ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿಗೆ ಹಾತೊರೆಯುತ್ತಿರುವ ಪ್ರತಿಭಾವಂತೆ...

ಎರಡೂ ಕಿಡ್ನಿ ವಿಫಲ, ಸಂಕಷ್ಟದಲ್ಲಿ ಯುವತಿಯ ಬದುಕು
Last Updated 10 ಡಿಸೆಂಬರ್ 2013, 9:56 IST
ಅಕ್ಷರ ಗಾತ್ರ

ರಾಮನಗರ:  ಕಿತ್ತು ತಿನ್ನುವ ಬಡತನ, ಕೂಲಿಗೆ ಹೋಗುವ ತಾಯಿ, ಮನೆ ಬಿಟ್ಟು ಹೋಗಿರುವ ತಂದೆ, ಮದುವೆಗೆ ಬಂದಿರುವ ಅಕ್ಕ, ವ್ಯಾಸಂಗ ಮಾಡುತ್ತಿ ರುವ ಇಬ್ಬರು ಸಹೋದರಿಯರು.... ಇವರ ನಡುವೆ ಓದಿ ಸಾಧಿಸಬೇಕು, ಕುಟುಂಬದ ಜವಾಬ್ದಾರಿ ಹೊರಬೇಕು ಎಂಬ ಕನಸು ಹೊಂದಿರುವ ಯುವ ತಿಯ ಕಂಗಳಲ್ಲಿ ಕಣ್ಣೀರು ತುಂಬಿದೆ, ಶಕ್ತಿ ಕುಸಿದಿದೆ.... ನೆರವು ನೀಡುವ ದಾನಿಗಳಿಗಾಗಿ ಜೀವ ಹಾತೊರೆ ಯುತ್ತಿದೆ.

ಹೌದು, ಇದು ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡು ತ್ತಿರುವ ಡಿ. ಸೌಂದರ್ಯ (19) ಪಡುತ್ತಿರುವ ಕಷ್ಟದ ಚಿತ್ರಣ.

ಈ ಯುವತಿಯ ಎರಡೂ ಕಿಡ್ನಿಗಳು ವಿಫಲವಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಬಿ.ಕಾಂ ನಂತರ ಎಂ.ಕಾಂ ಮಾಡಿ,  ಚಾರ್ಟೆಡ್‌ ಅಕೌಂಟೆಂಟ್‌ (ಸಿ.ಎ) ಆಗಬೇಕು ಎಂಬ ಕನಸು ಹೊಂದಿದ್ದ ಸೌಂದರ್ಯಗೆ ಕಿಡ್ನಿ ತೊಂದರೆ ದೊಡ್ಡ ಆಘಾತ ನೀಡಿದೆ.

ಇಲ್ಲಿನ ವಿಜಯನಗರದ ವಾಸಿಯಾ ಗಿರುವ ನಾಗಮ್ಮನವರ ದ್ವಿತೀಯ ಪುತ್ರಿ ಸೌಂದರ್ಯ. ನಗರದಲ್ಲಿ ರೇಷ್ಮೆ ನೂಲು ಬಿಚ್ಛಾಣಿಕೆ ಕೇಂದ್ರ (ಫಿಲೇ ಚರ್‌)ದಲ್ಲಿ ಕೂಲಿಯಾಳಾಗಿ ಕೆಲಸ ಮಾಡುವ ನಾಗಮ್ಮನಿಗೆ ದಿನಕ್ಕೆ ಸಿಗು ವುದು ಕೇವಲ 100ರಿಂದ 110 ರೂಪಾಯಿ ಕೂಲಿ.  ಇದರಲ್ಲಿಯೇ ಇವರ ಕುಟುಂಬದ ಬಂಡಿ ಸಾಗಬೇ ಕಾಗಿದೆ.

‘ಅಪ್ಪ ಎನ್ನಿಸಿಕೊಂಡಾತನಿಗೆ (ದೊಡ್ಡಯ್ಯ) ಮಕ್ಕಳು ಮತ್ತು ಹೆಂಡ ತಿಯ ಮೇಲೆ ಒಂದಿಷ್ಟೂ ಪ್ರೀತಿ ಇಲ್ಲ. ಸದಾ ಕುಡಿಯುವ ಆತ ನಮ್ಮೊಡನೆ ಇದ್ದಾಗ ನೋವು ಕೊಟ್ಟಿದ್ದೇ ಹೆಚ್ಚು. ಎರಡು–ಮೂರು ವರ್ಷದಿಂದ ಅವರು ನಮ್ಮನ್ನು ತೊರೆದಿದ್ದಾರೆ. ನಮ್ಮ ಪಾಲಿಗೆ ಎಲ್ಲವೂ ಅಮ್ಮನೇ. ಅಮ್ಮನ ಕೂಲಿ ಹಣದಿಂದಲೇ ನಮ್ಮ ವ್ಯಾಸಂಗ, ಊಟ, ಬಟ್ಟೆ ಆಗುತ್ತಿದೆ. ಇದೀಗ ಕಿಡ್ನಿ ತೊಂದರೆ ನಮ್ಮ ಕುಟುಂಬಕ್ಕೆ ಭಾರಿ ಆಘಾತ ತಂದಿದೆ’ ಎಂದು ಸೌಂದರ್ಯ ದುಃಖದಿಂದ ಹೇಳುತ್ತಾರೆ.

‘ನಮ್ಮದು ದಲಿತ ಸಮುದಾಯ. ನನಗೆ ಒಬ್ಬ ಅಕ್ಕ, ಇಬ್ಬರು ತಂಗಿ ಇದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದ ಕಾರಣ, ನಾವು ನಾಲ್ಕೂ ಜನ ಹಾಸ್ಟೆಲ್‌ನಲ್ಲಿಯೇ ಓದಿದ್ದು. ಕೊನೆಯ ತಂಗಿ ಇನ್ನೂ ಹಾಸ್ಟೆಲ್‌ನ ಲ್ಲಿಯೇ ಓದುತ್ತಿದ್ದಾಳೆ.

ನಾನು ಏಳನೇ ತರಗತಿಯಲ್ಲಿದ್ದಾಗ ಕಿಡ್ನಿ ತೊಂದರೆ ಕಾಣಿಸಿಕೊಂಡಿತು. ಆರ್ಥಿಕವಾಗಿ ಸ್ಥಿತಿ ವಂತರಲ್ಲದ ಕಾರಣ ಇದನ್ನು ಗಂಭೀರ ವಾಗಿ ಪರಿಗಣಿಸಲಿಲ್ಲ. ಸಣ್ಣಪುಟ್ಟ ಗುಳಿಗೆಗಳನ್ನು ನುಂಗಲಾಗುತ್ತಿತ್ತು. ಎರಡು ವರ್ಷದಿಂದ ಈ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ. ದೇಹದ ಶಕ್ತಿಯನ್ನೇ ಕಿತ್ತುಕೊಂಡಿದೆ’ ಎಂದು ಅವರು ದುಃಖಿಸುತ್ತಾ ಹೇಳಿದರು.

‘ಎಸ್ಸೆಸ್ಸೆಲ್ಸಿ, ದ್ವಿತೀಯ ಪಿ.ಯುನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾ ಗಿದ್ದೇನೆ. ಕಿಡ್ನಿ ಸಮಸ್ಯೆ ಇರುವ ಕಾರಣ ಮುಂದೆ ಓದಬೇಡ ಎಂದು ಅಮ್ಮ ಹೇಳಿದರು. ಆದರೆ ಓದಬೇಕು ಎಂಬ ಛಲ, ಸಿ.ಎ ಮಾಡಬೇಕು ಎಂಬ ತುಡಿತ ಇದೆ.

ಅದಕ್ಕಾಗಿ ಬಿ.ಕಾಂ ಪದವಿ ಪ್ರವೇಶ ಪಡೆದೆ. ಚಿಕಿತ್ಸೆಗೆಂದು ಪದೇ ಪದೇ ಬೆಂಗಳೂರಿಗೆ ಹೋಗಬೇಕಾ ದ್ದರಿಂದ ತರಗತಿಗಳನ್ನು ಮಿಸ್‌ ಮಾಡಿ ಕೊಳ್ಳುತ್ತಿದ್ದೆ. ಹಾಗಾಗಿ ಮೊದಲ ವರ್ಷದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಳಾದೆ. ಮೂರನೇ ಸೆಮಿಸ್ಟ ರ್‌ನಲ್ಲಿ ತರಗತಿಗಳಿಗೆ ಹಾಜರಾಗು ವುದು ಬಹಳ ಕಷ್ಟವಾಯಿತು. ಹಾಜ ರಾತಿ ಕೊರತೆ ಇದ್ದರೂ ಉಪನ್ಯಾಸಕರು ಪರೀಕ್ಷೆ ಬರೆಯಲು ಅನುಮತಿ ನೀಡಿ ಮಾನವೀಯತೆ ಮರೆದರು. ಅದರ ಫಲಿತಾಂಶ ಇನ್ನೂ ಬಂದಿಲ್ಲ’ ಎಂದರು.

ಸೌಂದರ್ಯ ಅವರ ತಾಯಿ ನಾಗಮ್ಮ ಪ್ರತಿಕ್ರಿಯಿಸಿ, ‘ಫಿಲೇಚರ್‌ನಲ್ಲಿ ಕೆಲಸ ಮಾಡುವ ನಾನು ತಿಂಗಳಿಗೆ ರೂ 3000 ಸಂಪಾದಿಸುವುದು ಕಷ್ಟ. ಎರ ಡನೇ ಮಗಳು ಸೌಂದರ್ಯ ಕಾಲೇಜಿ ನಿಂದ ಬಂದ ನಂತರ ಮನೆ ಪಾಠ ಮಾಡಿ ಸ್ವಲ್ಪ ಹಣ ಗಳಿಸುತ್ತಾಳೆ. ಆಕೆಗೆ ಎದುರಾಗಿರುವ ಕಿಡ್ನಿ ತೊಂದರೆ ನಿವಾರಣೆಗೆ ಹರಸಾಹಸ ಮಾಡುತ್ತಿ ದ್ದೇವೆ. ಚಿಕ್ಕವಳಿದ್ದಾಗ ಮಾತ್ರೆ ನುಂಗಲು, ಇಂಜೆಕ್ಷನ್‌ ತೆಗೆದುಕೊಳ್ಳಲು ಹೆದರುತ್ತಿದ್ದವಳು ಈಗ ದಿನಕ್ಕೆ 18 ಮಾತ್ರೆ ನುಂಗುತ್ತಿದ್ದಾಳೆ’ ಎಂದು ಕಣ್ಣೀರಿಟ್ಟರು.

‘ಪಾಠದ ಜತೆ ಆಟದಲ್ಲೂ ಮುಂದಿದ್ದ ಮಗಳು, ಗಾಯನ, ಕ್ರೀಡೆ, ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿ ಸುತ್ತಿದ್ದಳು. ಅಕ್ಕನ ಮದುವೆ ಮಾಡಿ, ಇಬ್ಬರು ತಂಗಿಯರಿಗೆ ಒಳ್ಳೆಯ ವಿದ್ಯಾ ಭ್ಯಾಸ ಕೊಡಿಸಬೇಕು ಎಂಬ ಹಂಬಲ ಅವಳಲ್ಲಿದೆ. ಆದರೆ ದೇವರು ಏಕೆ ಮಗಳಿಗೆ ಇಂತಹ ಕಷ್ಟ ಕೊಟ್ಟಿರುವ. ಈ ತೊಂದರೆ ಎದುರಿಸಲು ಡಯಾಲಿಸಿಸ್‌ ಮತ್ತು ಆಪರೇಷನ್‌ ಮಾಡಬೇಕಂತೆ. ಅದಕ್ಕೆ ತಗಲುವ ವೆಚ್ಚ ಭರಿಸುವ ಶಕ್ತಿ ನಮಗಿಲ್ಲ. ದಾನಿಗಳು ನೆರವು ನೀಡಿ, ನನ್ನ ಮಗಳನ್ನು ಉಳಿಸಿಕೊಡಿ’ ಎಂದು ಅವರು ಅಂಗಲಾಚುತ್ತಾರೆ.

ಸಂಪರ್ಕ: ನಾಗಮ್ಮ ಅವರ ದೂರವಾಣಿ ಸಂಖ್ಯೆ 95919– 48073. ನೆರವು ನೀಡುವ ದಾನಿಗಳಿಗೆ: ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ಬಿಎಂ) ರಾಮನಗರ ಶಾಖೆ– ಎಸ್‌.ಬಿ. ಖಾತೆ– 54046792354.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT