ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಥ್ಯಕ್ಕೆ ಸರಿದ ಸಜ್ಜನ ರಾಜಕಾರಣಿ...

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕರ್ನಾಟಕ ಕಂಡ ಇಬ್ಬರು ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರು(ಎಂ.ಪಿ. ಪ್ರಕಾಶ್) ಫೆಬ್ರುವರಿಯಲ್ಲೇ ಅಸ್ತಂಗತರಾದರೆ ಈಗ ಮತ್ತೊಬ್ಬರು ಕೊನೆಯುಸಿರೆಳೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಈ ಇಬ್ಬರು ಮುಖಂಡರು ರಾಜಕೀಯದಾಚೆ ಸಾಹಿತ್ಯ, ಕಥೆ, ನಾಟಕ ಇತ್ಯಾದಿಗಳಲ್ಲಿ ತಮ್ಮದೇ ಛಾಪು ಮೂಡಿಸಿದ ಸಭ್ಯ ರಾಜಕಾರಣಿಗಳೆಂದೇ ಹೆಸರಾದವರು.

ಎಂ.ವೈ. ಘೋರ್ಪಡೆ ಅವರು ಅರಸರ ಮನೆತನದಲ್ಲಿ ಜನಿಸಿ, ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿ, ಪ್ರಜಾಪ್ರಭುತ್ವವಾದಿ ನೆಲೆಯಲ್ಲಿ ವಿಧಾನಸಭೆಗೆ 1959ರಲ್ಲಿ ಪ್ರಥಮವಾಗಿ ಸ್ಪರ್ಧಿಸಿ ಗೆಲುವು ಕಂಡವರು. ಅವರು ಪ್ರಜಾಪ್ರಭುತ್ವವಾದಿಯಾಗಿ ಬೆಳೆಯುತ್ತ ಅರಸೊತ್ತಿಗೆಯನ್ನು ತುಸು ಹಿಂದಿಟ್ಟರು. ಮತ ರಾಜಕಾರಣದಲ್ಲಿದ್ದರೂ ಸಭ್ಯವಾಗಿಯೇ ಚುನಾವಣೆ ಎದುರಿಸುತ್ತ, ಗೆಲ್ಲುತ್ತ ಬಂದರು.

ಹಿಂದುಳಿದ ವರ್ಗಗಳ ನೇತಾರ ಎಂದೇ ಖ್ಯಾತರಾದ ದೇವರಾಜ ಅರಸು ಅವರು ಈ ರಾಜಕುಮಾರನ ಪಾಂಡಿತ್ಯ, ಸಾಂಸ್ಕೃತಿಕ ಗರಿಮೆಯನ್ನು ಮೆಚ್ಚಿ ಹಣಕಾಸು ಮಂತ್ರಿಯನ್ನಾಗಿ ನೇಮಕ ಮಾಡಿದರು. ಆಗಿನ ವಿಧಾನಸಭೆಯ ಕಡತಗಳನ್ನು ಪರಿಭಾವಿಸಿದರೆ ಅವರೊಬ್ಬ ಆಧುನಿಕ ಅಭಿವೃದ್ಧಿಯ ಹರಿಕಾರರಾಗಿ ಕಾಣುತ್ತಾರೆ.
 
ವಿಭಿನ್ನ ಯೋಜನೆಗಳ ಮೂಲಕ ಬಡವರಿಗೆ ಸೂರು, ಮಾಸಿಕ ವೇತನ, ಸಮುದಾಯ ಭವನಗಳ ನಿರ್ಮಾಣದಂತಹ ಕಾಮಗಾರಿಗಳ ಮೂಲಕ ಹೆಸರು ಮಾಡಿದರು. ಈ ಕಾರ್ಯಗಳಿಂದಾಗಿ ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಒಂದು ಸರ್ಕಾರಿ ಕಟ್ಟಡಗಳೂ ಇಲ್ಲದೆ ಕೊಂಪೆಯಾಗಿದ್ದ ಸಂಡೂರು ಹೊಸ ಸೊಬಗು ಪಡೆಯಲು ಸಾಧ್ಯವಾಯಿತು.


ಊರ ಮಧ್ಯೆ ಹರಿಯುತ್ತಿದ್ದ ನಾರಿಹಳ್ಳದ ನೀರು ವ್ಯರ್ಥವಾಗಿ ಸಾಗಿ ತುಂಗಭದ್ರೆಯನ್ನು ಸೇರುತ್ತಿರುವಾಗ ಅದಕ್ಕೆ ಅಣೆಕಟ್ಟು ನಿರ್ಮಿಸುವ ಯೋಜನೆ ರೂಪಿಸಿ ಅದರ ಮುಂಭಾಗದ ಹಳ್ಳಿಗಳ ರೈತರಿಗೆ ನೀರುಣಿಸಿ ಹೊಸ ಬೆಳೆ ಬೆಳೆಯಲು ಅವಕಾಶ ಮಾಡಿಕೊಟ್ಟವರು ಘೋರ್ಪಡೆ.

ಜನಪರವಾಗಿಯೇ ಇದ್ದುಕೊಂಡು ಸಾರ್ವಜನಿಕ ಉದ್ಯೋಗ ವಲಯ ಸೃಷ್ಟಿಸಲು ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರು ಉದ್ಯಮ ಸ್ಥಾಪಿಸಿ ಆರು ಸಾವಿರ ಮಂದಿಗೆ ಕೆಲಸ ನೀಡುವಂತೆ ಮಾಡಿದ್ದೂ ಒಂದು ವಿಶೇಷ. ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆದುದಲ್ಲದೆ 1991ರ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ವರ್ಷದ ಸಂದರ್ಭದಲ್ಲಿ ಹೊಸಪೇಟೆಯಲ್ಲಿ ಬಾಲಕಿಯರಿಗಾಗಿ ವಸತಿ ಶಾಲೆ ಆರಂಭಿಸಿದರು.

ಸಂಡೂರು ಭಾಗದ ಲಂಬಾಣಿ ಜನಾಂಗದ ಕರಕುಶಲ ಅಭಿವೃದ್ಧಿಗಾಗಿ ಕಲಾ ಕೇಂದ್ರ ಸ್ಥಾಪಿಸಿ ಬಂಜಾರ ಸಂಪ್ರದಾಯದ ಕಸೂತಿ ಕೆಲಸಕ್ಕಾಗಿ ವಿಶೇಷ ಅವಕಾಶ ಲಭ್ಯವಾಗುವಂತೆ ಮಾಡಿದ್ದು ಗಮನಾರ್ಹ. ಇದು ಕಲೆಗಳ ಕುರಿತು ಅವರಿಗೆ ಇದ್ದ ಆಸಕ್ತಿಯನ್ನೂ ತೋರಿಸುತ್ತದೆ.

ಅವರು ಹಣಕಾಸು ಮಂತ್ರಿಯಾಗಿದ್ದಾಗ ವಿಶಿಷ್ಟ ಆರ್ಥಿಕ ಯೋಜನೆ ಅನುಷ್ಠಾನಗೊಳಿಸಿದ್ದಲ್ಲದೆ, ವೀರಪ್ಪ ಮೊಯಿಲಿ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಪಂಚಾಯತ್ ರಾಜ್ ವ್ಯವಸ್ಥೆ ಮೂರು ಹಂತದಲ್ಲಿ ಬೆಳೆಯುವಂತೆ ಅನುಷ್ಠಾನಗೊಳಿಸಿದ್ದು ಗಮನಾರ್ಹ.

ತಮ್ಮ ನೀತಿ ನಿಯಮಗಳಿಗೆ ಭಂಗ ಬರುವ ಕ್ಷಣ ಎದುರಾದಾಗ `ಇನ್ನು ಈ ಅಧಿಕಾರ ಒಲ್ಲೆ~ ಎಂದು ಯಾವ ಮಂತ್ರಿ ಪದವಿಗೂ ಆಸೆಪಡದೆ ಸಕ್ರಿಯ ರಾಜಕಾರಣದಿಂದ ದೂರವಾಗಿ ತಮ್ಮ ಊರು ಸಂಡೂರು ಸೇರಿಬಿಡುವಷ್ಟು ನಿರಾಡಂಬರ ಜೀವನ ಅವರದ್ದು. ಒಮ್ಮೆ ಅವರ ಸಹೋದರನ (ಆರ್.ವೈ. ಘೋರ್ಪಡೆ) ವಿರುದ್ಧವೇ ಸೋತಿದ್ದು ಹೊರತುಪಡಿಸಿದರೆ ಎಂದೂ ಅಪಜಯ ಕಂಡವರಲ್ಲ.

ಇಡೀ ಜಿಲ್ಲೆ ಘೋರ್ಪಡೆ ತೋರಿದ ನೆರಳಿನಂತೆಯೇ ಹೆಜ್ಜೆಯಿಡುವಷ್ಟು ತೂಕದ ವ್ಯಕ್ತಿಯಾಗಿದ್ದ ಅವರು ತಮ್ಮ ಬದುಕಿನ ಅವಧಿಯಲ್ಲಿ ಎಂದಿಗೂ ವಿಚಲಿತರಾಗಿ ಅಧಿಕಾರಕ್ಕಾಗಿ ಹಾತೊರೆದವರಲ್ಲ. ಅವರು ಮುಂದಾಲೋಚನೆಯ ಕನಸು ಕಂಡು ಅವುಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಸಾಕಾರ ರೂಪ ನೀಡಲು ನಿರತರಾದ ಸಾಂಸ್ಕೃತಿಕ ಚಿಂತಕ.

ಸಂಡೂರು ನಿಸರ್ಗ ರಮಣೀಯ ತಾಣ. ಎರಡು ಬೆಟ್ಟಗಳ ಮಧ್ಯೆ ಇರುವ ಈ ಸಂಡೂರು ವಿಶೇಷವಾಗಿ ಕಾಡು ಪ್ರಾಣಿಗಳು, ಪಶು-ಪಕ್ಷಿಗಳು ಇರುವ ತಾಣ. ಹಾಗೆಯೇ ಘೋರ್ಪಡೆ ಅವರಿಗೆ ತಮ್ಮ ಸುತ್ತಲಿನ ಪರಿಸರ ಒಂದು ಕೌತುಕವಾಗಿ ಕಂಡಿತ್ತು. ನಿಸರ್ಗದ ರಮ್ಯತೆಯನ್ನು ತಮ್ಮ ಬೈನಾಕುಲರ್‌ನಲ್ಲಿ ನೋಡುತ್ತ, ಅಪರೂಪದ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಹವ್ಯಾಸ ಅವರಲ್ಲಿ ಮಿಳಿತಗೊಂಡಿದ್ದರಿಂದ ಅವರೊಬ್ಬ ಅನನ್ಯ ಛಾಯಾಗ್ರಾಹಕರಾಗಿ ರೂಪುಗೊಂಡರು.

ಸುತ್ತಲಿನ ಮತ್ತು ದೂರದ ವನ್ಯಧಾಮಗಳಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ತಿರುಗಾಡುತ್ತ ವನ್ಯಜೀವಿ ಛಾಯಾಗ್ರಹಣದಲ್ಲಿ ಅದ್ವಿತೀಯರಾದರು. ಇವೆಲ್ಲ ಅವರ ಪುಸ್ತಕಗಳಲ್ಲಿ ಬಂಧಿಯಾಗಿವೆ. ಅವರ `ಸನ್‌ಲೈಟ್ ಶಾಡೋಸ್~ ಗ್ರಂಥವಂತೂ ವಿರಳ ಕೃತಿ ಎಂದೇ ಅಂತರರಾಷ್ಟ್ರೀಯ ಮಾನ್ಯತೆ ಪಡೆದಿದೆ.

ಛಾಯಾಗ್ರಹಣದಲ್ಲಿ ಮಾತ್ರವಲ್ಲ; ಇತಿಹಾಸದ ಮೇಲೆ ಬೆಳಕು ಚೆಲ್ಲುವ ಗುತ್ತಿ, ಅರಮನೆ ಬಗ್ಗೆ, ಆರ್ಥಿಕ ಯೋಜನೆಗಳ ಬಗ್ಗೆ ಅವರ ಚಿಂತನೆಗಳು ದಂಡಿಯಾಗಿ ವಿವಿಧ ಪುಸ್ತಕಗಳಲ್ಲಿ ಬಿಂಬಿತವಾಗಿರುವುದನ್ನು ಕಾಣಬಹುದು.

ಸಾಮಾನ್ಯವಾಗಿ ಮೃದುಭಾಷಿಯಾಗಿದ್ದರೂ ಆಸಕ್ತರೊಂದಿಗೆ ಬಿಚ್ಚು ಮಾತಿನಿಂದ ಸಲ್ಲಾಪ ನಡೆಸುತ್ತಿದ್ದ ಘೋರ್ಪಡೆ, ಅದ್ವಿತೀಯ ಸಂಸದೀಯ ಪಟುತ್ವವನ್ನೂ ಬೆಳೆಸಿಕೊಂಡ ದಕ್ಷ ವ್ಯಕ್ತಿ. ಕಂಚಿಯ ಪರಮಾಚಾರ್ಯರ ಕುರಿತು ಆನಂದಭೂತಿಯ ಗ್ರಂಥ ಬರೆದು ಆಧ್ಯಾತ್ಮಿಕ ಸೊಗಸಿನ ಜೀವನ ಎಂದರೇನು ಎಂಬುದನ್ನು ಕಂಡುಕೊಂಡ ವಿರಳ ಆಧ್ಯಾತ್ಮಿಕ ವ್ಯಕ್ತಿಯೂ ಹೌದು. ಶಂಕರಾಚಾರ್ಯ, ಬಸವಣ್ಣ ಮುಂತಾದವರ ಕುರಿತು ಕಿರು ಪುಸ್ತಕ ಬರೆದು ತಮ್ಮ ಶಾಲೆಗಳ ಮಕ್ಕಳಿಗೆ ಅವನ್ನು ಹಂಚಿ ಅವರ ಜ್ಞಾನ ವಿಸ್ತರಿಸುವ ಕೆಲಸವನ್ನೂ ಮಾಡಿದ್ದಾರೆ.

ಅವರು ಸರಳರಲ್ಲಿ ಸರಳರು. ಎಲ್ಲವೂ ಇದ್ದರೂ ಯಾವುದೇ ಅಹಮಿಕೆಯಿಲ್ಲದೆ ಸಭ್ಯವಾಗಿ ಬದುಕಿ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವಂತಾದರೆ ಅದೇ ನಾವು ಅವರಿಗೆ ಸಲ್ಲಿಸುವ ಗೌರವ ನಮನವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT