ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಪಲ್ಲವಿ

Last Updated 20 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

 ನೃತ್ಯವೇ ನನ್ನ ಬದುಕು ಎನ್ನುವ ಪಲ್ಲವಿ ಪ್ರಕಾಶ್ ಅವರಿಗಿನ್ನೂ 25ರ ಹರೆಯ. ಶಾಲೆ, ಕಾಲೇಜು, ಕಾರ್ಪೋರೇಟ್ ವಲಯ, ಟೀವಿ ಕಾರ್ಯಕ್ರಮಗಳ ನೃತ್ಯ ಸಂಯೋಜನೆಯೇ ಇವರ ದಿನಚರಿ. ಅವರು ತಮ್ಮ ನೃತ್ಯ ಪ್ರೀತಿ ಬಗ್ಗೆ `ಮೆಟ್ರೊ~ ಜೊತೆ ಮನಬಿಚ್ಚಿ ಮಾತಾಡಿದ್ದು ಹೀಗೆ...

ನೀವು ಹುಟ್ಟುಹಾಕಿದ ಸಂಸ್ಥೆ?
ನನ್ನಲ್ಲಿರುವ ನೃತ್ಯಾಸಕ್ತಿಯನ್ನು ಹಾಗೂ ಪ್ರತಿಭೆಯನ್ನು ಹಂಚಿಕೊಳ್ಳಲು ನಾನು ನಿರ್ಮಿಸಿಕೊಂಡಿದ್ದು ಎನ್ಸೆಂಬಲ್ ಡಿ.ಎನ್.ಎಫ್. ನೃತ್ಯ ಕಲಿಯುವುದಕ್ಕೆ ವಯಸ್ಸಿನ ಮಿತಿಯಿಲ್ಲ.  ತರಬೇತಿ ನೀಡಲು ಜಾಗ ಸಿಕ್ಕಿದರೆ ಸಾಕು. ಅದು ಶಾಲೆ, ಅಪಾರ್ಟ್‌ಮೆಂಟ್, ಸ್ಟುಡಿಯೋ ಎಲ್ಲಿಯಾದರೂ ಆಗಬಹುದು.

ಎಲ್ಲಾ ಪ್ರಕಾರದ ನೃತ್ಯ ಹೇಳಿಕೊಡುತ್ತೀರಾ? ನೀವು ಕಲಿತದ್ದು ಯಾವ ನೃತ್ಯ ಶೈಲಿ?
ನಾನು ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಯ ನೃತ್ಯಗಳನ್ನು ಕಲಿತಿದ್ದೇನೆ. ಕಥಕ್, ಭರತನಾಟ್ಯಂ, ಸಾಲ್ಸಾ, ಜಿವಾ, ಹಿಪ್‌ಹಾಪ್, ಬಾಲಿವುಡ್, ಜಾನಪದ ಶೈಲಿಯೂ ಕಲಿತಿದ್ದೇನೆ.

ನೃತ್ಯದಲ್ಲಿಯೇ ಆಸಕ್ತಿ ಬೆಳೆಯಲು ಕಾರಣ?
ಸಂಗೀತದ ಹಿನ್ನೆಲೆಯ ಕುಟುಂಬ ನನ್ನದು. ಚಿಕ್ಕವಯಸ್ಸಿನಿಂದಲೂ ನನಗೆ ನೃತ್ಯದಲ್ಲಿ ಆಸಕ್ತಿ ಇತ್ತು. ಕಾಲೇಜು ಓದುತ್ತಿದ್ದಾಗ `ಇಂಡಿಯನ್ ನೃತ್ಯ ತಂಡ~ ಸೇರಿಕೊಂಡೆ. ಖ್ಯಾತ ನೃತ್ಯಗಾರ್ತಿ ನಿರುಪಮಾ ರಾಜೇಂದ್ರ ಅವರಿಂದ ಮೂರು ವರ್ಷ ಕಥಕ್ ಕಲಿತೆ.

ಅಷ್ಟೊತ್ತಿಗಾಗಲೇ ನೃತ್ಯವೇ ನನ್ನ ಉಸಿರು ಎಂದು ನಿರ್ಧರಿಸಿಬಿಟ್ಟಿದ್ದೆ. ಬಳಿಕ ಸಹರಾ ಏರ್‌ಲೈನ್ಸ್ ಪ್ರಾಯೋಜಕತ್ವದ `ಭಾರತಿ ದಿ ಶೋ~ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಅಂದಿನಿಂದ ನನ್ನ ಸಂಪೂರ್ಣ ಆಸಕ್ತಿ ನೃತ್ಯದಲ್ಲೇ.

`ಭಾರತಿ ದಿ ಶೋ~ ಕಾರ್ಯಕ್ರಮದಲ್ಲಿ ನಿಮ್ಮ ಸಾಧನೆ?

ಇದು ಬಾಲಿವುಡ್ ನೃತ್ಯ ಕಾರ್ಯಕ್ರಮ. ಸುಮಾರು 5000ಕ್ಕೂ ಹೆಚ್ಚು ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಾಲೇಜಿನ ಕೊನೆ ವರ್ಷದಲ್ಲಿರುವಾಗ ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.

ಬೆಂಗಳೂರಿನಲ್ಲೇ ಮೂರು ಸುತ್ತಿನ ಆಯ್ಕೆ, ಬಳಿಕ ಮುಂಬೈನಲ್ಲಿ ಮೂರು ಸುತ್ತಿನ ಆಯ್ಕೆ. ಆಮೇಲೆ ಅಂತಿಮ ಸುತ್ತಿಗೆ ಹೋದೆ. ಆಯ್ಕೆ ಸುತ್ತಿನಲ್ಲಿ ಎಲ್ಲಾ ನೃತ್ಯ ಶೈಲಿಯಲ್ಲಿ ಪಳಗಿದವರನ್ನು ಮಾತ್ರ ಆಯ್ಕೆ ಮಾಡಲಾಗಿತ್ತು.

ಆ ನಂತರದ ಸ್ಪರ್ಧೆಗಳಲ್ಲೂ ಆಯ್ಕೆಯಾದ ನನಗೆ ಸರೋಜ್ ಖಾನ್, ಜೊಜೊ ಖಾನ್, ರಾಜು ಸುಂದರಂ ಮುಂತಾದ ಖ್ಯಾತ ನೃತ್ಯ ಸಂಯೋಜಕರೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಿತು. ಇಲ್ಲಿ ಆಯ್ಕೆಯಾದ 30 ಮಂದಿಗೆ ಯುರೋಪ್‌ನಲ್ಲೂ ನರ್ತಿಸುವ ಅವಕಾಶ ಕಲ್ಪಿಸಲಾಗಿತ್ತು. ಆ ಪಟ್ಟಿಯಲ್ಲಿ ನಾನೂ ಒಬ್ಬಳಾಗಿದ್ದು ಬದುಕಿನಲ್ಲಿ ಮರೆಯಲಾಗದ ಕ್ಷಣ.

ಆನ್‌ಲೈನ್ ನೃತ್ಯ ಕಲಿಕೆ ಬಗ್ಗೆ ನಿಮ್ಮ ಅಭಿಪ್ರಾಯ? ಇ- ಕಲಿಕೆ ಪರಿಣಾಮಕಾರಿಯಾಗಿದೆಯೇ?
ಅಮೆರಿಕದಲ್ಲಿ ಪ್ರತಿವರ್ಷ ನಡೆಯುವ `ಅಕ್ಕ~ ಸಮ್ಮೇಳನದಲ್ಲಿ ಪ್ರದರ್ಶನ ನೀಡುವುದಕ್ಕೆ ನೃತ್ಯ ಸಂಯೋಜನೆಯ ಅಗತ್ಯವಿತ್ತು. `ಚಿನ್ನಾರಿ ಮುತ್ತ~ ಸಿನಿಮಾದ ಹಾಡೊಂದನ್ನು ಅಲ್ಲಿಯ ಮಕ್ಕಳಿಗೆ ಕಲಿಸಿದ್ದೆ. ಅದೂ `ಸ್ಕೈಪ್~ ಮುಖಾಂತರ. ಈ ನೃತ್ಯವನ್ನು ರೆಕಾರ್ಡ್ ಮಾಡಿ ಇ-ಮೇಲ್ ಮಾಡಿದೆ. ಅಭ್ಯಾಸಕ್ಕೆ ಇದು ತುಂಬಾ ಸಹಕಾರಿಯಾಯಿತು. 

`ವೀಡಿಯೊ ಜ್ಞಾನ್~ ಮೂಲಕ ಬೇರೆ ಬೇರೆ ಪ್ರದೇಶಗಳಲ್ಲಿರುವ ಆಸಕ್ತರಿಗೆ ಭಾರತೀಯ ನೃತ್ಯ ಶೈಲಿ ಕಲಿಸಲು ಅಂತರ್ಜಾಲ ಉತ್ತಮ ಅವಕಾಶ ನೀಡುತ್ತಿದೆ.

ನೃತ್ಯ ಸಂಯೋಜನೆಗೆ ಎಷ್ಟು ಸಮಯ, ಶುಲ್ಕ?
ಪ್ರತೀ ನೃತ್ಯ ಶೈಲಿಯ ಕಲಿಕೆಗೆ ಬೇಕಾಗುವ ಅವಧಿಯೂ ಭಿನ್ನ.  ಶುಲ್ಕ ಕೂಡ ಅಷ್ಟೆ. ನೃತ್ಯ ಸಂಯೋಜನೆಗೆ ಸುಮಾರು 10 ಸಾವಿರ ರೂಪಾಯಿ ತೆಗೆದುಕೊಳ್ಳುತ್ತೇನೆ.

ಕಾರ್ಪೊರೇಟ್ ವಲಯಗಳಲ್ಲಿ ನೃತ್ಯ ಹೇಳಿಕೊಟ್ಟಿದ್ದೀರಾ?
ಕಾರ್ಪೊರೇಟ್ ವಲದಲ್ಲಿ ವಾರ್ಷಿಕ ಕಾರ್ಯಕ್ರಮಗಳು, ಸ್ಪರ್ಧೆ ಅಥವಾ ಯಾವುದಾದರೂ ಉತ್ಸವ ಸಂದರ್ಭದಲ್ಲಿ ನೃತ್ಯ ಸಂಯೋಜನೆ ಮಾಡುತ್ತೇನೆ. ಸೊಸೈಟಿ ಜನರಲ್,  ಐ.ಬಿ.ಎಂ, ಹನಿವೆಲ್, ಎಚ್.ಪಿ, ಒರೆಕಲ್, ಸೋನಿ, ಅವೀವಾ ಗ್ಲೋಬಲ್ ಮುಂತಾದ ಕಡೆಗಳಲ್ಲಿ ನೃತ್ಯ ಸಂಯೋಜನೆ ಮಾಡಿದ್ದೇನೆ. ಎನ್. ಸಿ. ಎಫ್.ಇ, ವಿಬ್‌ಗ್ಯೋರ್ ಹೈ, ರವಿಶಂಕರ್ ವಿದ್ಯಾಮಂದಿರ, ಆರ್ಟ್ ಆಫ್ ಲಿವಿಂಗ್ ಆಶ್ರಮ, ಕ್ರೈಸ್ಟ್ ಕಾಲೇಜು, ಜ್ಯೋತಿ ನಿವಾಸ ಕಾಲೇಜು, ಡಾ. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮುಂತಾದೆಡೆ ನೃತ್ಯ ಸಂಯೋಜಕಿಯಾಗಿಯೂ ಕೆಲಸ ಮಾಡಿದ್ದೇನೆ.

ಟೀವಿ ಶೋಗೆ ನೃತ್ಯ ಸಂಯೋಜನೆಯ ಅವಕಾಶ?
ಸಿಕ್ಕಿದೆ. ಕನ್ನಡದ ರಿಯಾಲಿಟಿ ಶೋ `ಕುಣಿಯೋಣು ಬಾರಾ~ ಹಾಗೂ `ಸೈ~ ಕಾರ್ಯಕ್ರಮದಲ್ಲಿ ನೃತ್ಯ ಸಂಯೋಜಕಿಯಾಗಿ ಕೆಲಸ ಮಾಡುತ್ತಿದ್ದೇನೆ.

ಸಿಕ್ಕಿದ ಪ್ರಶಸ್ತಿ?
ಇಂಟ್ರಾ ಕಾರ್ಪೊರೇಟ್ ಫೆಸ್ಟ್, ಆಕ್ಸೆಂಚರ್‌ನಲ್ಲಿ ನಡೆದ ಆಲ್ ಇಂಡಿಯಾ ಎಚ್.ಆರ್. ಮೀಟ್, ಡೆಕ್ಕನ್ ಹೆರಾಲ್ಡ್ ನೃತ್ಯ ಸ್ಪರ್ಧೆ ಮುಂತಾದ ಸ್ಪರ್ಧೆಗಳಲ್ಲಿ ನಾನು ಸಂಯೋಜಿಸಿದ ನೃತ್ಯ ತಂಡಕ್ಕೆ ಪ್ರಥಮ ಬಹುಮಾನ ಸಿಕ್ಕಿದೆ.

ಕುಟುಂಬದ ಬೆಂಬಲ? ಸ್ಫೂರ್ತಿ ಯಾರು?
ಅಪ್ಪ, ಅಮ್ಮ, ಸಹೋದರಿ ಮೂವರೂ ನನ್ನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿದ್ದ ನನ್ನ ತಾತಂದಿರಿಂದಲೂ ನನಗೆ ಸಾಕಷ್ಟು ಪ್ರೇರಣೆ ದೊರೆತಿದೆ. ಸಂಗೀತ ಲೋಕದಲ್ಲಿ ಅವಿಸ್ಮರಣೀಯರಾಗಿರುವ ಡಾ. ಸಿ. ಅಶ್ವತ್ಥ ಅವರ ಸಾಧನೆ ನನ್ನ ಕನಸಿಗೆ ಪುಷ್ಟಿ ನೀಡಿತು.

ಅವರು ನನ್ನ ಚಿಕ್ಕ ತಾತ. ನೃತ್ಯಾಸಕ್ತಿಗೆ ಅವರು ತುಂಬಾ ಪ್ರೋತ್ಸಾಹ ನೀಡಿದರು. ಪ್ರತಿ ಪ್ರದರ್ಶನಕ್ಕೆ ಮುಂಚೆ ಹಾಗೂ ನಂತರ ತಾತ ಮಾರ್ಗದರ್ಶನ ನೀಡುತ್ತಿದ್ದರು. ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ಮರೆಯಲಾಗದ ಘಟನೆ?
ಚಿಕ್ಕ ಹುಡುಗಿಯೊಬ್ಬಳು ನೃತ್ಯ ಕಲಿಯೋಕೆ ಬರುತ್ತಿದ್ದಳು. ಸರಿಯಾಗಿ ಹೋಂವರ್ಕ್ ಮಾಡಲ್ಲ ಅಂತ ಪ್ರತಿ ದಿನ ಟೀಚರ್ಸ್‌ ಕಂಪ್ಲೇಂಟ್ ಮಾಡುತ್ತಿದ್ದರಂತೆ. ಆದರೆ ಕಾಲೇಜು ವಾರ್ಷಿಕೋತ್ಸವದ ಸಂದರ್ಭದಲ್ಲಿ ಡಾನ್ಸ್‌ನಲ್ಲಿ ಯಾರಿಗೆ ಆಸಕ್ತಿ ಎಂದು ಶಿಕ್ಷಕರು ಕೇಳಿದಾಗ ಈಕೆ ಎದ್ದು ನಿಂತಳು.

ಆಮೇಲೆ 50-100 ಜನರಿಗೆ ಆ ಪುಟಾಣಿಯೇ ನೃತ್ಯ ಹೇಳಿಕೊಟ್ಟಿತು. ಈಗ ಅವಳು ಎಲ್ಲರ ಜೊತೆ ಮಾತಾನಾಡುತ್ತಾಳೆ. ಕಲಿಕೆಯಲ್ಲೂ ಮುಂದಿದ್ದಾಳೆ. ಅವಳ ಆತ್ಮವಿಶ್ವಾಸ ಹೆಚ್ಚಿದೆ. ಅವರ ಅಮ್ಮ ನನ್ನ ಕೈ ಹಿಡಿದುಕೊಂಡು ಅತ್ತು ಧನ್ಯವಾದ ಹೇಳಿದ್ದರು. 

ನಿಮ್ಮ ಜತೆ ಯಾರೆಲ್ಲ ಸಹಕರಿಸುತಿದ್ದಾರೆ?
ನಮ್ಮದು ಟೀಂವರ್ಕ್. ಅದರಲ್ಲೂ ಜೈ ಶಂಕರ್ ನನ್ನ ಸಾಧನೆಗೆ ತುಂಬಾ ಸಹಾಯ ಮಾಡಿದ್ರು. ಕಳೆದ ನಾಲ್ಕು ಐದು ವರ್ಷದಿಂದ ನಾನು ಜೈ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಅವರು ತುಂಬಾ ಕ್ರಿಯಾಶೀಲರು. 

ಮಾಹಿತಿಗಾಗಿ: www.dancewithpal.com, dancewithpal.blogspot.com,
ಫೇಸ್‌ಬುಕ್‌ನಲ್ಲಿ  dancewithpal.ಸಂಪರ್ಕಕ್ಕೆ: 98447 44572

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT