ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯಕ್ಕೆ ವೃತ್ತಿಯ ಹಿರಿಮೆ ಕಲಿಯಿರಿ ಅಟ್ಟಕಲರಿ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಸೃಜನಶೀಲ ಮನಸ್ಸು ಎಂದಿಗೂ ಸಿದ್ಧ ಮಾದರಿ, ಸವಕಲಾದ ಹಾದಿಯನ್ನು ಅಪ್ಪಿಕೊಳ್ಳದು. ಅನ್ವೇಷಣೆ, ಹೊಸತನ, ಹೊಸ ಪ್ರಯೋಗಗಳಿಗೆ ಅದು ಸದಾ ತುಡಿಯುತ್ತಿರುತ್ತದೆ. ಸವಾಲುಗಳಿಗೆ ಮುಖಾಮುಖಿಯಾಗಲು ಹಾತೊರೆಯುತ್ತದೆ.

ಐಐಎಂನಂತಹ ಸಂಸ್ಥೆಗಳಲ್ಲಿ ಮ್ಯಾನೇಜ್‌ಮೆಂಟ್ ಶಿಕ್ಷಣ ಪಡೆದು ಹೋಟೆಲ್ ಉದ್ಯಮಕ್ಕೆ ಇಳಿಯುವವರು, ಐಐಟಿಗಳಲ್ಲಿ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಓದಿ ಕುಗ್ರಾಮಗಳಿಗೆ ತೆರಳಿ ಕೈಕೆಸರು ಮಾಡಿಕೊಳ್ಳುವವರು ಈ ಸಾಲಿಗೆ ಸೇರುತ್ತಾರೆ.

ಮತ್ತೆ ಕೆಲವರು ತಮ್ಮಳಗೆ ಕಲೆ, ಸಂಗೀತ ಅಡಗಿದ್ದರೂ ಅದರತ್ತ ಅದಮ್ಯ ತುಡಿತ ಇದ್ದರೂ ಅದನ್ನು ವೃತ್ತಿಯಾಗಿಸಿಕೊಳ್ಳಲು ಸಾಧ್ಯವಿಲ್ಲ, ಹಣ ಗಳಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹವ್ಯಾಸವಾಗಷ್ಟೇ ಮುಂದುವರಿಸುತ್ತಾರೆ.

ಆದರೆ, ನೃತ್ಯ, ಸಂಗೀತದಂತಹ ಕ್ಷೇತ್ರಗಳು ಈಗ ಅಗಾಧವಾಗಿ ಬೆಳೆದಿವೆ. ಜಾಗತೀಕರಣದ ಪ್ರಭಾವದಿಂದ ಅದನ್ನೇ ವೃತ್ತಿಯಾಗಿಸಿಕೊಳ್ಳುವವರಿಗೆ ದೇಶದಲ್ಲೇ ಏಕೆ, ವಿದೇಶಗಳಲ್ಲೂ ಭಾರಿ ಬೇಡಿಕೆ ಆರಂಭವಾಗಿದೆ. ಭರತನಾಟ್ಯ, ಕೂಚಿಪುಡಿ, ಕಥಕ್ಕಳಿಯಂತಹ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಿಗೆ ಸೀಮಿತ ವೇದಿಕೆಗಳಲ್ಲಿ ಅವಕಾಶ ಇದ್ದರೆ, ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಸಮಕಾಲೀನ ನೃತ್ಯ ಪ್ರಕಾರ ವಿಶ್ವವ್ಯಾಪಿಯಾಗಿದೆ.

ಸಮಕಾಲೀನ ನೃತ್ಯವನ್ನು ಕೇವಲ ಪರಿಶುದ್ಧ ನೃತ್ಯವಾಗಿ ಪರಿಗಣಿಸುವುದಿಲ್ಲ. ಅದು ದೇಹ, ಮನಸ್ಸುಗಳ ನಡುವೆ ಸಮತೋಲ ಸಾಧಿಸುವ ಯೋಗ, ಕಳರಿಪಯಟ್ಟು, ಫ್ಯಾಷನ್, ಸಿನಿಮಾ, ನಾಟಕ, ಜಾಹೀರಾತು ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದೆ. ಕ್ರೀಡಾಪಟುಗಳು, ಫಿಟ್‌ನೆಸ್ ಹುಚ್ಚು ಬೆಳೆಸಿಕೊಂಡವರು ತಮ್ಮ ದೈಹಿಕ ಸ್ವಾಸ್ಥ ಕಾಪಾಡಿಕೊಳ್ಳಲು ಸಮಕಾಲೀನ ನೃತ್ಯ ಅಭ್ಯಸಿಸುತ್ತಾರೆ.

ಇಂತಹ ವಿಭಿನ್ನ ಆಸಕ್ತಿ ಹೊಂದಿರುವವರಿಗಾಗಿ, ಸೃಜನಶೀಲ ಮನಸ್ಸುಗಳಿಗಾಗಿ ಬೆಂಗಳೂರು ಮೂಲದ `ಅಟ್ಟಕ್ಕಲರಿ ಸೆಂಟರ್ ಫಾರ್ ಮೂವ್‌ಮೆಂಟ್ ಆರ್ಟ್ಸ್~ ಸಂಸ್ಥೆ, `ಮೂವ್‌ಮೆಂಟ್ ಆರ್ಟ್ಸ್ ಹಾಗೂ ಮಿಕ್ಸೆಡ್ ಮಿಡಿಯಾ~ದಲ್ಲಿ ಒಂದು ವರ್ಷ ಅವಧಿಯ ಡಿಪ್ಲೋಮಾ ಕೋರ್ಸ್ ನಡೆಸುತ್ತಿದೆ.

ಕೋರ್ಸ್‌ನಲ್ಲಿ ಏನಿದೆ
ದೇಹ ಸ್ವಾಸ್ಥ ಕಾಪಾಡಿಕೊಳ್ಳುವ ತಂತ್ರ, ಸರಿಯಾದ ನಿಲುವು, ಸುರಕ್ಷಿತ ಚಲನೆ, ದೈಹಿಕ ಸಮತೋಲನ ಇತ್ಯಾದಿ ತಾಂತ್ರಿಕ ಅಂಶಗಳ ಜತೆ ಕಳರಿಪಯಟ್ಟು ಹಾಗೂ ಯೋಗ ಕಲಿಸಲಾಗುತ್ತದೆ. ಸಮಕಾಲೀನ ನೃತ್ಯ, ಭರತನಾಟ್ಯ, ಬ್ಯಾಲೆ, ನೃತ್ಯ ಸಂಯೋಜನೆಯ (ಕೋರಿಯೋಗ್ರಫಿ) ಸೂಕ್ಷ್ಮ ಅಂಶ ಹೇಳಿಕೊಡಲಾಗುತ್ತದೆ. ಬೆಳಕಿನ ಸಂಯೋಜನೆ, ತತ್ವಶಾಸ್ತ್ರ, ಕಲಾ ಇತಿಹಾಸ ಇತ್ಯಾದಿ ವಿಷಯಗಳ ಕುರಿತು ಥಿಯರಿ ತರಗತಿಗಳು ನಡೆಯುತ್ತವೆ. ಥಿಯರಿ ತರಗತಿಗಳಲ್ಲಿ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿರುತ್ತದೆ.

ವಿದ್ಯಾರ್ಹತೆ: ಪಿಯುಸಿ, 12ನೇ ತರಗತಿ ಹಾಗೂ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಡಿಪ್ಲೋಮಾಗೆ ಅರ್ಜಿ ಸಲ್ಲಿಸಬಹುದು. ನೃತ್ಯದಲ್ಲಿ ಆಸಕ್ತಿ ಹೊಂದಿರುವವರು, ಅದನ್ನೇ ವೃತ್ತಿಯಾಗಿ ಮಾಡಿಕೊಳ್ಳಲು ಬಯಸುವವರು ಈ ಡಿಪ್ಲೋಮಾದ ಪ್ರಯೋಜನ ಪಡೆಯಬಹುದು. ಅಟ್ಟಕ್ಕಲರಿ 2006ರಿಂದ ಈ ಕೋರ್ಸ್ ನಡೆಸುತ್ತಿದ್ದು, ನೀನಾಸಂ ಪದವೀಧರರು, ರಾಜ್ಯದ ಹಳ್ಳಿಗಾಡಿನ ವಿದ್ಯಾರ್ಥಿಗಳು ಲಾಭ ಪಡೆದಿದ್ದಾರೆ.

ಪ್ರಯೋಜನ
: ಅಟ್ಟಕ್ಕಲರಿಯಲ್ಲಿ ಆರಂಭಿಕ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ವಿದೇಶಗಳ ನೃತ್ಯ ಸಂಸ್ಥೆಗಳಲ್ಲಿ ಉತ್ತಮ ಸ್ವಾಗತ ಸಿಗಲಿದೆ.

ಈ ಡಿಪ್ಲೋಮಾ ಪಡೆದವರು ಅಟ್ಟಕ್ಕಲರಿಯ ಡಾನ್ಸ್ ಕಂಪೆನಿಯ ಭಾಗವಾಗಿರುತ್ತಾರೆ. ಇದರಿಂದಾಗಿ ದೇಶ, ವಿದೇಶಗಳಲ್ಲಿ ನೃತ್ಯ ಕಾರ್ಯಕ್ರಮ ನೀಡುವ ಅವಕಾಶ ದೊರೆಯಲಿದೆ.
ಇತರ ಸಮಕಾಲೀನ ನೃತ್ಯ ತಂಡಗಳಲ್ಲೂ ಹೇರಳ ಅವಕಾಶ ಲಭ್ಯವಿದೆ. ಶಾಲಾ, ಕಾಲೇಜುಗಳಲ್ಲಿ ನೃತ್ಯ ಕಾರ್ಯಾಗಾರ, ಶಿಬಿರ ನಡೆಸಿಕೊಡಬಹುದು. ರಿಯಾಲಿಟಿ ಶೋ, ಫ್ಯಾಷನ್ ಶೋ, ಸಿನಿಮಾ, ರಂಗಭೂಮಿ, ಜಾಹೀರಾತುಗಳಿಗೆ ನೃತ್ಯ ಸಂಯೋಜನೆ ಮಾಡಬಹುದು. ಚಲನೆಯ ಕಲೆ ಹಾಗೂ ಮಿಶ್ರ ಮಾಧ್ಯಮದ ಕುರಿತು ವಿಸ್ತೃತ ಮಾಹಿತಿ ನೀಡುವ ಈ ಕೋರ್ಸ್ ಅವಕಾಶಗಳ ಹೆಬ್ಬಾಗಿಲು ತೆರೆಯಬಲ್ಲದು.

ಸೆಪ್ಟೆಂಬರ್ 10ರಿಂದ ಈ ವರ್ಷದ ಡಿಪ್ಲೋಮಾ ತರಗತಿಗಳು ಆರಂಭವಾಗಲಿವೆ. ಪ್ರವೇಶ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆಡಿಷನ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. 25ರಿಂದ 30 ವಿದ್ಯಾರ್ಥಿಗಳಿಗೆ ಅವಕಾಶವಿದೆ.
 ಅರ್ಜಿಗಳನ್ನು www.attakkalari.orgನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆಸಕ್ತರು 080 2212 3684/ 4148 3534ಗೆ ಕರೆ ಮಾಡಬಹುದು.

ಇಮೇಲ್: attakkalari.diploma@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT