ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ ಕನ್ನಡಿಗರ ಮಿಂಚು...

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ಕ್ರಿಕೆಟ್‌ನಲ್ಲಿಯೇ ಸಾಧನೆ ಮಾಡಬೇಕು, ಕ್ರೀಡಾಪ್ರೇಮಿಗಳ ಮನ ಗೆಲ್ಲಬೇಕು ಎಂಬ ಗುರಿಯೊಂದಿಗೆ ನಿರಂತರವಾಗಿ ಶ್ರಮ ಪಟ್ಟ ಗಡಿ ಜಿಲ್ಲೆಯ ಯುವಕರ ಸಮೂಹ ಈಗ ಅಂಥದೊಂದು ಸಾಧನೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ.

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ನಡೆದ `ಭಾರತ-ನೇಪಾಳ' ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿ ಚಾಂಪಿಯನ್ ಆಗಿರುವ ಗಡಿ ಜಿಲ್ಲೆ ಬೀದರ್‌ನ ಕ್ರಿಕೆಟ್ ತಂಡದ ಯುವಕರ ಸಾಧನೆ ಹೆಮ್ಮೆಪಡುವಂಥದ್ದು. ಸೌಲಭ್ಯಗಳ ಕೊರತೆಯ ಹೊರತಾಗಿಯೂ ಉತ್ತಮ ಸಾಧನೆ ಮಾಡಬಹುದು ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

ಬೀದರ್‌ನಲ್ಲಿರುವ `ಬೀದರ್ ಕ್ರಿಕೆಟ್ ನಿಯಂತ್ರಣ ಸಂಸ್ಥೆ'ಗೆ ಸೇರಿದ 15 ಮಂದಿಯ ತಂಡ ನೇಪಾಳದಲ್ಲಿ ನಡೆದ ಟ್ವೆಂಟಿ-20 ಟೂರ್ನಿಯಲ್ಲಿ ಟ್ರೋಫಿ ಹಾಗೂ ನಗದು ಬಹುಮಾನ ಜಯಿಸಿ, ನಗರಕ್ಕೆ ವಾಪಸು ಬಂದಾಗ ಸಹಜವಾಗಿಯೇ ಹರ್ಷ, ಜೈಕಾರದ ಸ್ವಾಗತ ದೊರೆಯಿತು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಸೇರಿದ 21 ವರ್ಷ ವಯಸ್ಸಿನ ಸದಸ್ಯರಿರುವ ಈ ತಂಡ ಕೇದಾರನಾಥ್ ಅವರ ನಾಯಕತ್ವದಲ್ಲಿ ನೇಪಾಳಕ್ಕೆ ಪ್ರಯಾಣ ಬೆಳೆಸಿತ್ತು. ನೇಪಾಳದಲ್ಲಿ ಕ್ರಿಕೆಟ್‌ಗೆ ಉತ್ತೇಜನ ನೀಡುವ ಸಲುವಾಗಿ ಅಲ್ಲಿನ ಸಂಘಟನೆಯೊಂದು ಈ ಟೂರ್ನಿ ಆಯೋಜಿಸಿತ್ತು. ನೇಪಾಳದ ಯುವಕರಲ್ಲಿ ಈಗ ನಿಧಾನವಾಗಿ ಕ್ರಿಕೆಟ್‌ನತ್ತ ಆಸಕ್ತಿ ಮೂಡುತ್ತಿದೆ. ಈ ದೇಶದವರು ಹಿಂದೆ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಲೆದರ್ ಬಾಲ್‌ನಲ್ಲಿ ಟೂರ್ನಿ ನಡೆಸಲಾಯಿತು.

ಪ್ರತಿ ವರ್ಷ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಭಾರತದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ತಂಡಗಳಿಗೆ ಆಹ್ವಾನ ನೀಡಲಾಗುತ್ತದೆ. ಈ  ವರ್ಷದ ಟೂರ್ನಿಯಲ್ಲಿ ನೇಪಾಳ ಮತ್ತು ಬಾಂಗ್ಲಾದೇಶದ ಸ್ಥಳೀಯ ಯುವ ತಂಡಗಳು ಭಾಗವಹಿಸಬೇಕಿದ್ದರೂ, ಕೊನೆದಿನಗಳಲ್ಲಿ ಆ ತಂಡಗಳು ಹಿಂದೆ ಸರಿದವು.

ಉತ್ತರ ಭಾರತದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಟೂರ್ನಿಯಿಂದ ಕೊನೆಗಳಿಗೆಯಲ್ಲಿ ದೂರ ಉಳಿದವು. ಅಂತಿಮವಾಗಿ ನೇಪಾಳ ತಂಡ, ಕರ್ನಾಟಕದಿಂದ ತೆರಳಿದ್ದ `ಬೀದರ್ ಕ್ರಿಕೆಟ್ ನಿಯಂತ್ರಣ ಸಂಸ್ಥೆ' ತಂಡ ಮತ್ತು ಮಹಾರಾಷ್ಟದ ತಂಡಗಳು ಪೈಪೋಟಿ ನಡೆಸಿದವು.

ಲೀಗ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಗಳಿಸಿದ್ದ ಬೀದರ್ ಮತ್ತು ನೇಪಾಳದ ತಂಡ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಸ್ಥಳೀಯ ವಾತಾವರಣ ಸರಿಯಿಲ್ಲದ ಕಾರಣ 20 ಓವರ್‌ಗಳ ಪಂದ್ಯವನ್ನು 10 ಓವರ್‌ಗಳಿಗೆ ಇಳಿಸಲಾಗಿತ್ತು.

ಮಿಂಚಿನ ಪ್ರದರ್ಶನ ತೋರಿದ ಬೀದರ್ ತಂಡ ಮೊದಲು ಬ್ಯಾಟ್ ಮಾಡಿ 10 ಓವರ್‌ಗಳಲ್ಲಿ 76 ರನ್ ಗಳಿಸಿತ್ತು. ಈ ಗುರಿ ಮುಟ್ಟುವ ಹಾದಿಯಲ್ಲಿ ನೇಪಾಳ ಪರದಾಡಿತು. ಈ ತಂಡ ಏಳು ಓವರ್‌ಗಳಲ್ಲಿಯೇ 50  ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ವಿಜಯದ ಕೇಕೆ ಹಾಕಿದ ಗಡಿ ಭಾಗದ ಹುಡುಗರ ಸಂಭ್ರಮ ಹೇಳತೀರದಾಗಿತ್ತು. ಆ ಸ್ಮರಣೀಯ ಕ್ಷಣಗಳನ್ನು ಆಟಗಾರರು ಹಾಗೂ ಕೋಚ್‌ಗಳು ಹಂಚಿಕೊಂಡಿದ್ದಾರೆ.

`ರಾಜ್ಯ ಮಟ್ಟದ ಅನೇಕ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಬೀದರ್ ತಂಡದ ಪಾಲಿಗೆ ನೆರೆಯ ನೇಪಾಳದಲ್ಲಿ ಚಾಂಪಿಯನ್ ಆದ ಆ ಅಮೋಘ ಕ್ಷಣ ಎಂದಿಗೂ ಮರೆಯಲಾಗದು. ಸೌಲಭ್ಯಗಳ ಕೊರತೆಯ ನಡುವೆಯೂ ಈ ಸಾಧನೆ ಮಾಡಿದ್ದು ಸಂತಸವನ್ನು ಹೆಚ್ಚಿಸಿದೆ' ಎಂದು ಕೋಚ್ ಸಂಜಯ್ ಜಾಧವ್ ಆಟಗಾರರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

`ಯುವಕರಿಗೆ ನಿರಂತರ ಅಭ್ಯಾಸ, ಬ್ಯಾಟ್, ಇತರ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮತ್ತು ಕ್ರೀಡಾ ಇಲಾಖೆಯಿಂದಲೂ ಸೌಲಭ್ಯಗಳು ಲಭಿಸಿದರೆ, ಜಿಲ್ಲಾ ಹಂತದಲ್ಲಿರುವ ತಂಡಗಳು ಇನ್ನಷ್ಟು ಪ್ರಗತಿ ಸಾಧಿಸಬಹುದು' ಎನ್ನುವ ಅಭಿಪ್ರಾಯ ಅವರದ್ದು.

ಬೀದರ್ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ ತಂಡವು ಈ ಹಿಂದೆ 1995ರಲ್ಲಿ  ಹುಬ್ಬಳ್ಳಿಯಲ್ಲಿ ನಡೆದಿದ್ದ `ಪ್ರಜಾವಾಣಿ' ಟ್ರೋಫಿ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು' ಎಂದು ಆಗ ತಂಡದ ಮ್ಯಾನೇಜರ್ ಆಗಿದ್ದ ಸಂಜಯ್ ನೆನಪಿಸಿಕೊಂಡರು.

ಚಾಂಪಿಯನ್ ಬೀದರ್ ತಂಡದಲ್ಲಿ ಮನೋಜ್, ರಾಹುಲ್ ರಾಜ್, ಸುನಿಲ್, ವಿಶಾಲ್, ಸಂತೋಷ, ರವೀಂದ್ರ, ಅನಿಲ್, ವಿವೇಕ್, ಕಿಶೋರ್, ಅಶೋಕ್, ಅಕ್ಷಯ್ ಪ್ರಮುಖ ಆಟಗಾರರು. ಕೇದಾರನಾಥ್ ತಂಡವನ್ನು ಮುನ್ನಡೆಸಿದ್ದರು. ಟ್ರೋಫಿಯೊಂದಿಗೆ ಬಂದ ಅವರಿಗೆ ನಗರದಲ್ಲಿ ಸನ್ಮಾನ, ಅಭಿನಂದನೆಗಳೊಂದಿಗೆ ಉತ್ತೇಜಿಸುವ ಕಾರ್ಯವು ನಡೆಯಿತು.

ಅನುಭವ ಹೆಚ್ಚಿಸಿದ ಆಟ: `ಹಲವು ಟೂರ್ನಿಗಳಲ್ಲಿ ಪಾಲ್ಗೊಂಡಿದ್ದ ಅನುಭವವಿತ್ತು. ಆದರೆ, ವಿದೇಶದಲ್ಲಿ ಆಡಲು ಹೋದಾಗ ಆರಂಭದಲ್ಲಿ ಆತಂಕವಿತ್ತು. ಆದರೆ, ಅಲ್ಲಿಗೆ ತೆರಳಿದ ಮೇಲೆ ಎಲ್ಲರೂ ಸ್ನೇಹಿತರಂತೆಯೇ ಇದ್ದೆವು. ಪ್ರತಿ ಕ್ಷಣವನ್ನೂ ಖುಷಿಯಿಂದಲೇ ಕಳೆದೆವು' ಎಂದು ಬೀದರ್ ಕ್ರಿಕೆಟ್ ಸಂಸ್ಥೆ ತಂಡದ್ದಲ್ಲಿದ್ದ ಮನೋಜ್ `ಪ್ರಜಾವಾಣಿ' ಜೊತೆ ಸಂತಸ ಹಂಚಿಕೊಂಡರು.

`ಹೆಚ್ಚು ತಂಡಗಳು ಪಾಲ್ಗೊಳ್ಳದ ಕಾರಣ ನಮಗೆ ತುಂಬಾ ಸವಾಲು ಎನಿಸಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ತಂಡದಲ್ಲಿ ಸಮರ್ಥ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನೇಪಾಳದಲ್ಲಿ ಚಾಂಪಿಯನ್ ಆಗಿದ್ದರಿಂದ ಮುಂದಿನ ಇನ್ನಷ್ಟು ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸು ಬಂದಿದೆ. ಬೇರೆ ಬೇರೆ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಕನಸು ಮೂಡಿಸಿದೆ' ಎಂದೂ ಅವರು ನುಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT