ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನಲ್ಲಿ ಉಳಿಯುವಂತಹ ಸಾರ್ಥಕ ಕೆಲಸ ಮಾಡಿ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸದಾ ಆನಂದದ ಗೌಡರೆಂದೇ ಮಾಧ್ಯಮಗಳಲ್ಲಿ ಪ್ರಸಿದ್ಧರಾಗಿರುವ ಸದಾನಂದ ಗೌಡರಿಗೆ,

ನೀವು ಮುಖ್ಯಮಂತ್ರಿಯಾಗುವುದಕ್ಕೆ ಮೊದಲು ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಿರಿ. ನಂತರ ಸ್ವಲ್ಪ ಕಾಲ ಮರೆಯಾದಿರಿ. ನಿಮ್ಮ ಜಾಗಕ್ಕೆ ಬೇರೆ ಅಧ್ಯಕ್ಷರು ಬಂದಾಗ, ಅವರ ವರ್ತನೆ ಮತ್ತು ನಿಮ್ಮ ವರ್ತನೆಗಳನ್ನ ತುಲನೆ ಮಾಡಿ ನೋಡಿದಾಗ  ನಿಮ್ಮ ಪಕ್ಷದವರು ಸದಾ ಹಸನ್ಮುಖಿಯಾದ ನಿಮ್ಮನ್ನು ಬಿಟ್ಟು `ಈ ಮನುಷ್ಯ~ನನ್ನು ತಂದು ಕೂರಿಸಿದ್ದಾರಲ್ಲಪ್ಪ ಎಂದು ಅನ್ನಿಸಿತ್ತು.

ಟಿ.ವಿ. ಮಾಧ್ಯಮಗಳಲ್ಲಿ ಆ ಹೊಸ ಮುಖವನ್ನು ಕಂಡಾಗಲೆಲ್ಲ ರಾಜ್ಯದ ಜನತೆಗೆ ಕಿರಿಕಿರಿಯಾಗಿದ್ದು ನಿಜ. ಆನಂತರ  ಅನಿರೀಕ್ಷಿತವಾಗಿ ಸದಾನಂದ ಗೌಡರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ತಿಳಿಯುತ್ತಿದ್ದಂತೆ ಆಶ್ಚರ್ಯ ಮತ್ತು ಸಂತೋಷದಿಂದ ರಾಜ್ಯದ ಜನ ನಿಮ್ಮನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದರು.

ನಂತರದ ದಿನಗಳಲ್ಲಿ ನಡೆದದ್ದೆಲ್ಲ ವಿಷಾದಕರ ಬೆಳವಣಿಗೆ. ನೀವು `ನನ್ನ ಹಿಂದಿನ ಹುದ್ದೆಗಳಲ್ಲಿ ಪಡೆದ ರಾಜಕೀಯ ಅನುಭವಗಳನ್ನು ಇಲ್ಲಿ ಬಳಸಿಕೊಂಡು ನನ್ನ ನಗುವಿಗೆ `ಬರ~ ಬಾರದಂತೆ ನಡೆಯುತ್ತೇನೆ~ಎಂದಿದ್ದಿರಿ. ನೀವು ಅಂದುಕೊಂಡದ್ದೆಲ್ಲ ಹುಸಿಯಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.

ಹಾಗೇ ಜನ ಸಾಮಾನ್ಯರು ಮಾಧ್ಯಮಗಳ ಮೂಲಕ ನಿಮ್ಮ ಮಾಸಿದ ನಗು ಮತ್ತು ನಿಮ್ಮ  ಪಕ್ಷ ನಿಷ್ಠೆಯ ಜೊತೆಗೆ ನೀವು ಅಧಿಕಾರಕ್ಕೆ ಬರಲು ಸಹಕಾರಿಯಾದವರಿಗೆ ನೆರವು ನೀಡುವ ಪ್ರಯತ್ನದಲ್ಲಿ `ಬಿಸಿ ತುಪ್ಪ~ ನುಂಗಿದ ಅನುಭವ ಇತ್ಯಾದಿಗಳನ್ನೆಲ್ಲ ಗಮನಿಸುತ್ತಿದ್ದಾರೆ.

ಹಾಗೆ ನೋಡಿದರೆ ನೀವು ಮುಖ್ಯಮಂತ್ರಿ ಪದವಿಗೆ ಬರಲು ಇತರರಂತೆ `ಸರ್ಕಸ್~ ಮಾಡಲಿಲ್ಲ. ಬದುಕಿನಲ್ಲಿ ಬಂದುದನ್ನು ನಿರಾಳವಾಗಿ ಅನುಭವಿಸುವ ಜಾಯಮಾನ ನಿಮ್ಮದು. ಅನಿರೀಕ್ಷಿತವಾಗಿ ಬಂದ ಅಧಿಕಾರ ಉಳಿಸಿಕೊಳ್ಳಲು ನೀವು ವಾಮಮಾರ್ಗ ಹಿಡಿಯುವವರಲ್ಲ ಎಂಬುದು ನಿಮ್ಮ ನಗು ಮುಖದ ಹಿಂದಿನ ಗಡಸು ಧ್ವನಿ ಒಮ್ಮಮ್ಮೆ ಮಿಂಚಿ  ಮಾಯವಾದಾಗಲೆಲ್ಲ ಜನರಿಗೆ ಅರಿವಾಗುತ್ತದೆ.

ಮನಃಪೂರ್ವಕವಾಗಿ ಒಳ್ಳೆಯ ಆಡಳಿತ ನೀಡಬೇಕೆಂಬ ಉತ್ಸಾಹದಲ್ಲಿ ಎದ್ದು ನಿಂತಾಗಲೆಲ್ಲ ತಕ್ಕಡಿಯಿಂದ ಜಿಗಿಯುವ ಕಪ್ಪೆಗಳಂತೆ ವರ್ತಿಸುವ ನಿಮ್ಮ ಸಹೋದ್ಯೋಗಿಗಳು ನಿಮ್ಮ ಉತ್ಸಾಹಕ್ಕೆ ತಣ್ಣೀರೆಚುತ್ತಾರೆ ಎಂಬ ಕೊರಗು ಜನರಿಗೆ ಇದೆ  ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

ಇತ್ತೀಚೆಗೆ ನೀವು ಹೂವು ಎಂದು ಮುಟ್ಟಿದ್ದೆಲ್ಲ ಹಾವಾಗಿ ಹರಿಯುತ್ತಿದೆ. ಉದಾಹರಣೆಗೆ ಕರಾವಳಿ ಪ್ರವಾಸೋದ್ಯಮ (ರೇವ್ ಪಾರ್ಟಿ) ಅಭಿವೃದ್ಧಿಪಡಿಸಲು ಪ್ರಯತ್ನಿಸಿ ನೀವು ತಾಳಿದ ನಿಲುವಿಗೆ ಅಪಸ್ವರ ಕೇಳಿ ಬಂತು.

ಕೆಲವು ಸಚಿವರ `ಕಪಿ ಚೇಷ್ಟೆ~ಗಳು ನಿಮಗೆ `ಗಾಯದ ಮೇಲೆ ಬರೆ ಎಳೆದಂತಹ~ ಅನುಭವ ನೀಡಿವೆ. ಇವುಗಳಿಗೆಲ್ಲ ಕಳಸವಿಟ್ಟಂತೆ, ಲೋಕಾಯುಕ್ತರ ನೇಮಕದ ವಿಚಾರದಲ್ಲಿ ನೀವು ಅಸಂಬದ್ಧ ಹೇಳಿಕೆಗಳನ್ನು ನೀಡಿದಿರಿ.

ಲೋಕಾಯುಕ್ತ ಹುದ್ದೆಯಿಂದ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ನಿರ್ಗಮಿಸಿ ಕೆಲವು ತಿಂಗಳು ಕಳೆದಿವೆ. ಆ ಸ್ಥಾನಕ್ಕೆ ಮತ್ತೊಬ್ಬರ ನೇಮಕ ಆಗದಿರುವುದು ನಿಮ್ಮ ಆಡಳಿತದ ಇತರ ನ್ಯೂನತೆಗಳಿಗಿಂತ ದೊಡ್ಡದಾಗಿ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಬೆಂಗಳೂರು ನಗರದ ಅಭಿವೃದ್ಧಿಯ ಹೆಸರಿನಲ್ಲಿ ಐತಿಹಾಸಿಕವಾದ ಸಿಟಿ ಮಾರ್ಕೆಟ್‌ಅನ್ನೇ ಮಹಾನಗರ ಪಾಲಿಕೆ `ಅಡ~ ಇಡಲು ಮುಂದಾಗಿದೆ. ನಗರದ ರಸ್ತೆಗಳು, ಪಾದಚಾರಿ ಮಾರ್ಗಗಳು ಸುಗಮವಾಗಿಲ್ಲ.

ಆದರೆ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು, ಮತ್ತಿತರರು ದಿನದಿಂದ ದಿನಕ್ಕೆ ತಮ್ಮ ಆಸ್ತಿಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಪ್ರಯತ್ನಗಳಲ್ಲಿ ತೊಡಗಿ ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಕುರಿತು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳನ್ನು ನೋಡುತ್ತ ಜನ ಸಾಮಾನ್ಯರು ಅಸಹಾಯಕರಾಗಿ ಚಡಪಡಿಸುತ್ತಿದ್ದಾರೆ.

ರಾಜ್ಯದ ಇತರ ಜಿಲ್ಲೆಗಳಿಂದ ಸಾವಿರಾರು ಜನರು ನಿತ್ಯ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗೆ ಬಂದವರೆಲ್ಲ ಇಲ್ಲಿನ ಅವ್ಯವಸ್ಥೆಗಳಿಗೆ ತತ್ತರಿಸಿದ್ದಾರೆ. ಇಲ್ಲಿನ ಮೆಟ್ರೊ ರೈಲು ಕಾಮಗಾರಿಯಿಂದ ಉಂಟಾದ ಟ್ರಾಫಿಕ್ ಜಂಜಾಟದಲ್ಲಿ ಸಿಕ್ಕಿಹಾಕಿಕೊಂಡಾಗ `ಅಯ್ಯೋ ದೇವರೆ.... ಈ ನರಕದಲ್ಲಿ ವಾಸ ಮಾಡುವ ಕರ್ಮ ಯಾರಿಗೆ ಬೇಕು? ಎಂದು ತಮ್ಮಲ್ಲಿಯೇ ಪ್ರಶ್ನಿಸಿಕೊಳ್ಳುತ್ತಾರೆ.

ಬೆಂಗಳೂರಿನ ಮೆಟ್ರೊ ಕಾಮಗಾರಿಗೆ ವ್ಯಯಿಸುತ್ತಿರುವ ಹಣದ ಕಾಲುಭಾಗವನ್ನು ರಾಜ್ಯದ ಇತರೆ ಜಿಲ್ಲೆಗಳಿಗೆ, ಅಲ್ಲಿನ ನೀರಿನ ಸಮಸ್ಯೆಗಳಿಗೆ ವೆಚ್ಚ ಮಾಡಿದ್ದರೆ ಅಲ್ಲಿನ ಜನರು ಬೆಂಗಳೂರಿಗೆ ಬರುವ ಸಮಸ್ಯೆಯೇ ಬರುತ್ತಿರಲಿಲ್ಲ.

ಉದಾರಣೆಗೆ, ಬೆಂಗಳೂರಿಗೆ ಸಮೀಪದಲ್ಲಿರುವ ಚನ್ನಪಟ್ಟಣ ತಾಲ್ಲೂಕಿನ ಶೇ. 80ರಷ್ಟು ಗ್ರಾಮೀಣ ಜನರು   ಉದ್ಯೋಗ ಹುಡುಕಿಕೊಂಡು ಈ ಮಹಾನಗರಕ್ಕೆ ಬಂದಿದ್ದಾರೆ. ನಿತ್ಯ ಬರುತ್ತಲೇ ಇದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
 
ಅಲ್ಲಿನ ಚುನಾಯಿತ ಪ್ರತಿನಿಧಿ ಈ ಸಮಸ್ಯೆಗೆ ಪರಿಹಾರ ಹುಡುಕುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರೇ ಹಗರಣಗಳ ಆರೋಪಗಳಿಂದ ಹೊರಬರುವ ಪ್ರಯತ್ನದಲ್ಲಿದ್ದಾರೆ. ಅಲ್ಲಿನ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲ.
 
ಕೆಲವೇ ಕೋಟಿ ರೂಗಳನ್ನು ಖರ್ಚು ಮಾಡಿ ಚನ್ನಪಟ್ಟಣ ತಾಲ್ಲೂಕಿಗೆ ನೀರು ಪೂರೈಸುವ   ಕಾಲುವೆಯೊಂದನ್ನು ನಿರ್ಮಿಸಿದರೆ ಬೆಂಗಳೂರಿಗೆ ಬಂದಿರುವ ತಾಲ್ಲೂಕಿನ ಜನರು ತಮ್ಮ ಊರುಗಳಿಗೆ ವಾಪಸಾಗುತ್ತಾರೆ.

ಹೀಗೆ ಅದೆಷ್ಟೊ ಜಿಲ್ಲೆಗಳ ಜನರು ಇಂತಹ ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಕಾಣದೆ ತಮ್ಮ ಗ್ರಾಮಗಳನ್ನು ತೊರೆದು ಬೆಂಗಳೂರಿಗೆ ಬಂದಿದ್ದಾರೆ. ಹೀಗೆ ಬಂದವರಿಂದಾಗಿ ಈ ಮಹಾನಗರ ಇರುವೆ ಗೂಡಿನಂತೆ ಆಗಿದೆ.

ನಿಮ್ಮಲ್ಲಿ ನನ್ನದೊಂದು ಮನವಿ: ಮುಖ್ಯಮಂತ್ರಿ ಪದವಿಗೆ ಅನೇಕರು ಬಂದು ಹೋಗಿದ್ದಾರೆ. ಹಾಗೆ ಬಂದವರೆಲ್ಲ ಇತಿಹಾಸದಲ್ಲಿ ಉಳಿಯುವುದಿಲ್ಲ. ಉಳಿಯುವವರು ಕೆಲವರು ಮಾತ್ರ. ನೀವು ಮಾಡಿದ ಆಸ್ತಿಪಾಸ್ತಿ ಅಥವಾ ನೀವು ಪಡೆದ ಮಾನ, ಸನ್ಮಾನಗಳಿಂದ ನಿಮ್ಮ ಸ್ಮಾರಕ ನಿರ್ಮಿಸಲು ಸಾಧ್ಯವಾಗದು.
 
ಅನಿರೀಕ್ಷಿತವಾಗಿ ಬಂದ ಮುಖ್ಯಮಂತ್ರಿ ಪದವಿಯ ಅಧಿಕಾರ ಬಳಸಿಕೊಂಡು ಜನ ಸಾಮಾನ್ಯ ಸಮಸ್ಯೆಗಳತ್ತ ಗಮನ ಹರಿಸುತ್ತೀರೆಂದು ಭಾವಿಸುತ್ತೇನೆ. ಅದು ನಿಮ್ಮಿಂದ ಸಾಧ್ಯವಾದರೆ ನಿಮ್ಮ ನಗುವಿಗೆ ನಿಜವಾದ ಅರ್ಥ ಬರುತ್ತದೆ. ಜನಸಾಮಾನ್ಯರ ಮನದಲ್ಲಿ ನೀವು ಸ್ಮಾರಕವಾಗಿ ಸದಾ ಉಳಿಯುತ್ತೀರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT