ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತಾಜಿ ಅಸ್ಥಿ: ಫಲ ಕೊಡದ ಸತ್ಯ ಪತ್ತೆ ಯತ್ನ

ನೇತಾಜಿ ಸುಭಾಷ್ ಚಂದ್ರ ಬೋಸ್ ನೆನಪು
Last Updated 23 ಜನವರಿ 2020, 4:19 IST
ಅಕ್ಷರ ಗಾತ್ರ
ADVERTISEMENT

ನೇತಾಜಿ ಅಸ್ಥಿಯ ಪ್ರಸಂಗವಂತೂ ಅತಿ ಭಾವಪ್ರೇರಕ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು 1997ರಲ್ಲಿ ನೇತಾಜಿ ಅವರ ಜನ್ಮ ಶತಮಾನೋತ್ಸವ ಆಚರಿಸಲು ತೀರ್ಮಾನಿಸಿತು. ಈ ಸಂದರ್ಭದಲ್ಲಿ ನೇತಾಜಿ ಅವರಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಲು ಟೋಕಿಯೊದಿಂದ ಅವರ ಅಸ್ಥಿಯನ್ನು ತರಿಸುವುದಾಗಿ ಪ್ರಕಟಿಸಿತು. ದೇಶದಾದ್ಯಂತ ಈ ಸುದ್ದಿ ಹರಡಿತು. ತೈವಾನ್‌ನ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿಲ್ಲ ಎಂದೇ ನಂಬಿದ್ದ ಅವರ ಕುಟುಂಬದವರು ಹಾಗೂ ಅನುಯಾಯಿಗಳು ಅಸ್ಥಿ ತರುವ ನಿರ್ಧಾರವನ್ನು ವಿರೋಧಿಸಿದರು. ಅಸ್ಥಿಯ ನಿಗೂಢತೆಯು ಆಗ ಮತ್ತೆ ಅನೇಕರನ್ನು ಕಂಗೆಡಿಸಿತು.

ತೈವಾನ್ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿಲ್ಲ, ಟೋಕಿಯೊದ ರೆಂಕೋಜಿ ದೇವಸ್ಥಾನದಲ್ಲಿ ಇರುವ ಅಸ್ಥಿ ನೇತಾಜಿ ಅವರದ್ದಲ್ಲ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಕೆ.ಮುಖರ್ಜಿ ಆಯೋಗವು ತನ್ನ ವರದಿಯಲ್ಲಿ ಹೇಳಿತ್ತು. ಅಸ್ಥಿಯನ್ನು ಪರಿಶೀಲಿಸಲೆಂದು ನ್ಯಾಯಮೂರ್ತಿ ಮುಖರ್ಜಿ 2001ರಲ್ಲಿ ರೆಂಕೋಜಿ ದೇವಸ್ಥಾನಕ್ಕೆ ಹೋಗಿದ್ದರು. ಬಣ್ಣಿಸಲಾಗದ ಕೆಲವು ಕಾರಣಗಳಿಂದಾಗಿ, ದೇವಸ್ಥಾನ ಮುಚ್ಚಿದ ದಿನ ಅವರ ಭೇಟಿಯನ್ನು ನಿಗದಿಪಡಿಸಲಾಗಿತ್ತು.

ಆಗ ಮುಖರ್ಜಿ ನಿರಾಶೆಯಿಂದ ಬರಿಗೈಲಿ ದೇಶಕ್ಕೆ ವಾಪಸ್ಸಾಗಿದ್ದರು. 2002ರ ಅಕ್ಟೋಬರ್ 24ರಂದು ನೇತಾಜಿ ಅಸ್ಥಿಯನ್ನು ಒಳಗೊಂಡ ಡಬ್ಬವೊಂದನ್ನು ತೆರೆದಿರುವುದಾಗಿ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದರು. ನೇತಾಜಿ ಅವರ ಹೆಸರಿನ ಚೀಟಿ ಅಂಟಿಸಿದ್ದ ಆ ವಿವಾದಾತ್ಮಕ ಡಬ್ಬವನ್ನು ತೆರೆದಾಗ, ಅದರಲ್ಲಿ ಅಸ್ಥಿ ಇರಲಿಲ್ಲ. ಸುಟ್ಟುಹೋದ ಕಂದುಬಣ್ಣದ ಮೂಳೆಯ ತುಂಡುಗಳಿದ್ದವು ಹಾಗೂ ಹಲ್ಲುಗಳ ಉರಿದ ತುಣುಕುಗಳನ್ನೊಳಗೊಂಡ ಕಂದುಬಣ್ಣದ ಕಾಗದದ ಕಟ್ಟು ಇತ್ತು. ಡಬ್ಬದಲ್ಲಿ ಇದ್ದುದು ಮೆದುಳಿನ ಹಾಗೂ ದವಡೆ ಮೂಳೆಗಳ ಸುಟ್ಟ ಭಾಗ ಎನ್ನುವುದು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಯಿತು.

ರೆಂಕೋಜಿ ದೇವಸ್ಥಾನದ ಪ್ರಧಾನ ಅರ್ಚಕ ಕ್ಯೋಯಿ ಮುಚಿಜುಕಿ 1953ರಲ್ಲಿ ನೆಹರೂ ಅವರಿಗೆ ಒಂದು ಪತ್ರ ಬರೆದು, ಅಸ್ಥಿಯನ್ನು ಪಡೆದುಕೊಳ್ಳಲು ಭಾರತ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಕೇಳಿಕೊಂಡರು. ‘ಸೂಕ್ತ ಸಮಯದಲ್ಲಿ ಭಾರತಕ್ಕೆ ಅಸ್ಥಿ ತರಿಸಿಕೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದ ನೆಹರೂ, ಅದುವರೆಗೆ ದೇವಸ್ಥಾನದಲ್ಲಿಯೇ ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕೆಂದು ವಿನಂತಿಸಿಕೊಂಡರು.

ಅಸ್ಥಿಯನ್ನು ಪಡೆಯುವಂತೆ ಭಾರತಕ್ಕೆ 1957ರಲ್ಲಿ ಮತ್ತೆ ಅರ್ಚಕರು ಆಗ್ರಹಿಸಿದರು. ನೇತಾಜಿ ಅವರ ಸಾವಿನ ಕುರಿತ ವಿವಾದ ಇನ್ನೂ ಬಗೆಹರಿದಿಲ್ಲವಾದ್ದರಿಂದ ಅಸ್ಥಿಯನ್ನು ಭಾರತಕ್ಕೆ ತರಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಉತ್ತರ ಅರ್ಚಕರಿಗೆ ಸಿಕ್ಕಿತು. ತನ್ನ ಸಂಪ್ರದಾಯದ ಪ್ರಕಾರ ಅಸ್ಥಿಯನ್ನು ನಿರಂತರವಾಗಿ ದೇವಸ್ಥಾನಗಳಲ್ಲಿ ಇಟ್ಟುಕೊಳ್ಳುವಂತಿಲ್ಲ ಎಂದು ಜಪಾನ್ ಸರ್ಕಾರವು ಭಾರತಕ್ಕೆ ಸ್ಪಷ್ಟಪಡಿಸಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಗೃಹ ಸಚಿವಾಲಯವು ಅಸ್ಥಿಯನ್ನು ಸಂರಕ್ಷಿಸಿ ಇಡಲು ವಾರ್ಷಿಕ ಶುಲ್ಕ ನೀಡುವ ವ್ಯವಸ್ಥೆಯನ್ನೇನೋ ಮಾಡಿದವು.

ಅನಿತಾ ಪಾಫ್‌ ತನ್ನ ಅಪ್ಪ ನೇತಾಜಿಯನ್ನು ಕೊನೆಯ ಸಲ ನೋಡಿದಾಗ ಇನ್ನೂ ಮೂರು ತಿಂಗಳ ಕೂಸು. ಬೆಳೆದ ಅದೇ ಹುಡುಗಿ ಅಸ್ಥಿಯನ್ನು ಭಾರತಕ್ಕೆ ತರುವ ಕುರಿತು ಮಾತನಾಡಿದ್ದು ವಿಶೇಷ. ಅನುಜ್ ಧರ್ ಪ್ರಕಾರ ‘1995ರಲ್ಲಿ ಜರ್ಮನಿಗೆ ಹೋಗಿದ್ದಾಗ ಪ್ರಣವ್‌ ಮುಖರ್ಜಿ ಅವರು ಅನಿತಾ ಅವರನ್ನು ಖಾಸಗಿಯಾಗಿ ಭೇಟಿಯಾಗಿ, ಭಾರತಕ್ಕೆ ಅಸ್ಥಿಯನ್ನು ತರುವ ಆಲೋಚನೆಯ ಬೀಜ ಬಿತ್ತಿದರು’. ಪ್ರಣವ್‌ ಮುಖರ್ಜಿ ಅವರ ಮಾತಿನಿಂದ ಪ್ರೇರೇಪಿತರಾಗಿ ಅನಿತಾ ತನ್ನ ತಾಯಿ ಎಮಿಲಿ ಶೆಂಕ್ಲ್‌ಗೆ ತದ್ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಸ್ಥಿ ತರಲು ಒಪ್ಪಿದರು ಎನ್ನಲಾಗಿತ್ತು. ತನ್ನ ಅಭಿಪ್ರಾಯವನ್ನು ನಿರ್ಲಕ್ಷಿಸಿ, ಮಗಳ ಬಾಯಿಂದ ತನ್ನದಲ್ಲದ ಹೇಳಿಕೆ ಹೊರಡಿಸುವಂತೆ ಮಾಡಿದ್ದರಿಂದ ಎಮಿಲಿ ಅವರಿಗೆ ಇರಿಸುಮುರಿಸಾಯಿತು.

1995ರಲ್ಲಿ ಜರ್ಮನಿಯಲ್ಲಿ ಎಮಿಲಿ ಶೆಂಕ್ಲ್‌ ಅವರನ್ನು ಪ್ರಣವ್‌ ಮುಖರ್ಜಿ ಭೇಟಿ ಮಾಡಿದ ಸಂದರ್ಭವನ್ನು ಧರ್‌ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವುದು ಹೀಗೆ: ‘ಎಮಿಲಿ ಕೊನೆಯುಸಿರೆಳೆಯುವ ಸ್ವಲ್ಪ ಹೊತ್ತಿನ ಮುಂಚೆ ಅವರಿಗೆ ಬಲು ಆಘಾತ ಒಡ್ಡುವಂತೆ ಪ್ರಣವ್‌ ಮುಖರ್ಜಿ ನಡೆದುಕೊಂಡಿದ್ದರು. ಜಪಾನ್‌ನ ದೇವಸ್ಥಾನದಲ್ಲಿ ಇದ್ದ ಅಸ್ಥಿಯನ್ನು ಬೋಸ್‌ ಅವರ ಅಸ್ಥಿ ಎಂದೇ ಪರಿಗಣಿಸಿ, ಅದನ್ನು ತರಲು ಅನುಮತಿ ಪತ್ರವೊಂದಕ್ಕೆ ಸಹಿ ಹಾಕುವಂತೆ ಎಮಿಲಿ ಅವರನ್ನು ಒತ್ತಾಯಿಸಿದರು. ಅದಕ್ಕಾಗಿ ಎಂಬತ್ತು ದಾಟಿದ ಎಮಿಲಿ ಅವರಿಗೆ ಬ್ಲ್ಯಾಂಕ್‌ ಚೆಕ್‌ ಕೊಡುವ ಉದ್ಧಟತನವನ್ನು ಕೂಡ ಮುಖರ್ಜಿ ತೋರಿದ್ದರು. ಸಹಿ ಹಾಕಿ ಉಪಕರಿಸಿದರೆ, ತಾನು ಬಯಸುವ ದೇಶದ ಕರೆನ್ಸಿಯ ಎಷ್ಟು ಬೇಕೋ ಅಷ್ಟು ಹಣವನ್ನು ಪಡೆಯಬಹುದು ಎಂದು ಆಮಿಷ ಒಡ್ಡಿದರು. ಆ ಚೆಕ್‌ ಅನ್ನು ಎಮಿಲಿ ಹರಿದು ಬಿಸಾಡಿ, ಮತ್ತೆಂದೂ ಈ ವಿಷಯವಾಗಿ ತನ್ನನ್ನು ಭೇಟಿ ಮಾಡುವ ಅಗತ್ಯವಿಲ್ಲ ಎಂದು ನಿಷ್ಠುರವಾಗಿ ಹೇಳಿದ್ದರು’.

ನೇತಾಜಿ ಅವರ ಅಣ್ಣನ ಮೊಮ್ಮಗ ಸೂರ್ಯ ಕುಮಾರ್‌ ಜರ್ಮನಿಯಲ್ಲಿದ್ದು, ಅವರ ಹೇಳಿಕೆಯನ್ನೂ ಧರ್‌ ಬರೆದಿರುವ ಪುಸ್ತಕ ಒಳಗೊಂಡಿದೆ: ‘ನೇತಾಜಿ ಅವರ ಅಸ್ಥಿಯನ್ನು ದೇಶಕ್ಕೆ ತರಲು ಎಮಿಲಿ ಒಪ್ಪಿದ್ದಾರೆಂದೂ, ಅದಕ್ಕೆ ತನ್ನ ಬಳಿ ದಾಖಲೆ ಇದೆಯೆಂದೂ ಪ್ರಣವ್‌ ಮುಖರ್ಜಿ ಹೇಳಿದ್ದು ಭಾರತದ ಪತ್ರಿಕೆಯೊಂದರಲ್ಲಿ ವರದಿಯಾಯಿತು. ಅದರ ಕುರಿತು ಅಜ್ಜಿಯನ್ನು ಕೇಳಿದಾಗ, ತಾನು ಯಾವ ಪತ್ರಕ್ಕೂ ಸಹಿ ಹಾಕಿಲ್ಲ. ಪ್ರಣವ್‌ ಮುಖರ್ಜಿ ತಾನು ಅಥವಾ ಭಾರತ ಸರ್ಕಾರ ನಂಬಿರುವ ಸುಳ್ಳನ್ನೇ ಹರಡುತ್ತಿದ್ದಾರೆ ಎಂದು ಕೋಪದಿಂದ ಪ್ರತಿಕ್ರಿಯಿಸಿದರು’.

ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿಲ್ಲ, ಆ ಅಸ್ಥಿಗೂ ನೇತಾಜಿಗೂ ಯಾವುದೇ ಸಂಬಂಧವಿಲ್ಲ ಎಂದು ಎಮಿಲಿ ಶೆಂಕ್ಲ್‌ ಬಲವಾಗಿ ನಂಬಿದ್ದರು. ನೇತಾಜಿ ಅಸ್ಥಿಯನ್ನು ಭಾರತಕ್ಕೆ ತರಿಸಿ, ಅವರ ಹೆಸರಿನಲ್ಲಿ ಒಂದು ಸ್ಮಾರಕ ನಿರ್ಮಿಸಬೇಕು ಎಂದು 1996ರಲ್ಲಿ ಮತ್ತೆ ಸರ್ಕಾರವನ್ನು ಅನಿತಾ ಕೇಳಿಕೊಂಡರು. ಆದರೆ, ಅಸ್ಥಿ ತಂದರೆ ಈಗಲೂ ನೇತಾಜಿ ಅವರನ್ನು ತಮ್ಮ ನಾಯಕ ಎಂದು ನಂಬಿದವರು ವಿರೋಧಿಸಿಯಾರು ಎಂದು ಸರ್ಕಾರವು ಅನಿತಾ ಅವರ ಬೇಡಿಕೆ ಈಡೇರಿಸಲು ಹಿಂದೇಟು ಹಾಕಿತು. ಒಂದು ಹಂತದಲ್ಲಿ ಅಸ್ಥಿಯನ್ನು ಜರ್ಮನಿಗಾದರೂ ತರಿಸಿಕೊಡಿ ಎಂದೂ ಅನಿತಾ ಕೇಳಿದರಂತೆ. ಮೂರನೇ ದೇಶಕ್ಕೆ ಅಸ್ಥಿ ಕೊಡಲು ಸಾಧ್ಯವಿಲ್ಲ ಎಂದು ಜಪಾನ್‌ ಹೇಳಿದ್ದರಿಂದ ಆ ಬೇಡಿಕೆಯೂ ಈಡೇರಲಿಲ್ಲ.

‘ಶಿಶಿರ್‌ ಬೋಸ್‌ (ನೇತಾಜಿ ಅಣ್ಣನ ಮಗ) ಕೂಡ ಭಾರತಕ್ಕೆ ಅಸ್ಥಿ ತರಲು ಸಾಕಷ್ಟು ಪ್ರಯತ್ನಿಸಿದ್ದರು. ಅವರ ಮಾತನ್ನೇ ಅನಿತಾ ಒಪ್ಪಿದ್ದು, ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿದ್ದಾರೆ ಎಂದೇ ನಂಬಿದ್ದರು. ನನ್ನ ತಂದೆ ಅಮಿಯಾನಾಥ್‌ ಬೋಸ್‌ ಹಾಗೂ ಕುಟುಂಬದ ಬಹುತೇಕ ಸದಸ್ಯರು ವಿಮಾನ ಅಪಘಾತದ ಸಿದ್ಧಾಂತವನ್ನು ಒಪ್ಪಿರಲಿಲ್ಲ. ಆದ್ದರಿಂದ ಭಾರತ ಸರ್ಕಾರ ಅಸ್ಥಿ ತರಕೂಡದು ಎಂದೇ ವಾದಿಸಿದರು’ ಎಂದು ನೇತಾಜಿ ಅವರ ಅಣ್ಣನ ಮೊಮ್ಮಗಳು ಮಾಧುರಿ ಬೋಸ್‌ ಅಭಿಪ್ರಾಯಪಟ್ಟರು. ಮಾಧುರಿ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ.

ತೈವಾನ್‌ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿಲ್ಲ, ಟೋಕಿಯೊದ ರೆಂಕೋಜಿ ದೇವಸ್ಥಾನದಲ್ಲಿ ಇರುವ ಅಸ್ಥಿ ಅವರದ್ದಲ್ಲ ಎಂಬ ತೀರ್ಮಾನಕ್ಕೆ ಬಂದ ಮುಖರ್ಜಿ ಆಯೋಗವು, ಆ ಅಸ್ಥಿಯ ಡಿಎನ್‌ಎ ಪರೀಕ್ಷೆಗೂ ಒತ್ತಾಯಿಸಿತು. ಅಸ್ಥಿಯ ಡಿಎನ್‌ಎ ಪರೀಕ್ಷೆ ನಡೆಸಿ, ನಿರ್ದಿಷ್ಟ ವಂಶಕ್ಕೆ ಸೇರಿದವರ ವಂಶವಾಹಿಗೆ ಹೋಲಿಕೆ ಮಾಡಿ ಅದು ನೇತಾಜಿ ಅವರದ್ದೇ ಹೌದೋ ಅಲ್ಲವೋ ಎನ್ನುವುದನ್ನು ವೈಜ್ಞಾನಿಕವಾಗಿ ಪತ್ತೆಮಾಡಬಹುದೆನ್ನುವುದು ಮುಖರ್ಜಿ ಆಯೋಗದ ನಿಲುವಾಗಿತ್ತು. ಭಾರತ, ಜಪಾನ್‌, ಯುರೋಪ್‌ ಹಾಗೂ ಅಮೆರಿಕದ ಹಲವು ಡಿಎನ್‌ಎ ಪರಿಣತರನ್ನು ಈ ಕಾರಣಕ್ಕೇ ಅವರು ಭೇಟಿ ಮಾಡಿದ್ದರು. ಅತಿ ಹೆಚ್ಚು ಶಾಖದಲ್ಲಿ ಮೂಳೆಗಳು ಬೆಂದುಹೋದ ನಂತರ ಅಸ್ಥಿ ಉಂಟಾಗುವುದರಿಂದ ಅದರಲ್ಲಿನ ಡಿಎನ್‌ಎ ಹಾಗೂ ವಂಶವಾಹಿ ಕಣಗಳು ನಾಶವಾಗಿರುತ್ತವೆ, ಆದ್ದರಿಂದ ವಂಶವಾಹಿಗಳ ಹೋಲಿಕೆ ಅಸಾಧ್ಯ ಎಂದು ಪರಿಣತರು ಹೇಳಿದರು.

ಮಾನವ ವಿಜ್ಞಾನ ಪರೀಕ್ಷೆಯೊಂದನ್ನು ನಡೆಸಿ, ಅಸ್ಥಿಯು ಎಷ್ಟು ವರ್ಷದ ವ್ಯಕ್ತಿಯದ್ದು ಹಾಗೂ ಅವರ ದೇಹವರ್ಣವೇನು ಎಂದು ಪತ್ತೆಮಾಡಬಹುದಿತ್ತಾದರೂ ಸರ್ಕಾರ ಅದಕ್ಕೆ ಮುಂದಾಗಲಿಲ್ಲ. ಈ ವಿಷಯದಲ್ಲಿ ಮುಖರ್ಜಿ ಆಯೋಗ ಪದೇ ಪದೇ ಒತ್ತಾಯಿಸಿದರೂ ಸರ್ಕಾರದಿಂದ ಯಾವ ಬೆಂಬಲವೂ ಸಿಗಲಿಲ್ಲ. ಅಮೆರಿಕದ ಡಿಎನ್‌ಎ ಪರಿಣತ ಟೆರ್ರಿ ಮಿಲ್ಟನ್‌ 2001ರಲ್ಲಿ ಅಸ್ಥಿಯ ಪರೀಕ್ಷೆ ನಡೆಸಲು ಸಿದ್ಧ ಎಂದು ಹೇಳಿದರೂ, ಸರ್ಕಾರ ಅದಕ್ಕೆ ಅನುಮತಿ ಕೊಡಲಿಲ್ಲ.

ನೇತಾಜಿ ಅವರನ್ನು ಹೋಲುವ ಬಾಬಾ

ಅನಾಮಧೇಯ ಸನ್ಯಾಸಿ

ನೇತಾಜಿ ನಿಗೂಢ ಕಣ್ಮರೆಯ ಕೆಲವು ವರ್ಷಗಳ ನಂತರ ಸುದ್ದಿಯೊಂದು ಹರಡಿತು. ನೇತಾಜಿ ಬದುಕಿದ್ದು, ಅವರು ಉತ್ತರ ಪ್ರದೇಶದ ಫೈಜಾಬಾದ್‌ನಲ್ಲಿ ಅನಾಮಧೇಯ ಸನ್ಯಾಸಿಯಾಗಿ ಬದುಕುತ್ತಿದ್ದಾರೆ ಎನ್ನುವುದೇ ಆ ಸುದ್ದಿ. ಭಗವಾನ್‌ಜಿ ಎಂದೇ ಜನಪ್ರಿಯರಾಗಿದ್ದ ಆ ಬಾಬಾ ಹಣೆಯು ನೇತಾಜಿ ಅವರ ಹಣೆಯನ್ನು ಹೋಲುತ್ತಿತ್ತು. ದೋಷವಿಲ್ಲದೆ ಇಂಗ್ಲಿಷ್‌ ಮಾತನಾಡುತ್ತಿದ್ದ ಸಾಧು, ಬಂಗಾಳಿ ಹಾಗೂ ಜರ್ಮನ್‌ ಭಾಷೆಗಳ ಮೇಲೂ ಪ್ರಭುತ್ವ ಹೊಂದಿದ್ದರು. ವಿಶ್ವ ಮಹಾಯುದ್ಧ ಹಾಗೂ ಅದಕ್ಕೆ ಸಂಬಂಧಿಸಿದ ಹಲವು ಸಂಗತಿಗಳ ಕುರಿತು ಸ್ಫುಟವಾಗಿ, ನಿರರ್ಗಳವಾಗಿ ಮಾತನಾಡುತ್ತಿದ್ದರು. ವೇಷ ಮರೆಸಿಕೊಂಡು ಅಡಗುತಾಣಗಳಲ್ಲಿ ನೇತಾಜಿ ಅವರೂ ಇರುತ್ತಿದ್ದರಿಂದ ಅನೇಕರು ಆ ಸಾಧುವೇ ನೇತಾಜಿ ಎಂದು ಭಾವಿಸಿದರು.

ಮುಖರ್ಜಿ ಆಯೋಗವು ಈ ದೃಷ್ಟಿಕೋನವನ್ನು ಇಟ್ಟುಕೊಂಡೂ ತನಿಖೆ ನಡೆಸಿತು. ಅನಾಮಧೇಯ ಬಾಬಾ ಅವರದ್ದೆನ್ನಲಾದ ಏಳು ಹಲ್ಲುಗಳು ಬೆಂಕಿಪೊಟ್ಟಣವೊಂದರಲ್ಲಿ ಸಿಕ್ಕವು. ಅವರ ಹಸ್ತಾಕ್ಷರವಿದ್ದ ಇಂಗ್ಲಿಷ್‌, ಬಂಗಾಳಿ ಬರಹಗಳೂ ದೊರೆತವು. ಆಯೋಗವು ಅವನ್ನು ಪರೀಕ್ಷಿಸುವಂತೆ ಪರಿಣತರಿಗೆ ನೀಡಿತು. ಹಸ್ತಾಕ್ಷರವು ನೇತಾಜಿ ಅವರ ಶೈಲಿಯನ್ನೇ ಹೋಲುತ್ತದೆ ಎಂದು ಪರಿಣತರೊಬ್ಬರು ಸವಿವರವಾದ ವರದಿ ಕೊಟ್ಟರು. ಹಲ್ಲುಗಳನ್ನು ಎರಡು ವಿಭಿನ್ನ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಹೈದರಾಬಾದ್‌ನ ಪ್ರಯೋಗಾಲಯವು ಯಾವ ನಿರ್ಣಯಕ್ಕೂ ಬರಲಾಗದಂಥ ಅಪೂರ್ಣ ವರದಿ ಕೊಟ್ಟಿತು. ಕೋಲ್ಕತ್ತದ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯವು (ಸಿಎಫ್‌ಎಸ್‌ಎಲ್‌) ನೇತಾಜಿ ಅವರ ಡಿಎನ್‌ಎಗೆ ಅದು ಹೊಂದುವುದಿಲ್ಲ ಎಂದು ವರದಿ ನೀಡಿತು. ಆದರೂ ಅನೇಕರು ಆ ಸನ್ಯಾಸಿಯೇ ನೇತಾಜಿ ಎಂದು ನಂಬಿದ್ದಾರೆ.

‘ತೀರ್ಮಾನಕ್ಕೆ ಬರಬಹುದಾದಂಥ ಯಾವುದೇ ಸಾಕ್ಷ್ಯಗಳೂ ಲಭ್ಯವಿಲ್ಲ. ಈ ವಿಷಯವಾಗಿ ವಿದೇಶಿ ಸಂಸ್ಥೆಗಳಿಂದ ಸ್ವತಂತ್ರವಾಗಿ ತಲಸ್ಪರ್ಶಿ ತನಿಖೆ ನಡೆಯಬೇಕು. ಅನಾಮಧೇಯ ಸನ್ಯಾಸಿಯ ಯಾವುದೇ ಫೋಟೊ ಇಲ್ಲ. ನೇತಾಜಿ ಹಾಗೂ ಬಾಬಾ ವ್ಯಕ್ತಿತ್ವಗಳು ಕೂಡ ಹೊಂದುವಂತಿರಲಿಲ್ಲ. ನೇತಾಜಿ ಸದಾ ಚುರುಕಾಗಿ ಇರುತ್ತಿದ್ದರು. ಒಂದು ವೇಳೆ ರಷ್ಯಾದಲ್ಲಿ ಅವರು ಚಿತ್ರಹಿಂಸೆ ಅನುಭವಿಸಿ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರಷ್ಟೇ ಅವರ ವರ್ತನೆ ಬದಲಾಗುವ ಸಾಧ್ಯತೆ ಇತ್ತು. ಇವೆಲ್ಲವೂ ಬರೀ ಊಹೆಯಷ್ಟೆ.

ಅನಾಮಧೇಯ ಬಾಬಾ ಒಬ್ಬ ಆಸಕ್ತಿಕರ ಮನುಷ್ಯ ಇದ್ದಿರಬಹುದು. ಒಳ್ಳೆಯ ಇಂಗ್ಲಿಷ್‌, ಬಂಗಾಳಿ, ಜರ್ಮನ್‌ ಮಾತನಾಡುತ್ತಿದ್ದರು. ಚೆನ್ನಾಗಿ ಬರೆಯಬಲ್ಲವರೂ ಆಗಿದ್ದರು. ಹಾಗಿದ್ದಮೇಲೆ ಆ ಸನ್ಯಾಸಿ ಭಾರತದಲ್ಲಿ ಇದ್ದುದು ಯಾಕೆ? ವಾಷಿಂಗ್ಟನ್‌ನಲ್ಲಿ ಇರಬಹುದಿತ್ತಲ್ಲ. ಅವರು ನೇತಾಜಿ ಆಗಿದ್ದಿದ್ದರೆ, ಕುಟುಂಬದ ಸದಸ್ಯರ ಜೊತೆ ಯಾಕೆ ಸಂಪರ್ಕ ಇಟ್ಟುಕೊಳ್ಳಲಿಲ್ಲ? ತಾನು ಬದುಕಿರುವ ಸಂಗತಿಯನ್ನು ಗುಟ್ಟಾಗಿ ಇಡುವಂತೆ ಅವರು ಕುಟುಂಬದ ಎಲ್ಲರನ್ನೂ ಕೇಳಿಕೊಂಡಿದ್ದು, ಅವರ ಮಾತಿಗೆ ಎಲ್ಲರೂ ಬದ್ಧರಾಗಿದ್ದಾರೆ ಎಂಬ ಇನ್ನೊಂದು ಅಭಿಪ್ರಾಯವಿದೆ. ಅಂಥ ಅಭಿಪ್ರಾಯ ವ್ಯಕ್ತಪಡಿಸಿದವರು ಹಲ್ಲುಗಳು ಹಾಗೂ ಹಸ್ತಾಕ್ಷರದ ಬರಹಗಳನ್ನು ವಿದೇಶಕ್ಕೆ ಕಳುಹಿಸಿ, ಸ್ವತಂತ್ರ ಪರೀಕ್ಷೆ ಮಾಡಿಸಲಿ. ನಮಗೆ ಪಕ್ಕಾ ಸಾಕ್ಷ್ಯ ಸಿಗಬೇಕು. ಸರ್ಕಾರಗಳು ವರದಿಗಳನ್ನು ತಿರುಚುತ್ತಾ, ತಮ್ಮ ಹಿತಾಸಕ್ತಿಯನ್ನು ಈ ವಿಷಯದಲ್ಲಿ ತೋರುತ್ತಾ ಬಂದಿವೆ’ ಎಂದು ನೇತಾಜಿ ಅಣ್ಣನ ಮೊಮ್ಮಗ ಚಂದ್ರ ಬೋಸ್‌ ಖಾರವಾಗಿ ಪ್ರತಿಕ್ರಿಯಿಸಿದ್ದರು.

(ಅಂಕಣಕಾರ್ತಿ ಚೂಡಿ ಶಿವರಾಂ ಹಿರಿಯ ಪತ್ರಕರ್ತೆ. ಅವರ ಲೇಖನಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿದೇಶಿ ವಿಶ್ವವಿದ್ಯಾಲಯಗಳು ಇವರ ಬರಹಗಳನ್ನು ಆಕರವಾಗಿಯೂ ಬಳಸಿಕೊಂಡಿವೆ. ಈ ಬರಹವು ಪ್ರಜಾವಾಣಿಯ ‘ಈ ಭಾನುವಾರ’ ಪುಟದಲ್ಲಿ ಸೆಪ್ಟೆಂಬರ್ 27, 2015ರಂದು ಮೊದಲ ಬಾರಿಗೆ ಪ್ರಕಟವಾಗಿತ್ತು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT