ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ‘ನಿಧಿ’

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆರ್ಕಿಟೆಕ್ಟ್‌ ಪದವಿ (ವಾಸ್ತುಶಿಲ್ಪ) ಮುಗಿಸಿರುವ ಇವರು 14 ವರ್ಷ ಪಾಶ್ಚಾತ್ಯ ನೃತ್ಯದ ಅಭ್ಯಾಸ ಮಾಡಿದ್ದಾರೆ. ರ್‍ಯಾಂಪ್‌ ಮೇಲೆ ಕಾಣಿಸಿಕೊಂಡು ರೂಪದರ್ಶಿಯಾಗಲು ಹೊರಟಿರುವ ಕೋಲುಮುಖದ, ಈ ನೃತ್ಯಪ್ರೇಮಿ ಸುಂದರಿಯ ಹೆಸರು ನಿಧಿ.

ನಗರದ ಆರ್‌.ವಿ. ಕಾಲೇಜಿನಲ್ಲಿ ಆರ್ಕಿಟೆಕ್ಟ್‌ ಪದವಿ ಪೂರೈಸಿರುವ ನಿಧಿ ಮೊದಲ ಬಾರಿ ರ್‍ಯಾಂಪ್‌ ಮೇಲೆ ಕಾಣಿಸಿಕೊಂಡರು. ಲೀ ಮೆರಿಡಿಯನ್‌ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ‘ಮ್ಯಾಕ್ಸ್‌ ಮಿಸ್‌ ಬೆಂಗಳೂರು 2013’ ಪೂರ್ವಭಾವಿ ಪ್ರದರ್ಶನದಲ್ಲಿ ಬುಡಕಟ್ಟು ಮುದ್ರಣವಿರುವ ಚಳಿಗಾಲದ ಉಡುಪನ್ನು ಧರಿಸಿ ನಿಧಿ ಹೆಜ್ಜೆ ಹಾಕಿ ಗಮನ ಸೆಳೆದರು.

ಕೆಲವು ಮುದ್ರಣ ಜಾಹೀರಾತುಗಳಲ್ಲಿ ಪೋಸ್‌ ಕೊಟ್ಟ ಇವರಿಗೆ ಕಟ್ಟಡಗಳ ವಿನ್ಯಾಸ ಮಾಡುವುದೆಂದರೆ ಇಷ್ಟವಂತೆ. ಅದಕ್ಕಾಗಿ ಆರ್ಕಿಟೆಕ್ಟ್‌ ಪದವಿ ಆಯ್ಕೆ ಮಾಡಿಕೊಂಡರು. ಬಡವರಿಗೆ ಅದರಲ್ಲೂ ಕೊಳೆಗೇರಿ ಜನರಿಗೆ ವಸತಿಗಳನ್ನು ವಿನ್ಯಾಸ ಮಾಡಿಕೊಡಬೇಕೆಂಬ ಕನಸು ಇವರದ್ದು.

‘ಚಿಕ್ಕವಳಿದ್ದಾಗಿನಿಂದ ಆರ್ಕಿಟೆಕ್ಟ್‌ ಆಗಬೇಕೆಂಬ ಕನಸು ಕಂಡವಳು ನಾನು. ಜೊತೆಗೆ ರೂಪದರ್ಶಿಯೂ ಆಗಬೇಕೆಂದುಕೊಂಡಿದ್ದೆ. ಅದು ಈಗ ಸಾಧ್ಯವಾಗಿದೆ. ‘ಮ್ಯಾಕ್ಸ್‌ ಮಿಸ್‌ ಬೆಂಗಳೂರು 2013’ ಫ್ಯಾಷನ್‌ ಶೋ  ಗ್ರ್ಯಾಂಡ್‌ ಫಿನಾಲೆಗೆ ಆಯ್ಕೆಯಾದ 17 ಮಂದಿಯಲ್ಲಿ ಒಬ್ಬಳಾಗಿರುವುದಕ್ಕೆ ಖುಷಿಯಾಗುತ್ತಿದೆ. ಮನೆಯವರ ಪ್ರೋತ್ಸಾಹವೂ ಇದೆ’ ಎನ್ನುತ್ತಾರೆ ನಿಧಿ.

‘ಕಟ್ಟಡ ವಿನ್ಯಾಸ, ಮಾಡೆಲಿಂಗ್‌ ಎರಡೂ ಕ್ಷೇತ್ರಗಳನ್ನು ತೂಗಿಸಿಕೊಂಡು ಹೋಗಬೇಕು. ಮಾಡೆಲಿಂಗ್‌ ಎನ್ನುವುದು ಕೇವಲ ಸ್ಟೈಲ್‌ನ ಅಭಿವ್ಯಕ್ತಿ ಅಲ್ಲ. ವಿನ್ಯಾಸಕರು ಹೇಳಿದ ಬಟ್ಟೆಗಳನ್ನು ಹಾಕಿಕೊಳ್ಳುವ ವಿಷಯದಲ್ಲೂ ನಾವು ಎಲ್ಲವನ್ನೂ ಒಪ್ಪಿಕೊಳ್ಳಬಾರದು. ನಮಗೆ ಹೊಂದುವಂಥ ವಸ್ತ್ರಗಳನ್ನು ಮಾತ್ರ ಧರಿಸಬೇಕು. ‘ಮ್ಯಾಕ್ಸ್‌ ಮಿಸ್‌ ಬೆಂಗಳೂರು 2013’ ಅಂತಿಮ ಸ್ಪರ್ಧೆಗೆ ಒಂದು ತಿಂಗಳಿನಿಂದ ತಯಾರಿ ನಡೆಸಿದ್ದೇವೆ. ಗೆಲುವು ಪಡೆಯಲೇಬೇಕು’ ಎನ್ನುವ ನಿಧಿ ದೇಹಸೌಂದರ್ಯ ಕಾಪಾಡಿಕೊಳ್ಳಲು ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದು ಗಂಟೆ ಏರೋಬಿಕ್ಸ್‌ನಲ್ಲಿ ಬೆವರು ಸುರಿಸುತ್ತಾರಂತೆ. ಅಲ್ಲದೆ ಅರ್ಧ ಗಂಟೆ ಓಡುತ್ತಾರಂತೆ.

‘ನನ್ನೂರು ಮುಂಬೈ. ನಾನು ಬ್ಯುಸಿನೆಸ್‌ಮೆನ್‌. ಬೆಂಗಳೂರಿನಲ್ಲೇ ಮದುವೆಯಾಗಿದ್ದು, ಇಲ್ಲಿಯೇ ನೆಲೆಸಿದ್ದೇನೆ. ನನ್ನ ಮಗಳು ಚಿಕ್ಕಂದಿನಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ. ಅವಳಿಗೆ ಆರ್ಕಿಟೆಕ್ಟ್‌ ಆಗಬೇಕೆಂಬ ಬಯಕೆ. ಮಾಡೆಲಿಂಗ್ ಹವ್ಯಾಸ. ಇದಕ್ಕೆ ನಮ್ಮ ಪ್ರೋತ್ಸಾಹವೂ ಇದೆ. ಮ್ಯಾಕ್ಸ್‌ ಮಿಸ್‌ ಬೆಂಗಳೂರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುತ್ತಾಳೆ ಎಂಬ ನಂಬಿಕೆ ಇದೆ’ ಎಂದು ಮಗಳ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾರೆ ನಿಧಿ ತಂದೆ ದುರ್ಲಭ್‌. ಅಂದಹಾಗೆ, ನಿಧಿ ‘ಮ್ಯಾಕ್ಸ್‌ ಮಿಸ್‌ ಬೆಂಗಳೂರು 2013’ ಕಿರೀಟ ಮುಡಿಗೇರಿಸುವತ್ತ ಚಿತ್ತ ಹರಿಸಿದ್ದಾರೆ. 

ಚಿತ್ರ: ಸವಿತಾ ಬಿ.ಆರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT