ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆತ್ತಿಯ ಮೇಲಿನ ಮಾಯಾ ಟೋಪಿ!

Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ಕೇಶ ಸೌಂದರ್ಯದ ಬಗ್ಗೆ ಮನುಷ್ಯ ಕಾಳಜಿ ವಹಿಸಿದ ಕ್ಷಣವೇ `ವಿಗ್' ಕಲೆಯ ಉಗಮದ ಬೀಜ ಬಿದ್ದಿರಬೇಕು. ಒಂದು ಕಾಲಕ್ಕೆ ಶ್ರೀಮಂತರಿಗಷ್ಟೇ ಮೀಸಲಾಗಿದ್ದ `ಕೂದಲ ಕುಲಾವಿ'ಗಳು ಈಗ ಫ್ಯಾಷನ್ ಲೋಕದ ಅವಿಭಾಜ್ಯ ಭಾಗ. ಪಾತ್ರಗಳ ವರ್ಚಸ್ಸನ್ನು ರೂಪಿಸಲು ಸಿನಿಮಾಗಳಲ್ಲಿ ಬಳಕೆಯಾಗುವ ವಿಗ್‌ಗೆ ಮಾನವೀಯ ಆಯಾಮವೂ ಇದೆ. ವಿವಿಧ ಕಾರಣಗಳಿಂದಾಗಿ ತಲೆಕೂದಲು ಕಳೆದುಕೊಂಡು ಬೋಳಾದವರಿಗೆ, ಕ್ಯಾನ್ಸರ್ ಬಾಧೆಯಿಂದ ಕೂದಲು ಉದುರಿದವರ ಪಾಲಿಗೆ `ಚೌರಿ ಟೋಪಿ'ಗಳು ಅನುಕೂಲಕರ. ಜೀವನಶೈಲಿಯ ಒಂದು ರೂಪವಾಗಿ, ಕಲೆಯಾಗಿ, ಉದ್ಯಮವಾಗಿ ರೂಪುಗೊಂಡಿರುವ ವಿಗ್ ಕ್ಷೇತ್ರದ ಇಣುಕುನೋಟ
ಇಲ್ಲಿದೆ.

ಎಂಥವರನ್ನೂ ಸೆಳೆವ ನೀಳವೇಣಿ... ನಾದಕ್ಕೆ ತಕ್ಕಂತೆ `ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ' ನಡೆಯುತ್ತಿದ್ದಾಳೆ. ಬೆನ್ನನ್ನು ನೇವರಿಸಿದೆ ತಲೆಗೂದಲು. ಅಬ್ಬಾ ಎಂದು ಮೈಮರೆವ ಹೊತ್ತಿಗಾಗಲೇ ಆಕೆ ಮಾಯ. ಅರೆ ನಿಮಿಷದಲ್ಲಿ ಮತ್ತದೇ ಹಂಸನಡಿಗೆ. ಆದರೆ ಅವಳೀಗ ಗುಂಗರುಗೂದಲಿನ ಸುಂದರಿ. ಅರೆ ಎಲ್ಲಿ ಹೋಯಿತು ಆ ನೀಳ ಕೇಶರಾಶಿ ಎಂದು ಕೇಳಿಕೊಳ್ಳುವ ಹೊತ್ತಿಗೆ ಆಕೆಯೇ ಬಾಬ್‌ಕಟ್ ಬೆಡಗಿಯಾಗಿ ಪುನಃ ಪ್ರತ್ಯಕ್ಷ. ಎಲಾ ಕೇಶಕನ್ಯೆ, ಏನೀ ಮಾಯೆ?!

ವಿಗ್ ಚಾತುರ್ಯ ಏನೆಲ್ಲಾ ಮೋಡಿ ಮಾಡಿದೆ ನೋಡಿ. ಯಕ್ಷಗಾನದ ಮೋಹಿನಿಯಿಂದ `ಅನಭಿಜ್ಞ ಶಾಕುಂತಲೆ'ಯವರೆಗೆ, `ಕ್ಲಿಯೋಪಾತ್ರ'ಳಿಂದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ನವರೆಗೆ, ಮರ್ಲಿನ್ ಮನ್ರೋಳಿಂದ ರಜನಿಕಾಂತ್‌ವರೆಗೆ ವಿಗ್‌ಗಳದು ವಿಸ್ತೃತ ಜಗತ್ತು. ಖ್ಯಾತ ನಿರ್ದೇಶಕ ರಿತುಪರ್ಣೋ ಘೋಷ್ `ಚಿತ್ರಾಂಗದೆ'ಯಾಗಿ ಮಿಂಚಿದ್ದು ಅದೇ ಕೃತಕ ಕೇಶರಾಶಿಯಿಂದ. `ಆಪ್ತರಕ್ಷಕ' ಸಿನಿಮಾದ ವಿಷ್ಣುವರ್ಧನ್‌ರ ಪಾತ್ರವೊಂದರ ಅಬ್ಬರಕ್ಕೆ ತಲೆ ಕುಣಿಸಿದ ಕೂದಲೂ ಕೃತಕವಾದುದೇ! ಇದೆಲ್ಲಾ ನಾಟ್ಯ- ಸಿನಿಮಾದ ಜಗತ್ತು. ಆದರೆ ವಿಗ್ ಮಾಯಾಜಾಲ ಆ ಜಗತ್ತಿಗೇ ಸೀಮಿತವಾಗಿಲ್ಲ.

ಒಂದು ಕಾಲಕ್ಕೆ ವಿಗ್ ತೊಡುವವರೆಲ್ಲಾ ಶ್ರೀಮಂತರು ಎನ್ನುವ ನಂಬಿಕೆ ಇತ್ತು. ಆಮೇಲೆ ರಾಜಕಾರಣಿಗಳನ್ನೂ ಅದು ಆವರಿಸಿಕೊಂಡಿತು. ನಂತರ ಹೆಚ್ಚು ಬಳಸಿದ್ದು ಫ್ಯಾಷನ್ ವಿಶ್ವ. ಕಡೆ ಕಡೆಗೆ ವಿಪರೀತ ಚಿಕಿತ್ಸೆಗಳಿಂದ ಕೂದಲು ಕಳೆದುಕೊಳ್ಳುವ ರೋಗಿಗಳನ್ನು ವಿಗ್ ತನ್ನ ತೆಕ್ಕೆಯಲ್ಲಿ ಆತುಕೊಳ್ಳತೊಡಗಿತು. ಕಾಯಿಲೆಗಳಿಂದ ಜೀವನೋತ್ಸಾಹ ಕಳೆದುಕೊಂಡ ರೋಗಿಗಳೂ ವಿಗ್ ತೊಟ್ಟು ಬದುಕುವ ಆಸೆ ಚಿಗುರಿಸಿಕೊಂಡರು. ಕನ್ನಡಿಯಲ್ಲಿ ತಮ್ಮನ್ನು ನೋಡಿಕೊಳ್ಳುತ್ತ ನೋವುಗಳನ್ನು ಮರೆತರು.
***
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನನ್ನ ಸ್ನೇಹಿತನ ಪತ್ನಿ ಚಿಕಿತ್ಸೆಯಿಂದಾಗಿ ತಲೆಗೂದಲು ಕಳೆದುಕೊಂಡಿದ್ದರು. ಕೆಲ ದಿನಗಳ ಹಿಂದೆ ಅಚಾನಕ್ಕಾಗಿ ಕರೆಯೊಂದು ಗೆಳೆಯನ ಮೊಬೈಲ್‌ಗೆ ಬಂತು. ಆ ಬದಿಯ ವ್ಯಕ್ತಿ ನಮಸ್ಕಾರ ಹೇಳಿದರು. `ಸರ್ ಹೇಗಿದ್ದೀರಿ? ಅಮ್ಮಾವರ ತಲೆಯಲ್ಲಿ ಕೂದಲುಗಳು ಬರುತ್ತಿವೆಯೇ?' ಎಂದರು.

ಮನುಷ್ಯ ಸಂಬಂಧ ಸೇರಿದಂತೆ ಎಲ್ಲವೂ ವ್ಯಾಪಾರ, ವ್ಯವಹಾರದ ಪರಿಧಿಯೊಳಗೆ ಸೇರಿ ಹೋದ ಕಾಲವಿದು. ಇಂಥ ಹೊತ್ತಿನಲ್ಲಿ ಮಾನವೀಯ ಸಂಬಂಧಗಳನ್ನು ನೆನಪಿಸುವ ಕರೆ ಅದಾಗಿತ್ತು. ಫೋನ್ ಮಾಡಿದವರು ಆರ್. ಮರಿಶೆಟ್ಟಿ. ಇವರಿಗೂ, ವಿಗ್‌ಗಳಿಗೂ ಒಂದು ನಂಟಿದೆ. ಅದೇನೆಂದು ತಿಳಿಯುವ ಮುನ್ನ ಚರಿತ್ರೆಯಲ್ಲೊಂದಿಷ್ಟು ಕಾಲ ಓಡಾಡಿ ಬರೋಣ.

ಮುಡಿಗೇರಿದ `ಗರಿ'
ನಾಗರಿಕತೆ ಶುರುವಾಗುತ್ತಿದ್ದಂತೆ ವಿಗ್‌ಗಳು ಬಂದಿರಬಹುದು ಎಂಬುದು ಒಂದು ಊಹೆ. ಆದರೂ ವಿಗ್, ಟೋಫನ್ ಎಂದು ಕರೆಸಿಕೊಳ್ಳುವ ಕೃತಕ ಕೂದಲಿನ ಟೋಪಿಯ ಮೊದಲ ಚಿತ್ರಣ ಸಿಗುವುದು ಈಜಿಪ್ಟ್‌ನಲ್ಲಿ. ಅದು ಹೇಳಿಕೇಳಿ ಬಿಸಿಲ ನಾಡು. ಸುಡುಧಗೆಯಿಂದ ತಪ್ಪಿಸಿಕೊಳ್ಳಬೇಕಿತ್ತಲ್ಲಾ? ಈಜಿಪ್ಷಿಯನ್ನರು ಉಪಾಯ ಹೂಡಿದರು. ತಮ್ಮ ತಲೆಗೂದಲನ್ನು ಸಂಪೂರ್ಣ ತೆಗೆಸಿ ಮಾನವರ ಕೂದಲು, ಕುರಿಯ ತುಪ್ಪಟ, ಹಾಗೂ ತರಕಾರಿ ನಾರಿನಿಂದ ಸಿದ್ಧಪಡಿಸಿದ ವಿಗ್ ತೊಟ್ಟರು.

ದಿನಗಳೆದಂತೆ ಅದು ಪ್ರತಿಷ್ಠೆಯ ಸಂಕೇತವಾಯಿತು. ವಿಗ್‌ಗಳಿಗೆ ಗಂಡು ಹೆಣ್ಣೆಂಬ ಲಿಂಗ ತಾರತಮ್ಯ ಇರಲಿಲ್ಲ. ಅವು ಎಲ್ಲರನ್ನೂ ಅಪ್ಪಿಕೊಂಡವು. ಕ್ರಮೇಣ ಪುರುಷರ ಕೇಶರಾಶಿಗಿಂತಲೂ ಭಿನ್ನವಾದ ವಿಗ್‌ಗಳು ಈಜಿಪ್ಟ್ ಮಹಿಳೆಯರ ಮುಡಿಗೇರಿದವು. ವಿಗ್ ಬಳಸುವುದು ಸಾಮಾಜಿಕ - ರಾಜಕೀಯ ವಲಯದಲ್ಲಿ ಪ್ರತಿಷ್ಠೆಯ ವಿಷಯವಾಯಿತು. ಹೆಂಗಸರು ಚಿನ್ನ ಹಾಗೂ ದಂತದ ವಿವಿಧ ಅಲಂಕಾರಿಕ ಸಾಧನಗಳನ್ನು ಕೃತಕ ತುರುಬಿಗೆ ತುಂಬಿದರು.

ಲಿಂಗ ತಾರತಮ್ಯವಿಲ್ಲದೆ ಬಗೆ ಬಗೆಯ ಕೇಶ ವಿನ್ಯಾಸ ಮಾಡಿಕೊಳ್ಳುವ ರೂಢಿ ಗ್ರೀಕ್ ಹಾಗೂ ರೋಮನ್ ನಾಗರಿಕತೆಗಳಲ್ಲಿತ್ತು. ರೋಮನ್ನರಿಗಂತೂ ವಿಗ್ ತಯಾರಿಕೆಗೆ ಗುಲಾಮರ ತಲೆಗೂದಲೇ ಆಗಬೇಕಿತ್ತು.

ಪೂರ್ವದ ನಾಗರಿಕತೆಗಳೇನೂ ಸುಮ್ಮನೆ ಕುಳಿತರಲಿಲ್ಲ. ಚೀನಾ, ಜಪಾನ್, ಕೊರಿಯಾಗಳಲ್ಲಿ ವಿಗ್ ಕಲಾವಿದರ ದಂಡೇ ಇತ್ತು. ಆದರೆ ಅದನ್ನು ಇತರರು ಬಳಸಿದ್ದು ಅಪರೂಪ. ರಂಗಭೂಮಿಗೆ ಈ ಮಡಿ ಮೈಲಿಗೆಯ ಕಲ್ಪನೆ ಇರಲಿಲ್ಲ. ಗೇಷಾ, ಕೇಶಿಂಗ್ ಮೊದಲಾದ ನೃತ್ಯರೂಪಕಗಳಲ್ಲಿ ವಿಗ್‌ಗಳ ಮೋಹಕ ನೋಟ ಈಗಲೂ ಲಭ್ಯ.

ನೆತ್ತಿಗೆ ಹತ್ತಿದ್ದು...
ಮುಂದೆ ಅದು ಯೂರೋಪಿನ ಪ್ರತಿಷ್ಠಿತ ಪ್ರಸಾಧನವಾಯಿತು. ಇಂಗ್ಲೆಂಡ್‌ನ ಮೊದಲನೇ ಎಲಿಜಬೆತ್ ರಾಣಿ ಅತಿ ದುಬಾರಿ ವಿಗ್ ಧರಿಸುವ ಮೂಲಕ ವಿಗ್‌ಲೋಕದಲ್ಲಿ ಖ್ಯಾತಿ ಪಡೆದರು. ಕ್ರಮೇಣ ಅದು ಯೂರೋಪಿನಾಚೆಗೂ ಪಯಣ ಆರಂಭಿಸಿತು. ಆಗ ಫ್ರಾನ್ಸ್‌ನ ವಿಗ್ ತಯಾರಕರು ಜಗತ್ತಿನಾದ್ಯಂತ ಸಂಚರಿಸಿದರು. ನಿಪುಣ ವಿಗ್ ತಯಾರಕರಿಗೆ ಬೇರೆ ಬೇರೆ ದೇಶಗಳಲ್ಲಿ ಎಲ್ಲಿಲ್ಲದ ಮಾನ್ಯತೆ ದೊರೆಯಿತು.

ಹದಿನೆಂಟನೇ ಶತಮಾನದಲ್ಲಿ ವಿಗ್ ಅಮೆರಿಕ ಪ್ರವೇಶಿಸಿತು. ಅಲ್ಲಿನ ಎಲ್ಲ ವರ್ಗದವರ ಅಲಂಕಾರ ಸಾಧನವಾಯಿತು. ಯೂರೋಪಿನ ದೇಸಿ ವಿಗ್ ತಯಾರಕರು ಅಮೆರಿಕದಲ್ಲಿ ನೆಲೆ ಕಂಡುಕೊಂಡರು. ಕ್ರಮೇಣ ಅದೊಂದು ಉದ್ಯಮವಾಯಿತು. ಸಹಜ ಕೂದಲಿನ ವಿಗ್‌ಗಳನ್ನು ಮೀರಿ ಕೃತಕ ಕೂದಲಿನ ಟೊಪ್ಪಿಗೆಗಳು ತಯಾರಾದವು. ಬಣ್ಣ ಬಣ್ಣದ ಕೂದಲುಗಳು ತಲೆಯನ್ನೇರಿದ್ದೇ ಆಗ. ಅಂದಿನಿಂದ ಇಂದಿನವರೆಗೆ ಬಣ್ಣದ ಕೂದಲಿಗೆ ಮಾರು ಹೋಗದವರೇ ಇಲ್ಲ.

ಇಂಗ್ಲೆಂಡ್‌ನಲ್ಲಿ ವಿಗ್ ಮಾಯೆಗೆ ಕೊನೆ ಮೊದಲಿರಲಿಲ್ಲ. ಮಹಾರಾಣಿ ವಿಗ್ ಉಪಯೋಗಿಸುತ್ತಿದ್ದಂತೆ ಅವುಗಳ ಬೇಡಿಕೆ ಗಗನಕ್ಕೇರಿತು.
ಲಂಡನ್‌ನಲ್ಲಿ ಜನರ ವಿಗ್‌ಗಳನ್ನು ಅಪಹರಿಸಿದ ಘಟನೆಗಳೂ ನಡೆದವು. ನ್ಯಾಯಾಧೀಶರಷ್ಟೇ ಅಲ್ಲ ವೈದ್ಯರೂ ಅವುಗಳ `ರುಚಿ' ಕಂಡುಕೊಂಡರು. 1765ರ ಸುಮಾರಿಗೆ ಇಂಗ್ಲೆಂಡ್‌ನಲ್ಲಿ ವಿಗ್ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿತ್ತು. ಆಗ ಕಾಣಿಸಿಕೊಂಡದ್ದು ನಕಲಿ ವಿಗ್ ಹಾವಳಿ. ಅಸಲಿ ಹಾಗೂ ನಕಲಿಗಳ ನಡುವೆ ಮುಸುಕಿನ ಗುದ್ದಾಟ ಆರಂಭವಾಯಿತು. ಅಸಲಿ ತಯಾರಕರು ಆರ್ಥಿಕ ಸಂಕಷ್ಟ ಎದುರಿಸಲಾರದೇ ಬೀದಿಗಿಳಿದು ಪ್ರತಿಭಟಿಸಿದರು. ಕಡೆಗೆ ಸರ್ಕಾರ ಅವರಿಗೆ ಬೆಂಬಲ ನೀಡುವುದಾಗಿ ಪ್ರಕಟಣೆ ಹೊರಡಿಸಬೇಕಾಯಿತು. 
***
ಇತಿಹಾಸದಿಂದ ವರ್ತಮಾನಕ್ಕೆ ಬರೋಣ, ಮರಿಶೆಟ್ಟಿ ವಿಷಯಕ್ಕೆ ಬರೋಣ. ಮರಿಶೆಟ್ಟಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಜವನದಹಳ್ಳಿಯ ರೈತ ಕುಟುಂಬಕ್ಕೆ ಸೇರಿದವರು. ಅವರು ಸಾಂಪ್ರದಾಯಿಕ ವಿಗ್ ತಯಾರಕರಲ್ಲಿ ಒಬ್ಬರು. ಬೇಸಾಯವನ್ನೇ ನೆಚ್ಚಿದ ದೊಡ್ಡ ಕುಟುಂಬದ ಮರಿಶೆಟ್ಟಿ ಅವರಿಗೆ ವಿಗ್ ಕಲೆ ಕರಗತವಾದದ್ದೊಂದು ಅಪೂರ್ವ ಘಟನೆ. 

ಮಳವಳ್ಳಿ ಸಮೀಪದ ಶಿಂಷಾ ಬ್ಲಫ್ ಹತ್ತಿರ ತಮಿಳು ಚಲನಚಿತ್ರವೊಂದರ ಚಿತ್ರೀಕರಣ ನಡೆದಿತ್ತು. ಯುವಕ ಮರಿಶೆಟ್ಟಿ ಚಿತ್ರೀಕರಣ ನೋಡಲು ಹೋದಾಗ ವಿವಿಧ ಬಗೆಯ ವಿಗ್‌ಗಳು ಗಮನ ಸೆಳೆದವು. ಅವುಗಳನ್ನು ತಲೆಯ ಮೇಲೆ ಕೂಡಿಸುತ್ತಿದ್ದ ವ್ಯಕ್ತಿಯತ್ತ ಇವರ ಗಮನ ನೆಟ್ಟಿತು. ಆಸಕ್ತಿಯಿಂದ ವಿವರಗಳನ್ನು ಪಡೆದರು. ಶಿವಾಜಿ ಎನ್ನುವ ಆ ಹಿರಿಯ ಪ್ರಸಾಧನ ಕಲಾವಿದ ಎಲ್ಲಾ ಮಾಹಿತಿಯನ್ನು ಕೊಟ್ಟ ಬಳಿಕ, `ಇಷ್ಟವಿದ್ದರೆ ಮದ್ರಾಸಿಗೆ ಬಂದು ನನ್ನ ಬಳಿ ಕಲಿಯಬಹುದು' ಎಂಬ ಆಹ್ವಾನವನ್ನೂ ಕೊಟ್ಟರು.

ಹೆಚ್ಚು ಕಲಿಯದಿದ್ದ, ಕನ್ನಡ ಬಿಟ್ಟರೆ ಬೇರೆ ಭಾಷೆ ತಿಳಿಯದ ಮರಿಶೆಟ್ಟಿ ಕೆಲದಿನಗಳ ನಂತರ ಮದ್ರಾಸ್‌ಗೆ ತೆರಳಿ ಪ್ರಸಾಧನ ಕಲಾವಿದ ಶಿವಾಜಿ ಮಡಿಲಿಗೆ ಸೇರಿದರು. ಶಿವಾಜಿ ಗಣೇಶನ್, ಎಂ.ಜಿ. ರಾಮಚಂದ್ರನ್ ಮೊದಲಾದ ದಿಗ್ಗಜರಿಗೆ ವಿಗ್ ಹಾಕಿ ಹೆಸರುವಾಸಿಯಾಗಿದ್ದ ಶಿವಾಜಿ ಬಳಿ ಪಳಗಿದ್ದಾಯಿತು. ನಂತರ ಕನ್ನಡ ಚಿತ್ರೋದ್ಯಮದ ಜೊತೆಗೆ ನಂಟು. ಬೆಂಗಳೂರಿನಲ್ಲಿ ನೆಲೆ.

ಯಂತ್ರದ ಸಂಗ
ಮರಿಶೆಟ್ಟಿ `ವಿಗ್ ಕಲೆ' ಕಲಿಯುತ್ತಿದ್ದ ಹೊತ್ತಿನಲ್ಲೇ ಹೊರಜಗತ್ತಿನಲ್ಲಿ ವಿಗ್‌ಗಳ ಪುಟ್ಟ ಕ್ರಾಂತಿಯೊಂದು ನಡೆಯುತ್ತಿತ್ತು. ದೇಸಿ ಪದ್ಧತಿಯಲ್ಲಿ ವಿಗ್ ತಯಾರಿಕೆ ತಡವಾಗುತ್ತಿದೆ ಅನ್ನಿಸಿದಾಗ ಹೊಸ ಹೊಸ ದಾರಿಗಳು ಸೃಷ್ಟಿಯಾಗುತ್ತಿದ್ದವು. ಆಧುನಿಕ ತಂತ್ರಜ್ಞಾನವನ್ನು ದುಡಿಸಿಕೊಳ್ಳಲಾಯಿತು. ಆಗ ಹೊಸದೊಂದು ಆಯಾಮವೇ ಈ ವಲಯಕ್ಕೆ ದೊರೆಯಿತು. ಬೇಡಿಕೆಗೆ ತಕ್ಕಷ್ಟು ವಿಗ್ ಹೆಣೆವ ಸಾಮರ್ಥ್ಯವನ್ನು ತಂತ್ರಜ್ಞಾನ ತಂದುಕೊಟ್ಟಿತು. 

ನಂತರ ಕೃತಕ ತಲೆಗೂದಲಿಗೆ ರೇಷಿಮೆ ನೂಲುಗಳು ಗೆಣೆಕಾರರಾದವು. ಈಗೀಗ ವಿಗ್‌ಗಳು ಸಿಂಥೆಟಿಕ್, ನೈಲಾನ್, ಅಕ್ರ್ಯಾಲಿಕ್, ಮೋಡೋ ಅಕ್ರ್ಯಾಲಿಕ್‌ಗಳನ್ನೂ ಹೆಚ್ಚಾಗಿ ಒಳಗೊಳ್ಳುತ್ತಿವೆ. ಸೆಣಬು ನಾರಿನಿಂದ, ಯಾಕ್‌ನ ಕೂದಲುಗಳಿಂದ ವಿಗ್‌ಗಳನ್ನು ತಯಾರಿಸುವ ವಿಧಾನಗಳಿವೆ. ಇಂಥ ತಯಾರಿಕೆ ಕೂಡ ಬದಲಾವಣೆಗೆ ತನ್ನನ್ನು ಒಡ್ಡಿಕೊಂಡಿದೆ. ಹೆಣಿಗೆ ಮಾತ್ರವಲ್ಲದೇ ತಲೆಯ ಅಳತೆಗೆ ತಕ್ಕಂತೆ ಕೂರಿಸುವ ತಂತ್ರಜ್ಞಾನ ಬೆಳೆದಿದೆ. ಯಂತ್ರಗಳೂ ಈಗ ವಿಗ್ ತಯಾರಿಸಬಲ್ಲವು.

ನೈಲಾನ್, ಸಿಂಥೆಟಿಕ್‌ನಂತಹ ಕೃತಕ ಕೇಶ ಧಾರಣೆಗಿಂತ ಮಾನವ ಕೂದಲುಗಳೇ ವಿಗ್ ತಯಾರಿಕೆಗೆ ಶ್ರೇಷ್ಠವಂತೆ. ಕೃತಕ ಕೂದಲಿನ ವಿಗ್‌ಗಳು ತರುವ `ತಲೆನೋವು' ಕಡಿಮೆ ಇಲ್ಲ. ಅವುಗಳಿಂದ ತಲೆಯ ಉಷ್ಣ ಹೆಚ್ಚುತ್ತದೆ. ಅಂಥ ಕೂದಲು ಧೂಮಪಾನಿಗಳಿಗೆ, ಉಷ್ಣ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಸೂಕ್ತವಲ್ಲ. ಸ್ವಲ್ಪ ಉರಿ ತಾಕಿದರೂ ತಲೆಗೆ ಆಪತ್ತು ಕಟ್ಟಿಟ್ಟ ಬುತ್ತಿ. ಹಾಗೆಂದೇ ಮಾನವ ಕೂದಲಿನ ವಿಗ್‌ಗಳಿಗೆ ಅಪಾರ ಬೇಡಿಕೆ.

ಕ್ಯಾನ್ಸರ್ ಚಿಕಿತ್ಸೆಯಿಂದ ರೋಗಿ ತಾತ್ಕಾಲಿಕವಾಗಿ ಕೂದಲು ಕಳೆದುಕೊಳ್ಳುವುದು ಸ್ವಾಭಾವಿಕ. ಕೆಲವು ಕಾಯಿಲೆಗಳಿಂದ ತಲೆಕೂದಲು ಪೂರ್ಣ ಉದುರುವುದೂ ಇದೆ. ಈ ಕಾರಣಗಳಿಂದಾಗಿ  ರೋಗಿಗಳಿಗೆ ಮನುಷ್ಯರ ತಲೆಕೂದಲಿನ ಟೊಪ್ಪಿಗೆಯೇ ಅಚ್ಚುಮೆಚ್ಚು.
ಈಗ ದೊಡ್ಡ ಉದ್ಯಮವಾಗಿ ಹೊರಹೊಮ್ಮಿರುವ ವಿಗ್ ತಯಾರಿಕೆಗೆಂದೇ ಅನೇಕ ಕಂಪೆನಿಗಳಿವೆ. ಅದೀಗ ಕೈಗೆಟುಕದ ಸಾಧನ ಎನ್ನುವಂತಿಲ್ಲ. ಶ್ರೀಮಂತರು ಮಾತ್ರ ಧರಿಸಬೇಕೆಂದೇನೂ ಇಲ್ಲ. ಒಂದು ಇಮೇಲ್ ಅಥವಾ ಫೋನ್ ಗುಂಡಿ ಒತ್ತಿದರೆ ಸಾಕು, ನಿಮ್ಮ ತಲೆಗೆ ಒಪ್ಪುವ ವಿಗ್‌ಗಳು ಮನೆ ಬಾಗಿಲಿಗೆ ಬರುತ್ತವೆ.
***
ವಿಗ್‌ಗಳ ಜೊತೆಗೆ ಮೀಸೆ, ದಾಡಿಗಳನ್ನೂ ಸಿದ್ಧಗೊಳಿಸುವ ಮರಿಶೆಟ್ಟಿ ಹಾಗೂ ಹೆಚ್.ವಿ. ಕುನ್ನಶೆಟ್ಟಿ ಅವರು `ಕುಮಾರ ರಾಮ', `ತನನಂ ತನನಂ', `ಆಪ್ತರಕ್ಷಕ' ಸೇರಿದಂತೆ ಹಲವಾರು ಚಿತ್ರಗಳಿಗೆ ಕೆಲಸಮಾಡಿದ್ದಾರೆ. `ರಾಮಾಯಣ' ಮೆಗಾ ಧಾರಾವಾಹಿಗೆ ಅಗತ್ಯವಾದ ಎಲ್ಲಾ ವಿಗ್‌ಗಳನ್ನು ತಯಾರಿಸಿದ ಹೆಗ್ಗಳಿಕೆ ಅವರದು. ರಂಗಭೂಮಿಯೂ ವಿವಿಧ ಟೊಪ್ಪಿಗೆಗಳಿಗೆ ಇವರನ್ನು ನೆಚ್ಚಿಕೊಂಡಿದೆ.
ಮಧ್ಯವರ್ತಿಗಳಿಂದಾಗಿ ಚಲನಚಿತ್ರಗಳಲ್ಲಿ ಆದಾಯ ಕಡಿಮೆಯಾಗುತ್ತಿದ್ದರೂ ಮರಿಶೆಟ್ಟಿ ಹಾಗೂ ಕುನ್ನಶೆಟ್ಟಿ ತಲೆಕೆಡಿಸಿಕೊಂಡಿಲ್ಲ.

ಕ್ಯಾನ್ಸರ್ ರೋಗಿಗಳ ಕೈ ಹಿಡಿದು ಅವರ ಕಾಯಕದ ಬಂಡಿ ಸಾಗುತ್ತಿದೆ. ತಿರುಪತಿಯಿಂದ ತಲೆಗೂದಲನ್ನು ಪಡೆದು ವಿಗ್ ತಯಾರಿಸುವ ಅವರು ಸಿಂಥೆಟಿಕ್, ನೈಲಾನ್ ಕೂದಲುಗಳನ್ನು ಬಳಸುವುದು ವಿರಳ. ಮರಿಶೆಟ್ಟಿ ಕೇವಲ ವಿಗ್ ತಯಾರಕರಾಗಿದ್ದರೆ ಇದನ್ನೆಲ್ಲಾ ಹೇಳುವ ಅಗತ್ಯ ಇರಲಿಲ್ಲ. ಆದರೆ ಅವರೊಳಗೊಂದು ವಿಶಿಷ್ಟ ಮಾನವೀಯತೆ ಇದೆ. ಹೊಸ ಕೂದಲು ಹುಟ್ಟುತ್ತದೆಂದು ಭರವಸೆ ತುಂಬುತ್ತ ರೋಗಿಗಳ ಬದುಕಿನ ದೀಪ ನಂದದಂತೆ ಜತನ ಮಾಡುತ್ತಾರೆ. ಹೆಗಲ ಮೇಲೆ ಕೈಯಿರಿಸಿ ರೋಗಿಗಳ ಕುಟುಂಬದವರಿಗೂ ಸಾಂತ್ವನ ಹೇಳುತ್ತಾರೆ. ಆ ಮೂಲಕ ಕೂದಲನ್ನು ಹೆಣೆಯುವಷ್ಟೇ ಸೊಗಸಾಗಿ ಮನುಷ್ಯ ಸಂಬಂಧಗಳನ್ನೂ ಹೆಣೆದು ಬಿಡುತ್ತಾರೆ.

ಕೇಶಕಾಶಿ ತಿರುಪತಿ!
ನೈಸರ್ಗಿಕ ಕೇಶಕ್ಕೆ ವಿಶ್ವದಾದ್ಯಂತ ಬಹು ಬೇಡಿಕೆ. ಆದರೆ ಮಾರುಕಟ್ಟೆ ಬೇಡಿಕೆಗೆ ಹೋಲಿಸಿದರೆ ಶೇ.20ರಷ್ಟು ಮಾತ್ರ ಪೂರೈಕೆ ಆಗುತ್ತಿದೆ. ಅದರಲ್ಲಿ `ತಿರುಪತಿ ಕೂದಲು' ಬಹು ಹೆಸರುವಾಸಿ. ಒಂದು ಅಂದಾಜಿನ ಪ್ರಕಾರ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರತಿದಿನ ಸರಾಸರಿ 15 ಸಾವಿರ ಮಂದಿ ಮುಡಿ ಕೊಡುತ್ತಾರೆ. ಇವರಲ್ಲಿ ಐದು ಸಾವಿರ ಮಹಿಳೆಯರಿದ್ದಾರೆ.

ಇಲ್ಲಿನ ಕೂದಲಿಗೆ ಯೂರೋಪ್, ಅಮೆರಿಕ ಹಾಗೂ ಚೀನಾದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಇತ್ತೀಚಿನ ವರ್ಷಗಳಲ್ಲಿ ಕೂದಲು ಹರಾಜಿನಿಂದ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ವಾರ್ಷಿಕ 150ರಿಂದ 200 ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ಪ್ರತಿವರ್ಷ ಐನೂರು ಟನ್‌ಗೂ ಅಧಿಕ ತಲೆಗೂದಲು ಇಲ್ಲಿ ಸಂಗ್ರಹವಾಗುತ್ತದೆ.ಪ್ರತಿವರ್ಷ ನೂರಾರು ವ್ಯಾಪಾರಿಗಳು ಹರಾಜಿನಲ್ಲಿ ವೈವಿಧ್ಯಮಯ ತಲೆಗೂದಲು ಖರೀದಿಸುತ್ತಾರೆ. ಕೂದಲಿನ ಉದ್ದಕ್ಕೆ ತಕ್ಕಂತೆ ಬೆಲೆ.

ಜನಪ್ರಿಯ ವಿಗ್ಗಿಗರು!
ಟೆನಿಸ್ ಆಟಗಾರ ಆ್ಯಂಡ್ರೆ ಅಗಾಸ್ಸಿ, ಹಾಡುಗಾರ್ತಿ ಟೋರಿ ಆಮೋಸ್, ಸಂಗೀತಲೋಕದ ದೊಡ್ಡ ಹೆಸರುಗಳಾದ ಲೇಡಿ ಗಾಗಾ, ಶರ್ಲಿ ಮುರ್ಡೋಕ್, ಕ್ಯಾಟಿ ಪೆರ್ರಿ, ಮಾರ್ಕಿ ರೆಮೋನ್, ರಿಯಾನಾ, ಬ್ರಿಟ್ನಿ ಸ್ಪಿಯರ್ಸ್, ನಟಿ ಕ್ರಿಸ್ಟಿಯನ್ ಹೆಂಡ್ರಿಕ್ಸ್, ಬ್ಯಾಸ್ಕೆಟ್ ಬಾಲ್ ಆಟಗಾರ ಶೆರ್ಲಿ ಸ್ವೂಪ್ಸ್, ನಟ ನಿಕೊಲಾಸ್ ಕೇಜ್, ಹಾಸ್ಯಗಾರ ಸ್ಟೀವ್ ಹಾರ್ವೆ...

ಲೂಯಿಸನ ಮೋಹ
ಫ್ರಾನ್ಸ್‌ನಲ್ಲಿ ವಿಗ್ ಬಳಕೆಯಾದದ್ದು ಹೇಗೆ? ಅದರ ಹಿಂದೊಂದು ರೋಚಕ ಕತೆ ಇದೆ. ಫ್ರಾನ್ಸ್ ದೊರೆ 13ನೇ ಲೂಯಿಸ್ ಬಕ್ಕತಲೆಯವನಾಗಿದ್ದ. ಅದನ್ನು ಮುಚ್ಚಿಕೊಳ್ಳಲು ದೊಡ್ಡ ಅಳತೆಯ ವಿಗ್‌ಗಳನ್ನು ಧರಿಸಿ ಜನರೆದುರು ಪ್ರತ್ಯಕ್ಷನಾದ. `ಯಥಾರಾಜ ತಥಾ ಪ್ರಜಾ'. ಜನನಾಯಕನ ಹಾದಿಯಲ್ಲಿ ಜನರೂ ನಡೆದರು. ಇದರಿಂದಾಗಿ ವಿಗ್ ತಯಾರಿಕೆ ಪುಟ್ಟ ಉದ್ಯಮದ ಸ್ವರೂಪ ಪಡೆಯಿತು.

1673ರಲ್ಲಿ `ವಿಗ್ ತಯಾರಕರ ಸಂಘ' ಅಸ್ತಿತ್ವಕ್ಕೆ ಬಂತು! ವಿಗ್ ಮೋಡಿ ಎಷ್ಟಿತ್ತೆಂದರೆ, ಕೋರ್ಟ್‌ಗಳಲ್ಲಿ ನ್ಯಾಯಧೀಶರೂ ಬಗೆಬಗೆಯ ವಿಗ್ ತೊಟ್ಟರು. ಹೀಗೆ ಅದು ಅಧಿಕಾರದ ಕುರುಹಾಯಿತು. ಗರ್ವದ ಪ್ರತೀಕವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT