ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪೇ ಬಂಡವಾಳ

Last Updated 13 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಅನೇಕ ಜನ ತಂದೆ-ತಾಯಿಗಳು ತಮ್ಮ ಮಕ್ಕಳು ಎಷ್ಟೇ ಓದಿದರೂ ನೆನಪಿನಲ್ಲಿ ಉಳಿಯುವುದಿಲ್ಲ ಎಂದು ವೈದ್ಯರ ಹಾಗೂ ಶಿಕ್ಷಕರ ಬಳಿ ದೂರುತ್ತಾರೆ.

ಆದರೆ, ಓದಿದ್ದನ್ನು, ನೋಡಿದ್ದನ್ನು ಸರಿಯಾಗಿ ನೆನಪಿಟ್ಟುಕೊಳ್ಳುವುದಕ್ಕೆ ಒಂದು ತಂತ್ರವಿದೆ. ಅದೊಂದು ಕಲೆ. ಅದನ್ನು ಕರಗತ ಮಾಡಿಕೊಂಡರೆ ಮಕ್ಕಳು ನೆನಪಿನೊಂದಿಗೆ ಆಟ ಆಡಬಹುದು ಎಂಬುದನ್ನು ಬೆಂಗಳೂರಿನ ಹದಿನೈದು ವರ್ಷದ ಬಾಲಕಿ ಪೂಜಾ ಕೃಷ್ಣ ಸಾಧಿಸಿ ತೋರಿಸಿದ್ದಾರೆ.

ಹೌದು, ಪೂಜಾಗೆ ನೆನಪಿನೊಂದಿಗೆ ಆಟ ಆಡುವುದೆಂದರೆ ಹುರುಪು. ಯಾವುದೇ ಕ್ರಮವಿಲ್ಲದೇ ಬರೆಯಲಾದ ಸುಮಾರು 1000ಕ್ಕೂ ಹೆಚ್ಚು ಅಂಕಿಗಳನ್ನು ಒಮ್ಮೆ ನೋಡಿ ನೆನಪಿಟ್ಟುಕೊಳ್ಳುತ್ತಾಳೆ. ಯಾವ ಸಾಲಿನಲ್ಲಿ, ಯಾವ ಸ್ಥಳದಲ್ಲಿ, ಯಾವ ಅಂಕಿ ಇದೆ ಎಂಬುದನ್ನು ಹೇಳುತ್ತಾಳೆ. ಅವುಗಳನ್ನು ವಿರುದ್ಧ ದಿಕ್ಕಿನಿಂದಲೂ, ಅಡ್ಡಡ್ಡವಾಗಿ, ಉದ್ದುದ್ದವಾಗಿ, ಓರೆಕೋರೆಯಾಗಿಯೂ ಹೇಳಬಲ್ಲಳು. ಶಬ್ದಗಳೊಂದಿಗೆಯೂ ಇದೇ ರೀತಿ. ಸಾವಿರಾರು ಶಬ್ದಗಳನ್ನು ಒಂದು ಬಾರಿ ಕೇಳಿಸಿಕೊಂಡಳೆಂದರೆ ಮತ್ತೆ ಅವುಗಳನ್ನು ಅದೇ ಕ್ರಮದಲ್ಲಿ ನಿಮ್ಮ ಮುಂದಿಡುತ್ತಾಳೆ.

ಇದೆಲ್ಲ ಹೇಗೆ?
ಓದುವ ಹಾಗೂ ನೋಡುವ ವಿವರಗಳನ್ನು ಒಂದು ಅನುಕ್ರಮದಲ್ಲಿ, ಒಂದಕ್ಕೊಂದು ಪೂರಕವಾಗಿರುವಂತೆ, ಸಂಬಂಧ ಹೊಂದಿರುವಂತೆ ಗ್ರಹಿಸುವುದೇ ಆ ತಂತ್ರ ಎನ್ನುತ್ತಾಳೆ ಪೂಜಾ. ಅದಕ್ಕೆ ಮಿದುಳಿಗೆ ಸರಿಯಾಗಿ ತರಬೇತಿ ಆಗಬೇಕು. ಅವಳಿಗೆ ಅಂತಹ ಪ್ರಾಯೋಗಿಕ ತರಬೇತಿಯನ್ನು ನೀಡಿದ್ದು ಅವಳ ತಂದೆ ಕೃಷ್ಣ.

ಓದಿದ್ದನ್ನು, ನೋಡಿದ್ದನ್ನು ನಮ್ಮ ಮೆದುಳು ನೆನಪಿಟ್ಟುಕೊಳ್ಳುವ ಕ್ರಮವೊಂದಿದೆ. ನಮಗೆ ಹೆಚ್ಚು ಆಸಕ್ತಿ ಇರುವ ವಿಷಯಗಳು ಸಹಜವಾಗಿ ಬೇಗ ನೆನಪಿನ ಭಂಡಾರ ಸೇರುತ್ತವೆ. ಆದರೆ, ಮೆದುಳಿನ ಈ ಕ್ರಮವನ್ನೇ ಸೂಕ್ತ ತಂತ್ರಗಳ ಮೂಲಕ ಇನ್ನಷ್ಟು ಬಲಗೊಳಿಸಬಹುದು. ಮೆದುಳು ಪಂಚೇಂದ್ರಿಯಗಳಿಂದ ವಿಷಯಗಳನ್ನು ಗ್ರಹಿಸುತ್ತದೆ.

ಅಂತಹ ಸಂಗತಿಗಳನ್ನು ಆದ್ಯತೆಯ ಪ್ರಕಾರ ನೆನಪಿನ ಕೋಶಗಳಲ್ಲಿ ದಾಖಲಿಸುತ್ತದೆ.
ಮಕ್ಕಳು ಓದುವಾಗ, ದೀರ್ಘಾವಧಿ ನೆನಪಿನ ಭಾಗ ಜಾಗೃತವಾಗುತ್ತದೆ. ಒಂದು ವೇಳೆ ಮೆದುಳಿನ ಈ ಭಾಗ ಸರಿಯಾಗಿ ಕೆಲಸ ಮಾಡದಿದ್ದರೆ, ಅದರಲ್ಲಿ ಸಂಗ್ರಹವಾಗಿರುವ ವಿವರಗಳು ಸರಿಯಾಗಿ ಹೊರಬರದೇ ಪರದಾಡುತ್ತವೆ. ಅಂತಹ ವಿಷಯಗಳನ್ನು ಹೇಗೆ ಸಂಗ್ರಹಿಸಿಕೊಳ್ಳಬೇಕು, ಹೇಗೆ ನೆನಪಿಸಿಕೊಳ್ಳಬೇಕು ಎಂಬ ಬಗ್ಗೆ ಮಿದುಳಿಗೆ ತರಬೇತಿಯಾಗಬೇಕಷ್ಟೆ. ಅಂತಹ ತುಲನಾತ್ಮಕ ಅಧ್ಯಯನದೊಂದಿಗೆ ತಮ್ಮ ಮಗಳಿಗೆ ತರಬೇತಿ ನೀಡಿರುವುದಾಗಿ ಹೇಳುತ್ತಾರೆ ಕೃಷ್ಣ.

ಇಂತಹ ನೆನಪಿನ ಶಕ್ತಿಯಿಂದಾಗಿ ಗಿನ್ನೆಸ್ ದಾಖಲೆಗೆ ಸೇರಲು ಮುಂದಾಗಿದ್ದಾಳೆ ಪೂಜಾ. ಆದರೆ ಅದಕ್ಕೆ ಹಲವಾರು ಮಾನದಂಡಗಳಿವೆ. ತಾನು ಆಯ್ದುಕೊಂಡ ವಿಭಾಗದಲ್ಲಿ ಈವರೆಗಿನ ದಾಖಲೆಗಳಿಗಿಂತ ಇದು ಮೇಲ್ಮಟ್ಟದ್ದು ಎಂಬುದನ್ನು ಸಾಬೀತುಪಡಿಸಬೇಕು. ವಿಡಿಯೋ ಮಾಡಿ ಗಿನ್ನೆಸ್ ತಂಡಕ್ಕೆ ದಾಖಲೆ ಕಳಿಸುವ ಪ್ರಯತ್ನಿದಲ್ಲಿದ್ದಾಳೆ ಪೂಜಾ.

ಯಾರಾದರೂ ಪ್ರಾಯೋಜಕರು ಸಿಕ್ಕರೆ ದಾಖಲೆ ಸಾಬೀತುಪಡಿಸಲು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಗೆ ಹೋಗಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ಅಥವಾ ಗಿನ್ನೆಸ್ ತಂಡ ಭಾರತಕ್ಕೆ ಬರುವವರೆಗೆ ಕಾಯಬೇಕು ಎನ್ನುವ ಪೂಜಾ, ಅಲ್ಲಿಯವರೆಗೂ ತಾನು ಸುಮ್ಮನೇ ಕೂಡುವುದಿಲ್ಲ. ಮುಂದಿನ ಗುರಿ ತನ್ನ ಸಾಮರ್ಥ್ಯವನ್ನು 2000 ಅಂಕಿಗಳಿಗೆ ಏರಿಸುವುದು ಎನ್ನುತ್ತಾಳೆ.

(ಮೊಬೈಲ್ 98867 03172)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT