ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್ಟಕಲ್ಲಪ್ಪ ಶ್ರೇಷ್ಠ ಕ್ರೀಡಾಪ್ರೇಮಿ: ಜಿಲ್ಲಾಧಿಕಾರಿ

Last Updated 1 ಜುಲೈ 2013, 5:39 IST
ಅಕ್ಷರ ಗಾತ್ರ

ರಾಯಚೂರು: ಕೆ.ಎ ನೆಟ್ಟಕಲ್ಲಪ್ಪ ಅವರು ಮಹಾನ್ ವ್ಯಕ್ತಿ ಹಾಗೂ ಕ್ರೀಡಾ ಪ್ರೇಮಿ. ಅವರು ಬಹಳ ಸಣ್ಣ ವಯಸ್ಸಿನಯಲ್ಲಿಯೇ ಸ್ವರ್ಗಸ್ಥರಾದರು. ಅವರ ಹೆಸರಿನಲ್ಲಿ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಗ್ರಾಮೀಣ ಪ್ರತಿಭಾನ್ವಿತ ಕ್ರೀಡಾ ಪ್ರತಿಭೆಗಳ ಪ್ರೋತ್ಸಾಹಕ್ಕೆ ಕ್ರೀಡೆ ಆಯೋಜಿಸುತ್ತ ಬಂದಿರುವ ರಸ್ತೆ ಓಟ ಸ್ಪರ್ಧೆ ಸ್ತುತ್ಯಾರ್ಹವಾದುದು ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಹೇಳಿದರು.

ಇಲ್ಲಿ ಭಾನುವಾರ ನಡೆದ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪ್ರಾಯೋಜಿತ  ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ ಕೆ.ಎ ನೆಟ್ಟಕಲ್ಲಪ್ಪ ರಸ್ತೆ ಓಟ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಪದಕ ಪ್ರದಾನ ಮಾಡಿ ಮಾತನಾಡಿದರು.

ಕ್ರೀಡಾಕೂಟದಲ್ಲಿ ಉತ್ಸಾಹ ಬೆಳೆಸಿಕೊಳ್ಳಬೇಕು. ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೃಢಕಾಯರಾಗಿ ರೋಗದಿಂದ ಮುಕ್ತರಾಗಲು ಸಾಧ್ಯ. ಗ್ರಾಮೀಣ ಪ್ರದೇಶದ ಯುವಕ-ಯುವತಿಯರು ಹೊಲಗಳಲ್ಲಿ ಕೆಲಸ ಮಾಡುವುದೇ ಮುಜಗರ ಎಂಬುವಷ್ಟರ ಮಟ್ಟಿಗೆ ವರ್ತನೆ ಬೆಳಿಸಕೊಂಡಿದ್ದಾರೆ. ಈ ಮನೋಭಾವ ಹೋಗಬೇಕು. ಕಷ್ಟಪಟ್ಟು ನಿಷ್ಠೆಯಿಂದ ಶ್ರಮಿಸುವ ಮನೋಭಾವ ಬೇಕು. ಇಲ್ಲದೇ ಇದ್ದರೆ ಭವಿಷ್ಯದಲ್ಲಿ ಕಣ್ಣೀರು ಹಾಕಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ಮೊದಲಿನಿಂದಲೂ ಕ್ರೀಡೆಗೆ ಹಾಗೂ ಕ್ರೀಡಾಚಟುವಟಿಕೆಗೆ ವಿಶೇಷ ಪ್ರೋತ್ಸಾಹ ನೀಡುತ್ತ ಬಂದಿವೆ. ಕ್ರೀಡಾಪಟು, ಕ್ರೀಡಾ ಚಟುವಟಿಕೆ ಪ್ರೋತ್ಸಾಹಕ್ಕೆ ವಿಶೇಷ ಪುರವಣಿ ಪ್ರಕಟಿಸುತ್ತಿರುವುದು ಕ್ರೀಡೆಯ ಬಗ್ಗೆ ಆ ಪತ್ರಿಕೆಗಳ ಕಾಳಜಿ ತೋರಿಸುತ್ತದೆ ಎಂದರು.

36,600 ನಗದು ಬಹುಮಾನ: ರಸ್ತೆ ಓಟ ಸ್ಪರ್ಧೆಯ ಪುರುಷ, ಮಹಿಳಾ, ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ವಿಜೇತ ಒಟ್ಟು 29 ಜನರಿಗೆ ನಗದು ಬಹುಮಾನ 36,600 ರೂಪಾಯಿ ಹಾಗೂ ಪ್ರಶಸ್ತಿ ಪತ್ರವನ್ನು  ಅತಿಥಿಗಳು ವಿತರಣೆ ಮಾಡಿದರು. ಪುರುಷ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೃಷ್ಣಪ್ಪ, ಮಹಿಳಾ ವಿಭಾಗದಲ್ಲಿ

ಪ್ರಥಮ ಸ್ಥಾನ ಪಡೆದ ತಿಪ್ಪವ್ವ ಸಣ್ಣಕ್ಕಿ, ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅವಿನಾಶ್, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಕ್ಷಿತಾ ಆರ್ ಅವರಿಗೆ ಅತಿಥಿಗಳು ಚಿನ್ನದ ಪದಕ ವಿತರಿಸಿದರು.

ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಸಂಘಟನಾ ಕಾರ್ಯದರ್ಶಿ ಅನಂತರಾಜು ವೇದಿಕೆಯಲ್ಲಿದ್ದರು. ವಿಜೇತರಾದ ತಿಪ್ಪವ್ವ ಸಣ್ಣಕ್ಕಿ, ಕೃಷ್ಣಪ್ಪ, ಬಸವರಾಜ ಅಮೀನಗಡ ಅವರು ರಸ್ತೆ ಓಟ ಸ್ಪರ್ಧೆ ಅನುಭವ ಹಂಚಿಕೊಂಡರು.

ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಕ್ಲಬ್‌ನ ಕಾರ್ಯದರ್ಶಿ ತಿಮ್ಮಾರೆಡ್ಡಿ, ಕೃಷಿ ವಿವಿ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ರಾಜಣ್ಣ ಅವರ ನೇತೃತ್ವದಲ್ಲಿ ಕ್ರೀಡಾ ತರಬೇತುದಾರರು ರಸ್ತೆ ಓಟ ಸ್ಪರ್ಧೆ ನಿರ್ವಹಿಸಿ ಯಶಸ್ಸಿಗೆ ಕಾರಣರಾದರು.

ಸಹಕಾರ: ಜಿಲ್ಲಾ ಆರೋಗ್ಯ ಇಲಾಖೆ ಅಂಬುಲನ್ಸ್‌ನೊಂದಿಗೆ ವೈದ್ಯಾಧಿಕಾರಿ ಡಾ ಶಿವಶರಣಪ್ಪ, ಚಾಲಕ ಮಲ್ಲಂಗ ಬಾಬಾ, ಶುಶ್ರೂಷಕಿ ಲಕ್ಷ್ಮೀ, ಬಾಲಂಕು ಆಸ್ಪತ್ರೆ ಅಂಬುಲನ್ಸ್ ಸಿಬ್ಬಂದಿ ವರ್ಗ, ಸಂಚಾರ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಪಶ್ಚಿಮ ಠಾಣೆ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ನಗರದ ಪೊಲೀಸರು, ಕ್ರೀಡಾ ತರಬೇತುದಾರರು ಸಹಕಾರ ನೀಡಿದರು.

`ನೆಟ್ಟಕಲ್ಲಪ್ಪ ಕ್ರೀಡಾ ಬೆಳಕು'
ಕೆ.ಎ ನೆಟ್ಟಕಲ್ಲಪ್ಪ ರಾಜ್ಯ ಮಟ್ಟದ ರಸ್ತೆ ಓಟ ಸ್ಪರ್ಧೆ ರಾಯಚೂರು ಜಿಲ್ಲೆಯಲ್ಲಿ ಕ್ರೀಡಾಪಟುಗಳಲ್ಲಿ ಬೆಳಕು ಮೂಡಿಸಿದೆ. ಈ ಭಾಗದಲ್ಲಿ ಕ್ರೀಡೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ  ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ ಪಾಟೀಲ್ ಮಾತನಾಡಿ,
ಕ್ರೀಡಾ ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಮುಖ್ಯ. ಭಾಗವಹಿಸುವುದರಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ.
ಭವಿಷ್ಯದಲ್ಲಿ ಸಾಧನೆಗೆ ಸಹಕಾರಿಯಾಗುತ್ತದೆ. ಈ ಭಾಗದ ಶಿಕ್ಷಕರು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT