ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನೆನಪಿನ ದೋಣಿ'ಯಲ್ಲಿ ತೇಲಿದ ಏರ್‌ಮಾರ್ಷಲ್!

Last Updated 12 ಡಿಸೆಂಬರ್ 2012, 10:04 IST
ಅಕ್ಷರ ಗಾತ್ರ

ಹಾಸನ: `ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತ ಶಿಕ್ಷಣ ನನ್ನನ್ನು ವೃತ್ತಿ ಬದುಕಿನಲ್ಲಿ ಇಷ್ಟು ಎತ್ತರಕ್ಕೆ ಏರಲು ಸಹಾಯ ಮಾಡಿತು' ಎಂದು ಭಾರತೀಯ ವಾಯು ಸೇನೆಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ, ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಏರ್ ಮಾರ್ಷಲ್ ಕೆ.ಎಂ. ರಾಮಸುಂದರ್ ಸ್ಮರಿಸಿಕೊಂಡರು.

ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ `ನೆನಪಿನ ದೋಣಿ'ಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಅರಕಲಗೂಡು ತಾಲ್ಲೂಕು ಕೊಣನೂರಿನಲ್ಲಿ ಶಾಲಾ ಶಿಕ್ಷಣ ಮುಗಿಸಿ, ಮೈಸೂರಿನಲ್ಲಿ ಪಿಯುಸಿ ಮುಗಿಸಿ 1970ರಲ್ಲಿ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಿಂದ `ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್' ವಿಭಾಗದಿಂದ ಎಂಜಿನಿಯರಿಂಗ್ ಪದವಿ ಪಡೆದೆ. 1971ರಲ್ಲಿ ಭಾರತೀಯ ವಾಯು ಸೇನೆಯನ್ನು ಸೇರಿ, ಮಿಗ್ 23, ಮಿಗ್ 29 ವಿಮಾನ. ರಾಡಾರ್ ತಂತ್ರಜ್ಞಾನ ಮುಂತಾದವುಗಳಲ್ಲಿ ತರಬೇತಿ ಪಡೆದೆ. ಉನ್ನತ ರಕ್ಷಣಾ ನಿರ್ವಹಣೆ ಬಗ್ಗೆ ಅಮೆರಿಕದ ವೆಲ್ಲಿಂಗ್ಟನ್‌ನ ಡೆಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜಿನಲ್ಲಿ ತರಬೇತಿ ಪಡೆದೆ.

ಭಾರತೀಯ ವಾಯು ಸೇನೆಯ ವಿವಿಧ ಜವಾಬ್ದಾರಿಯುತ ಹುದ್ದೆಗಳಲ್ಲಿ ಸಲ್ಲಿಸಿದ ಸೇವೆಗಳನ್ನು ಪರಿಗಣಿಸಿ ವಿಶಿಷ್ಟ ಸೇವಾಪ್ರಶಸ್ತಿ, ಅತಿ ವಿಶಿಷ್ಟ ಸೇವಾ ಪ್ರಶಸ್ತಿ ಹಾಗೂ ಪರಮ ವಿಶಿಷ್ಟ ಸೇವಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ ಎಂದು ತಮ್ಮ ಸಾಧನೆಯ ಹಾದಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇನ್ನೊಬ್ಬ ಹಳೆಯ ವಿದ್ಯಾರ್ಥಿ ಡಾ. ನರೇಂದ್ರ ನಾಯಕ್, `ಕಾಲೇಜಿನ ನುರಿತ ಶಿಕ್ಷಕರು ನೀಡಿದ ಮಾರ್ಗದರ್ಶನವೇ ಸಮಾಜ ಸೇವೆ ಮಾಡಲು ನನಗೆ ಪ್ರೇರಣೆ ನೀಡಿತು' ಎಂದರು.

ಕಳೆಯ ವಿದ್ಯಾರ್ಥಿಗಳಾದ ಡಾ.ಕೆ.ಎಲ್. ಶರ್ಮಾ, ಪಿ.ಆರ್. ರಘುರಾಂ, ಡಾ. ಕೆ. ಶ್ಯಾಮಸುಂದರ್, ಪ್ರಪಂಚ ಮಂದಣ್ಣ, ಶ್ರೀನಿವಾಸಮೂರ್ತಿ, ಎಸ್. ಕೃಷ್ಣಸ್ವಾಮಿ, ವಿಶ್ವದ ವಿವಿಧ ತಾಂತ್ರಿಕ ನಿಯತಕಾಲಿಕಗಳಲ್ಲಿ ಅತ್ಯಧಿಕ ಪ್ರಬಂಧಗಳನ್ನು ಪ್ರಕಟಿಸಿರುವ ಡಾ. ಸೆಲ್ವನ್ ಜೋಸೆಫ್ ಅವರನ್ನು ಸನ್ಮಾನಿಸಲಾಯಿತು.ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಆರ್.ಟಿ.ದ್ಯಾವೇಗೌಡ ಅಧ್ಯಕ್ಷತೆ ವಹಿಸಿ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಹಳೆಯ ವಿದ್ಯಾರ್ಥಿಗಳು ನೀಡಿದ ಎರಡು ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವನ್ನು 18ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಎಂ.ಕೆ. ಗೋವರ್ಧನಕುಮಾರ್, ಪ್ರಾಂಶುಪಾಲ ಡಾ. ಎಂ.ವಿ. ಸತ್ಯನಾರಾಯಣ, ಉಪಪ್ರಾಂಶುಪಾಲ ಡಾ. ಕೆ.ಎಸ್. ಜಯಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT