ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನೇತ್ರಾಣಿ ಸಮರಾಭ್ಯಾಸಕ್ಕೆ ಇಲ್ಲ'

Last Updated 4 ಡಿಸೆಂಬರ್ 2012, 8:54 IST
ಅಕ್ಷರ ಗಾತ್ರ

ಕಾರವಾರ: ಸಮರಾಭ್ಯಾಸಕ್ಕಾಗಿ ನೇತ್ರಾಣಿ ದ್ವೀಪವನ್ನು `ಸಮರಾಭ್ಯಾಸದ ವಲಯ'ವನ್ನಾಗಿ ಆಯ್ಕೆ ಮಾಡಿರಲಿಲ್ಲ. ಈ ದ್ವೀಪದಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿರುವ 16 ಮೀಟರ್ ಬಂಡೆಕಲ್ಲನ್ನು ಸಮರಭ್ಯಾಸಕ್ಕಾಗಿ ಆಯ್ಕೆ ಮಾಡಲು ಉದ್ದೇಶಿಸಲಾಗಿತ್ತು ಎಂದು ಕರ್ನಾಟಕ ನೌಕಾ ವಲಯದ ಮುಖ್ಯಸ್ಥ, ರಿಯರ್ ಅಡ್ಮಿರಲ್ ಅತುಲ್ ಕುಮಾರ್ ಜೈನ್ ಹೇಳಿದರು.

ಸೀಬರ್ಡ್ ನೌಕಾನೆಲೆಯಲ್ಲಿ ಲಂಗರು ಹಾಕಿರುವ ಭಾರತೀಯ ನೌಕಾಪಡೆಗೆ ಸೇರಿದ ಯುದ್ಧನೌಕೆ `ಐಎನ್‌ಎಸ್ ಮಕರ'ದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೇಶದ ಹಿತದೃಷ್ಟಿಯಿಂದ ನೌಕಾಪಡೆಯ ಯೋಧರಿಗೆ ತರಬೇತಿ ನೀಡುವುದು ಅತ್ಯಗತ್ಯವಾಗಿದೆ. ಸಮುದ್ರದಿಂದ ಶತ್ರುದೇಶದ ಭೂಭಾಗದ ಪ್ರದೇಶಕ್ಕೆ ಗುರಿ ಇಡಲು ಸೂಕ್ತ ತರಬೇತಿ ಅಗತ್ಯವಿದೆ. ಈ

ಉದ್ದೇಶಕ್ಕಾಗಿ ನೇತ್ರಾಣಿ ಬಳಿಯ ಬಂಡೆಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದರಿಂದ ನೇತ್ರಾಣಿ ದ್ವೀಪದಲ್ಲಿರುವ ಜೀವವೈವಿಧ್ಯಕ್ಕೆ ಅಪಾಯ ಉಂಟಾಗಬಹುದು ಎಂದು ತಪ್ಪಾಗಿ ತಿಳಿದುಕೊಳ್ಳಲಾಗಿದೆ.
ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ ಎಂದು ಅವರು ಹೇಳಿದರು.

`ಅಭಿವೃದ್ಧಿ ವಿರೋಧಿಯಲ್ಲ'
ನೌಕಾನೆಲೆ ಬಳಿಯಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ- 17ರ ಅಗಲೀಕರಣವನ್ನು ನೌಕಾ ನೆಲೆ ವಿರೋಧಿಸುತ್ತಿದೆ ಎಂಬುವುದು ಸರಿಯಲ್ಲ.

ಈ ಪ್ರದೇಶದಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಸ್ಥಳಾವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಐಎನ್‌ಎಸ್ ಪತಂಜಲಿ ಆಸ್ಪತ್ರೆ ಹಿಂಭಾಗದಿಂದ ಚತುಸ್ಪಥಕ್ಕೆ ಮಾರ್ಗ ಕಲ್ಪಿಸಿಕೊಡುವ ಪ್ರಸ್ತಾವವನ್ನು ಸಲ್ಲಿಸಲಾಗಿದೆ ಎಂದು ಜೈನ್ ಹೇಳಿದರು.
ಸೀಬರ್ಡ್ ಎರಡನೇ ಹಂತದ ವಿಸ್ತರಣೆ ಕಾಮಗಾರಿಗೆ ಅನುಮತಿ ದೊರೆತರೆ ಮುಂದಿನ 8ರಿಂದ 10ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗ ನೌಕಾನೆಲೆಯಲ್ಲಿ ಕೇವಲ ಒಂದು ಜೆಟ್ಟಿ ಇದೆ.

ಎರಡನೇ ಹಂತ ಪೂರ್ಣಗೊಂಡ ಬಳಿಕ ಇಲ್ಲಿ 7-8 ಜೆಟ್ಟಿಗಳ ನಿರ್ಮಾಣವಾಗಲಿದ್ದು, ಎಲ್ಲಾ ರೀತಿಯ ಯುದ್ಧ ನೌಕೆಗಳನ್ನು ನಿರ್ವಹಿಸಬಹುದಾಗಿದೆ. ಇದರಿಂದ ಸ್ಥಳೀಯವಾಗಿ ಸಾವಿರಾರು ಮಂದಿಗೆ ಉದ್ಯೋಗವಕಾಶ ಸೃಷ್ಟಿಯಾಗಲಿದೆ. ಈಗಾಗಲೇ ಸ್ಥಳೀಯ ಹಾಗೂ ರಾಜ್ಯದ ಸುಮಾರು ಒಂದು ಸಾವಿರದಷ್ಟು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದರು.

ಸಹಕರಿಸಲು ಮನವಿ
ಯಮನ್ ಕಡಲತೀರದಲ್ಲಿ ಉಗ್ರರು ಸಣ್ಣ ಮೀನುಗಾರಿಕೆ ದೋಣಿ ಮೂಲಕ ಬಂದು ಅಮೆರಿಕ ಯುದ್ಧ ಹಡಗಿನ ಮೇಲೆ ದಾಳಿ ನಡೆಸಿ ಅಪಾರ ಹಾನಿ ಉಂಟು ಮಾಡಿದ್ದರು. ಈ ರೀತಿಯ ಹಲವು ಘಟನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದಿವೆ.

ಈ ಹಿನ್ನೆಲೆಯಲ್ಲಿ ನೌಕಾ ಪಡೆಗಳ ಸುರಕ್ಷೆಗಾಗಿ ಮೀನುಗಾರಿಕೆ ದೋಣಿಗಳು ನಿಗದಿತ ದೂರದಲ್ಲಿ ಇರುವಂತೆ ಎಚ್ಚರಿಕೆ ನೀಡಲಾಗುತ್ತದೆ. ಸ್ಥಳೀಯ ಮೀನುಗಾರರು ಇದನ್ನು ಅರ್ಥ ಮಾಡಿಕೊಳ್ಳಬೇಕು.
ಸ್ಥಳೀಯ ಮೀನುಗಾರರೊಂದಿಗೆ ಎಲ್ಲಾ ರೀತಿಯಲ್ಲಿ ಸಹಕರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT