ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ಸಮಸ್ಯೆ- 9ಕ್ಕೆ ಸಿಎಂ ಜತೆ ಸಭೆ

Last Updated 5 ಫೆಬ್ರುವರಿ 2011, 7:00 IST
ಅಕ್ಷರ ಗಾತ್ರ

ಉಡುಪಿ: ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದಿಂದ ನೇಕಾರರಿಗೆ ನೀಡುವ ಮಜೂರಿ ಹಣವನ್ನು ಒಟ್ಟಾರೆ ಶೇ 50ರಷ್ಟು ಹೆಚ್ಚಿಸುವುದು, ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ವಿತರಿಸುವ ಸೀರೆಗಳನ್ನು ನಮ್ಮ ನೇಕಾರರೇ ಸಿದ್ಧಪಡಿಸುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಇದೇ 9ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಇಲ್ಲಿ ತಿಳಿಸಿದರು.
ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ನೇಕಾರ ಮುಖಂಡರೊಂದಿಗೆ ಶುಕ್ರವಾರ ಬೆಳಿಗ್ಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹಲವು ವರ್ಷಗಳಿಂದ ನೇಕಾರರು ಬಹಳ ಕಡಿಮೆ ಕೂಲಿ ಪಡೆದು ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಅವರಿಗೆ ಶೇ 30ರಷ್ಟು ಕೂಲಿಯನ್ನು ಹೆಚ್ಚಿಸಲಾಗಿತ್ತು. ಈ ವರ್ಷ ಇನ್ನು 20ರಷ್ಟು ಹೆಚ್ಚಿಸುವ ಮೂಲಕ ಅವರ ಬದುಕಿಗೆ ಇನ್ನಷ್ಟು ನೆಮ್ಮದಿ ನೀಡುವ ಕೆಲಸ ಮಾಡಲಾಗುವುದು. ಇದನ್ನು ಈ ಬಾರಿಯ ಬಜೆಟ್‌ನಲ್ಲಿ ಸೇರಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ 

ಅಲ್ಲದೇ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ವಿತರಿಸುವ ಸೀರೆಗಳನ್ನು ನಮ್ಮ ರಾಜ್ಯದ ನೇಕಾರರಿಂದಲೇ ಸಿದ್ಧಪಡಿಸಿಕೊಡುವ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು. ಹಾಗೆ ಮಾಡಿದರೆ ನೇಕಾರರಿಗೆ ವರ್ಷವಿಡೀ ಕೆಲಸ ಸಿಕ್ಕಂತಾಗುತ್ತದೆ ಎಂದರು.

ವಿಶೇಷವಾಗಿ ಉಡುಪಿ ಜಿಲ್ಲೆಯ ನೇಕಾರರು ಮೂರು ಪ್ರಮುಖ ಬೇಡಿಕೆಗಳನ್ನು ಅಧ್ಯಕ್ಷರ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಶೇ 3ರ ಬಡ್ಡಿದರಲ್ಲಿ ಸಿಗುವ ಸಾಲದ ನಿಯಮಗಳನ್ನು ಸರಳೀಕರಿಸಬೇಕು, ಸರ್ಕಾರಿ ಸಂಘಗಳ ನೇಕಾರರು ಉತ್ಪನ್ನ ಮಾಡಿದ ಬಟ್ಟೆಗಳಿಗೆ ಸರಿಯಾದ ಧಾರಣೆ ಸಿಗದೇ ಹಿಂದಿನ ಸರ್ಕಾರದ ಸಬ್ಸಿಡಿಯೂ ಸಿಗದೇ ಹಾನಿಯಾಗಿರುವ ಹಣವನ್ನು ವಜಾ ಮಾಡಬೇಕು ಹಾಗೂ ನೇಕಾರರ ಸಂಘಗಳ ಪುನಶ್ಚೇತನಕ್ಕೆ ನೆರವಾಗಬೇಕು. ನೇಕಾರಿಕೆಯನ್ನು ಸರ್ಕಾರ ಗುಡಿ ಕೈಗಾರಿಕೆ ಎಂದೇ ಘೋಷಣೆ ಮಾಡಬೇಕು. ಈ ಬೇಡಿಕೆಗಳನ್ನು ತಮ್ಮ ಮುಂದೆ ಇಡಲಾಗಿದೆ ಎಂದರು.

ಸಭೆಯ ಪ್ರಮುಖ ನಿರ್ಣಯಗಳು: ಕೈಮಗ್ಗ ಉತ್ಪನ್ನಗಳಿಗೆ ಬೆಂಗಲ ಬೆಲೆ ನಿಗದಿ ಪಡಿಸಲು ತೀರ್ಮಾನ, ನೇಕಾರ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಶುಲ್ಕ ವಿನಾಯಿತಿ ನೀಡುವ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸುವುದು, ನೇಕಾರರ ಮರಣ ಭತ್ಯೆಯನ್ನು ರೂ.3000ಕ್ಕೆ ಏರಿಕೆ ಮಾಡುವುದು, ನೇಕಾರರ ವಸತಿ ಕಾರ್ಯಾಗಾರ ಯೋಜನೆ ಸರಳೀಕರಣ, ಪಿಂಚಣಿ ಯೋಜನೆ ಇವೇ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು ಇವುಗಳನ್ನು ಫೆ.9ರಂದು ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದರು.

ರೂ.140 ಕೋಟಿ ವಹಿವಾಟಿನ ಗುರಿ:2010-11ನೇ ಸಾಲಿನಲ್ಲಿ ರೂ.25 ಕೋಟಿ ಮಾರಾಟ ಸಾಧಿಸುವ ಗುರಿ ಹೊಂದಿದ್ದು ಈಗಾಗಲೇ ರೂ.18 ಕೋಟಿ ಮಾರಾಟ ಮಾಡಲಾಗಿದೆ. ಇದು ಕಳೆದ ಸಾಲಿಗಿಂತ ಎರಡು ಕೋಟಿ ಹೆಚ್ಚು. ಮುಂದಿನ ಆರ್ಥಿಕ ವರ್ಷದಲ್ಲಿ ರೂ.40 ಕೋಟಿ ಚಿಲ್ಲರೆ ಮಾರಾಟದ ಗುರಿ ಹೊಂದ–ಲಾಗಿದ್ದು ಆ ನಿಟ್ಟಿನಲ್ಲಿ ‘ಪ್ರಿಯದರ್ಶಿನಿ’ ಮಳಿಗೆಯು ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. 2009-10ರ ಸಾಲಿನಲ್ಲಿ ನಿಗಮವು ಒಟ್ಟು 90 ಕೋಟಿ ವಹಿವಾಟು ನಡೆಸಿತ್ತು. ಪ್ರಸಕ್ತ ಸಾಲಿನಲ್ಲಿ 140 ಕೋಟಿ ವಹಿವಾಟು ನಡೆಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸುಮಾರು 40 ಲಕ್ಷ ನೇಕಾರರು ಇದ್ದಾರೆ. ಆದರೆ ನೇಕಾರರಲ್ಲಿ 26 ಉಪ ಪಂಗಡಗಳಿವೆ. ಹೀಗಾಗಿ ಏಪ್ರಿಲ್ ಮತ್ತು ಮೇನಲ್ಲಿ ನಡೆಯುವ ರಾಜ್ಯದ ಜನಗಣತಿಯಲ್ಲಿ ಈ ಸಮುದಾಯಕ್ಕೆ ಸೇರಿದವರು ತಮ್ಮ ಜಾತಿ ಸೂಚಕವನ್ನು ನೇಕಾರ ಎಂದೇ ಬರೆಯಬೇಕು. ಹಾಗೆ ಮಾಡಿದರೆ ನೇಕಾರರಿಗೆ ಅಗತ್ಯವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಲು ಸರ್ಕಾರಕ್ಕೆ ಕೂಡ ಅನುಕೂಲವಾಗುತ್ತದೆ ಎಂದು ಹೇಳಿದರು.

53ನೇ ಮಳಿಗೆ ಉದ್ಘಾಟನೆ: ಉಡುಪಿ ನಗರದಲ್ಲಿ ಬಾಳಿಗಾ ಆರ್ಕೇಡ್‌ನಲ್ಲಿ ನೂತನವಾಗಿ ಪ್ರಿಯದರ್ಶಿನಿ ಮಳಿಗೆಯನ್ನು ಪ್ರಾರಂಭಿಸಲಾಗಿದ್ದು ಜಿಲ್ಲಾಧಿಕಾರಿ ಹೇಮಲತಾ ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಹಾಗೂ ನಿಗಮದ ಪ್ರಧಾನ ವ್ಯವಸ್ಥಾಪಕ ಮೊಹಮ್ಮದ್ ಮೊಹ್ಸಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT