ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರ ವೃತ್ತಿಯತ್ತ ಕಾರ್ಮಿಕರ ನಿರಾಸಕ್ತಿ

Last Updated 18 ಡಿಸೆಂಬರ್ 2013, 8:52 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಕಚ್ಛಾರೇಷ್ಮೆ ತೀವ್ರ ಕೊರತೆಯಿಂದಾಗಿ ತಾಲ್ಲೂಕಿನ ರಾಜ್ಯ ಕೈಮಗ್ಗ ನಿಗಮ (ಕೆಎಚ್‌ಡಿಸಿ) ರೇಷ್ಮೆಸೀರೆ ನೇಕಾರರು ಕೆಲಸವಿಲ್ಲದೇ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.

ಪಟ್ಟಣ ಹಾಗೂ ಕೊಂಡ್ಲಹಳ್ಳಿಯಲ್ಲಿ ಶಾಖೆ ಹೊಂದಿರುವ ನಿಗಮ ಎರಡೂ ವ್ಯಾಪ್ತಿಯಲ್ಲಿ ಇದೇ ಸಮಸ್ಯೆ ಎದುರಾಗಿದೆ. ಹಲವು ತಿಂಗಳುಗಳಿಂದ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ನೇಯ್ಗೆ ಸಹವಾಸವೇ ಸಾಕು ಎಂದು ನೂರಾರು ನೇಕಾರರು ಮೂಲ ವೃತ್ತಿಗೆ ’ಗುಡ್‌ಬೈ’ ಹೇಳಿ ಗುಳೆ ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಲೊನಿಗೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಜತೆ ಮಾತನಾಡಿದ ನೇಕಾರರು, 1984ರಲ್ಲಿ ಕಾಲೊನಿ ಆರಂಭಿಸಲಾಗಿದೆ. 83 ಮನೆಗಳಿದ್ದು,  ಆರಂಭದಲ್ಲಿ 350–400 ಮಗ್ಗಗಳು ಕಾರ್ಯ ನಿರ್ವಹಿಸುತ್ತಿದ್ದವು. ಈಗ ಕಚ್ಛಾರೇಷ್ಮೆ, ಸಾಮಗ್ರಿಗಳನ್ನು ವಿತರಣೆ ಮಾಡದ ಪರಿಣಾಮ 35 ಮಗ್ಗಗಳು ಮಾತ್ರ ಕೆಲಸ ಮಾಡುತ್ತಿವೆ ಎಂದು ಪಟ್ಟಣ ಪಂಚಾಯ್ತಿ ಸದಸ್ಯೆ ವದ್ದಿ ಸರೋಜಮ್ಮ ಹೇಳಿದರು.

ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ, ಕಾಲೊನಿಗೆ ಬಂದು ಸಮಸ್ಯೆ ಆಲಿಸುವುದಿಲ್ಲ, ಕಚ್ಛಾರೇಷ್ಮೆ ಸಕಾಲಕ್ಕೆ ನೀಡದ ಕಾರಣ ತಿಂಗಳಿಗೆ ಒಂದು ಸೀರೆ ನೇಯ್ಗೆ ಮಾಡಲಾಗುತ್ತಿದೆ. ಅದನ್ನು ಯಾರಾದರೂ ಪ್ರಶ್ನೆ ಮಾಡಿದರೆ ಅವರಿಗೆ ರೇಷ್ಮೆ ನೀಡುವುದಿಲ್ಲ. ಹಸಿರೇಷ್ಮೆ ನೀಡುವ ಜತೆಗೆ ಕಡಿಮೆ ತೂಕ ಸಹ ನೀಡಲಾಗುತ್ತಿದೆ. ಒಂದು ವಾರ್ಪ್ ರೇಷ್ಮೆಗೆ 700 ಗ್ರಾಂ ಕಡಿಮೆ ಬರುವ ಮೂಲಕ ಒಂದು ವಾರ್ಪ್‌ಗೆ ಈಗಿನ ದರದಲ್ಲಿ ₨ 2,500 ನಷ್ಟವಾಗುತ್ತಿದ್ದು, ಇದನ್ನು ನೇಕಾರರು ಕೈಯಿಂದ ಭರಿಸಬೇಕಾಗಿದೆ ಎಂದು ದೂರಿದರು.

ನಿಗಮ ನೀಡಿದರೂ ಡಿಸೈನ್‌ ಮಾಡಿಸಲು, ಬಾರ್ಡರ್ ಹಾಕಲು ಹಣ ನೀಡುವುದಿಲ್ಲ, ಪರಿಣಾಮ ಹೊಸ ಮಾಡೆಲ್‌ ಸೀರೆಗಳು ಉತ್ಪತ್ತಿಯಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಯಾವುದೇ ಸೌಲಭ್ಯಗಳು ತಲುಪುತ್ತಿಲ್ಲ. ಕಚೇರಿ ನೊಟೀಸ್ ಬೋರ್ಡ್‌ಗೆ ಮಾಹಿತಿ ಹಾಕುವಂತೆ ಮಾಡಿರುವ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈವರೆಗೂ ಕೆಎಚ್‌ಡಿಸಿ ಕಾಲೊನಿ ಚಕ್ಕುಬಂಧಿಯನ್ನು ಪಟ್ಟಣ ಪಂಚಾಯ್ತಿಗೆ ಸಲ್ಲಿಸಿದ ಕಾರಣ ಕಾಪೌಂಡ್‌ ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಸರೋಜಮ್ಮ ಹೇಳಿದರು.

1984ರಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ₨ 11 ಸಾವಿರ ಪಾವತಿ ಮಾಡಲಾಗಿದೆ, ಎಲ್ಲಾ ಬಾಕಿ ಕಟ್ಟಿದ್ದರೂ ಸಹ ಖಾತೆ ಮಾಡಿಸಿಕೊಡಲು ಇಲಾಖೆ ಮುಂದಾಗುತ್ತಿಲ್ಲ, ಈಗ ಖಾತೆ ಮಾಡಿಸಿಕೊಡಬೇಕಾದಲ್ಲಿ ₨ 25 ಸಾವಿರ ಖರ್ಚು ಭರಿಸಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದು, ಕೆಲಸವಿಲ್ಲದೇ ದುಡಿಮೆ ಇಲ್ಲದ ಕಾಲದಲ್ಲಿ ಇಷ್ಟೊಂದು ಹಣ ಎಲ್ಲಿಂದ ಪಾವತಿ ಮಾಡೋಣ ಎಂದು ಕೆ.ಆರ್‌.ಮಲ್ಲಿಕಾರ್ಜುನ್‌ ಪ್ರಶ್ನೆ ಮಾಡಿದರು.

ಈ ಬಗ್ಗೆ ಇಲಾಖೆ ತಾಲ್ಲೂಕು ಅಧಿಕಾರಿ ರಾಜಣ್ಣ ಮಾತನಾಡಿ, ರಾಜ್ಯಮಟ್ಟದಲ್ಲಿ ಕಚ್ಛಾರೇಷ್ಮೆ ದರ ಏರಿಕೆ ಕಾರಣ ಟೆಂಡರ್‌ ಹಾಕಲು ಯಾರೂ ಮುಂದೆ ಬರುತ್ತಿಲ್ಲ. ಪೂರ್ಣ ಹಣ ಕಟ್ಟಿದವರ ಮನೆಗಳನ್ನು ಖಾತೆ ಮಾಡಿಸಿಕೊಡಲು ನೋಂದಣಿ ಅಧಿಕಾರಿಗಳ ಮಾಹಿತಿಯಂತೆ ₨ 20–22 ಸಾವಿರ ಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಶುಲ್ಕ ರದ್ದು ಮಾಡುವಂತೆ ಕೋರಲಾಗಿದೆ ಎಂದು ಹೇಳಿದರು.

ಪಟ್ಟಣದಲ್ಲಿ 130 ಮಗ್ಗಗಳ ಪೈಕಿ ಸಮರ್ಪಕ ವಾಗಿ 52 ಮಗ್ಗಗಳು, ಕೊಂಡ್ಲಹಳ್ಳಿಯಲ್ಲಿ ಕಾಟನ್‌ನ 15 ಹಾಗೂ ರೇಷ್ಮೆಯ 25 ಮಗ್ಗಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

ಮೊಳಕಾಲ್ಮುರು ರೇಷ್ಮೆಸೀರೆ ವಿಖ್ಯಾತಿಗೆ ಒತ್ತು ನೀಡಿದ್ದ ಕೆಎಚ್‌ಡಿಸಿ ರೇಷ್ಮೆಸೀರೆ ನೇಕಾರರ ಸಂಕಷ್ಟಗಳಿಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೇಕಾರರು ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT