ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನಂಗಳದಲ್ಲಿ ಮರು ಅಲೆದಾಟ-

ವಿಮರ್ಶೆ
Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮ್ಮ ಜೀವಿತದ ಬಹುಕಾಲವನ್ನು ಭಾಷಾ ವಿಜ್ಞಾನ, ಜಾನಪದ ಸಾಹಿತ್ಯ, ಇತಿಹಾಸ, ಶಾಸನಾಧ್ಯಯನಗಳಲ್ಲಿ ವ್ಯಯಿಸಿ ಖ್ಯಾತರಾಗಿರುವ ನಾಡೋಜ ಹಂಪನಾ, ತಮ್ಮ ಎಪ್ಪತ್ತಾರರ ಹರಯದಲ್ಲಿ ‘ಚಾರುವಸಂತ’ ಎಂಬ ಕಾವ್ಯಕೃತಿಯೊಂದನ್ನು ರಚಿಸಿ ಸಾಹಿತ್ಯಾಸಕ್ತರಲ್ಲಿ ಪ್ರಿಯವಿಸ್ಮಯವನ್ನು ಮೂಡಿಸಿದ್ದಾರೆ! ಕಥಾವಸ್ತುವಿನ ಮೂಲದ ಬಗ್ಗೆ ಹಂಪನಾ ಬರೆಯುತ್ತಾರೆ:

‘ಚಾರುವಸಂತದ ಕಥಾಹಂದರದ ಬೇರುಗಳು ಪೈಶಾಚಿ ಭಾಷೆಯಲ್ಲಿ ಗುಣಾಢ್ಯನು ಬರೆದ ಬೃಹತ್ಕಥೆಯಲ್ಲಿ ಸೇರಿರಬೇಕು. ಎಂಟನೆಯ ಶತಮಾನದ ಪುನ್ನಾಟ ಸಂಘದ (ಇದು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಪ್ರದೇಶದಲ್ಲಿ ಆಗಿ ಹೋದ ಒಂದು ಮುನಿ ಸಮುದಾಯ) ಜಿನಸೇನಾಚಾರ್ಯರು ಸಂಸ್ಕೃತದಲ್ಲಿ ಬರೆದಿರುವ ಹರಿವಂಶ ಕಾವ್ಯದಲ್ಲಿ ಈ ಆಖ್ಯಾನದ ಸ್ಪಷ್ಟ ಆಕಾರ ಸಿಗುತ್ತದೆ. ಈ ಸುರಮ್ಯ ಕಥಾನಕ ಕನ್ನಡದಲ್ಲಿ ಆದಿಗುಣವರ್ಮ, ಕರ್ಣಪಾರ್ಯ, ಬಂಧುವರ್ಮ, ನಾಗರಾಜ, ಮಹಾಬಲ, ಸಾಳ್ವ, ಮಂಗರಸ ಮೊದಲಾದ ಕವಿಗಳ ಮೂಲಕ ದಾಂಗುಡಿಯಿಟ್ಟು ಪಲ್ಲವಿಸಿದೆ’.

ಸಂಸ್ಕೃತದ ಶೂದ್ರಕ ಕವಿಯ ‘ಮೃಚ್ಚಕಟಿಕ’ ನಾಟಕದಲ್ಲಿ ಇದೇ ಚಾರುದತ್ತ- ವಸಂತಸೇನೆಯರ ಕಥೆಯು ಪರಿವರ್ತಿತ ರೂಪದಲ್ಲಿ ಅಭಿವ್ಯಕ್ತವಾಗಿದೆ. ಕನ್ನಡದಲ್ಲಿ ಹರಿಹರ ರಚಿಸಿರುವ ನಂಬಿಯಣ್ಣನ ರಗಳೆಯಲ್ಲಿ ಇದೇ ಕಥಾವಸ್ತುವಿನ ವೇಷಾಂತರವಿದೆ. ಕಥಾನಾಯಕರಿಗೆ ಹೇಗೋ ಹಾಗೇ ಕಥಾನಕಗಳಿಗೂ ಭಾವಾಂತರಗಳ ಪ್ರಸಕ್ತಿಯುಂಟು.

ಚಂಪಾಪುರ ಎಂಬ ನಗರದ ಭಾನುದತ್ತ ಶ್ರೇಷ್ಠಿ ಮತ್ತು ದೇವಿಲೆಯ ಪುತ್ರನಾದ ಕಾವ್ಯದ ಕಥಾನಾಯಕ ಚಾರುದತ್ತನು ಗೌರವಾನ್ವಿತ ವರ್ತಕರ ಮನೆತನಕ್ಕೆ ಸೇರಿದವನು. ವ್ಯಾಸಂಗಾಸಕ್ತನಾದ ಈ ತರುಣ ತಾನು ಮದುವೆಯಾದ ಚೆಲುವೆ ಹೆಂಡತಿ ಮಿತ್ರಾವತಿಯ ಕಡೆ ಕೂಡ ಗಮನಕೊಡದಷ್ಟು ಗ್ರಂಥಮೋಹಿ. ಹೇಗಾದರೂ ಮಾಡಿ ಈತನನ್ನು ಸಂಸಾರದ ಕಡೆ ಆಕರ್ಷಿಸಬೇಕೆಂದು ಚಾರುದತ್ತನ ತಾಯಿ ತನ್ನ ತಮ್ಮ ಕಾಮಕಲಾನಿಪುಣ ರುದ್ರದತ್ತನನ್ನು ನೇಮಿಸುತ್ತಾಳೆ. (ಗೌತಮ ಬುದ್ಧನ ಜೀವಿತವನ್ನು ನೆನಪಿಗೆ ತರುವ ಅಂಶ).

ಕಾಮುಕ ವ್ಯವಹಾರಿಯಾದ ಆ ರುದ್ರದತ್ತನು ಚಾರುದತ್ತನನ್ನು ಆ ನಗರದ ವೇಶ್ಯೆ ಅನಾಮಿಕೆಯ ಪರಮ ಸುಂದರಿಯಾದ ಪುತ್ರಿ ವಸಂತತಿಲಕೆಯ ಸಂಪರ್ಕಕ್ಕೆ ತರುತ್ತಾನೆ. ವಸಂತತಿಲಕೆಯ ಮೋಹಪಾಶಕ್ಕೆ ಸಿಕ್ಕ ಚಾರುದತ್ತನು ಸಾಂಸಾರಿಕ ಸುಖದ ಕಡೆ ಆಕರ್ಷಿತನಾದುದೇನೋ ನಿಜ! ಆದರೆ ವಸಂತತಿಲಕೆಯಲ್ಲಿ ಮೋಹಿತನಾದ ಚಾರುದತ್ತ ತನ್ನ ಪತ್ನಿಯ ವಿಷಯ ಹಾಗಿರಲಿ ತನ್ನ ಮನೆಯನ್ನೂ ಮರೆತು ವೇಶ್ಯಾಗೃಹದಲ್ಲೇ ಉಳಿದುಬಿಡುತ್ತಾನೆ.

ತಾಯಿಯು ಅವನ ವೆಚ್ಚಕ್ಕೆಂದು ಪ್ರತಿದಿನವೂ ಸಾಸಿರ ದೀನಾರ, ಹಬ್ಬ ಹರಿದಿನದ ವಿಶೇಷ ವೆಚ್ಚಕ್ಕೆ ಹತ್ತು ಸಾಸಿರ ದೀನಾರ ಕಳಿಸುತ್ತಾ, ಆರು ವರ್ಷಗಳಲ್ಲಿ ಹದಿನಾರು ಕೋಟಿ ದೀನಾರವನ್ನು ಮಗನ ಸುಖಕ್ಕಾಗಿ ವೆಚ್ಚಮಾಡುತ್ತಾಳೆ! ಕುಡಿಕೆ ಹೊನ್ನು ಎಷ್ಟು ದಿನ ತಡೆಯುವುದು? ದ್ರವ್ಯವೆಲ್ಲಾ ವೆಚ್ಚವಾಗಲು, ವಸಂತತಿಲಕೆಯ ಬೇಡಿಕೆಯನ್ನೂ ಲಕ್ಷಿಸದೆ ಧನಮೋಹಿಯಾದ ವೇಶ್ಯೆ ಅನಾಮಿಕೆ ಅವನನ್ನು ಗೃಹದಿಂದ ಹೊರಗೆ ಹಾಕುತ್ತಾಳೆ! ಚಾರುದತ್ತನ ತಂದೆ ಅವಮಾನ ಸಹಿಸದೆ ವೈರಾಗ್ಯಪರನಾಗಿ ಸನ್ಯಾಸಿಯಾಗುತ್ತಾನೆ.

ಬಡತನ ಮನೆಯನ್ನು ಆವರಿಸುತ್ತದೆ. ತಾಯಿ ಕರುಣೆಯಿಂದ ಮಗನನ್ನು ಮನೆಗೆ ಸೇರಿಸಿಕೊಳ್ಳುತ್ತಾಳೆ. ಚಾರುದತ್ತ ತನ್ನ ಪತ್ನಿ ಮಿತ್ರಾವತಿಯೊಂದಿಗೆ ಹೊಸ ಸಂಸಾರ ಪ್ರಾರಂಭಿಸುತ್ತಾನೆ. ಇತ್ತ ವಸಂತತಿಲಕೆ ಚಾರುದತ್ತನಿಲ್ಲದೆ ತಾನು ಬದುಕಿರಲಾರೆ ಎಂದು ಹಟ ಹಿಡಿದಾಗ ಅವಳ ತಾಯಿಯ ಮನಸ್ಸು ಕರಗಿ ಅವಳನ್ನು ಚಾರುದತ್ತನಿಗೆ ಒಪ್ಪಿಸಲು ಸಿದ್ಧಳಾಗುತ್ತಾಳೆ. ಚಾರುದತ್ತನ ತಾಯಿಯಾದರೋ ತನ್ನ ಸೊಸೆ ಒಪ್ಪಿದರೆ ಮಾತ್ರ ತಾನು ವಸಂತತಿಲಕೆಯನ್ನು ಸೊಸೆಯಾಗಿ ಸ್ವೀಕರಿಸುವುದಾಗಿ ಹೇಳಿದಾಗ, ಮಿತ್ರಾವತಿಯು ಕರುಣೆಯಿಂದ ವಸಂತತಿಲಕೆಯನ್ನು ತಂಗಿಯಾಗಿ ಒಪ್ಪಿ, ಚಾರುದತ್ತನೊಂದಿಗೆ ಅವಳ ವಿವಾಹಕ್ಕೆ ಸಮ್ಮತಿ ಕೊಡುತ್ತಾಳೆ.

ಚಾರುದತ್ತ ವೈಶ್ಯ ಧರ್ಮದಂತೆ ಲೋಕಸಂಚಾರ ಮಾಡಿ ಧನಸಂಪಾದಿಸಲು ಹೊರಡುತ್ತಾನೆ. ಆರು ವರ್ಷಗಳ ಆ ಯಾನದಲ್ಲಿ ನಾನಾ ಬಗೆಯ ಚಿತ್ರವಿಚಿತ್ರ ಅನುಭವಗಳನ್ನು ಪಡೆಯುತ್ತಾನೆ. ಲಾಭ, ನಷ್ಟ ಎರಡು ಸಂಭವಿಸುತ್ತವೆ. ದ್ವೀಪಾಂತರಗಳಿಗೆ ಪಯಣ ಬೆಳೆಸುತ್ತಾನೆ. ಹಡಗು ಮುಳುಗಿ, ಹೇಗೋ ಬದುಕಿ ಉಳಿಯುತ್ತಾನೆ. ಮುಂದಿನ ಕಥೆಯು ಅದ್ಭುತ ಕಥನಕೌತಕವನ್ನೇ ಕಣ್ಣೆದುರು ತೆರೆಯುತ್ತದೆ. ಕೊನೆಗೆ ಅವನು ನಗರಕ್ಕೆ ಹಿಂದಿರುಗಿ, ಅರಸನ ಮೆಚ್ಚುಗೆ ಗಳಿಸಿ ಲೋಕೋಪಾಕಾರಿಯಾಗಿ ಪತ್ನಿಯರೊಂದಿಗೆ ಮೆರೆಯುತ್ತಾನೆ. ಇದಿಷ್ಟು ಸ್ಥೂಲವಾಗಿ ಚಾರುವಸಂತದ ಕಥಾಹಂದರ.

ಹಂಪನಾ ಅವರ ಕೃತಿಯಲ್ಲಿ ಕನ್ನಡ ಕಾವ್ಯ ಪರಂಪರೆಯ ಅನೇಕ ಕಾವ್ಯಗಳ ಅನುರಣನವು ಉದ್ದಕ್ಕೂ ಕೇಳಿಬರುತ್ತದೆ. ಭಾಷಾ ಪ್ರಯೋಗ, ಲಯಗಾರಿಕೆ, ಕೆಲವು ಸಂದರ್ಭಗಳ ಚಿತ್ರಣಗಳಲ್ಲಿ ಕೂಡ ಹಳೆಯ ಕಾವ್ಯಗಳ ನೆನಪು ಇಲ್ಲಿ ಕಾಣುತ್ತದೆ. ಪಂಪ, ಜನ್ನ, ರತ್ನಾಕರವರ್ಣಿ ಮೊದಲಾದ ಕವಿಗಳ ಆಳವಾದ ಓದು ಹಂಪನಾ ಅವನ ಕಾವ್ಯ ಸಂವೇದನೆಯನ್ನು ರೂಪಿಸಿದೆ. ಸಮುದ್ರದ ವರ್ಣನೆಯಲ್ಲಿ ಭರತೇಶವೈಭವದ ನೆನಪು ಬರುವಂತಿದೆ:

ಮೂಡುವ ತೆರೆ ಓಡುವ ತೆರೆ
ದೂಡುವ ತೆರೆ ಜಾರುವ ತೆರೆ
ನೋಡುವ ಬಯಲಾಗುವ ತೆರೆ
ಕಣ್ಣಿಗೆ ಎಲ್ಲೆಲ್ಲಿಯೂ ತೆರೆ...
ಚಾರುದತ್ತ ಮತ್ತು ವಸಂತತಿಲಕೆ ಆಡುವ ನೆತ್ತದ ಪ್ರಸಂಗದಲ್ಲಿ ಪಂಪನ ನೆತ್ತಮನಾಡೆ ವೃತ್ತದ ಮರುಕಳಿಕೆಯಿದೆ:

ಆಹಾ! ಕಡೆಗೂ ಸೋತಳು ವಸಂತತಿಲಕೆಯೆನ್ನುತ
ಕೂಡಲೇ ತಾನೊಡ್ಡಿದ ಪಣವನು ಕೊಡುಕೊಡು ಎನುತ
ಗೆಲುವಿನ ಹುರುಪಿಗೆ ಸದರದಿನಾಕೆಯ ಮುತ್ತಿನ ಸರಕೆ
ತುಡುಕಲು ಕೈ ಲಂಬಣ ಸರಹರಿದು ಮುತ್ತುಗಳುದುರಿ
ಚೆಲ್ಲಾಪಿಲ್ಲಿ ನಡುಮನೆ ಕನ್ನಡಿ ನೆಲಕಾಗಸದಿಂದುದುರಿ
ಕಿರುತಾರಗೆಗಳೆನೆ ಮಿನುಗಲು ಚಾರು ಬೆಕ್ಕಸ ಬೆವರಿ...

ಅನಂಗಜಂಗಮಲತಾಲಲಿತಾಂಗಿಯರು ಎಂದು ಹಳಗನ್ನಡ ಪದಗುಚ್ಚವನ್ನು ಬಳಸುತ್ತಲೇ ಹೊಸಗನ್ನಡದ ಭಾಷಾ ರೂಪಗಳನ್ನು ಲೀಲಾಜಾಲವಾಗಿ ಬಳಸುತ್ತ ಭಾಷೆಯ ಒಂದು ಹೊಸ ಹದವನ್ನು ಹಂಪನಾ ಕಾಣಿಸುತ್ತಾರೆ. ಪದ್ಯ ಲಯ ಗದ್ಯ ಲಯಗಳನ್ನು ಹದವರಿತು ಬಳಸುವಲ್ಲಿಯೂ ಅವರು ತಮ್ಮ ಕಾವ್ಯಕ್ಷಮತ್ವವನ್ನು ಮೆರೆಯುತ್ತಾರೆ. ಹಳಗನ್ನಡ ಚಂಪೂ ಕಾವ್ಯದ ಗದ್ಯಲಯಗಳೇ ಅವರಲ್ಲಿ ವಿಶೇಷವಾಗಿ ಕಾಣುತ್ತವೆ. ಕಾವ್ಯದ ದ್ವಿತೀಯಾರ್ಧವು ವಡ್ಡಾರಾಧನೆಯ ಕಥನದ ಮಾಯಕತೆ ಮತ್ತು ಬಿಕ್ಕಟ್ಟುಗಳನ್ನು ಪಡೆಯಲು ಶ್ರಮಿಸುತ್ತದೆ. ಕಥಾದ್ರವ್ಯದಲ್ಲಿ ಕಾಣುವ ಅತಿವಾಸ್ತವತೆ ಮತ್ತು ಕಥನದ ಶೈಲಿಯಲ್ಲಿ ಕಾಣುವ ಸಂಕೀರ್ಣತೆ ಜಾನಪದ ಮತ್ತು ಹಳಗನ್ನಡ ಗದ್ಯಲಯದ ಎಲ್ಲ ಸೊಗಸುಗಳನ್ನೂ ಒಳಗೊಳ್ಳುತ್ತದೆ.

ಚಾರುದತ್ತ ಕೇವಲ ಸ್ತ್ರೀಪುರುಷ ಸಂಬಂಧದ ರಮ್ಯ ಕಥಾನಕವಾಗಿಲ್ಲ. ಸಮಾಜಪರ ಚಿಂತನೆಗಳು ಕಾವ್ಯದ ಉದ್ದಕ್ಕೂ ಕಾಣುತ್ತವೆ. ಕೆಲವೊಮ್ಮೆ ಅವು ಕಥೆಯೊಂದಿಗೆ ಅವಿಭಾಜ್ಯತೆಯ ಬೆಸುಗೆ ಸಾಧಿಸುತ್ತವೆ. ಕೆಲವೊಮ್ಮೆ ಕವಿಯ ಕಾಳಜಿಯ ಫಲವಾಗಿರುವಂತೆ ಕಥೆಯಿಂದ ಸ್ವಾಯತ್ತವಾಗಿ ಬೇರೆ ಉಳಿಯುತ್ತವೆ. ಧರ್ಮ ಸಮನ್ವಯತೆ, ದೀನದಲಿತರ ಬಗ್ಗೆ ಕಾಳಜಿ, ಮಕ್ಕಳಿಗೆ ವಿದ್ಯಾಭ್ಯಾಸ ದೊರಕಿಸಬೇಕೆಂಬ ತಹತಹ, ಪರಿಸರ ನಾಶ ಆಗದಂತೆ ನೋಡಿಕೊಳ್ಳಬೇಕೆಂಬ ತವಕ-– ಇವುಗಳ ಜೊತೆ ಜೊತೆಗೆ ಭಾರತೀಯ ಕಾವ್ಯದ ಒಳಝರಿಯಾದ ಅಧ್ಯಾತ್ಮದ ಸೆಳವೂ ಕೂಡ ಕಥನದ ಉದ್ದಕ್ಕೂ ಕಾಣುತ್ತದೆ.

ಕಥೆಯ ದ್ವಿತೀಯಾರ್ಧ ತುಂಬ ಜಟಿಲವೂ, ಮರ್ಮಭೇದಕವೂ ಆದ ಕಥನದಿಂದ ಕೂಡಿದೆ. ಬದುಕಿನ ಅತಾರ್ಕಿಕತೆಯನ್ನೇ ಇದು ತೆರೆದು ತೋರುವಂತಿದೆ. ಚಾರುದತ್ತನ ಬದುಕಿನ ಪ್ರಥಮಾರ್ಧ ಮತ್ತು ದ್ವಿತೀಯಾರ್ಧಗಳು ವಿಭಿನ್ನ ದಿಕ್ಕಿನ ಚಲನೆಗಳಾಗಿದ್ದು ಪರಸ್ಪರ ಬೆಳಕು ಚೆಲ್ಲಿಕೊಳ್ಳುವಂತೆ ಕಥನವನ್ನು ಸಂಯೋಜಿಸುವುದು ಕವಿಯ ಉದ್ದೇಶವಾಗಿರುವಂತಿದೆ. ಅದು ಎಷ್ಟರಮಟ್ಟಿಗೆ ಸಾರ್ಥಕವಾಗಿದೆ ಎಂಬ ನೆಲೆಯಲ್ಲಿ ಈ ಬೃಹತ್ ಕೃತಿಯ ಆಳವಾದ ಅಧ್ಯಯನ ಇನ್ನು ಮುಂದೆ ನಡೆಯಬೇಕಾಗಿದೆ.

ಆಧುನಿಕ ಮಹಾಕಾವ್ಯ ಯತ್ನಗಳಲ್ಲಿ ವಸ್ತುಸಂಗತಿಯ ನೆಲೆಯಲ್ಲಿ ಹಂಪನಾ ಅವರ ಚಾರುವಸಂತವು ವಿಶೇಷ ಗಮನ ಸೆಳೆಯುವಂತಿದೆ. ರಾಮಾಯಣ – ಮಹಾಭಾರತದ ಕಥಾಜಗತ್ತಿನ ಆಚೆಗೆ ಇಲ್ಲಿನ ಕಥಾ ಸಂವಿಧಾನವು ಕೈಚಾಚುತ್ತಿದೆ. ಈ ನೆಲೆಯಲ್ಲಿ ಗೋಕಾಕರ ‘ಭಾರತ ಸಿಂಧುರಶ್ಮಿ’ಯನ್ನು ಈ ಕಾವ್ಯವು ನೆನಪಿಸುವಂತಿದೆ. ಬಹಳ ದಿನಗಳ ನಂತರ ಪರಿಚಿತ ಓಣಿಗಳಲ್ಲಿ ಮತ್ತೆ ನಡೆದಾಡಿ ಖುಷಿಪಡುವ ರೀತಿಯ ಅನುಭವವನ್ನು ‘ಚಾರುವಸಂತ’ ಕೊಡುತ್ತಿದೆ ಎಂದು ಸೂಚಿಸಬಯಸುತ್ತೇನೆ.
–ಎಚ್.ಎಸ್. ವೆಂಕಟೇಶಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT