ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕಚ್ಚಿದ ನೀರಿನ ಟ್ಯಾಂಕ್: ಮನೆಗಳಿಗೆ ಹಾನಿ

Last Updated 13 ಜೂನ್ 2011, 8:20 IST
ಅಕ್ಷರ ಗಾತ್ರ

ಇಂಡಿ: ಪಟ್ಟಣದ ಬೀರಪ್ಪ ನಗರದಲ್ಲಿರುವ ಒಂದು ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ನೀರಿನ ಟ್ಯಾಂಕ್ ಭಾನುವಾರ ಕುಸಿದು ಬಿದ್ದಿದೆ. ಮಧ್ಯಾಹ್ನ ಏಕಾಏಕಿ ಟ್ಯಾಂಕ್‌ನ ಕಾಂಕ್ರೀಟ್ ಸಿಡಿದು, ಬೃಹತ್ ಟ್ಯಾಂಕ್ ನೆಲಕಚ್ಚಿತು.
 
ಇದರಿಂದಾಗಿ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಬೈಕ್ ಪುಡಿಪುಡಿಯಾದರೆ, ಸಮೀಪದ ಆರು ಮನೆಗಳಿಗೆ ಹಾನಿಯಾಗಿದೆ. ಕಾಂಕ್ರೀಟ್ ಹಾಗೂ ಕಲ್ಲುಗಳು ಸಿಡಿದು ಮೂವರು ಗಾಯಗೊಂಡಿದ್ದಾರೆ.

ತಪ್ಪಿದ ಅನಾಹುತ: 
ಟ್ಯಾಂಕ್ ಪಕ್ಕದಲ್ಲಿಯೇ  ಲಯನ್ಸ್ ಪ್ರೌಢಶಾಲೆಯಿದೆ. ಈ ಶಾಲೆಯ ಮಕ್ಕಳು ನಿತ್ಯ ಟ್ಯಾಂಕ್ ಕೆಳಗಡೆ ಹಾಕಿದ್ದ ಮರಳಿನಲ್ಲಿ ಆಟವಾಡುತ್ತಿದ್ದರು. ಭಾನುವಾರ ಶಾಲೆಗೆ ರಜೆ ಇದ್ದುದರಿಂದ ಮಕ್ಕಳು ಅಪಾಯಕ್ಕೆ ಸಿಕ್ಕಿಲ್ಲ.

ಟ್ಯಾಂಕ್ ಪಕ್ಕದಲ್ಲಿರುವ ದೇಶಪಾಂಡೆ ಅವರಿಗೆ ಸೇರಿದ ಮನೆಯ ಬಾಗಿಲು ಮತ್ತು ಮನೆಯ ಮುಂಭಾಗ ಬಿದ್ದಿದೆ. 5 ಮನೆಗಳಲ್ಲಿ ಕಾಂಕ್ರೆಟ್ ಮತ್ತು ಟ್ಯಾಂಕಿನ ಕಂಪೌಂಡ ಗೋಡೆಯ ಕಲ್ಲುಗಳು ಸಿಡಿದಿವೆ. ಮನೆಯಲ್ಲಿ ಮಲಗಿದ್ದ ಮಕ್ಕಳು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

ಟ್ಯಾಂಕು ನೇರವಾಗಿ ಕುಸಿದಿದ್ದರಿಂದ ಪಕ್ಕದ ಮನೆಗಳಿಗೆ ಹೆಚ್ಚಿನ ಹಾನಿಯಾಗಿಲ್ಲ. ಒಂದು ವೇಳೆ ಟ್ಯಾಂಕು ಒಂದು ಕಡೆ ವಾಲಿ ಬಿದ್ದಿದ್ದರೆ ಸುಮಾರು ಆರು ಮನೆಗಳು ಅದರಡಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದವು. ಸಾಕಷ್ಟು ಜೀವಹಾನಿ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಭೂಕಂಪದ ಅನುಭವ

ಟ್ಯಾಂಕ್ ನೆಲಕಚ್ಚುವ ಸಂದರ್ಭದಲ್ಲಿ ಉಂಟಾದ ಶಬ್ದದಿಂದ, ಅಕ್ಕಪಕ್ಕದ ಮನೆಯವರಿಗೆ ಭೂಕಂಪವಾಗುತ್ತಿರುವ ಅನುಭವವಾಗಿ ಹೊರಗೆ ಓಡಿ ಬಂದಿದ್ದಾರೆ.  ಹೀಗೆ ಹೊರಗೆ ಓಡಿ ಬಂದವರಿಗೆ ಟ್ಯಾಂಕಿನ ಕಂಪೌಂಡ್ ಕಲ್ಲುಗಳು ಸಿಡಿದು ಚಿಕ್ಕಪುಟ್ಟ ಗಾಯಗಳಾಗಿವೆ.

ಕಳಪೆ ಕಾಮಗಾರಿ: ಆರೋಪ
1996ರಲ್ಲಿ ನಿರ್ಮಿಸಿದ ಈ ಟ್ಯಾಂಕು ಒಂದು ವರ್ಷದ ಹಿಂದೆಯೇ ಬಿರುಕು ಬಿಟ್ಟಿತ್ತು. ನೀರು ಸೋರುತ್ತಿದ್ದುದನ್ನು ಗಮನಿಸಿದ ಪುರಸಭೆಯ ಸದಸ್ಯರು, ನೀರಿನ ಟ್ಯಾಂಕನ್ನು ಕಳಪೆ ಸಾಮಗ್ರಿಯಿಂದ ಕಟ್ಟಲಾಗಿದ್ದು, ಸಂಬಂಧಿಸಿದವರು ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು  ಎಂದು ಆಗ್ರಹಿಸಿದ್ದರು. 

ಇದೇ ಸ್ಥಳದಲ್ಲಿ ಒಂದು ಹೊಸ ನೀರಿನ ಟ್ಯಾಂಕು ನಿರ್ಮಿಸಬೇಕೆಂದೂ ಅವರು ಆಗ್ರಹಿಸಿದ್ದರು. ಇದಾದ ನಂತರ ಜಿಲ್ಲಾ ಆಡಳಿತ ಎಂಜಿನಿಯರ್  ಟ್ಯಾಂಕ್ ಪರಿಶೀಲನೆ ನಡೆಸಿದ್ದರು. ನೀರು ಸಂಗ್ರಹಿಸಲು ಟ್ಯಾಂಕ್ ಯೋಗ್ಯವಾಗಿಲ್ಲ ಎಂದು ಎಂಜಿನಿಯರ್ ನೀಡಿದ ವರದಿ ಆಧರಿಸಿ, ನೀರು ಸಂಗ್ರಹಣೆಯನ್ನು ನಿಲ್ಲಿಸಲಾಗಿತ್ತು.

ಹೊಸ ಟ್ಯಾಂಕ್ ನಿರ್ಮಾಣಕ್ಕೆ ಅನುಮತಿ

ಈ ಟ್ಯಾಂಕ್ ಪಕ್ಕದಲ್ಲಿಯೇ ಹೊಸ ಟ್ಯಾಂಕ್ ನಿರ್ಮಿಸಲು ಅನುಮತಿ ನೀಡಿದ್ದ ಜಿಲ್ಲಾ ಆಡಳಿತದ ಸಲಹೆಯಂತೆ, ಇಂಡಿ ಪುರಸಭೆ ಹೊಸ ನೀರಿನ ಟ್ಯಾಂಕ್ ನಿರ್ಮಿಸಲು ಕಳೆದ 6 ತಿಂಗಳ ಹಿಂದೆಯೇ 2 ಕೋಟಿ ರೂಪಾಯಿಯನ್ನು ನೀರು ಸರಬರಾಜು ಇಲಾಖೆಗೆ ತುಂಬಿದೆ.

ಆದರೆ ಇಲ್ಲಿಯವರೆಗೆ ಹೊಸ ನೀರಿನ ಟ್ಯಾಂಕು ನಿರ್ಮಿಸಲು ನೀರು ಸರಬರಾಜು ಇಲಾಖೆ ಕ್ರಮ ಜರುಗಿಸಿಲ್ಲ. ಇದರಿಂದ ಭಿರಪ್ಪನಗರದಲ್ಲಿ ನೀರು ಸರಬರಾಜು ಕಾರ್ಯ ಅಸ್ತವ್ಯಸ್ತವಾಗಿತ್ತು. ಈ ಭಾಗದ ಜನರು  ನಿತ್ಯ ನೀರಿನ ಬವಣೆ ಅನುಸರಿಸುವಂತಾಯಿತು.

ಹೊಸ ಟ್ಯಾಂಕ್ ನಿರ್ಮಾಣ ವಿಳಂಬವಾದ್ದರಿಂದ, ಬೀರಪ್ಪನಗರದ ಸಾರ್ವಜನಿಕರ ಒತ್ತಾಯದ ಮೇರೆಗೆ ಪುರಸಭೆಯ ಮುಖ್ಯಾಧಿಕಾರಿ ಎನ್.ಎಸ್.ಮಠ ಅವರು, ಹಳೆಯ ಟ್ಯಾಂಕಿನಲ್ಲಿ ನೀರು ತುಂಬಿಸಿ ಸರಬರಾಜು ಮಾಡಲು ಕ್ರಮ ಜರುಗಿಸಿದರು. 

ಟ್ಯಾಂಕಿನಲ್ಲಿ 8 ಅಡಿ ನೀರು ತುಂಬುವ ಬದಲಾಗಿ ಕೇವಲ 4 ಅಡಿ ನೀರು ತುಂಬಿಸಿ, ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಈ ಕ್ರಮವೇ ಟ್ಯಾಂಕ್ ಧರೆಗುರುಳಲು ಕಾರಣ ಎಂದು ಪುರಸಭೆಯ ಅಧ್ಯಕ್ಷ ಯಮುನಾಜಿ ಸಾಳುಂಕೆ ಆರೋಪಿಸುತ್ತಾರೆ.

ಅಮಾನತಿಗೆ ಆಗ್ರಹ
ಬೀರಪ್ಪನಗರದಲ್ಲಿರುವ ಸಾರ್ವಜನಿಕರಿಗೆ ಬೇರೆ ವ್ಯವಸ್ಥೆ ಮೂಲಕ ನೀರು ಸರಬರಾಜು ಮಾಡಬೇಕು. ಹಳೆಯ ಟ್ಯಾಂಕಿನಲ್ಲಿ ನೀರು ತುಂಬಬಾರದು ಎಂದು ಪುರಸಭೆಯ ಮುಖ್ಯಾಧಿಕಾರಿಗೆ ಕಟ್ಟುನಿಟ್ಟಾಗಿ ಆದೇಶ ನೀಡಿದರೂ ಅದರಲ್ಲಿ ನೀರು ತುಂಬಿಸಿದ್ದಾರೆ; ಈ ಅನಾಹುತಕ್ಕೆ ಪುರಸಭೆಯ ಮುಖ್ಯಾಧಿಕಾರಿಯೇ ಹೊಣೆ ಎಂದು  ಆರೋಪಿಸಿರುವ ಸಂಕೇತ ಬಗಲಿ, ಪುರಸಭೆಯ ಸದಸ್ಯ ಬುದ್ದುಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಧುರೀಣ ಯಶವಂತ್ರಾಯಗೌಡ ಪಾಟೀಲ,  ಬಸವೇಶ್ವರ ಸಮಿತಿ ಅಧ್ಯಕ್ಷ ಅನಿಲಗೌಡ ಬಿರಾದಾರ  ಮತ್ತಿತರರು ಮುಖ್ಯಾಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಭೇಟಿ: ಟ್ಯಾಂಕ್ ಬಿದ್ದ ಸುದ್ದಿ ತಿಳಿದ ತಕ್ಷಣವೇ  ತಹಸೀಲ್ದಾರ ಜಿ.ಎಲ್.ಮೇತ್ರಿ, ಡಿಎಸ್‌ಪಿ ಎಂ. ಮುತ್ತುರಾಜ, ಪಿಎಸ್‌ಐ ಸಂಜೀವ ಬಳಿಗಾರ, ಪುರಸಭೆಯ ಅಧ್ಯಕ್ಷ ಯಮುನಾಜಿ ಸಾಳುಂಕೆ, ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ಪುರಸಭೆಯ ಸದಸ್ಯರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT