ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರ ಮನೆಗಳು ಖಾಲಿ...

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಣ್ಣೆಹಳ್ಳದ ಪ್ರವಾಹದಿಂದಾಗಿ ಮನೆ ಕಳೆದುಕೊಂಡ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕೊಂಗವಾಡದ ಗ್ರಾಮಸ್ಥರಿಗೆ ಕಟ್ಟಿಸಿದ 420 ಮನೆಗಳಲ್ಲಿ ಬಹುತೇಕ ಖಾಲಿ ಉಳಿದಿವೆ!

ಕುಡಿಯುವ ನೀರಿನ ಕೊರತೆ, ವಿದ್ಯುತ್ ಕೊರತೆ, ದನಕರು ಕಟ್ಟಲಾಗದೆ, ಅವಿಭಕ್ತ ಕುಟುಂಬಗಳಿಗೆ ಒಂದೇ ಮನೆ ಸಿಕ್ಕಿರುವುದು, ಶಾಲೆ ಆರಂಭವಾಗದೇ ಇರುವುದು ಮೊದಲಾದ ಕಾರಣಗಳಿಗೆ ಹಳೆಯ ಕೊಂಗವಾಡ ತೊರೆಯದವರೇ ಹೆಚ್ಚು. ಇದರಿಂದ ಕೊಂಗವಾಡದ ನೆರೆ ಸಂತ್ರಸ್ತರೆಲ್ಲ ಸಂಪೂರ್ಣವಾಗಿ ಹೊಸ ಕೊಂಗವಾಡಕ್ಕೆ ಸ್ಥಳಾಂತರಗೊಂಡಿಲ್ಲ. ಕೇವಲ 50 ಮನೆಗಳಲ್ಲಿ ಮಾತ್ರ ವಾಸವಾಗಿದ್ದಾರೆ.

2009ರಲ್ಲಿ ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿದ ಕೊಂಗವಾಡ ಗ್ರಾಮವನ್ನು ಅಲ್ಲಿಂದ ಎರಡು ಕಿ.ಮೀ. ದೂರದಲ್ಲಿ ಸ್ಥಳಾತರಗೊಳಿಸಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿ ಜಮೀನು ಖರೀದಿಸಿತು. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೇತೃತ್ವದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಮನೆಗಳನ್ನು ಕಟ್ಟಿಸಲು 2009ರ ಅಕ್ಟೋಬರ್ 19ರಂದು ಶಂಕುಸ್ಥಾಪನೆಯನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರವೇರಿಸಿದರು.
 
ಪ್ರತಿ ಮನೆಗೆ ರೂ. 1.30 ಲಕ್ಷ ವೆಚ್ಚ ಮಾಡಿ ಒಟ್ಟು 420 ಮನೆಗಳನ್ನು ನಿರ್ಮಿಸಲಾಯಿತು. ಇವುಗಳಿಗಾದ ಒಟ್ಟು ವೆಚ್ಚ ರೂ. 5.46 ಕೋಟಿ. ಇವುಗಳನ್ನು ಕಳೆದ ವರ್ಷ ಆಗಸ್ಟ್ 28ರಂದು ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು.

ಆದರೆ ಮೂಲ ಸೌಲಭ್ಯಗಳ ಕೊರತೆಯ ಜೊತೆಗೆ ಹಳೆಯ ಮನೆಗಳನ್ನು ತೊರೆಯದವರು ಹೊಸ ಕೊಂಗವಾಡಕ್ಕೆ ಸ್ಥಳಾಂತರಗೊಳ್ಳದಿರುವವರೇ ಹೆಚ್ಚು. ಮುಖ್ಯವಾಗಿ ಕುಡಿಯುವ ನೀರಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಅಲ್ಲಿರುವ ಕಾಲುವೆಯಲ್ಲಿ ಹರಿದುಹೋಗುವ ಮಲಪ್ರಭಾ ನೀರನ್ನೇ ಕುಡಿಯಲು ಬಳಸುತ್ತಾರೆ.

ಬಳಕೆಗೆಂದು ಅಲ್ಲಿಂದ ಎರಡು ಕಿ.ಮೀ. ದೂರದ ಕೆರೆಯಿಂದ ನೀರನ್ನು ಸೈಕಲ್ ಮೂಲಕ ತರುತ್ತಾರೆ. `ನೀರಿನ ಟ್ಯಾಂಕ್ ಕಟ್ಟಿದ್ದಾರೆ. ಅದರಲ್ಲಿ ನೀರಿಲ್ಲ. ಇದಕ್ಕಾಗಿ ಕಾಲುವೆ ನೀರನ್ನು ಟ್ಯಾಂಕ್‌ಗೆ ಏರಿಸಿ, ಶುದ್ಧಿಗೊಳಿಸಿ ಕುಡಿಯಲು ಬಿಡಬೇಕು~ ಎನ್ನುವ ಮನವಿ ಅಲ್ಲಿಯ ನಿವಾಸಿ ಚನ್ನಪ್ಪ ಬುಡ್ಡಣ್ಣವರ ಅವರದು.

`ಇಲ್ಲಿ ಕ್ಷೌರಿಕ ಅಂಗಡಿ ಇಲ್ರಿ, ಚಹಾದ ಅಂಗಡಿ ಇಲ್ರಿ. ಇರುವುದೊಂದೇ ಕಿರಾಣಿ ಅಂಗಡಿ. ಸೋಲಾರ್ ದೀಪಗಳು ಹತ್ತುತ್ತವೆ. ಉಳಿದ ಬೀದಿ ದೀಪಗಳು ದುರಸ್ತಿಯಲ್ಲಿವೆ. ಪಂಚಾಯಿತಿಯವರನ್ನು ಕೇಳಿದರೆ ಸಂಬಂಧ ಇಲ್ಲ ಎನ್ನುತ್ತಾರೆ. ರಾತ್ರಿ ಹಾವುಗಳ ಕಾಟ ಜಾಸ್ತಿ. ಎಷ್ಟೋ ಜನರು ಹಾವು ಕಡಿತಕ್ಕೆ ಒಳಗಾಗಿದ್ದಾರೆ. ತಕ್ಷಣ ದವಾಖಾನೆಗೆ ಹಾಕಿದ್ರೆ ಉಳಿಯುತ್ತಾರೆ. ಅದರ ಖರ್ಚು ಬೇರೆ~ ಎಂದು ಫಕೀರಪ್ಪ ಬುಡ್ಡನ್ನವರ ಹೇಳುತ್ತಾರೆ.

`ಹೊಟ್ಟು, ಮೇವಿನ ಬಣವೆಗಳಿಗೆ ಸಾಮೂಹಿಕ ಜಾಗ ಬಿಡಲಾಗಿದೆ. ಆದರೆ ದನಕರುಗಳನ್ನು ಕಟ್ಟಲು ಮನೆಯ ಹಿಂದೆ-ಮುಂದೆ ತಗಡಿನ ಶೆಡ್ ನಿರ್ಮಿಸಿಕೊಳ್ಳಬೇಕಿದೆ. ಇದಕ್ಕಾಗಿ 25-30 ಸಾವಿರ ರೂಪಾಯಿ ಖರ್ಚಾಗುತ್ತದೆ. ಈ ವರ್ಷ ಮಳೆಯಿಲ್ಲ. ಎಲ್ಲ ಪೀಕು ಒಣಗಿ ಹೋಗಿವೆ. ಬರಗಾಲ ಸ್ಥಿತಿ. ಹಿಂಗಾಗಿ ಹೊಸ ಕೊಂಗವಾಡಕ್ಕೆ ಹೋಗದೆ ಇಲ್ಲಿಯೇ ಉಳಿದೀವ್ರಿ~ ಎನ್ನುತ್ತಾರೆ ಬೀರಪ್ಪ ಮುಳ್ಳೂರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT