ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಥ್ಯಕ್ಕೆ ಸರಿದ ರಂಗ ಚೇತನ ಕಲಾವಿದ ಎಚ್.ಟಿ.ಅರಸ್

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹನುಮಸಾಗರ: ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದಿದ್ದ ಖ್ಯಾತ ರಂಗ ಕಲಾವಿದ ಎಚ್.ಟಿ.ಅರಸ್ (91) ಅವರು ಎರಡು ವಾರಗಳ ಅನಾರೋಗ್ಯದ ನಂತರ ಶನಿವಾರ ಬೆಳಗಿನ ಜಾವ ಇಲ್ಲಿನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ನೇಕಾರ ಕುಟುಂಬದಲ್ಲಿ ಹುಟ್ಟಿದ ತಿಪ್ಪಣ್ಣ ಸಪ್ಪಂಡಿ (ಮೂಲ ಹೆಸರು)  ರಂಗಕಲೆಯಲ್ಲಿ ತ್ರಿವಿಕ್ರಮನಂತೆ ಬೆಳೆದದ್ದು ಆಕಸ್ಮಿಕವಲ್ಲ. ಕೊಪ್ಪಳ ಜಿಲ್ಲೆ ಹನಮಸಾಗರಕ್ಕೆ ಬಂದ ಕಂಪೆನಿ ನಾಟಕದಲ್ಲಿ ಬಾಲ ನಟನಾಗಿ ಪಾದಾರ್ಪಣೆ ಮಾಡಿದ ಅರಸ್ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದರು. ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್ ಸೇರಿದಂತೆ ಅನೇಕ ಕಲಾವಿದರೊಂದಿಗೆ 56 ಚಲನಚಿತ್ರಗಳಲ್ಲೂ ನಟಿಸಿ ತಮ್ಮದೇ ಛಾಪು ಮೂಡಿಸಿದ್ದರು.

ಹೈದರಾಬಾದ್ ಪ್ರಾಂತ್ಯದ ಈ ಕಲಾವಿದ ಹಳೆ ಮೈಸೂರು ಭಾಗದ ಕಲಾರಾಧಕರ ಮೆಚ್ಚಿನ ನಟನಾಗಿರುವುದರ ಹಿಂದೆ ರೋಚಕ ಕಥೆಯೇ ಇದೆ. ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳಲ್ಲಿ ಅರಸ್ ಅವರದು ಎತ್ತಿದ ಕೈ. ಖಳನಾಯಕನ ಪಾತ್ರಕ್ಕಂತೂ ಜೀವ ತುಂಬಿದ ವ್ಯಕ್ತಿ.

1961ರಲ್ಲಿ ಮೈಸೂರಿನಲ್ಲಿ ರಾಜಾ ವಿಕ್ರಮ ನಾಟಕದಲ್ಲಿ ಅರಸರದು ದುರ್ಜಯನ ಪಾತ್ರ. ಎರಡು ನಿಮಿಷ ನಾಟಕ ವೀಕ್ಷಣೆಗೆ ಬಂದಿದ್ದ ಆಗಿನ ಪ್ರಧಾನಿ ದಿ.ಪಂಡಿತ ಜವಾಹರಲಾಲ ನೆಹರು ಅವರು ನಾಟಕ ವೀಕ್ಷಿಸಿ ನಂತರ ಸ್ವತಃ ರಂಗಸಜ್ಜಿಕೆಗೆ ಬಂದು ಅರಸರನ್ನು ಸನ್ಮಾನಿಸಿದ ಅವಿಸ್ಮರಣೀಯ ಕ್ಷಣವನ್ನು ಅರಸ್ ಕೊನೆವರೆಗೂ ನೆನಪಿಸಿಕೊಳ್ಳುತ್ತಿದ್ದರು.

ಅರವತ್ತರ ದಶಕದ ರಂಗಭೂಮಿಯಲ್ಲಿ ಎಲಿವಾಳ ಸಿದ್ದಯ್ಯನವರ ಸಮಕಾಲೀನರಾಗಿ ರಂಗಭೂಮಿಯಲ್ಲಿ ಮಾಗಿದ ಕಲಾವಿದ ಎನಿಸಿದ್ದ ಎಚ್.ಟಿ.ಅರಸ್ ಅವರಿಗೆ 2008ರಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಗೌರವಿಸಿತ್ತು. ಕಲಾಪ್ರೌಢಿಮೆ ಮೆರೆದ ರಂಗ ಚೇತನ ಈಗ ನೇಪಥ್ಯಕ್ಕೆ ಸರಿದಿದಿದೆ. ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ನಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT