ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರಿಗೆ ತಾಂತ್ರಿಕತೆ ಅಳವಡಿಕೆಗೆ ಮಾಹಿತಿ ಶಿಬಿರ

Last Updated 22 ಸೆಪ್ಟೆಂಬರ್ 2011, 8:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಖಾದಿ ಬಟ್ಟೆ ಜನಪ್ರಿಯಗೊಳಿಸಲು ನೇಯ್ಗೆಯ ವೆಚ್ಚ ಕಡಿಮೆ ಮಾಡಿ ವೈವಿಧ್ಯಮಯ ವಿನ್ಯಾಸ ರೂಪಿಸಲು ಕೇಂದ್ರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವಾಲಯ ಹೊಸ ತಾಂತ್ರಿಕತೆ ಅಳವಡಿಸಲು ಮುಂದಾಗಿದ್ದು, ಯೋಜನೆಗೆ ದಕ್ಷಿಣ ಭಾರತದಲ್ಲಿ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವನ್ನು ಆಯ್ಕೆ ಮಾಡಿದೆ.

ನೂತನ ಯೋಜನೆಯಡಿ ಬೆಂಗೇರಿಯ ಖಾದಿ ಸಂಘದಲ್ಲಿ ಬುಧವಾರ ವಾರ್ಧಾದ ಮಹಾತ್ಮಾ ಗಾಂಧಿ ಗ್ರಾಮೀಣ ಕೈಗಾರಿಕಾ ಸಂಸ್ಥೆ, ಖಾದಿ ಆಯೋಗ ಮತ್ತು ಖಾದಿ ಮಂಡಳಿಯ ತಜ್ಞರ ನೇತೃತ್ವದಲ್ಲಿ ಶಿಬಿರ ನಡೆಸಿ ನೇಕಾರರಿಗೆ `ವಿನ್ಯಾಸ ತಂತ್ರಜ್ಞಾನ~ ಕುರಿತು  ತರಬೇತಿ ನೀಡಲಾಯಿತು.

ಶಿಬಿರದಲ್ಲಿ ಪಾಲ್ಗೊಂಡಿದ್ದ 70 ನೇಕಾರರಿಗೆ  ವಾರ್ಧಾ ಸಂಸ್ಥೆಯ ಪರಿಣಿತ ಎಚ್.ಡಿ.ಸಿನ್ನೂರ ಖಾದಿ ನೇಯ್ಗೆಯ ಐದು ಹಂತಗಳಲ್ಲಿ ಅಳವಡಿಸಬಹುದಾದ ನೂತನ ತಾಂತ್ರಿಕತೆ ಹಾಗೂ ಅದರಿಂದ ವೆಚ್ಚ ಕಡಿಮೆ ಮಾಡುವ ವಿಧಾನ ಹೇಳಿಕೊಟ್ಟರು. ಎರಡು ದಿನಗಳ ಶಿಬಿರ ಗುರುವಾರ ಮುಕ್ತಾಯವಾಗಲಿದೆ.

ಕೇಂದ್ರ ಸರ್ಕಾರದ ತಾಂತ್ರಿಕತೆಯ ನೆರವಿಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ದಕ್ಷಿಣ ವಲಯದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಗೋವಾ ಹಾಗೂ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಒಕ್ಕೂಟ ಎಂಬ ಹೆಗ್ಗಳಿಕೆ  ಬೆಂಗೆರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯದ್ದಾ ಗಿದ್ದು, ತಂತ್ರಜ್ಞಾನ ಅಳವಡಿಸಲು ಸಣ್ಣ ಮತ್ತಯ ಮಧ್ಯಮ ಕೈಗಾರಿಕಾ ಸಚಿವಾಲಯ ರೂ.5 ಲಕ್ಷ ಸಹಾಯಧನ ಕಲ್ಪಿಸಲಿದೆ.

ಖಾದಿಯನ್ನು ಮಾರುಕಟ್ಟೆ ಕೇಂದ್ರೀಕೃತವಾಗಿಸಿ ಯುವಜನತೆ ಯನ್ನು ಹೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ಸಚಿವಾಲಯ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಮುಂದೆ ಬೆಂಗೇರಿಯ ಕೇಂದ್ರದಿಂದಲೇ ರಾಜ್ಯದ ಉಳಿದ 52 ಖಾದಿ ಕೇಂದ್ರಗಳಿಗೆ ಈ ತಾಂತ್ರಿಕತೆಯ ಮೇಲ್ವಿಚಾರಣೆ ದೊರೆಯಲಿದೆ.
 
ಶಿಬಿರದಲ್ಲಿ ಖಾದಿ ನೇಯ್ಗೆ ಮಾಡುವ ನೇಕಾರರೊಂದಿಗೆ ತಜ್ಞರು ಸಂವಾದ ನಡೆಸಿ ಬಟ್ಟೆ ನೇಯ್ಗೆಯಲ್ಲಿ ಸಿದ್ಧಗೊಂಡ ಉಡುಪಿನ ಮೇಲೆ ಬೇರೆ ಬೇರೆ ವಿನ್ಯಾಸ ರೂಪಿಸುವುದು, ಖಾದಿ ಬಟ್ಟೆಯನ್ನು ಆಕರ್ಷಣೀಯವಾಗಿಸಲು ಅಳವಡಿಸಿಕೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗೆರಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಅಧ್ಯಕ್ಷ ಬಿ.ಬಿ.ಪಾಟೀಲ. ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಂಡು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಉತ್ಪನ್ನ ಪೂರೈಸಿದರೆ ಮಾತ್ರ ಖಾದಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯ ಎಂದರು.

ಖಾದಿಯನ್ನು ಸಾಮಾನ್ಯ ಜನರ ಉಡುಪನ್ನಾಗಿ ಮಾಡ ಬೇಕಿದೆ. ಪ್ರಸ್ತುತ ಬೆಂಗೆರಿಯಲ್ಲಿ 150 ಕೌಂಟ್ ಮಾನದಂಡದ ಖಾದಿ ಬಟ್ಟೆಯನ್ನು ನೇಯಲಾಗುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ 500 ಕೌಂಟ್ ಮಾನದಂಡದ ಖಾದಿ ನೇಯುತ್ತಾರೆ. ಇಲ್ಲಿನ ಹವಾಗುಣಕ್ಕೆ ತಕ್ಕಂತೆ ಈಗಿನ ದರ್ಜೆಯನ್ನು ಇನ್ನಷ್ಟು ಉನ್ನತೀಕರಿಸಲು ವಾರ್ಧಾದಿಂದ ಬಂದಿರುವ ತಜ್ಞರ ನೆರವು ಪಡೆಯಲಾಗುವುದು ಎಂದರು.

ನೇಕಾರರಿಗೆ 4 ಹಂತಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಸ್ಟೈಫೆಂಡ್ ಕೂಡ ನೀಡಲಾಗುತ್ತದೆ. ಖಾದಿಯ ಹೊಸ ಸಂಶೋ ಧನೆಗಳಲ್ಲಿ ಈಗಾಗಲೇ ಸಿದ್ಧವಿರುವ 12 ತಾಂತ್ರಿಕತೆಗಳನ್ನು ನೇಕಾರರಿಗೆ ಪರಿಚಯಿಸಲಾಗುವುದು ಎಂದು ಸಿನ್ನೂರ ಶಿಬಿರದಲ್ಲಿ ತಿಳಿಸಿದರು.

ಶಿಬಿರದಲ್ಲಿ ಖಾದಿ ಮಂಡಳಿಯ ಜಿಲ್ಲಾ ಅಧಿಕಾರಿ ಸಾವಿತ್ರಮ್ಮ ದಳವಾಯಿ, ವಾರ್ಧಾದ ಮಹಾತ್ಮಾಗಾಂಧಿ ಸಂಸ್ಥೆಯ ಖಾದಿ ಮತ್ತು ಟೆಕ್ಸ್‌ಟೈಲ್ ವಿಭಾಗದ ಹಿರಿಯ ಸಂಶೋಧನಾ ಅಧಿ ಕಾರಿ ಮಹೇಶ್‌ಕುಮಾರ್, ಬೆಂಗೇರಿ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯದರ್ಶಿ ವಿ.ಟಿ.ಹುಡೇದ್ ಮತ್ತಿತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT