ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕಚ್ಚಿದ ನಿರ್ಮಿತಿ ಕೇಂದ್ರ ನಿರ್ಮಾಣ ಕಟ್ಟಡ

Last Updated 24 ಅಕ್ಟೋಬರ್ 2011, 10:40 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇರುವ `ನಿರ್ಮಿತಿ ಕೇಂದ್ರ~ ಹಾಗೂ ಲ್ಯಾಂಡ್ ಆರ್ಮಿ ನಿರ್ಮಿಸಿರುವ ಬಹುತೇಕ ಕಟ್ಟಡಗಳು ಕಳಪೆಯಾಗಿದ್ದು, ಬೀಳುವ ಸ್ಥಿತಿಯಲ್ಲಿವೆ. ಇವುಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಕೆಸ್ತೂರ್ ಮಂಜುನಾಥ್, ಬಾಳೇಹಳ್ಳಿ ಪ್ರಭಾಕರ್ ಆಗ್ರಹಿಸಿದರು.

 ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಗುರುವಾರ ಈ ವಿಚಾರವನ್ನು  ಗಂಭೀರವಾಗಿ ಚರ್ಚಿಸಿದ ಅವರು, ತಾಲ್ಲೂಕಿನ ಹುಂಚದಕಟ್ಟೆ, ಹೆದ್ದೂರು ಸೇರಿದಂತೆ ಅನೇಕ ಕಡೆಗಳಲ್ಲಿ ನಿರ್ಮಿತಿ ಕೇಂದ್ರ ನಿರ್ಮಾಣ ಮಾಡಿದ ಪ್ರೌಢಶಾಲಾ ಕಟ್ಟಡಗಳು ಸಂಪೂರ್ಣ ಕಳಪೆಯಾಗಿವೆ. ಯಾವ ಸಂದರ್ಭದಲ್ಲಿ ಬೇಕಾದರೂ ಬೀಳಬಹುದು. ಈ ಕೇಂದ್ರಗಳು ನಿರ್ಮಿಸಿರುವ ಅನೇಕ ಕಟ್ಟಡಗಳ ಉದ್ಘಾಟನೆಯೇ ಆಗಿಲ್ಲ. ಇದರಿಂದ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.

ಈ ಕುರಿತು ಕಟ್ಟಡದ ಗುಣಮಟ್ಟ ಪರೀಕ್ಷೆ ಮಾಡುವಂತೆ ಸೂಚಿಸಲಾಗಿತ್ತು. ಸಮಸ್ಯೆ ಪರಿಹರಿಸುವಂತೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಎರಡು ಮೂರು ಬಾರಿ ನಿರ್ಣಯ ಕೈಗೊಳ್ಳಲಾಗಿದೆ. ಇದುವರೆವಿಗೂ ಈ ನಿರ್ಣಯಕ್ಕೆ ಯಾವುದೇ ಮಾನ್ಯತೆ ಸಿಕ್ಕಿಲ್ಲ. ಹಾಗಾದರೆ ಇಂಥಹ ಸಭೆಗಳನ್ನು ಏತಕ್ಕೆ ನಡೆಸಬೇಕು ಎಂದು ಕೆಸ್ತೂರ್ ಮಂಜುನಾಥ್ ಹೇಳಿದರು.

ಸಂಚಾರಿ ಆರೋಗ್ಯ ಘಟಕ ಕೆಲವೊಮ್ಮೆ ರೋಗಿಗಳ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇದನ್ನು ಸರಿಪಡಿಸಿಕೊಳ್ಳುವಂತೆ ಸದಸ್ಯ ಬಾಳೇಹಳ್ಳಿ ಪ್ರಭಾಕರ್ ಸೂಚಿಸಿದರು.

ಕ್ರೀಡಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವಲ್ಲಿ ಲೋಪ ಎಸಗಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸದಸ್ಯ ಕುಂಚದಕಟ್ಟೆ ವೆಂಕಟೇಶ್ ಆಗ್ರಹಿಸಿದರು.

ಮನಬಂದಂತೆ ಬಿಲ್‌ಗಳನ್ನು ಬರೆದು ಹಣ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನಾದ್ಯಂತ ಪಶುವೈದ್ಯ ಇಲಾಖೆಯಿಂದ 1.20 ಲಕ್ಷ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆ ಹಾಕಲಾಗುತ್ತಿದೆ. ಪ್ರತಿ ಆಸ್ಪತ್ರೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಆಸ್ಪತ್ರೆಯಲ್ಲಿ ಪಿಟ್‌ಗಳ ನಿರ್ಮಾಣ ಮಾಡಲು ಲೋಕ್ ಅದಾಲತ್ ನಿರ್ದೇಶನದ ಮೇಲೆ  ಚಾಲನೆ ನೀಡಲಾಗಿದೆ. ಪ್ರತಿ ಪಿಟ್‌ಗೆ 19 ಸಾವಿರ ಅಂದಾಜು ವೆಚ್ಚ ತಗುಲಲಿ ಎಂಬ ಮಾಹಿತಿಯನ್ನು ಪಶು ವೈದ್ಯಾಧಿಕಾರಿ ಡಾ.ಕೆ.ವಿ. ಮಂಜುನಾಥ್ ಸಭೆಗೆ ನೀಡಿದರು.

ಈ ಸಂದರ್ಭದಲ್ಲಿ ವಿಷಯ ಕುರಿತು ಪ್ರಸ್ತಾಪಿಸಿದ ಸದಸ್ಯ ಕಟ್ಟೆಹಕ್ಕಲು ಕಿರಣ್ ಜಾನುವಾರುಗಳಿಗೆ ಲಸಿಕೆ ಹಾಲಕು ಬರುವ ವೈದ್ಯರಿಗೆ ಎಷ್ಟು ಹಣ ನೀಡಬೇಕು ಎಂದು ಪ್ರಶ್ನಿಸಿದರು.

ಜಾನುವಾರುಗಳಗೆ ಲಸಿಕೆ ಹಾಕಲು ಬರುವ ವೈದ್ಯರು ಹಣ ಕೇಳುತ್ತಾರೆ. ಕಾರಿನಲ್ಲಿ ಬಂದು ಲಸಿಕೆ ಹಾಕಿದರೆ ವಾಹನ ಬಾಡಿಗೆ ನೀಡಬೇಕು, ಪ್ರತಿ ಜಾನುವಾರಿಗೆ ಇಷ್ಟು ಹಣ ನೀಡಬೇಕು ಎಂದು ಕೇಳುತ್ತಾರೆ ಇದು ಸರಿಯೇ? ಇದಕ್ಕೆ ಅವಕಾಶವಿದೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಡಾ.ಮಂಜುನಾಥ್ ಆ ರೀತಿ ಇಲ್ಲ. ಜಾನುವಾರುಗಳನ್ನು ಪಶುವೈದ್ಯ ಆಸ್ಪತ್ರೆಗೆ ಕರೆದುಕೊಂಡು ಬರುವುದು ಕಷ್ಟ ಸಾಧ್ಯವಾದ್ದರಿಂದ ವೈದ್ಯರೇ ಹಳ್ಳಿಗೆ ಹೋಗಬೇಕಾಗಿದೆ. ಈ ವಿಚಾರವನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳವುದಾಗಿ ಹೇಳಿದರು.

ಮಾಂಸ ಮಾರಾಟ ಕೇಂದ್ರಗಳು ಶುಚಿತ್ವ ಕಾಪಾಡುತ್ತಿಲ್ಲ. ಮಾಂಸ ಮಾರಾಟಕ್ಕೆ ಯೋಗ್ಯವಾದ ಕುರಿಗಳ ಆಯ್ಕೆಗೆ ಪಶುವೈದ್ಯ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ನಿಯಮ ಪಾಲಿಸುತ್ತಿಲ್ಲ ಎಂಬ ಕಟ್ಟೆಹಕ್ಕುಲು ಕಿರಣ್ ಪ್ರಶ್ನೆಗೆ ಈ ಕುರಿತು ಕ್ರಮ ಕೈಗೊಳ್ಳುವ ಭರವಸೆಯನ್ನು ಡಾ.ಮಂಜುನಾಥ್ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ಜೀನಾವಿಕ್ಟರ್ ಡಿಸೋಜ, ಕಾರ್ಯ ನಿರ್ವಹಣಾಧಿಕಾರಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಹಾರೋಗೊಳಿಗೆ ಪದ್ಮನಾಭ್, ಟಿ.ಎಲ್. ಸುಂದರೇಶ್, ಬಿ.ಎಸ್. ಯಲ್ಲಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT