ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಚ್ಚಿನ ಮೇಷ್ಟ್ರಿಗೆ ಮಕ್ಕಳ ಮೊರೆ: ನೀವು ಎಲ್ಲಿಯೂ ಹೋಗಬೇಡಿ ಸಾರ್....

Last Updated 4 ಅಕ್ಟೋಬರ್ 2012, 8:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಿಕ್ಷಕರೊಬ್ಬರ ಜೀವನದಲ್ಲಿ 25 ವರ್ಷಗಳು ಸಾಮಾನ್ಯವಾದುದ್ದಲ್ಲ. ಅದರಲ್ಲೂ ಆ ಶಿಕ್ಷಕರು ಒಂದೇ ಶಾಲೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದರೆ, ಅದು ಇನ್ನೂ ಅಪರೂಪವಾಗುತ್ತದೆ. ಒಂದೆಡೆ ವಿದ್ಯಾರ್ಥಿಗಳಿಂದ ಕಳಚಿಕೊಳ್ಳಲಾಗದ ಬಾಂಧವ್ಯ, ಮತ್ತೊಂದೆಡೆ ಹಳೆಯ ದಿನಗಳ ನೆನಪು ಮತ್ತೆ ಮತ್ತೆ ಕಾಡುತ್ತದೆ. ಅಂಥದ್ದೇ ಅನುಭವ ಕಥನ ತಾಲ್ಲೂಕಿನ ರಾಮಪಟ್ಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಅನಾವರಣಗೊಂಡಿತು.

ತಾಲ್ಲೂಕಿನ ಕಟ್ಟಕಡೆಯ ಗ್ರಾಮಗಳಲ್ಲಿ ಒಂದಾಗಿರುವ ರಾಮಪಟ್ಣ ಶಾಲೆ ಆವರಣವು ಬುಧವಾರ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಪ್ರೀತಿ-ಮಮತೆ ಸಂಬಂಧಕ್ಕೆ ವೇದಿಕೆಯಾಯಿತು.

25 ವರ್ಷಗಳನ್ನು ಸೇವೆ ಸಲ್ಲಿಸಿ ಬೇರೆಯೊಂದು ಶಾಲೆಗೆ ವರ್ಗವಾಗಿರುವ ಶಿಕ್ಷಕರೊಬ್ಬರು ಹೊರಡುವ ಸಿದ್ಧತೆಯಲ್ಲಿದ್ದರೆ, `ನಮ್ಮ ಪ್ರೀತಿಯ ಸರ್, ನೀವು ಎಲ್ಲಿಗೂ ಹೋಗಬೇಡಿ. ಇಲ್ಲೇ ಇರಿ. ನಮಗೆ ಪಾಠ ಕಲಿಸಿ~ ಎಂದು ವಿದ್ಯಾರ್ಥಿಗಳು ಕೈಗಳನ್ನು ಜೋಡಿಸಿ ವಿನಂತಿಸಿಕೊಳ್ಳುತ್ತಿದ್ದರು.

ರಾಮಪಟ್ಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಎರಡೂವರೆ ದಶಕಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ವಿಷಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜಿ.ವಿ.ವೆಂಕಟೇಶ್ ಅವರನ್ನು ವಿದ್ಯಾರ್ಥಿಗಳು ಬೀಳ್ಕೊಡಲು ಸಿದ್ಧರಿರಲಿಲ್ಲ. ಮೆಚ್ಚಿನ ಗುರುಗಳ ಮನವೊಲಿಸಲು ಶಾಲೆಯ ಎಲ್ಲ ವಿದ್ಯಾರ್ಥಿಗಳು ತರಗತಿಗಳನ್ನು ತ್ಯಜಿಸಿ ಪ್ರತಿಭಟನೆ ನಡೆಸಿದರು.

ಶಾಲೆಯ ಮುಖ್ಯ ಪ್ರವೇಶದ್ವಾರಕ್ಕೆ ಬೀಗವನ್ನು ಜಡಿದರು. `ನಮ್ಮ ಸರ್, ನಮ್ಮಂದಿಗೆ ಇರಲಿ. ಅವರು ಎಲ್ಲೂ ಹೋಗುವುದು ಬೇಡ~ ಎಂದು ಘೋಷಣೆಗಳನ್ನು ಹಾಕಿದರು. `ನಮ್ಮ ಜಿ.ವಿ.ವೆಂಕಟೇಶ್ ಸರ್ ಅವರು ಪ್ರೀತಿಯಿಂದ ಮಾತನಾಡುತ್ತಾರೆ.

ಚೆನ್ನಾಗಿ ಪಾಠ ಮಾಡುತ್ತಾರೆ. ಒಳ್ಳೊಳ್ಳೆಯ ಕತೆಗಳನ್ನು ಹೇಳುತ್ತಾರೆ. ಶಾಲೆಗೆ ಬಾರದಿದ್ದರೆ, ಮನೆಯವರೆಗೆ ಬಂದು ಶಾಲೆಗೆ ಕರೆದೊಯ್ಯುತ್ತಾರೆ.

ಇಂಥ ಒಳ್ಳೆ ಸರ್ ಅವರನ್ನು ಬಿಟ್ಟುಕೊಡುವುದು ಹೇಗೆ? ಅವರು ನಮ್ಮಂದಿಗೆ ಉಳಿದುಕೊಳ್ಳಲಿ.  ಅವರಿಂದ ಇನ್ನಷ್ಟು ವಿಷಯಗಳನ್ನು ನಾವು ಕಲಿಯಬೇಕಿದೆ. ಅವರು ಬೇರೆ ಶಾಲೆಗೆ ಹೋಗಿಬಿಟ್ಟರೆ, ನಮ್ಮ ಗತಿಯೇನು~ ಎಂದು ವಿದ್ಯಾರ್ಥಿಗಳು ನೊಂದುಕೊಂಡರು.

ರಾಮಪಟ್ಣ ಶಾಲೆಯೊಂದಿಗಿನ ನಂಟನ್ನು ಹಂಚಿಕೊಂಡ ಜಿ.ವಿ.ವೆಂಕಟೇಶ್, `ಈ ಶಾಲೆಯಿಂದ ಬೇರೆ ಕಡೆ ಹೋಗಲು ನನಗೂ ತುಂಬಾ ನೋವಾಗುತ್ತದೆ. ಹಲವು ಬಾರಿ ಅವಕಾಶ ದೊರೆತರೂ ನಾನು ಬೇರೆ ಶಾಲೆಗೆ ವರ್ಗವಾಗಲಿಲ್ಲ. ಮುದ್ದಿನ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪಾಠ ಮಾಡಬೇಕು ಮತ್ತು ಶಾಲೆಯನ್ನು ಅಭಿವೃದ್ಧಿಪಡಿಸಬೇಕು ಎಂಬ ಗುರಿಯೊಂದಿಗೆ ಇಲ್ಲಿ ಕಾರ್ಯನಿರ್ವಹಿಸಿದೆ. ನನ್ನ ಮೇಲಿನ ಪ್ರೀತಿ-ಅಭಿಮಾನದಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ನನ್ನನ್ನು ಬಿಟ್ಟುಕೊಡಲು ಸಿದ್ಧರಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT