ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟಿಜೆನ್‌ಗಳ ಲೂಸಿಯಾ

Last Updated 17 ಮೇ 2012, 19:30 IST
ಅಕ್ಷರ ಗಾತ್ರ

ಇದು ವಿಶಿಷ್ಟ ಪ್ರಯೋಗವೇ ಅಲ್ಲವೇ ಎನ್ನುವುದು ಪ್ರೇಕ್ಷಕರಿಗೆ ಬಿಟ್ಟ ವಿಚಾರ. `ಲೂಸಿಯಾ~ ಎಂಬ ಚಿತ್ರ ನಿರ್ದೇಶಿಸುತ್ತಿರುವ ಪವನ್ ಅವರಿಗೆ ಪ್ರೇಕ್ಷಕರೇ ಹಣದ ನಿಧಿ. ಆ ಕಾರಣಕ್ಕೇ ಅವರ `ಲೂಸಿಯಾ~ ಚಿತ್ರಕ್ಕೆ 12 ಮಂದಿ ನಿರ್ಮಾಪಕರು, 27 ಮಂದಿ ಸಹ ನಿರ್ಮಾಪಕರು, 28 ಮಂದಿ ಸಹಾಯಕ ನಿರ್ಮಾಪಕರು! ಇಂಥ ಪ್ರಯೋಗ, ಕೇರಳ ಸೇರಿದಂತೆ ದೇಶದ ಬೇರೆ ಬೇರೆ ಕಡೆ ನಡೆಯುತ್ತಿದೆಯಂತೆ.
 
ಪ್ರಸ್ತುತ ದಿನಗಳಲ್ಲಿ ಚಿತ್ರ ನಿರ್ಮಾಣ ಹಲವು ಕೋಟಿಗಳನ್ನು ದಾಟುತ್ತಿದ್ದರೂ ಇವರ ಚಿತ್ರಕ್ಕೆ ಬೇಕಾದದ್ದು ಕೇವಲ ಐವತ್ತು ಲಕ್ಷ. ಚಿತ್ರ ನಿರ್ಮಿಸುತ್ತಿರುವ ಬಗ್ಗೆ ಆನ್‌ಲೈನ್‌ನಲ್ಲಿ ಪ್ರಚಾರ ಆರಂಭಿಸಿದಾಗ `ನೆಟಿಜೆನ್~ಗಳಿಂದ ಭರಪೂರ ಪ್ರತಿಕ್ರಿಯೆ.
 
ಚಿತ್ರದ ಟಿಕೆಟ್‌ಗಳನ್ನು ಮುಂಗಡವಾಗಿ ಮಾರಿ ಆ ಹಣದಿಂದ ಚಿತ್ರ ನಿರ್ಮಿಸುವುದು ಎಂಬುದು ಪವನ್ ಅವರ ಮೊದಲ ಯೋಜನೆ. ಆದರೆ ಟಿಕೆಟ್ ಕೊಳ್ಳುವುದಕ್ಕಿಂತ ಹೆಚ್ಚಾಗಿ ನೆಟಿಜೆನ್‌ಗಳು ಸಿನಿಮಾ ನಿರ್ಮಾಪಕರಾಗಲು ಹೆಚ್ಚು ಉತ್ಸಾಹ ತೋರಿದರು. ಕೇವಲ 27 ದಿನಗಳಲ್ಲಿ ಹಣ ಸಂಗ್ರಹವಾಯಿತು.

ಕೇವಲ ಐವತ್ತು ಲಕ್ಷದಲ್ಲಿ ಚಿತ್ರ ಪೂರ್ಣಗೊಳಿಸಬಹುದೇ ಎಂಬ ಪ್ರಶ್ನೆಗೆ ಖಂಡಿತ ಸಾಧ್ಯ ಎಂಬ ಉತ್ತರ ಪವನ್ ಅವರದು. ಏಕೆಂದರೆ ಚಿತ್ರಕ್ಕೆ ಬೇಕಾಗಿರುವ ಲೊಕೇಷನ್‌ಗಳನ್ನು ಒದಗಿಸಲು ಕೆಲವರು ಮುಂದೆ ಬಂದಿದ್ದಾರೆ. ಇನ್ನೂ ಕೆಲವರು ತಮ್ಮ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ರಾಘವೇಂದ್ರ ಎನ್ನುವವರು ಹಾಡುಗಳನ್ನು ಬರೆದಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಎಂಬ ಮೈಸೂರಿನ ಸಾಫ್ಟ್‌ವೇರ್ ಎಂಜಿನಿಯರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಬಪ್ಪಿ ಬ್ಲಾಸಂ ಹಾಡುವ ಮೂಲಕ, ಮೋನಿಷ್ ಕೀಬೋರ್ಡ್ ನುಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಅಂದಹಾಗೆ ಚಿತ್ರದ ನಾಯಕ ನೀನಾಸಂ ಸತೀಶ್. ಯೋಗರಾಜ ಭಟ್ಟರ `ಡ್ರಾಮಾ~ದಲ್ಲಿ ಅಭಿನಯಿಸಿದ ಬಳಿಕ ಅವರಿಗೆ ಲೂಸಿಯಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುವ ಅವಕಾಶ. ಚಿತ್ರದ ನಾಯಕಿ ಶ್ರುತಿ ಹರಹರನ್. ನಿಫ್ಟ್‌ನಲ್ಲಿ ಫ್ಯಾಷನ್ ಪದವಿ ಪಡೆದಿರುವ ಅರುಂಧತಿ ಚಿತ್ರದ ವಸ್ತ್ರ ವಿನ್ಯಾಸಕಿ.
 
ಇದು ಕೇವಲ ಹವ್ಯಾಸಿಗಳ ಚಿತ್ರ ಎಂದು ತಳ್ಳಿಹಾಕುವಂತಿಲ್ಲ. ಕಾರಣ ಸುಬ್ರಹ್ಮಣ್ಯ ಎಂಬ ಹಿರಿಯರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
`ಪವನ್ ಅವರದು ಜೀನಿಯಸ್ ತಲೆ~ ಎಂದು ಕೊಂಡಾಡಿದ್ದು ಅವರ ಗುರು ಯೋಗರಾಜ್ ಭಟ್. ಸಮಾನ ಆಸಕ್ತರನ್ನು ಇಂಟರ್‌ನೆಟ್ ಮೂಲಕ ಒಗ್ಗೂಡಿಸಿರುವ ಪವನ್ ಬಗ್ಗೆ ಅವರಿಂದ ಮೆಚ್ಚುಗೆಯ ಮಾತು. ಅಕ್ಟೋಬರ್ 25ರಂದು ಚಿತ್ರ ಬಿಡುಗಡೆಗೆ ನಿರ್ಧರಿಸಲಾಗಿದೆ.
 
ಈ ಕುರಿತು ಈಗಾಗಲೇ ಕೆಲವು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳೊಂದಿಗೆ ಒಡಂಬಡಿಕೆಯನ್ನೂ ಮಾಡಿಕೊಳ್ಳಲಾಗಿದೆ.ಕಡಿಮೆ ಬಜೆಟ್‌ನ ಚಿತ್ರ ಎಂಬ ಕಾರಣಕ್ಕೆ ಸಿನಿಮಾದಲ್ಲಿ ದಿಗಂತ್ ನಟಿಸಲಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಯನ್ನು ಪವನ್ ತಳ್ಳಿಹಾಕಿದರು.

ಅವರು ಬೇರೆ ಚಿತ್ರದಲ್ಲಿ ತಲ್ಲೆನರಾಗಿರುವುದು ಚಿತ್ರದಲ್ಲಿ ಅಭಿನಯಿಸದೇ ಇರಲು ಕಾರಣ ಎಂದರು. ನಾಲ್ಕು ಹಂತಗಳಲ್ಲಿ ಚಿತ್ರದ ಚಿತೀಕರಣ ನಡೆಯಲಿದೆಯಂತೆ. ಪತ್ತೇದಾರಿ ಶೈಲಿಯ ಚಿತ್ರ ಇದಂತೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT