ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರಿಗೆ ಮನೆ ಹಸ್ತಾಂತರ

Last Updated 21 ಜೂನ್ 2011, 6:35 IST
ಅಕ್ಷರ ಗಾತ್ರ

ಬಾಗಲಕೋಟೆ: ಕಲುಷಿತ ರಾಜಕೀಯ ವ್ಯವಸ್ಥೆಯನ್ನು ತಿಳಿಗೊಳಿಸಲು ಆರ್‌ಎಸ್‌ಎಸ್ ಮಧ್ಯ ಪ್ರವೇಶಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಮನವಿ ಮಾಡಿದರು.
ಸೇವಾ ಭಾರತಿ ವತಿಯಿಂದ ಬಾದಾಮಿ ತಾಲ್ಲೂಕಿನ ಕೊಟ್ನಳ್ಳಿ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗಾಗಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿರುವ 72 ಮನೆಗಳ ಹಸ್ತಾಂತರ ಸಮಾರಂಭದಲ್ಲಿ ಕುಡಿಯುವ ನೀರು ಮತ್ತು ಇತರೆ ಮೂಲಸೌಕರ್ಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೂಲಸೌಲಭ್ಯ ಸೇರದಂತೆ ಒಟ್ಟು ರೂ. 300 ಕೋಟಿ ವೆಚ್ಚದಲ್ಲಿ ರಾಜ್ಯದ ನೆರಪೀಡಿತ 342 ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 24 ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ. ಪ್ರಸ್ತುತ 8200 ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು,  ಸೆಪ್ಟೆಂಬರ್ ಒಳಗಾಗಿ 13,331 ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಗುವುದು ಎಂದರು.

ನೆರೆ ಸಂತ್ರಸ್ತರಿಗೆ ಮನೆ ಒದಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಬಹಳಷ್ಟು ಟೀಕೆ ಮಾಡುತ್ತಿವೆ, ಕೇವಲ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನೆರೆ ಬರಲಿಲ್ಲ, ಈ ಹಿಂದೆ ಬಹಳಷ್ಟು ಭಾರಿ ನೆರೆ ಬಂದುಹೋಗಿದೆ ಆ ಸಂದರ್ಭದಲ್ಲಿ ಆಳ್ವಿಕೆ ನಡೆಸಿದ ಸರ್ಕಾರಗಳು ಸಂತ್ರಸ್ತರಿಗೆ ಸೂರು ಇರಲಿ, ನಿವೇಶನವನ್ನು ಒದಗಿಸಿಲ್ಲ ಎಂದು ಆರೋಪಿಸಿದರು.

ರೂ. 10ಲಕ್ಷ ಅನುದಾನ: ನೆರೆ ಪೀಡಿತ ಕೊಟ್ನಳ್ಳಿ ಗ್ರಾಮದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಶೀಘ್ರದಲ್ಲೇ ರೂ.10 ಲಕ್ಷ ಅನುದಾನ ನೀಡುವ ಭರವಸೆ ನೀಡಿದ ಸಚಿವರು, ಈ ಭವನವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಅಂಗನವಾಡಿ ಕೇಂದ್ರವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.

ಗ್ರಾಮಕ್ಕೆ ಅಗತ್ಯವಿರುವ ರಸ್ತೆ ಮತ್ತಿತರ ಮೂಲಸೌಕರ್ಯ ಒದಗಿಸಿಕೊಡಲು ಸ್ಥಳೀಯ ಶಾಸಕರಿಗೆ ಸಲಹೆ ಮಾಡಿದರು ಮತ್ತು ಸೇವಾ ಭಾರತಿ ಸಂಘಟನೆಗೆ ಚಟುವಟಿಕೆ ನಡೆಸಲು ಒಂದು ಮನೆಯನ್ನು ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.

ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿ, ನೆರೆ ಸಂತ್ರಸ್ತರಿಗೆ ಸರ್ಕಾರ ನಿರ್ಮಿಸಿಕೊಟ್ಟಿರುವ ಆಸರೆ ಮನೆಗಳು ಕಳಪೆಯಾಗಿವೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಸಂತ್ರಸ್ತರು ಇದಕ್ಕೆ ಕಿವಿಕೊಡದೆ ಮನೆ ನಿರ್ಮಿಸಿಕೊಟ್ಟವರಿಗೆ ಒಳಿತಾಗಲಿ ಎಂದು ಸದಾ ಸ್ಮರಿಸಿರಿ ಎಂದರು.

ಸಂತ್ರಸ್ತರಿಗೆ ಮನೆಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ  ಮೈ.ಚ. ಜಯದೇವ, ಸೇವೆ ಎಂಬುದು ಜನಸಾಮಾನ್ಯರಲ್ಲಿ ಆಂದೋಲನವಾಗಬೇಕು ಎಂದರು.

ದೇಶದಲ್ಲಿ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ, ಬಾಬಾ ರಾಮ್‌ದೇವ್ ಮತ್ತು ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಆರ್‌ಎಸ್‌ಎಸ್ ಬೆಂಬಲಿಸಿದ ಕಾರಣ ಈ ಎರಡು ಚಳವಳಿಯನ್ನೇ ಅಪರಾಧ ಎಂಬಂತೆ ಕೇಂದ್ರ ಸಚಿವರಿಬ್ಬರು ಹೇಳಿಕೆ ನೀಡಿದ್ದಾರೆ, ಹಾಗಾದರೇ ಆರ್‌ಎಸ್‌ಎಸ್ ಯಾವುದೇ ಒಳ್ಳೆಯ ಕೆಲಸ ಮಾಡಬಾರದೇ ಎಂದು ಅವರು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಒಪ್ಪತೇಶ್ವರಮಠದ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿ, ಬಿ.ಎನ್. ಜಾಲಿಹಾಳದ ವೈರಾಗ್ಯ ಮಲ್ಲನಾರ್ಯ ಮಹಾಮನೆಯ ಆದಿ ಸಿದ್ದೇಶ್ವರ ಮಹಾಸ್ವಾಮಿ,  ಜಿ.ಪಂ. ಉಪಾಧ್ಯಕ್ಷ  ಹೂವಪ್ಪ ರಾಠೋಡ, ಜಿ.ಪಂ. ಸದಸ್ಯೆ ಮಂಜುಳಾ ಶೇಖರ ರಾಠೋಡ, ಬಾದಾಮಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಶೀಲಬಾಯಿ ರಾಮಪ್ಪ ಹೆಬ್ಬಳ್ಳಿ, ತಾ.ಪಂ. ಸದಸ್ಯ ಹನುಮಂತ ಕೆ. ಪತ್ತಾರ, ಲಾಯದಗುಂದಿ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರಪ್ಪ ದ್ಯಾವಪ್ಪ ಅಂಬಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT