಡಿದ್ದೀನಿ. ಈಗ ಸೋಲೊ ಮತ್ತು ಗ್ರೂಪ್ ಡ್ಯಾನ್ಸ್ ಎರಡೂ ಮಾಡ್ತೀನಿ. ಹಲವಾರು ಪ್ರಮುಖ ವೇದಿಕೆಗಳಲ್ಲಿ ಕಥಕ್ ನೃತ್ಯ ಪ್ರದರ್ಶನ ಕೊಟ್ಟಿದ್ದೇನೆ. ಬೆಳಗಾವಿಯಲ್ಲಿ ಆದ ವಿಶ್ವ ಕನ್ನಡ ಸಮ್ಮೇಳನ, ಆಳ್ವಾಸ್ ವಿರಾಸತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯುವಜನೋತ್ಸವದಲ್ಲಿ, ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ, ದೆಹಲಿಯಲ್ಲಿ ನಡೆದ ರವಾಂಡ ರಾಷ್ಟ್ರೀಯ ಉತ್ಸವದಲ್ಲಿ, ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಥಕ್ ಸೋಲೊ ಡ್ಯಾನ್ಸ್ ಮಾಡಿದ್ದೀನಿ. ಇದುವರೆಗೆ ಸುಮಾರು 600 ನೃತ್ಯ ಕಾರ್ಯಕ್ರಮ ಸೋಲೊ ಮತ್ತು ಗ್ರೂಪ್‌ನಲ್ಲಿ ನೀಡಿದ್ದೀನಿ. ಕಥಕ್‌ನಲ್ಲಿ ಪರಿಪೂರ್ಣತೆ ಸಾಧಿಸುವಾಸೆ ಇದೆ.

ತೆರೆಯ ಮೇಲೆ ನಟನೆ ಇಷ್ಟ
ಇನ್ನು ಸಿನಿಮಾ, ನಾಟಕಗಳಲ್ಲೂ ನನಗೆ ಅತೀವ ಆಸಕ್ತಿ. ನಾನು 10ನೇ ಕ್ಲಾಸ್‌ನಲ್ಲಿರುವಾಗ ದೂರದರ್ಶನ ಚಂದನದಲ್ಲಿ ‘ಈಶ್ವರ ಅಲ್ಲಾ ನೀನೆ ಎಲ್ಲಾ...’ ಧಾರಾವಾಹಿ ಬರ್ತಾ ಇತ್ತು. ಅದರಲ್ಲಿ ಷರೀಫ್ ಅಜ್ಜನ ಮೊಮ್ಮಗಳ ಪಾತ್ರ ಮಾಡಿದ್ದೆ. ಅದೇ ಮೊದಲ ಬಾರಿಗೆ ನಾನು ತೆರೆಯ ಮೇಲೆ ಬಂದದ್ದು. ಅದು ಬಹಳ ಉತ್ತಮ ಅನುಭವ ನೀಡಿತು. ನಾನು ಪದವಿ ಓದುತ್ತಿರುವಾಗ ಮಿಸ್ ಈಟೀವಿ ಯಲ್ಲಿ ಭಾಗವಹಿಸಿದ್ದೆ. ಅದು ಎಂಟು ಸುತ್ತಿನ ಸ್ಪರ್ಧೆ. ಎಲ್ಲದರಲ್ಲೂ ನಾನು ಆಯ್ಕೆ ಆಗಿ ‘ಮಿಸ್ ಈಟೀವಿ’ ಆಗಿದ್ದೆ.

ಹಿರಿಯ ನಟರಾದ ಸುಧಾ ಬೆಳವಾಡಿ, ಸಿಹಿಕಹಿ ಚಂದ್ರು, ಸುರೇಂದ್ರನಾಥ್, ಬಿ. ಸುರೇಶ್ ಅವರ ಪರಿಚಯ ಆಯ್ತು. ಒಮ್ಮೆ ಬಿ. ಸುರೇಶ್ ಅವರು ‘ನಾವು ಒಂದು ನಾಟಕ ಮಾಡ್ತಾ ಇದ್ದೀವಿ. ನಿನಗೊಂದು ಪಾತ್ರ ಇದೆ ಬಾ ಅಂದ್ರು’. ಆಗ ನಾನು ಎಂ.ಎ ಓದುತ್ತಿದ್ದೆ. ಹೀಗಾಗಿ ಮನೆಯಲ್ಲಿ ಅಪ್ಪ ಅಮ್ಮ, ‘ಈಗಲೇ ನಾಟಕ, ಸಿನಿಮಾ ಅಂತ ಸೇರಬೇಡ. ಊರೂರು ಸುತ್ತಬೇಕಾಗುತ್ತದೆ. ಹೀಗಾಗಿ ಓದಿನ ಕಡೆ ಗಮನಹರಿಸಿ ಮೊದಲು ಓದು ಮುಗಿಸು. ಆಮೇಲೆ ಏನು ಬೇಕಾದ್ರೂ ಮಾಡು’ ಅಂದ್ರು.

ಹೀಗಾಗಿ ಮೊದಲು ಓದಿನ ಕಡೆ ಗಮನಹರಿಸಿ ಬೆಂಗಳೂರು ವಿವಿಯಿಂದ ಎಲೆಕ್ಟ್ರಾನಿಕ್ಸ್ ಮೀಡಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಅದಾಗಿ ಚೆನ್ನೈನಲ್ಲಿರುವ ಅನುಪಮ್ ಖೇರ್ ಆ್ಯಕ್ಟಿಂಗ್ ಸ್ಕೂಲ್‌ನಲ್ಲಿ ಡಿಪ್ಲೊಮಾ ಮಾಡಿದೆ.

ಎಂ.ಎ ಆದ ಮೇಲೆ ಮತ್ತೆ ಕಥಕ್ ಅನ್ನು ಗಂಭೀರವಾಗಿ ತೆಗೆದುಕೊಂಡು ಸದ್ಯ ಎರಡು ವರ್ಷಗಳಿಂದ ಖ್ಯಾತ ಕಥಕ್ ನೃತ್ಯತಾರೆ ಡಾ. ಮಾಯಾರಾವ್ ಅವರ ಬಳಿ ಕಲಿತಾ ಇದ್ದೀನಿ. ಇವರ ಹತ್ತಿರ ಕಥಕ್‌ನ ಟ್ರೆಡಿಷನಲ್ ಐಟಮ್ಸ ಅನ್ನು ಅಭ್ಯಾಸ ಮಾಡ್ತಿದ್ದೀನಿ. ನಾನು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ ಆಗಿರುವುದರಿಂದ ನನಗೆ ಕಲೆಯ ಬಗ್ಗೆ ತೆರೆದುಕೊಳ್ಳಲು ಹೆಚ್ಚಿನ ಅವಕಾಶ ಸಿಗುತ್ತಿದೆ.

ಎರಡು ವರ್ಷ ಹಿಂದೆ ಸಿನಿಮಾ ನಿರ್ದೇಶಕ ಬಸಂತ ಕುಮಾರ್ ಪಾಟೀಲ್ ‘ಸರಸಮ್ಮನ ಸಮಾಧಿ’ ಚಿತ್ರದಲ್ಲಿ ಭಾಗೀರಥಿ ಎಂಬ ಪಾತ್ರ ಮಾಡಿದೆ. ಅದು ಸತಿ ಪದ್ಧತಿ ಬಗ್ಗೆ ಇದ್ದ ಪಾತ್ರ. ನಾಲ್ಕು ಮಂದಿ ಮಹಿಳೆಯರ ಪಾತ್ರಗಳಲ್ಲಿ ಭಾಗೀರಥಿ ಬೋಲ್ಡ್ ಆಗಿರುವ ಕ್ಯಾರೆಕ್ಟರ್. ಇದನ್ನು ನಾನು ಮಾಡಿದೆ. ಇದು ಮನಸ್ಸಿಗೆ ತುಂಬ ಖುಷಿ ಕೊಡ್ತು.

ಅದಾಗಿ ರಂಗಶಂಕರ ಪ್ರೊಡಕ್ಷನ್‌ನಲ್ಲಿ ‘ರಾಜತಂತ್ರ ಛೂ ಮಂತ್ರ’ ಎನ್ನುವ ಮಕ್ಕಳ ನಾಟಕದಲ್ಲಿ ಪಾತ್ರ ಮಾಡಿದೆ. ರಾಜಪ್ಪ ದಳವಾಯಿ ಅವರು ನಿರ್ದೇಶಿಸಿದ ‘ಕುಲಂ’, ಕರ್ಣನ ಜೀವನ ವೃತ್ತಾಂತದ ಬಗ್ಗೆ ಇದ್ದ ನಾಟಕ. ಇದರಲ್ಲಿ ಕುಂತಿ ಪಾತ್ರ ಮಾಡಿದೆ. ರಬಡಿ ಅಂತ ಮತ್ತೊಂದು ನಾಟಕ. ಇದು ಬಾಡಿಗೆ ತಾಯಿ ಕುರಿತ ನಾಟಕ. ಅದರಲ್ಲಿ ವೈದ್ಯರ ಪಾತ್ರ ನನ್ನದು. ಹೀಗೆ ಪೌರಾಣಿಕ-, ಆಧುನಿಕ ಎಂಬ ಭೇದವಿಲ್ಲದೆ ವಿಭಿನ್ನ ಪಾತ್ರಗಳನ್ನು ಮಾಡುವ ಅವಕಾಶ ದೊರೆಯಿತು.

ಇಷ್ಷಾದ ಮೇಲೆ ಕಿರಣ್ ವಟಿ ಎಂಬ ನಿರ್ದೇಶಕರ ಪರಿಚಯ ಆಯ್ತು. ಅವರು ‘ಬಹುಪರಾಕ್’ ಸಿನಿಮಾದಲ್ಲಿ ಒಂದು ಪಾತ್ರ ಕೊಡಿಸಿದರು. ಇದರಲ್ಲಿ ಶ್ರೀನಗರ ಕಿಟ್ಟಿಯ ಹೆಂಡತಿ ಪಾತ್ರ ಮಾಡಿದ್ದೀನಿ. ಇದು ಹುಡುಗಿ, ಗೃಹಿಣಿ, ಅಜ್ಜಿ... ಹೀಗೆ ಮೂರು ಪಾತ್ರಗಳಲ್ಲೂ ನಟಿಸಬೇಕಾದದ್ದು. ನನ್ನ ಗೆಳತಿಯರು... ‘ಮೂರು ರೋಲ್ ಅನ್ನೂ ನೀನೇ ಮಾಡ್ತಿದ್ದೀಯಾ..’ ಅಂತ ಹುಬ್ಬೇರಿಸಿದ್ರು. ಇದು ನನಗೆ ಈ ಪಾತ್ರವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಳ್ಳಲು ಸಹಕಾರಿಯಾಯ್ತು.

ನನ್ನ ಅಭಿನಯಕ್ಕೆ ಪುಟ್ಟರಾಜ ಗವಾಯಿ ಯುವ ಪ್ರಶಸ್ತಿ ಮತ್ತು ಆರ್ಯಭಟ ಯುವ ಪ್ರಶಸ್ತಿ ಬಂದಿದೆ. 2012ರಲ್ಲಿ ‘ಸರಸಮ್ಮನ ಸಮಾಧಿ’ ಚಿತ್ರಕ್ಕೆ ‘ಉತ್ತಮ ಪ್ರಾದೇಶಿಕ ಚಿತ್ರ’ ಪ್ರಶಸ್ತಿ ಬಂದಿದೆ. ನಾನು ಸಾಧಿಸಬೇಕಾದದ್ದು ಬಹಳಷ್ಟು ಇದೆ. ನಟನೆ, ನೃತ್ಯ ಎರಡೂ ಕ್ಷೇತ್ರವೂ ಸಾಕಷ್ಟು ವಿಸ್ತಾರವಾಗಿದೆ.

ಮನೆಯವರ ಪ್ರೋತ್ಸಾಹ
ಚಿಕ್ಕವಳಿರುವಾಗ ನಿರೂಪಕಿಯಾಗಿ ಕೆಲಸ ಮಾಡಿದ್ದೆ. ಮುಂದೆ ರೂಪದರ್ಶಿಯಾಗುವ ಯೋಜನೆ ಇದೆ. ಒಳ್ಳೆಯ ಸಿನಿಮಾದಲ್ಲಿ ನಟಿಸಬೇಕು, ಕಥಕ್‌ನಲ್ಲಿ ಇನ್ನಷ್ಟು ಸಾಧಿಸಬೇಕು, ನಾಟಕ, ಸಿನಿಮಾ, ನೃತ್ಯ ಮೂರರಲ್ಲೂ ಹೆಸರು ಮಾಡಬೇಕು ಎನ್ನುವುದು ನನ್ನ ಆಸೆ. ಈ ನಿಟ್ಟಿನಲ್ಲಿ ಸತತ ಪರಿಶ್ರಮ, ಸಾಧನೆ ಮಾಡುತ್ತಿದ್ದೇನೆ. ಇದಕ್ಕೆ ನಮ್ಮ ಅಮ್ಮ ಮಾಲತಿ ಜೋಶಿ, ಅಪ್ಪ ಡಾ. ಮಹೇಶ್ ಜೋಶಿ ಅವರ ಪ್ರೋತ್ಸಾಹ, ಉತ್ತೇಜನ ಸದಾ ಇದೆ. ನಾನು ಏನೇ ಮಾಡುವುದಾದರೂ ಮನೆಯವರ ಜತೆಗೆ ಮೊದಲು ಸಮಾಲೋಚನೆ ಮಾಡಿಯೇ ಮುಂದುವರಿಯುವುದರಿಂದ ಮನೆಯವರೆಲ್ಲ ನನಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ. ಇದು ನನ್ನ ಸೌಭಾಗ್ಯ ಎಂದೇ ಭಾವಿಸುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT