ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿಗೆ ಬಂದು ಅಮರನಾದ ಪೋರ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಚಾಕ್‌ಲೇಟ್ ತಿನ್ನುವುದನ್ನೂ ಬಿಟ್ಟು ಹುಂಡಿಯಲ್ಲಿ ಜೋಪಾನವಾಗಿ ಎತ್ತಿಟ್ಟ ದುಡ್ಡನ್ನು ತನ್ನ ಅಣ್ಣ-ಅಕ್ಕಂದಿರಂತೆ ಇರುವ ಬಡ ವಿದ್ಯಾರ್ಥಿಗಳ ನೆರವಿಗೆ ಬಿಟ್ಟು ಕಣ್ಮರೆಯಾದ್ದಾನೆ ನಗರದ ನಾಗಶೆಟ್ಟಿಹಳ್ಳಿ ಬಡಾವಣೆ ಪುಟ್ಟ ಪೋರ ನಿಶಾಂಕ್.

ಆ ಪುಟ್ಟ ಬಾಲಕ, ಅಮ್ಮ ಆಗಾಗ ಕೊಡುತ್ತಿದ್ದ ಪ್ರತಿ ರೂಪಾಯಿಯನ್ನು ಪ್ರೀತಿಯಿಂದ ತನ್ನ ಹುಂಡಿಗೆ ಹಾಕಿಡುತ್ತಿದ್ದ. ಅದನ್ನು ತುಂಬಿಸುವ ಭರದಲ್ಲಿ ಆತ ಚಾಕ್‌ಲೇಟ್ ತಿನ್ನುವುದನ್ನೂ ಬಿಟ್ಟಿದ್ದ. ಮನೆಗೆ ಬಂದ ಸಂಬಂಧಿಗಳು ಕೊಟ್ಟ ದುಡ್ಡೂ ಸೀದಾ ಅದೇ ಹುಂಡಿಗೆ ಹೋಗುತ್ತಿತ್ತು. ಅದರಲ್ಲಿ ಎಷ್ಟು ಹಣ ಶೇಖರಣೆಯಾಗಿದೆ ಎನ್ನುವ ಕುತೂಹಲ ಆತನನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಕುಡಿಕೆ ಒಡೆದು ನೋಡುವ ತವಕದಲ್ಲಿ ಆತನಿದ್ದರೆ ವಿಧಿ ಆಟವೇ ಬೇರೆಯಾಗಿತ್ತು. ಅದು ಆತನ ಬದುಕನ್ನೇ ಒಡೆದು ಚೂರು, ಚೂರು ಮಾಡಿತ್ತು.

ಕಳೆದ ಮೇ 21ರಂದು ಮತ್ತೀಕೆರೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಶಾಂಕ್ ಮೃತಪಟ್ಟ. ಹಣ ಎಣಿಸಲು ನಿತ್ಯ ಕಾತರಿಸುತ್ತಿದ್ದ ಮಗನೇ ಇಲ್ಲವಾದ ಮೇಲೆ ಅವರ ಅಮ್ಮ ಜಲಜಾ, ಭಾರದ ಹೃದಯದಿಂದ ಕುಡಿಕೆ ತೆಗೆದು, ಎಣಿಕೆ ಮಾಡಿದರು. ಲೆಕ್ಕ ಹಾಕಿದರೆ ್ಙ 2,365  ಅದರಲ್ಲಿ ಶೇಖರಣೆಯಾಗಿತ್ತು. ಇದ್ದ ಏಕೈಕ ಮಗನನ್ನು ಕಳೆದುಕೊಂಡಿದ್ದ ಅವರು, ಆ ದುಡ್ಡು ಶಿಕ್ಷಣಕ್ಕಾಗಿಯೇ ವಿನಿ ಯೋಗ ಆಗ ಬೇಕು ಎಂಬ  ಉದ್ದೇಶದಿಂದ `ಪ್ರಜಾವಾಣಿ, ಡೆಕ್ಕನ್  ಹೆರಾಲ್ಡ್  ಬಡ ವಿದ್ಯಾ ರ್ಥಿಗಳ ನಿಧಿ' ಗೆ ಕಳುಹಿಸಿಕೊಟ್ಟಿದ್ದಾರೆ.

ಜಲಜಾ ಅವರ ಜೀವನದಲ್ಲಿ ದುರಂತದ ಮೇಲೆ ದುರಂತ ಬಂದು ಅಪ್ಪಳಿಸುತ್ತಿದೆ. ಕಳೆದ ವರ್ಷ ಅವರ ಪತಿ ಮುನಿರಾಜು ಕ್ಯಾನ್ಸರ್ ಕಾಯಿಲೆಗೆ ಬಲಿಯಾಗಿದ್ದರು. ಇದ್ದೊಬ್ಬ ಮಗನನ್ನು ಚೆನ್ನಾಗಿ ಬೆಳೆಸುವ ಇಚ್ಛೆಯಿಂದ ಪತಿ ಅಗಲಿಕೆಯ ನೋವು ಮರೆತು, ಮಗನ ಪಾಲನೆಯಲ್ಲಿ ತೊಡಗಿದ್ದರು. 11ರ ಹರೆಯದ ಪೋರ ನಿಶಾಂಕ್, ಅಮ್ಮ ನೋವು ಮಾಡಿಕೊಂಡಾಗಲೆಲ್ಲ ದೊಡ್ಡವನಾದ ಮೇಲೆ ಚೆನ್ನಾಗಿ ನೋಡಿಕೊಳ್ಳುವ ಮಾತುಗಳನ್ನು ಆಡುತ್ತಿದ್ದ. ಎಲ್ಲ ದುಗುಡ-ದುಮ್ಮಾನವನ್ನು ಮಗನ ಒಂದೇ ಮಾತಿನಲ್ಲಿ ಮರೆತು ಬಿಡುತ್ತಿದ್ದರು ಜಲಜಾ.

`ಪತಿ ಕಳೆದುಕೊಂಡು ಮಗನಲ್ಲಿ ಭವಿಷ್ಯ ಕಾಣುತ್ತಿದ್ದ ನನಗೆ ಈಗ ಇಂತಹ ಸ್ಥಿತಿ ಒದಗಿದೆ. ನನ್ನ ನೋವಿಗೆ ಕೊನೆಯೇ ಇಲ್ಲವಾಗಿದೆ. ಬೇರೆ ಯಾರಿಗೂ ಇಂತಹ ವೇದನೆ ಬರಬಾರದು' ಎಂದು ಕಣ್ಣೀರು ಒರೆಸಿಕೊಳ್ಳುತ್ತಾರೆ ಜಲಜಾ. ಸಾವಿನಲ್ಲೂ ಮಗ ಸಮಾಜಕ್ಕೆ ನೆರವಾದನಲ್ಲ ಎನ್ನುವ ಸಂಗತಿ ಮಾತ್ರ ಅವರಲ್ಲಿ ಸಮಾಧಾನ ಉಂಟುಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT