ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ಸಮಸ್ಯೆ ನಿವಾರಣೆಗೆ ಕ್ರಮ

Last Updated 24 ಡಿಸೆಂಬರ್ 2013, 5:59 IST
ಅಕ್ಷರ ಗಾತ್ರ

ಮೊಳಕಾಲ್ಮುರು: ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಮೊಳಕಾಲ್ಮುರು ರೇಷ್ಮೆಸೀರೆ ನೇಕಾರರು ದೊಡ್ಡ ಆಸ್ತಿಯಾಗಿದ್ದು ಅವರ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಯೋಜನಾ ಆಡಳಿತ ಅಧಿಕಾರಿ ಕೆ.ಸಿ.ಜಯರಾಮಯ್ಯ ಹೇಳಿದರು.

ಈಚೆಗೆ ‘ಪ್ರಜಾವಾಣಿ’ಯಲ್ಲಿ ಕೈಮಗ್ಗ ನಿಗಮ ನೇಕಾರರ ಸಮಸ್ಯೆ ಬಗ್ಗೆ ವಿಶೇಷ ವರದಿ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಸೋಮವಾರ ಪರಿಶೀಲನೆಗಾಗಿ ಅವರು ಇಲ್ಲಿಗೆ ಭೇಟಿ ನೀಡಿದ್ದರು.

ರೇಷ್ಮೆ ದರ ವ್ಯಾಪಕ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಕಚ್ಛಾರೇಷ್ಮೆ ಪೂರೈಕೆ ಮಾಡಲು ಟೆಂಡರ್‌ದಾರರು ಮುಂದೆ ಬರುತ್ತಿಲ್ಲ. ಬಂದರೂ ಸಕಾಲಕ್ಕೆ ಸಮರ್ಪಕವಾಗಿ ಒದಗಿಸುವುದಿಲ್ಲ. ಪರಿಣಾಮ ನೇಕಾರರು ಸಂಕಷ್ಟಕ್ಕೆ ಈಡಾಗಿರುವ ಬಗ್ಗೆ ದೂರು ಬಂದಿರುವ ಕಾರಣ ಸಾಮಗ್ರಿ ಇದ್ದರೂ 3 ತಿಂಗಳು ಮುಂಚಿತವಾಗಿ ಟೆಂಡರ್‌ ಕರೆಯುವ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಸಮಸ್ಯೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದರು.

ಬೆಂಗಳೂರು ಶೀತ ಪ್ರದೇಶವಾಗಿದ್ದು, ಅಲ್ಲಿಂದ ಕಚ್ಛಾರೇಷ್ಮೆ ಪೂರೈಕೆಯಾಗುವ ಹಿನ್ನೆಲೆಯಲ್ಲಿ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ವೈ.ಎನ್‌. ಹೊಸಕೋಟೆಯಿಂದ ಪೂರೈಕೆ ಮಾಡಲಾಗುವುದು. ಇದರಿಂದ ತೂಕ ವ್ಯತ್ಯಾಸ ಸಮಸ್ಯೆ ತಿಳಿಯಾಗಲಿದೆ. ಅಲ್ಲಿಯವರೆಗೆ ರೇಷ್ಮೆಯನ್ನು ಕಡ್ಡಾಯವಾಗಿ ಒಣಗಿಸಿಕೊಡುವಂತೆ ಸೂಚಿಸಲಾಗುವುದು ಎಂದರು.

ಕಾಲೊನಿ ಮನೆಗಳ ಮುದ್ರಣಾಂಕ ಶುಲ್ಕ ಮನ್ನಾ ಮಾಡುವಂತೆ ಈ ಹಿಂದೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಇದು ಜಾರಿಯಾದಲ್ಲಿ ಇಲ್ಲಿನ ನೇಕಾರರಿಗೆ ಅನುಕೂಲವಾಗಲಿದೆ. ಕಾಲೋನಿಯಲ್ಲಿ ರೂ 25 ಲಕ್ಷ ವೆಚ್ಚದಲ್ಲಿ ಇಲಾಖೆ ಕಚೇರಿ, ಮಾರಾಟ ಮಳಿಗೆ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಕಾಲೊನಿಗೆ ಕಾಂಪೌಡ್‌ ನಿರ್ಮಾಣಕ್ಕೆ ಕ್ರಿಯಾಯೋಜನೆ ನೀಡುವಂತೆ ನಿರ್ಮಿತಿಕೇಂದ್ರಕ್ಕೆ ಪತ್ರ ಬರೆಯುವಂತೆ ಅವರು ಇಲಾಖೆ ಸ್ಥಳೀಯ ಅಧಿಕಾರಿ ರಾಜಣ್ಣ ಅವರಿಗೆ ಸೂಚಿಸಿದರು.

ನಿಗಮದ ಸ್ಥಳೀಯ ವಿಸ್ತರಣಾಧಿಕಾರಿ ರಾಜಣ್ಣ ಅವರಿಗೆ ನೇಕಾರರ ಜತೆ ವಿನಯದಿಂದ ವರ್ತಿಸುವಂತೆ ಹಾಗೂ ಕೇಳಿದ ಮಾಹಿತಿಯನ್ನು ಸರಿಯಾಗಿ ನೀಡುವಂತೆ ಸೂಚಿಸಿದರು. 

ಪಟ್ಟಣ ಪಂಚಾಯ್ತಿ ಸದಸ್ಯೆ ವದ್ದಿ ಸರೋಜಮ್ಮ, ನೇಕಾರರ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT