ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಸಾಫಲ್ಯ; ಮಾಯಾ ಮಿಂಚು

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ವಿವಿಧ ನೃತ್ಯ ಪ್ರಕಾರಗಳಲ್ಲಿ ತನಗಿರುವ ವಿಶಿಷ್ಟ ಪ್ರತಿಭೆ ಮತ್ತು ಪರಿಣತಿಯನ್ನು ಒಬ್ಬ ನುರಿತ ಕಲಾವಿದೆಯು ಅಚ್ಚುಕಟ್ಟಾಗಿ ಒಂದೇ ವೇದಿಕೆಯ ಮೇಲೆ ಪ್ರದರ್ಶಿಸಿ ರಸಿಕರಿಂದ ಮಾನ್ಯರಾಗುವುದನ್ನು ನೋಡುವುದು ಸಂತಸ ಉಂಟುಮಾಡುತ್ತದೆ. ಗುರುವಾರ ಸಂಜೆ ಮಲ್ಲೇಶ್ವರದ ಸೇವಾ ಸದನ ಸಭಾಂಗಣದಲ್ಲಿ ನಡೆದ ಗುರುನಮನ ಕಾರ್ಯಕ್ರಮದಲ್ಲಿ ಅಂತಹ ಅನುಭವ ಉಂಟಾಯಿತು. ನಾಟ್ಯಾಂತರಂಗ ನೃತ್ಯ ಸಂಸ್ಥೆಯ ರೂವಾರಿ ಹಾಗೂ ವಿವಿಧ ನೃತ್ಯ ಶೈಲಿಗಳಲ್ಲಿ ಪ್ರಾವೀಣ್ಯ ಪಡೆದಿರುವ ಗುರು ಶುಭಾ ಧನಂಜಯ ಹೊಸ ನಮೂನೆಯ ಕಾರ್ಯಕ್ರಮವನ್ನು ನೀಡಿದರು. ಗುರುಗಳಾಗಿದ್ದ ಎಸ್.ವಿ.ಶ್ರಿನಿವಾಸ ಅವರ 92ನೇ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ನೃತ್ಯ ಪ್ರದರ್ಶನದ ಮೂಲಕ ಶುಭಾ ಗುರು ನಮನ ಸಲ್ಲಿಸಿದರು. 

ಯಶಸ್ವಿ ಕಲಾವಿದೆ, ಬೋಧಕಿ, ಕಲಾತ್ಮಕ ಸಂಯೋಜಕಿ ಹಾಗೂ ಸಂಘಟಕಿಯಾಗಿಯೂ ಹೆಸರು ಮಾಡಿರುವ ಶುಭಾ ಧನಂಜಯ ವೇದಿಕೆಯ ಸುತ್ತಗಲವನ್ನು ಬಳಸಿಕೊಂಡ ಪರಿ ಗಮನ ಸೆಳೆಯಿತು. ಡಾ. ಮಾಯಾ ರಾವ್, ಮುರಳೀಧರ ರಾವ್, ಕಳಾನಿಧಿ ನಾರಾಯಣ್ ಮತ್ತು ಡಾ.ಪದ್ಮಾ ಸುಬ್ರಹ್ಮಣ್ಯಂ ಅವರ ಮಾರ್ಗದರ್ಶನದ ಲಾಭವನ್ನೂ ಪಡೆದುಕೊಂಡಿರುವ ಶುಭಾ ತಮ್ಮ ಕೌಶಲ್ಯದಿಂದ ವಿದೇಶಗಳ್ಲ್ಲಲೂ ಖ್ಯಾತಿ ಪಡೆದುಕೊಂಡಿದ್ದಾರೆ.

ಸಫಲ ನೃತ್ಯಗಾತಿಯ ಅಂದ ಚೆಂದಗಳು, ಹಾವ-ಭಾವಗಳಿಗೆ ಸ್ಪಂದಿಸುವ ಸುಗಮ ಮುಖಿಜಗಳು, ಅನೇಕ ವಿಶೇಷತೆಗಳು ಮತ್ತು ರೂಪಗಳ ಲಯ ಗಾಂಭೀರ್ಯ ಮತ್ತು ಖಚಿತತೆ, ಘನವಾದ ಅಭಿನಯ ಮುಂತಾದ ಸಲ್ಲಕ್ಷಣಗಳಿಂದ ಅವರ ಪ್ರಸ್ತುತಿಗಳು ಪ್ರಖರಗೊಂಡಿದ್ದವು. ಅಂದಿನ ಕಾರ್ಯಕ್ರಮದ ಪ್ರಮುಖ ಅಂಶವಾಗಿದ್ದ ನರ್ತಕಿಯ ಪ್ರದರ್ಶನದಲ್ಲಿ ಅವರ ಪ್ರಗಲ್ಭ ಕಲೆ ಸುಸ್ಪಷ್ಟವಾಗಿ ಪ್ರಕಟಗೊಂಡಿತು.

ನೃತ್ಯಾಕಾಂಕ್ಷಿಯೊಬ್ಬಳು ತನ್ನ ಸಾಧನೆಯ ಸಂದರ್ಭದಲ್ಲಿ ಎದುರಾಗುವ ಹಲವಾರು ಸವಾಲುಗಳು ಮತ್ತು ಎಡರು ತೊಡರುಗಳನ್ನು ಅನೇಕ ಹೊಯ್ದೊಟಗಳ ನಡುವೆ ಮೆಟ್ಟಿ ನಿಂತು ಕಡೆಗೂ ನೃತ್ಯವನ್ನೇ ಆಲಂಗಿಸಿಕೊಂಡು ಆ ಕ್ಷೇತ್ರದಲ್ಲಿ ಪ್ರತಿಷ್ಠಿತ ಸ್ಥಾನಮಾನ ಹೊಂದುವ ಸನ್ನಿವೇಶ ವನ್ನು ಶುಭಾ ಧನಂಜಯ ಅವರು ಸುಮಾರು ಎಪ್ಪತ್ತೈದು ನಿಮಿಷಗಳ ತಮ್ಮ ಪ್ರತಿಪಾದನೆಯಲ್ಲಿ ಸೂಕ್ತವಾಗಿ ಚಿತ್ರಿಸಿದರು.

ಅದಕ್ಕಾಗಿ ಅವರು ಐದು ನೃತ್ಯ ಶೈಲಿಗಳು (ಭರತನಾಟ್ಯ, ಒಡಿಸ್ಸಿ, ಕಥಕ್, ಕೂಚುಪುಡಿ ನಾಟ್ಯ ಮತ್ತು ಮೋಹಿನಿ ಆಟ್ಟಂ), ಐದು ತಾಳ/ಗತಿಗಳು ತ್ರಿಶ್ರ (3), ಚತುರಶ್ರ (4), ಖಂಡ (5), ಮಿಶ್ರ (7) ಮತ್ತು ಸಂಕೀರ್ಣ (9) ಮತ್ತು ಪಂಚಭೂತಗಳ (ಪೃಥ್ವಿ, ಜಲ, ತೇಜ, ವಾಯು ಮತ್ತು ಆಕಾಶ) ವಿಶ್ಲೇಷಣೆಯನ್ನು ಬಳಸಿಕೊಂಡರು. ಶುಭಾ ಅವರ ಕಲ್ಪನೆ ಮತ್ತು ಸಂಯೋಜನೆಗೆ ಸಂಗೀತದ ಅಲಂಕರಣವನ್ನು ಒದಗಿಸಿದ್ದು ಯುವ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್. ಈ ಪ್ರತಿಪಾದನೆಯು ಅನೇಕ ದೃಷ್ಟಿಕೋನಗಳಿಂದ ಅಪೂರ್ವವೆನಿಸಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಆಯಾ ನೃತ್ಯ ಶೈಲಿಗನುಗುಣವಾದ ಸಾಂಕೇತಿಕವಾದರೂ ಅಥೆಂಟಿಕ್ ಅನ್ನಬಹುದಾದ ಉಡುಗೆ-ತೊಡುಗೆಗಳನ್ನುಟ್ಟು ವಸ್ತು ನಿರೂಪಣೆ ಮಾಡಿದುದು ರೋಚಕ ಅನುಭವ. ಅವರು ನೇಪಥ್ಯಕ್ಕೆ ಸರಿದು ತಮ್ಮ ಉಡುಗೆ-ತೊಡುಗೆಗಳನ್ನು ಬದಲಿಸಿಕೊಂಡು ಬರುವ ಅವಧಿಯಲ್ಲಿ ಮಂಡಿತ ವಸ್ತುವಿಗೆ ಸಂಬಂಧಿಸಿದಂತೆ ಶ್ಲೋಕಗಳ ನಿರೂಪಣೆಯ ಅವರದ್ದೇ ನೃತ್ಯದ ಸ್ಲೈಡನ್ನು ಪ್ರದರ್ಶಿಸಲಾಯಿತು.

ಭರತನಾಟ್ಯದ ನೃತ್ತ, ನೃತ್ಯ ಮತ್ತು ಅಭಿನಯ, ಒಡಿಸ್ಸಿಯ ಚೌಕ ಮತ್ತು ತ್ರಿಭಂಗ ಪ್ರಧಾನ ಚಲನೆಗಳು, ಕಥಕ್‌ನ ತತ್ಕಾರಗಳು ಮತ್ತು ಚಕ್ಕರ್‌ಗಳು, ಕೂಚಿಪುಡಿಯ ವಾಚಿಕ- ಓಘ ಮತ್ತು ಮೋಹಿನಿ ಆಟ್ಟಂನ ನಿಧಾನಗತಿಯ ಬಾಗು ಬಳುಕುಗಳು ಸಂಕ್ಷಿಪ್ತವಾದರೂ ಸಾರಗರ್ಭಿತವಾಗಿ ಮೂಡಿಬಂದು ಒಂದೇ ಎಳೆಯಲ್ಲಿ ಪೋಣಿಸಿದಂತಿದ್ದು, ಶುಭಾ ಅವರ ಅನನ್ಯ ನೈಪುಣ್ಯಕ್ಕೆ ಸಾಕ್ಷಿಯಾಯಿತು. ಸಂಸ್ಕೃತ ಶ್ಲೋಕಗಳು, ಮೀರಾ ಪದವೂ ಸೇರಿದಂತೆ ಬೇರೆಬೇರೆ ಮೂಲಗಳಿಂದ ಆಯ್ದುಕೊಂಡಿದ್ದ ಸಾಹಿತ್ಯ ಭಾಗ  ಧ್ವನಿಮುದ್ರಿತ ಸಂಗೀತವು ಪ್ರದರ್ಶನದ ಶೋಭೆ ಹೆಚ್ಚಿಸಿತು.

ಮಿಂಚಿದ ಮಾಯಾ
ಇದಕ್ಕೆ ಮುಂಚೆ, ಗುರು ಶುಭಾ ಧನಂಜಯ ಅವರ ಪುತ್ರಿ ಹಾಗೂ ಶಿಷ್ಯೆ ಮಾಯಾ ಧನಂಜಯ ಅವರ ನಯನಾಕರ್ಷಕ ಭರತನಾಟ್ಯದೊಂದಿಗೆ ಸಂಜೆ ಕಾರ್ಯಕ್ರಮದ ಆರಂಭವಾಯಿತು. ನೂಲಿನಂತೆ ಸೀರೆ ಮತ್ತು ತಾಯಿಯಂತೆ ಮಗಳು ಎಂಬಂತೆ ಮಾಯಾ ಅವರಿಗೆ ಭರತನಾಟ್ಯ ಕಲೆಯು ರಕ್ತಗತವಾಗಿ ಬಂದಿದೆಯೆಂಬುದು ಪ್ರದರ್ಶನದಿಂದ ಸಾಬೀತಾಯಿತು.

ಆತ್ಮವಿಶ್ವಾಸ, ಆಸ್ಥೆ ಮತ್ತು ಆಸಕ್ತಿಯಿಂದ ಅವರು ನರ್ತಿಸಿ ಗುಣಾತ್ಮಕ ನೃತ್ಯಾಸ್ವಾದಕ್ಕೆ ಸಂಜೆಯನ್ನು ಅಣಿಗೊಳಿಸಿದರು. ಭಜಮಾನಸ ವಿಘ್ನೇಶಂ ಮೂಲಕ ಪ್ರೌಢ ಮತ್ತು ಶುಭ ಚಾಲನೆ. ಪುರಂದರದಾಸರ `ಗಮ್ಮನೆಲ್ಲಿಹ ತೋರಮ್ಮ~ ಪದದ ಮೂಲಕ ತುಂಟ ಬಾಲಕೃಷ್ಣನ ವಿವಿಧ ಲೀಲೆಗಳು ಮತ್ತು ಯಶೋದಾ-ಕೃಷ್ಣರ ಒಡನಾಟದ ನಿರೂಪಣೆ ಅರ್ಥಪೂರ್ಣವಾಗಿತ್ತು. ನೃತ್ಯವು ಪ್ರಸಂಗವನ್ನು ಚಿತ್ರವತ್ತಾಗಿ ಮೂಡಿಸಿದ ರೀತಿ ಶ್ಲಾಘನೀಯ.

ಭಕ್ತಿ ತತ್ವ ಮತ್ತು ಮಹತ್ವವನ್ನು ಸಾರಿ ಹೇಳುವ ಬಸವೇಶ್ವರರ ನಾದಪ್ರಿಯ ಶಿವನೆಂಬುವರು ವಚನಾಭಿನಯ ಆಪ್ತವಾಗಿತ್ತು. ಅದರ ಆಶಯವನ್ನು ವರ್ಣದ ರೀತಿಯಲ್ಲಿ ವಿಸ್ತರಿಸಲು ರಾವಣಾದಿಗಳ ಪ್ರಸಂಗಗಳನ್ನು ಉದಾಹರಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಮಧ್ಯೆಮಧ್ಯೆ ಅಳವಡಿಸಲಾಗಿದ್ದ ನೃತ್ತವೂ ಲಯ ವೈವಿಧ್ಯ ಮತ್ತು ಗಹನತೆಗಳಿಂದ ಒಡಗೂಡಿತ್ತು. ಮುಂದಿನ ರೋಹಿಣಿ ಅವರ `ಪುಷ್ಪಾಂಜಲಿ~ಯಲ್ಲಿ ಯಾವ ವಿಶೇಷತೆಯೂ ಇರಲಿಲ್ಲ.

ಭರವಸೆಯ ಭರತನಾಟ್ಯ
ಕಳೆದ ಶುಕ್ರವಾರ (ಜ.13) ಎಡಿಎ ರಂಗಮಂದಿರದಲ್ಲಿ ನಡೆದ ಹದಿನೈದು ವರ್ಷದ ಪೋರ ಸುಜಿತ್ ಸುಬ್ರಹ್ಮಣ್ಯನ ಭರತನಾಟ್ಯ ಭರವಸೆ ಮೂಡಿಸುವಂತಿತ್ತು. ಬಹು ಉಮೇದಿನೊಂದಿಗೆ ವೇದಿಕೆ ಪ್ರವೇಶಿಸಿದ ಸುಜಿತ್ ವಿದುಷಿ ಜಯ ಅವರ ಶಿಷ್ಯ. ಆತನ ತಂದೆ ಯು.ಎಸ್.ರಮೇಶ್ ಅವರು ಸಹ ಗುರು ಜಯ ಅವರ ಶಿಷ್ಯರಾಗಿ ಭರತನಾಟ್ಯ ಕಲಾವಿದರೇ. ಹಾಗಾಗಿ ಸುಜಿತ್‌ಗೆ ನೃತ್ಯದ ಬಗೆಗೆ ಒಲವು ಅಂಕುರಿಸಿರುವುದು ಸಹಜವೇ. ಗುರು ಜಯ (ನಟುವಾಂಗ), ಶ್ರಿವತ್ಸ (ಗಾಯನ), ಮಧುಸೂದನ್ (ಪಿಟೀಲು), ನರಸಿಂಹಮೂರ್ತಿ (ಕೊಳಲು) ಮತ್ತು ಪುರುಷೋತ್ತಮ್ (ಮೃದಂಗ) ಅವರ ಸಮರ್ಪಕ ಸಹಕಾರದೊಂದಿಗೆ ಪುಷ್ಪಾಂಜಲಿ ಮತ್ತು ಗಣೇಶ ಸ್ತುತಿಯ (ಗಜಮುಖನೆ, ಹಂಸಧ್ವನಿ) ಮುನ್ನುಡಿಯನ್ನು ಸುಜಿತ್ ಸಾದರ ಪಡಿಸಿದರು. ಖಂಡ ಅಲರಿಪ್ಪು ಮತ್ತು ಸರಸ್ವತಿ ಜತಿಸ್ವರದಲ್ಲಿ ಆತನ ನೃತ್ತ ಹಿಡಿತ ಗೋಚರಿಸಿತು. ಸುಬ್ರಹ್ಮಣ್ಯನನ್ನು ಕುರಿತಾದ ಶಬ್ದದಲ್ಲಿ (ರಾಗಮಾಲಿಕೆ) ಅವರ ಅಭಿನಯ ಜ್ಞಾನ ಚೆನ್ನಾಗಿ ಸ್ಫುರಿಸಿತು. ಆತನ ವಯಸ್ಸಿಗೆ ತಕ್ಕಂತೆ ಬಾಲಕೃಷ್ಣನ ಲೀಲೆಗಳ ವರ್ಣನೆ ಅಠಾಣ ವರ್ಣದ (ನಿನ್ನೆಕೋರಿ ನಮ್ಮಿನಾನುರಾ) ಮೂಲಕ ಸೊಗಸಾಗಿತ್ತು. ಶಿವತಾಂಡವದ ಅನುವರ್ತನೆ ಸ್ವರವಚನದ (ಆಡನೆ ರುದ್ರನಾಡನೆ, ನಾಗಸ್ವರಾವಳಿ ಮತ್ತು ಷಣ್ಮುಖಪ್ರಿಯ) ಆಧಾರದ ಮೇಲೆ ರಂಜಿಸಿತು.   
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT