ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿಗಾಗಿ ನಾಗರಿಕರ ಧರಣಿ

Last Updated 28 ಜೂನ್ 2012, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ನೆಮ್ಮದಿ ಕೇಂದ್ರಗಳ ಅವ್ಯವಸ್ಥೆ ಖಂಡಿಸಿ ಗುರುವಾರ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಹೆಚ್ಚುವರಿಯಾಗಿ ನಾಲ್ಕು ಭಾಗಗಳಲ್ಲಿ ನೆಮ್ಮದಿ ಕೇಂದ್ರಗಳನ್ನು ಆರಂಭಿಸುವ ಮೂಲಕ ಈಗ ಉಂಟಾಗುತ್ತಿರುವ ತೊಂದರೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆಯಲು ನಾಗರಿಕರು ಪರದಾಡಬೇಕಾಗಿದೆ. ಪ್ರತಿದಿನ ನೆಮ್ಮದಿ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ನಗರದ ನೆಮ್ಮದಿ ಕೇಂದ್ರಗಳ ಮುಂದೆ ಸರದಿ ಸಾಲಿನಲ್ಲಿ ನಿಂತರೂ ಪ್ರಯೋಜನವಾಗುತ್ತಿಲ್ಲ. ಹಳ್ಳಿಗಳಿಂದ ಪ್ರತಿದಿನ ನಗರಕ್ಕೆ ಅಲೆದಾಡಬೇಕಾಗಿದೆ ಎಂದು ನಾಗರಿಕರು ತಮ್ಮ ಅಳಲು ತೋಡಿಕೊಂಡರು.

ನೆಮ್ಮದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಮಧ್ಯವರ್ತಿಗಳಿಗೆ ಹಣ ನೀಡಿ, ಪ್ರಭಾವಿ ವ್ಯಕ್ತಿಗಳು ಹಾಗೂ ಶ್ರೀಮಂತರು ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದವರು ಮಾತ್ರ ಸರದಿ ಸಾಲಿನಲ್ಲಿ ನಿಂತು ಪ್ರಮಾಣ ಪತ್ರ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಸರ್ಕಾರ ~ಸಕಾಲ~ ಯೋಜನೆ ಜಾರಿಗೊಳಿಸಿದರೂ ಜನಸಾಮಾನ್ಯರಿಗೆ ಅದರ ಪ್ರಯೋಜನ ತಲುಪುತ್ತಿಲ್ಲ. ನಗರದಲ್ಲಿ ಈಗ ಎರಡೇ ನೆಮ್ಮದಿ ಕೇಂದ್ರಗಳಿವೆ. ದಿನದಿಂದ ದಿನಕ್ಕೆ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದೆ. ಕೆಲವೊಮ್ಮೆ ಕಂಪ್ಯೂಟರ್, ವಿದ್ಯುತ್ ತೊಂದರೆಯಿಂದಾಗಿ ಸರಿಯಾದ ಸಮಯಕ್ಕೆ ಪ್ರಮಾಣ ಪತ್ರಗಳು ದೊರೆಯುತ್ತಿಲ್ಲ. ನಾಲ್ಕು ತಿಂಗಳಿಂದ ಈ ಸಮಸ್ಯೆ ಉಂಟಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಹೆಚ್ಚುವರಿಯಾಗಿ ನಾಲ್ಕು ನೆಮ್ಮದಿ ಕೇಂದ್ರಗಳನ್ನು ತೆರೆದು ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಷರೀಫ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್, ಹನೀಫ್, ಸಬೀನಾ, ಪ್ರತಾಪ್ ಜೋಗಿ, ಅಶೋಕ್ ಬೆಳಘಟ್ಟ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT