ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದ ವೈಶಿಷ್ಟ್ಯ ತೋರುವ ಮೆಟ್ರೊ ಲೋಗೊ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಮ್ಮ ಮೆಟ್ರೊ~ದ ಹೆಸರಲ್ಲೇ ಕನ್ನಡದ ಕಂಪಿದೆ. ಅಷ್ಟು ಮಾತ್ರವಲ್ಲ; ಮೆಟ್ರೊ ಲೋಗೊದ ವಿನ್ಯಾಸಕ್ಕೆ ಸ್ಥಳೀಯ ವಿಶೇಷವಾದ ರಂಗೋಲಿಯನ್ನು ಬಳಸಿಕೊಳ್ಳಲಾಗಿದೆ. ಸ್ಥಳೀಯ ಪರಂಪರೆ ಮತ್ತು ಅತ್ಯಾಧುನಿಕ ತಾಂತ್ರಿಕತೆಯನ್ನು ಪ್ರತಿನಿಧಿಸುವಂತೆ ಲೋಗೊವನ್ನು ವಿನ್ಯಾಸಗೊಳಿಸಲಾಗಿದೆ.

ಇನ್ನು ಲೋಗೊದಲ್ಲಿ ಬಳಸಿರುವ ಹಸಿರು ಬಣ್ಣ, ಉದ್ಯಾನ ನಗರಿ ಎಂದೇ ಪ್ರಸಿದ್ಧಿ ಪಡೆದ ಬೆಂಗಳೂರಿನ ಹಸಿರು ಪರಿಸರವನ್ನು ಹಾಗೂ ನೇರಳೆ ಬಣ್ಣವು ತಂತ್ರಜ್ಞಾನವನ್ನು ಸೂಚಿಸುತ್ತದೆ.

ಹೆಸರು ಮತ್ತು ಲೋಗೊದಲ್ಲಿ ನಮ್ಮತನ ಇರುವಂತೆ ಸಲಹೆ ನೀಡಿ, ಅದನ್ನು ಸಾಕಾರಗೊಳಿಸಿದವರು ಆಗಿನ ಬೆಂಗಳೂರು ಮೆಟ್ರೊ ರೈಲು ನಿಗಮದ ವಕ್ತಾರ ಡಿ.ರಾಮನಾಯಕ್.

`2005ರಲ್ಲಿ ಮೆಟ್ರೊ ಲೋಗೊ ವಿನ್ಯಾಸಕ್ಕಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 400 ಮಂದಿ  ಭಾಗವಹಿಸಿದ್ದರು. ಲೋಗೊ ವಿನ್ಯಾಸ ತಜ್ಞರಾದ ಸುಜಾತಾ ಕೇಶವನ್, ಹರೀಶ್ ಬಿಜೂರ್, ವೆಂಕಟವರ್ಧನ್ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು~ ಎಂದು ರಾಮನಾಯಕ್ ನೆನಪಿಸಿಕೊಂಡರು.

`ಜಯಂತ್ ಜೈನ್ ಮತ್ತು ಎಲ್ಸ್ ಡಿಸೈನ್‌ನ ಮಹೇಂದ್ರ ಅವರು ವಿನ್ಯಾಸಗೊಳಿಸಿದ ರಂಗೋಲಿಯಂತಿದ್ದ  ಲೋಗೊವನ್ನು ಆಯ್ಕೆ ಮಾಡಲಾಯಿತು. ಸುಜಾತಾ ಕೇಶವನ್ ಅವರು ಈ ಲೋಗೊವನ್ನು ಪುನರ್‌ವಿನ್ಯಾಸಗೊಳಿಸಿ ಈಗಿನ ರೂಪಕ್ಕೆ ತಂದರು~ ಎಂದು ಅವರು ವಿವರಿಸಿದರು.

ಮೊದಲ ಚಾಲನೆ ಯಾರಿಂದ?
`ನಮ್ಮ ಮೆಟ್ರೊ~ದ ಉದ್ಘಾಟನಾ ರೈಲನ್ನು ಚಾಲನೆ (ಡ್ರೈವಿಂಗ್) ಮಾಡುವವರು ಯಾರು?

ಮೆಟ್ರೊ ರೈಲು ಗಾಡಿಗಳ ಚಾಲನೆ ಮಾಡಲು ತರಬೇತಿ ಪಡೆದು ಸಜ್ಜಾಗಿರುವ 32 ಟ್ರೈನ್ ಆಪರೇಟರ್‌ಗಳ ಪೈಕಿ ಇಬ್ಬರಿಗೆ ಉದ್ಘಾಟನಾ ರೈಲು ಓಡಿಸುವ ಅವಕಾಶ ಸಿಕ್ಕಿದೆ.

ಮುಖ್ಯಮಂತ್ರಿ, ಕೇಂದ್ರ ಮತ್ತು ರಾಜ್ಯ ಸಚಿವರನ್ನು ಒಳಗೊಂಡ ಗಣ್ಯರು ಸವಾರಿ ಮಾಡುವ ರೈಲನ್ನು ಓಡಿಸಲು ಎನ್.ಪ್ರಿಯಾಂಕ ಮತ್ತು ಕೆ.ಎನ್.ರಾಕೇಶ್ ಎಂಬಿಬ್ಬರನ್ನು `ಬೆಂಗಳೂರು ವೆುಟ್ರೊ ರೈಲು ನಿಗಮ~ವು ನಿಯೋಜಿಸಿದೆ.

ಎಲ್ಲ ಟ್ರೈನ್ ಆಪರೇಟರ್‌ಗಳಿಗೆ ದೆಹಲಿ ಮೆಟ್ರೊದಲ್ಲಿ ತರಬೇತಿ ನೀಡಲಾಗಿದೆ. ಭಾರತೀಯ ರೈಲ್ವೆಯ ಮೂವರು ಮುಖ್ಯ ಲೋಕೊ ಇನ್‌ಸ್ಪೆಕ್ಟರ್‌ಗಳ ಮಾರ್ಗದರ್ಶನದಲ್ಲಿ ಆಪರೇಟರ್‌ಗಳು ರೈಲು ಚಾಲನೆ ಮಾಡಲಿದ್ದಾರೆ.

ಸ್ವಾರಸ್ಯದ ಸಂಗತಿ ಎಂದರೆ ಈಗಾಗಲೇ ಪರೀಕ್ಷಾರ್ಥವಾಗಿ ನೂರಾರು ಕಿಲೋ ಮೀಟರ್ ಉದ್ದದಷ್ಟು ಮೆಟ್ರೊ ರೈಲು ಓಡಿಸಿರುವ ಪ್ರಿಯಾಂಕ ಅವರಿಗೆ ಸೈಕಲ್ ಸವಾರಿಯೇ ಬರುವುದಿಲ್ಲ. ನಗರಕ್ಕೆ ಹತ್ತಿರದ ಕಗ್ಗಲಿಪುರದ ರೈತ ಕುಟುಂಬದ ಪ್ರಿಯಾಂಕ ಅವರು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಡಿಪ್ಲೊಮಾ ಶಿಕ್ಷಣ ಮುಗಿಸಿದ ಕೂಡಲೇ ಬಿಎಂಆರ್‌ಸಿಎಲ್‌ನಲ್ಲಿ ಕೆಲಸ ಸಿಕ್ಕಿದೆ.
 

`ನಾನು ವಿಶ್ವದ ಹಲವು ವಿಭಾಗಗಳಲ್ಲಿ ಪ್ರವಾಸ ಕೈಗೊಂಡ ವೇಳೆ, ಅಲ್ಲಿ ಮೆಟ್ರೊ ರೈಲನ್ನು ಸುರಂಗ ಅಥವಾ ಮೆಟ್ರೊ  ಎಂದು ಕರೆಯುವುದನ್ನು ಗಮನಿಸಿದ್ದೆ. ಬೆಂಗಳೂರಿನ ಮೆಟ್ರೊದಲ್ಲಿ ನಮ್ಮತನ ಇರಲಿ ಎಂಬ ಕಾರಣಕ್ಕೆ ನಮ್ಮ ಮೆಟ್ರೊ ಎಂದು ನಾಮಕರಣ ಮಾಡಿದೆವು. ಆಗಿನ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರು ಲೋಗೊ ಬಿಡುಗಡೆ ಮಾಡಿದ್ದರು~ ಎಂದು ಅವರು ಹೇಳಿದರು.

ಡಿಪ್ಲೊಮಾದಲ್ಲಿ ವ್ಯಾಸಂಗ ಮಾಡುವಾಗ ಎಲೆಕ್ಟ್ರಿಕಲ್ ಲೈನ್ ಮತ್ತು ಟ್ರ್ಯಾಕ್ಷನ್ ವಿಷಯಗಳು ಮೆಟ್ರೊ ಆಪರೇಟರ್ ಉದ್ಯೋಗ ಪಡೆಯಲು ಪ್ರೇರಣೆ ನೀಡಿದವು ಎಂದು ಪ್ರಿಯಾಂಕ ಹೇಳಿಕೊಂಡರು.

ಪ್ರಿಯಾಂಕ ಅವರಲ್ಲದೇ ಇನ್ನು ನಾಲ್ವರು ಮಹಿಳೆಯರು ಮೆಟ್ರೊ ನಿಗಮದಲ್ಲಿ ಟ್ರೈನ್ ಆಪರೇಟರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಹಾಗೂ ಮಧ್ಯಾಹ್ನ 2ರಿಂದ ರಾತ್ರಿ 10- ಹೀಗೆ ಎರಡು ಪಾಳಿಗಳಲ್ಲಿ ಟ್ರೈನ್ ಆಪರೇಟರ್‌ಗಳು ರೈಲು ಚಾಲನೆ ಮಾಡುತ್ತಾರೆ. ಪ್ರತಿ ಟ್ರೈನ್ ಆಪರೇಟರ್ ಪ್ರತಿ ದಿನ ಏಳು ಸಲ ರೈಲನ್ನು ಓಡಿಸಬೇಕು. ಅವರಿಗೆ ಪ್ರತಿ ಮೂರು ಗಂಟೆಗೊಮ್ಮೆ ವಿರಾಮದ ಅವಧಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT