ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನೇತ್ರಾವತಿ ತಿರುವು: ಹೊಸ ಅಧ್ಯಯನ'

Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ನೇತ್ರಾವತಿ ತಿರುವು ಯೋಜನೆ ಮೂಲಕ ರಾಜ್ಯದ ಬರ ಪ್ರದೇಶಗಳಿಗೆ ನೀರು ಹರಿಸಬೇಕೆಂಬ ಬೇಡಿಕೆ ಕುರಿತು ಕೇಂದ್ರ ಸರ್ಕಾರ ಪುನಃ ಹೊಸದಾಗಿ ಅಧ್ಯಯನ ನಡೆಸುವ ಸಂಭವವಿದೆ.

ಜಲ ಸಂಪನ್ಮೂಲ ಸಚಿವಾಲಯಕ್ಕೆ ಸಂಬಂಧಿಸಿದ `ಸಂಸತ್ತಿನ ಸಮಾಲೋಚನಾ ಸಮಿತಿ ಸಭೆ'ಯಲ್ಲಿ ಸಚಿವ ಹರೀಶ್ ರಾವತ್ ನೇತ್ರಾವತಿ ತಿರುವು ಯೋಜನೆ ಕುರಿತ ಅಧ್ಯಯನಕ್ಕೆ ಹೊಸ ತಂಡ ಕಳುಹಿಸುವುದಾಗಿ ಭರವಸೆ ನೀಡಿದರು.

ನೇತ್ರಾವತಿ ತಿರುವು ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಅಗತ್ಯವಿದ್ದು, ವಸ್ತುಸ್ಥಿತಿ ಅಧ್ಯಯನಕ್ಕೆ ಪರಿಣತರ ತಂಡ ಕಳುಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈ ಯೋಜನೆಗೆ ಪರಿಸರವಾದಿಗಳು ವಿರೋಧ ಮಾಡುತ್ತಿದ್ದಾರೆ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಪುನಃ ಅಧ್ಯಯನ ನಡೆಸಲಾಗುವುದು ಎಂದು ಸಮಾಲೋಚನಾ ಸಮಿತಿ ಸದಸ್ಯರಾದ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜ್ ಅವರಿಗೆ ಸಚಿವರು ತಿಳಿಸಿದರು.

ಯೋಜನೆ ಕುರಿತು 2001ರಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಿರುವ ಜಿ.ಎಸ್. ಪರಮಶಿವಯ್ಯ ಅವರ ಜತೆ ಜಲ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳ ಸಭೆ ಏರ್ಪಡಿಸುವ ಆಶ್ವಾಸನೆಯನ್ನು ಸಚಿವರು ನೀಡಿದರು.

ನೇತ್ರಾವತಿ ತಿರುವು ಯೋಜನೆ ಮೂಲಕ ಹಾಸನ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮೀಣ ಮತ್ತು ನಗರ ಜಿಲ್ಲೆಗಳಿಗೆ ನೀರು ಪೂರೈಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದಲೂ ಇದೆ. ಈ ಹಿನ್ನೆಲೆಯಲ್ಲಿ ತಜ್ಞರ ತಂಡಕ್ಕೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಜನ ಪ್ರತಿನಿಧಿಗಳಿಗೆ ಅವಕಾಶ ಕೊಡಲಾಗುವುದು ಎಂದು ರಾವತ್ ಹೇಳಿದರು.

ಈಗಾಗಲೇ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲ್ಯುಡಿಎ) ಪಶ್ಚಿಮಾಭಿಮುಖವಾಗಿ ಹರಿಯುವ ನೇತ್ರಾವತಿ ನದಿಯನ್ನು ಪೂರ್ವಕ್ಕೆ ತಿರುಗಿಸಿ ಹೇಮಾವತಿಗೆ ಜೋಡಿಸುವ ಯೋಜನೆಯ ಸಾಧ್ಯಾಸಾಧ್ಯತೆ ಕುರಿತು ವರದಿ ಸಲ್ಲಿಸಿದೆ.

ಇದರಿಂದಾಗಿ ಲಭ್ಯವಾಗುವ ಹೆಚ್ಚುವರಿ ನೀರಿನಿಂದ ಸುಮಾರು 35 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಆದರೆ, ರಾಜ್ಯ ಸರ್ಕಾರ ಈ ಸಂಬಂಧ ಯಾವುದೇ ಪ್ರಸ್ತಾವನೆಯನ್ನು ಕಳುಹಿಸಿಲ್ಲ ಎಂದು ಜಲ ಸಂಪನ್ಮೂಲ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT